ಪಾವಗಡದ ಪುಣ್ಯಕ್ಷೇತ್ರ ದರ್ಶನ

ಭಯ ಭಕ್ತಿಯಿಂದ ಪೂಜಿಸುವ ನವಗ್ರಹ ದೇವರಲ್ಲಿ ಶನೀಶ್ವರ ದೇವಾಲಯ ಪ್ರಮುಖವಾದದ್ದು. ಕರ್ನಾಟಕದಲ್ಲಿ ವಿಶೇಷವಾಗಿ ಪೂಜೆಗೊಳ್ಳುವ ದೇವಾಲಯವೆಂದರೆ ಪಾವಗಡದ ಶನೀಶ್ವರ ದೇವಾಲಯ. ಈ ದೇವಸ್ಥಾನ ಸೇರಿದಂತೆ ಪಾವಗಡದಲ್ಲಿರುವ ಪ್ರಮುಖ ದೇಗುಲಗಳ ಪರಿಚಯ ಇಲ್ಲಿದೆ.

*ಶ್ರೀನಿವಾಸ ಮೂರ್ತಿ ಎನ್. ಎಸ್.

*ಶ್ರೀನಿವಾಸ ಮೂರ್ತಿ ಎನ್. ಎಸ್.

ಪಾವಗಡ ಶನೀಶ್ವರ ದೇವಾಲಯ
ಮೂಲತಃ ಇಲ್ಲಿ ಊರಿನ ಹೊರಭಾಗದಲ್ಲಿ ಇದ್ದ ಶೀತಲಾಯಂತ್ರವನ್ನು ಪೂಜಿಸುತ್ತಿದ್ದರು. ಆದರ ಇಲ್ಲಿ ಬರಗಾಲಕ್ಕೆ ಶನೀಶ್ವರ ಅವಕೃಪೆಯೇ ಕಾರಣ ಎಂದು ಇಲ್ಲಿ ಜೊತೆಯಲ್ಲಿ ಶನಿಶ್ವರನ ಚಿತ್ರಕ್ಕೂ ಪೂಜೆ ಸಲ್ಲಿಸಲು ಆರಂಭವಾಯಿತು. ಇದನ್ನು ಗಮನಿಸಿದ ವರ್ತಕರಾದ ಕಟ್ಟಾ ಕೄಷ್ಣಯ್ಯ ಶೆಟ್ಟರು ಮತ್ತು ಅಂಬೇಕರ್ ನರಸಿಂಗರಾವ್ ಜೊತೆಗೂಡಿ ಇಲ್ಲಿ ಚಿಕ್ಕ ಗುಡಿಯ ನಿರ್ಮಾಣ ಆರಂಭಿಸಿದರು,  ಆದರೆ ಹಣಕಾಸಿನ ಕೊರತೆಯ ಕಾರಣ 1953 ರಲ್ಲಿ ಶ್ರೀ ಶನಿ ಮಹಾತ್ಮ ಕಾರ್ಯ ನಿರ್ವಾಹಕ ಸಂಘವನ್ನು ಶ್ರೀ ಗುಂಡಾರ್ಲಹಳ್ಳಿ ವೆಂಕಟಸುಬ್ವಯ್ಯನವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿ ಕಾಮಗಾರಿ ಮುಂದುವರೆಸಲಾಯಿತು.

ಶೀತಲಾಯಂತ್ರ

ದೇವಾಲಯದ ಕಾರ್ಯ ಮುಂದುವರಿದಂತೆ ಹಣದ ಕೊರತೆ ಹಾಗೂ ಜನರ ವಿರೋಧ ತೀವ್ರವಾಗ ತೊಡಗಿತು. ಶನಿ ದೇವಾಲಯದ ನಿರ್ಮಾಣವಾದಲ್ಲಿ ಮಳೆಗಾಗಿ ಸ್ಥಾಪಿಸಿದ ಶಿತಲಾಯಂತ್ರದ ಮಹಿಮೆಯ ಬದಲಾಗಿ ಶನಿ ಪ್ರಭಾವದಿಂದ ಮತ್ತೆ ಬರಗಾಲ ಬರುವುದೆಂಬ ಭಾವನೆ ಜನರಲ್ಲಿ ತೀವ್ರವಾಗತೊಡಗಿತು. ಹಾಗಾಗಿ ಶನೀಶ್ವರ ದೇವಾಲಯದ ಬದಲಾಗಿ ನವಗ್ರಹ ದೇವಾಲಯವನ್ನು ಸ್ಥಾಪಿಸಿ ಅಲ್ಲಿ ಶ್ರೀ ಶನೀಶ್ವರ ಸ್ವಾಮಿಗೆ ಆದ್ಯತೆ ನೀಡಲಾಯಿತು. ಹಾಗಾಗಿ ಈ ದೇವಾಲಯವನ್ನು ಆದಿತ್ಯಾದಿ ನವಗ್ರಹ ಗುಡಿ ಎಂದು ಕರೆದರು. ಆದರೆ ಇಲ್ಲಿ ಶನೀಶ್ವರ ದೇವರಿಗೆ ಪ್ರಧಾನ ಪೂಜೆಯಾದ ಕಾರಣ ಶ್ರೀ ಶನೀಶ್ವರ ದೇವಾಲಯ ಎಂದೇ ಪ್ರಸಿದ್ದಿ. 1955 ರಲ್ಲಿ ಕಲ್ಯಾಣದುರ್ಗದ ಶ್ರೀಧರಘಟ್ಟದ ಅವಧೂತರಾದ ಶ್ರೀಧರ ಸ್ವಾಮಿಗಳ ಸನ್ನಿಧಿಯಲ್ಲಿ ಪ್ರತಿಷ್ಠಾಪನ ಕಾರ್ಯ ನಡೆಯಿತು.

ನಂತರ ಕಾಲದಲ್ಲಿ ಹಲವು ರಾಜ್ಯದಿಂದ ಭಕ್ತರು ಹೆಚ್ಚಾದ ಕಾರಣ ಚಿಕ್ಕದಾಗಿದ್ದ ದೇವಾಲಯವನ್ನು ನವೀಕರಿಸಿ ಪ್ರದಕ್ಷಿಣಾ ಪಥ ಹಾಗೂ ವಿಶಾಲವಾದ ಮಂಟಪವನ್ನು ನಿರ್ಮಿಸಲಾಯಿತು. ದೇವಾಲಯ ಪ್ರವೇಶ ಮಾಡುತ್ತಿದ್ದಂತೆ ಕಾಣುವಂತೆ ಎತ್ತರದ ಶನೀಶ್ವರ ಸ್ವಾಮಿಯ ಮೂರ್ತಿ ಹಾಗೂ ಹೊಸದಾದ ಗೋಪುರವನ್ನು ನಿರ್ಮಾಣ ಮಾಡಿದ್ದು ಅಲ್ಲಿ ಸುತ್ತಲೂ ಶ್ರೀ ಶನೀಶ್ವರ ಸ್ವಾಮಿಯ ಕಥೆಯನ್ನು ಅಳವಡಿಸಲಾಗಿದೆ.  ದೇವಾಲಯದ ಒಳ ಭಾಗದಲ್ಲಿ ಮಹಾವೀರ, ಗುರುನಾನಕ, ಸಾಯಿಬಾಭ, ಮಹಾವೀರ, ಬುದ್ದ ನಂತಹ ಮೂರ್ತಿಗಳನ್ನು ನಿರ್ಮಿಸಿದ್ದು ಸರ್ವ ಧರ್ಮದ ಪ್ರತೀಕದಂತಿದೆ.

ನಿತ್ಯ ಬೆಳಗ್ಗೆ 5.30 ರಿಂದ ರಾತ್ರಿ 8 ಘಂಟೆಯವರೆಗೆ ಇಲ್ಲಿ ನಿರಂತರ ಪೂಜೆ ಇದ್ದು ಫೆಬ್ರವರಿಯ ತಿಂಗಳ ಹುಣ್ಣಿಮೆಯಂದು ಇಲ್ಲಿ ಬ್ರಹ್ಮರಥೋತ್ಸವ ನಡೆಯತ್ತದೆ.

ಪಾವಗಡ ವೇಣುಗೋಪಲ ದೇವಾಲಯ

ಈ ಮೂರ್ತಿಯನ್ನು ಬಾಲಪ್ಪನಾಯಕ ಬೆಟ್ಟದ ಮೇಲೆ 1586 ರಲ್ಲಿ ಸ್ಥಾಪಿಸಿದ್ದು ಕಾಲಾಂತರದಲ್ಲಿ ಬೆಟ್ಟದ ಕೆಳಭಾಗದಲ್ಲಿ ನಂತರ ನಿರ್ಮಾಣವಾದ ದೇವಾಲಯಕ್ಕೆ ಸ್ಥಳಾಂತರಿಸಲಾಗಿದೆ.  ದೇವಾಲಯ ಗರ್ಭಗುಡಿ, ನವರಂಗ ಹಾಗೂ ತೆರೆದ ಮಂಟಪ ಹೊಂದಿದೆ.  ಗರ್ಭಗುಡಿಯಲ್ಲಿ ರುಕ್ಮಿಣಿ ಸತ್ಯಭಾಮ ಸಮೇತನಾದ ಸುಂದರ ಶ್ರೀ ವೇಣುಗೋಪಾಲನ 3 ಅಡೀ ಎತ್ತರದ ಮೂರ್ತಿ ಇದೆ.  ಕೊರಳಲ್ಲಿ ಧರಿಸಿರುವ ಕಂಠಾಭರಣ ಸುಂದರವಾಗಿದ್ದು ಕದಂಬ ವೄಕ್ಷದ ಕೆಳಗೆ ಮೂರ್ತಿ ಇರುವಂತೆ ಕೆತ್ತನ ಇರುವುದು ವಿಶೇಷ. ದ್ವಾರದಲ್ಲಿ ಸುಂದರ ದ್ವಾರಪಾಲಾಕರ ಕೆತ್ತನೆ ಇದೆ.  ದೇವಾಲಯಕ್ಕೆ ಸುಂದರ ರಾಜಗೋಪುರ ನಿರ್ಮಿಸಲಾಗಿದ್ದು ಇಲ್ಲಿ ವೇಣುಗೋಪಾಲನ ಚಿಕ್ಕ ಮೂರ್ತಿ ಇದೆ. ದೇವಾಲಯದ ಮುಂಭಾಗದಲ್ಲಿ ಎತ್ತರದ ದೀಪಸ್ಥಂಭ ಇದ್ದು ಬಲಿಪೀಠ ಗರುಡ ಸನ್ನಿಧಿಯ ಗೂಡು ಇದೆ.  ಶ್ರಾವಣ ಮಾಸದಲ್ಲಿ ಗೋಕುಲಾಷ್ಟಾಮಿಯ ದಿನ ಇಲ್ಲಿ ವಿಶೇಷ ಪೂಜೆ ಇರುತ್ತದೆ.  ಮೂಲತಹ ಪುರಾತನ ಮೂರ್ತಿ ನಿರ್ಮಾಣವಾದ ಈ ದೇವಾಲಯ ಸಾಕಷ್ಟು ಬಾರಿ ನವೀಕರಣಗೊಂಡಿದ್ದು 1777 ರಲ್ಲಿ ತಿಮ್ಮಪ್ಪನಾಯಕ ಈಗಿನ ದೇವಾಲಯವನ್ನು ನಿರ್ಮಾಣ ಮಾಡಿದ್ದು 1942 ರಲ್ಲಿ ರಾಜಗೋಪುರ, ಹಜಾರಾ ಮಂಟಪ ನಿರ್ಮಾಣ ಮಾಡಿದ್ದು ಹೊಸ ರೂಪ ಪಡೆದಿದೆ.

ಪಾವಗಡ ಕಣಿವೆ ನರಸಿಂಹ ದೇವಾಲಯ

ಉದ್ಭವ ನರಸಿಂಹ ಶಿಲ್ಪಗಳಿಗೆ ಒಂದು ಪೌರಾಣಿಕ ಹಿನ್ನೆಲೆ ಇದೆ.  ವಿಷ್ಣು ನರಸಿಂಹ ಅವತಾರ ತಾಳಿ ಹಿರಣ್ಯ ಕಶಿಪುವಿನ ಸಂಹಾರ ಮಾಡಿದ ನಂತರ ಸ್ವಾಮಿಯ ಉಗ್ರಸ್ವರೂಪ ಶಮನವಾಗಿರುವದಿಲ್ಲ. ಹಾಗಾಗಿ ತನ್ನ ತಾಪಮಾನದ ಉಪಶಮನಕ್ಕಾಗಿ ಅರಣ್ಯದಲ್ಲಿ ವಾಸವಾಗಿರುತ್ತನೆ. ವಿಷ್ಣು ತನ್ನ ಅವತಾರದಿಂದ ಇನ್ನು ಹಿಂತಿರುಗಿ ಬಾರದ ಕಾರಣ ಲಕ್ಷ್ಮೀ ತನ್ನ ಸ್ವರೂಪವನ್ನು ಅಲ್ಲಿನ ಅರಣ್ಯದಲಿದ್ದ  ಚುಂಚುಲಕ್ಷ್ಮೀ ಎಂಬ ಅಡವಿ ಕನ್ಯೆಯಲ್ಲಿ ಸೇರಿರುತ್ತದೆ. ಚುಂಚುಲಕ್ಶೀ ನರಸಿಂಹ ರೂಪದಲ್ಲಿದ್ದ ತನ್ನ ವಿಷ್ಣುವಿನ ಸೆಳೆಯುತ್ತಾಳೆ. ಇದನ್ನರಿತ ನರಸಿಂಹ ತಾನೇ ಇವಳಿಂದ ಮೋಹಿತನಾದಂತೆ ಹಿಂಬಾಲಿಸುವಾಗ ಆಯ್ದ ಭಾಗಗಳಲ್ಲಿ ಬೆಟ್ಟದ ಕಲ್ಲುಗಳು ಉಬ್ಬಿ ನರಸಿಂಹನ ಅಂಶ ಹೊಂದುತ್ತವೆ.  ಹೀಗೆ ಉಬ್ಬಿದ ಶಿಲಾ ಭಾಗಗಳಲ್ಲಿ ಲಕ್ಷ್ಮೀ ಅಂತರ್ಧಾನಳಾದ ಕಾರಣ ಈ ಶಿಲೆಗಳು ಶ್ರೀ ಲಕ್ಶ್ಮೀ ನರಸಿಂಹಸ್ವಾಮಿ ಸನ್ನಿಧಾನವಾಗಿ ಬದಲಾಗುತ್ತವೆ. ಹೀಗೆ ಕಾಣಿಸಿದ ಉಬ್ಬಿದ ಶಿಲಾ ಭಾಗಗಳನ್ನು ಶ್ರೀ ಲಕ್ಶ್ಮೀ ನರಸಿಂಹನ ಸನ್ನಿಧಾನ ಎಂದು ಪೂಜಿಸುವ ಪದ್ದತಿ ನಮ್ಮಲ್ಲಿ ನಡೆದು ಬಂದಿದೆ.

ಇಂತಹದೇ ಸ್ವರೂಪವಾದ ಒಂದು ಉದ್ಭವ ಶಿಲ್ಪವೇ ಪಾವಗಡದ ಕಣಿವೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ. ಪಾವಗಡದ ಹೊರಭಾಗದಲ್ಲಿ ಚಿಕ್ಕ ಬೆಟ್ಟದ ಮೇಲೆ ಈ ಕಲ್ಲಿನ ಉದ್ಭವ ಮೂರ್ತಿಯ ಶಿಲ್ಪ ಇತ್ತು. ಇಲ್ಲಿನ ಸಮೀಪದ ಜನರು, ಕುರಿ ಕಾಯುವವರು ಈ ಶಿಲೆಯನ್ನ ಪೂಜಿಸಿತ್ತಿದ್ದರು. ಒಮ್ಮೆ ಬಯಲಿನಲ್ಲಿ ಬೆಟ್ಟದ ಮೇಲೆ ಪೂಜೆಗೊಳ್ಳುತ್ತಿದ ಈ ಮೂರ್ತಿಗೆ ಮೈಸೂರು ಅರಸರ ಕಾಲದಲ್ಲಿ ದೈವೀ ಪ್ರಭಾವಕ್ಕೆ ಒಳಗಾದ ಅಮುಲ್ದಾರರು ಅಲ್ಲಿನ ಹಿರಿಯರಿಗೆ ತಿಳಿಸುತ್ತಾರೆ. ಇಲ್ಲಿ ಶ್ರೀ ಲಕ್ಶ್ಮೀ ನರಸಿಂಹ ನೆಲೆಸಿರುವದನ್ನ ಗಮನಿಸಿದ ಅಮುಲ್ದಾರರು ಚಿಕ್ಕದಾದ ಗುಡಿ ಅಲ್ಲಿನ ನಿರ್ಮಿಸುತ್ತಾರೆ.

ನಂತರ 1942 ರಲ್ಲಿ ದೇವಾಲಯ ನವೀಕರಣಗೊಂಡಿದ್ದು ನಂತರ ಕಾಲದಲ್ಲಿ ಅಭಿವೃದ್ದಿಗೊಂಡಿದೆ. ಇಲ್ಲಿ ಪ್ರತಿಷ್ಠಾಪನ  ಕಾಲದಲ್ಲಿ ಮಳೆಗಾಗಿ ಮಾಡಿದ ಹೋಮದ ಸಮಯದಲ್ಲಿ ಮಳೆ ಬಂದ ಕಾರಣ ಭಕ್ತರು ನಂಬಿಕೆಯಿಂದ ನಡೆದುಕೊಳ್ಳುತ್ತಾರೆ.  ನಂತರ ಕಾಲದಲ್ಲಿ ಇಲ್ಲಿ ಸುಂದರವಾದ ಉತ್ಸವ ಮೂರ್ತಿ, ಸುಂದರವಾದ ರಥ, ಕಲ್ಯಾಣಿಗಳನ್ನ ನಿರ್ಮಿಸಲಾಗಿದ್ದು ಜನರ ಅನುಕೂಲಕ್ಕಾಗಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ. ಈಗ ದೇವಾಲಯಕ್ಕೆ ರಾಜಗೋಪುರ ನಿರ್ಮಿಸಲಾಗಿದ್ದು ಮತ್ತಷ್ಟು ಮೆರುಗು ಪಡೆದಿದೆ.

ಪಾವಗಡ ಕೋಟೆ ಆಂಜನೇಯ ದೇವಾಲಯ

ನೂತನವಾಗಿ ನಿರ್ಮಾಣವಾದ ದೇವಾಲಯದಲ್ಲಿ 15 ನೇ ಶತಮಾನದ ಸುಂದರ 13 ಅಡಿ ಎತ್ತರದ ಆಂಜನೇಯ ಸ್ವಾಮಿಯ ಮೂರ್ತಿ ಇದೆ.  ದೇವಾಲಯ ಪ್ರವೇಶ ದ್ವಾರದಲ್ಲಿ ಸುಂದರ ದೀಪ ಸ್ಥಂಭವಿದ್ದು ಪಕ್ಕದಲ್ಲಿ ಮಾಸ್ತಿ ಕಲ್ಲಿದೆ, ವಿಶಾಲವಾದ ಹಜಾರವಿದ್ದು ಪ್ರದಕ್ಷಿಣಾ ಪಥವಿದೆ.  ಗರ್ಭಗುಡಿಯಲ್ಲಿನ ಶಿಲ್ಪದಲ್ಲಿ ಬಲಗೈನಲ್ಲಿ ಮಾವಿನಕಾಯಿ ಗೊಂಚಲಿದ್ದು ಮತ್ತೊಂದು ಮೇಲ ಹಿಡಿದಂತಿದೆ.  ದೇವಾಲಯದಲ್ಲಿ ಪ್ರತಿ ಹುಣ್ಣಿಮೆ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಹನುಮ ಜಯಂತಿಯಂದು ವಿಶೇಷ ಪೂಜೆ ನಡೆಯಲ್ಲಿದ್ದು ಶನೀಶ್ವರ ದೇವಾಲಯಕ್ಕೆ ಬಂದವರು ಇಲ್ಲಿಗೂ ಬಂದು ಹೋಗುತ್ತಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles