ಬರ್ತ್ಡೇ ಅಂದರೆ ಬರೀ ಕ್ಯಾಂಡಲ್ ಆರಿಸಿ ಕೇಕ್ ತುಂಡರಿಸುವುದೇ?
ಹಾಗಲ್ಲ. ಹುಟ್ಟಿದ ಹಬ್ಬದ ಸಂಭ್ರಮ ನಮ್ಮ ಸಂಪ್ರದಾಯ ಸಂಸ್ಕಾರದಿಂದ ಕೂಡಿದ್ದರೆ ಚೆನ್ನ.
*ವಿಭಾ ಕೃಷ್ಣಪ್ರಕಾಶ್ ಉಳಿತ್ತಾಯ
“ಶತಮಾನಂ ಭವತಿ ಶತಾಯುಃ ಪುರುಷ ಶತೇಂದ್ರಿಯ ಆಯುಷ್ಯೇವೇಂದ್ರಿಯೇ ಪ್ರತಿತಿಷ್ಠತಿ” ಹೀಗೆ ಹುಟ್ಟಿದ ದಿನದಂದು ಹರಸುವವರ ಬಗ್ಗೆ ಗೌರವ, ಪ್ರೀತಿ ಇದೆ ಹಾಗೆಯೇ ನಾವು ಕೆಲವರಿಂದ ಶುಭಾಶಯದ ನಿರೀಕ್ಷೆಗಳನ್ನೂ ಇಟ್ಟುಕೊಳ್ಳುತ್ತೇವೆ. ನಿರೀಕ್ಷೆಗಳು ಹೆಚ್ಚಿನ ಸಂದರ್ಭದಲ್ಲಿ ನಮಗೆ ನೋವನ್ನೇ ತರುತ್ತವೆ. ಇಷ್ಟಕ್ಕೂ ಈಗ ಮೊಬೈಲ್ಗಳಲ್ಲಿ ವಿಹರಿಸುತ್ತಿರುವ ನಮಗಾದರೆ ಅವರಿವರ ಬರ್ತಡೇ ವಿಷಯಗಳು ಟಣ್… ಅಂತ ಫೇಸ್ಬುಕ್, ವಾಟ್ಸ್ಆಪ್ ಗಳ ಮೂಲಕ ಗೋಚರವಾಗುತ್ತದೆ. ಆದರೆ ದೂರದ ಊರುಗಳಲ್ಲಿರುವ ನಮ್ಮ ಅಮ್ಮನೋ ಅಜ್ಜನೋ ಅಜ್ಜಿಯೋ ಈಗಿನ ಕಾಲದ ಸ್ಮಾರ್ಟ್ ಗಳಾಗಿರದೆ, ಸ್ಮಾರ್ಟ್ ಫೋನ್ ಗಳ ಬಳಕೆ ತಿಳಿಯದೆ ಇದ್ದರೆ ಅವರಿಗೆ ಈ ವಿಷಯಗಳೆಲ್ಲ ಹೇಗೆ ತಿಳಿದೀತು? ಅವರ ದಿನನಿತ್ಯದ ಕೆಲಸಗಳ ಮಧ್ಯೆ ಅವರು ಹುಟ್ಟಿದ ದಿನವೇ ಅವರಿಗೆ ನೆನಪಿರುವುದಿಲ್ಲ, ಇನ್ನು ಉಳಿದವರು ಅವರಿಂದ ಇದನ್ನು ನಿರೀಕ್ಷಿಸುವುದು ಮೂರ್ಖತನದ ಕೆಲಸ.
ಇಷ್ಟಕ್ಕೂ ಬರ್ತಡೇಯ ಈ ರೀತಿಯ ಆಚರಣೆಗಳಲ್ಲ ಕೆಲವು ದಶಕಗಳ ಹಿಂದೆ ಬಂದ ಸಿನಿಮಾಗಳ ಪ್ರಭಾವ ವಲ್ಲವೇ? ನಾವು ಸಣ್ಣವರಿರುವಾಗ ಕೇಕ್ ಕಟ್ಟಿಂಗ್ ಗಳ ಅಬ್ಬರ ಅಷ್ಟಾಗಿರಲಿಲ್ಲ. ಇನ್ನೂ ಹಿಂದಕ್ಕೆ ಹೋದರೆ…? ಮನೆಯಲ್ಲಿ ದೇವರಿಗೆ ಸಿಹಿತಿಂಡಿ, ಪಾಯಸ, ಮನೆಮಂದಿಗೆ ನಮಸ್ಕಾರ, ಸಾಧ್ಯವಾದರೆ ದೇವಸ್ಥಾನ…. ಇವಿಷ್ಟು ಹುಟ್ಟಿದ ದಿನದ ಸಂಭ್ರಮ.
ಆದರೆ ಈಗ ಇದೆಲ್ಲವನ್ನೂ ಕೇಕ್, ಅದರ ಜೊತೆಗೇ ಕೇಳಿ ಬರುವ ಪದ್ಯ ನುಂಗಿಬಿಟ್ಟಿವೆ. ಈಗ ನಮಗಿರುವ ಒಂದೋ ಎರಡೋ ಮಕ್ಕಳನ್ನು ಅತಿ ಮುದ್ದು ಮಾಡಿ ಸಾಕುತ್ತಿರುತ್ತೇವೆ. ಹಾಗಾಗಿ ನಮಗೆ ಅವರಿಗೆ ಸಂಬಂಧಪಟ್ಟ ದಿನ, ನಕ್ಷತ್ರ, ವಾರ, ತಿಥಿ, ಘಳಿಗೆ ಎಲ್ಲಾ ನೆನಪಿರುತ್ತದೆ. ಅದಲ್ಲದೆ ಈಗ ದಿನ ಬೆಳಗೆದ್ದರೆ ನಾವು ಕ್ಯಾಲೆಂಡರ್ ನೋಡಿಕೊಂಡೋ, ಮೊಬೈಲ್ನಲ್ಲಿ ಅಂದಿನ ದಿನಚರಿ ನೋಡಿಕೊಂಡೋ ಎದ್ದೇಳುವುದು. ಆದ್ದರಿಂದ ಅಂದಿನ ದಿನ, ತಾರೀಕು ಸರಿಯಾಗಿ ನೆನಪಿರುತ್ತದೆ. ಆದರೆ ನನ್ನ ಅಮ್ಮ ಅಪ್ಪ ಎದ್ದ ತಕ್ಷಣ ನೋಡುವುದು ದನ,ಕರು, ಬೆಕ್ಕು,ನಾಯಿಗಳ ಮುಖ. ಕೃಷಿ ಎಂದರೆ ಕೇಳಬೇಕೆ? ಬಿಡುವು ಎನ್ನುವುದು ರಾತ್ರಿ ನಿದ್ದೆ ಮಾಡುವಾಗ ಮಾತ್ರ. ಹೀಗಿರುವ ಅವರಿಗೆ ನನ್ನ ಹುಟ್ಟಿದ ದಿನದಂದು ನಾನೇ ಬೆಳಗ್ಗೆಫೋನ್ ಮಾಡಿ, “ಅಮ್ಮ ಆಶೀರ್ವಾದ ಮಾಡಿ…” ಎಂದಾಗ “ಏನಿವತ್ತು ವಿಶೇಷ?” ಎಂಬ ಪ್ರಶ್ನೆ ಅವರಿಂದ ಬರುತ್ತದೆ. “ಇವತ್ತು ನನ್ನ ಬರ್ತಡೇ…..” ” ಓ…. ಇವತ್ತು ತಾರೀಖು ಎಷ್ಟು?? ಹೋ ಹೌದಲ್ವಾ? ಮರ್ತೇ ಹೋಗಿತ್ತು… ದಿನ ಹೋಗೋದೇ ಗೊತ್ತಾಗೋದಿಲ್ಲ ನೋಡು; ಆಗ್ಲಿ, ದೇವರು ಒಳ್ಳೇದು ಮಾಡ್ಲಿ. ನೀವು ಸಂತೋಷವಾಗಿದ್ದರೆ ನಮಗೆ ಅಷ್ಟೇ ಸಾಕು…..” ಇವಿಷ್ಟು ಮಾಮೂಲಿ ಡೈಲಾಗುಗಳು. ಮತ್ತೆ ಲೋಕ ಸಮಾಚಾರಗಳು.
ನನ್ನ ಬರ್ತಡೇ ಅಮ್ಮ ಅಪ್ಪನಿಗೆ ನೆನಪೇ ಇಲ್ಲ, ಎಂದು ನಾನು ಇಡೀ ದಿನ ಮುಖ ಊದಿಸಿಕೊಂಡು ಕೂತು ಮತ್ತೆ ಇನ್ನೊಂದು ದಿನ ಅವರಿಗೆ ಫೋನಾಯಿಸಿ ನೀವು ನಂಗೆ ವಿಶ್ ಮಾಡ್ಲೇ ಇಲ್ಲ ಅಲ್ವಾ? ನನ್ನ ನೆನಪೇ ಇಲ್ಲ ಅಲ್ವಾ? ಎಂದು ಅವರನ್ನು ತಿವಿದು ಅವರ ಮನಸ್ಸಿಗೆ ಬೇಜಾರು ಮಾಡುವ ಬದಲು, ನಾವು ಸೋತು ಅವರ ಪ್ರೀತಿಯ ಆಶೀರ್ವಾದ ಪಡೆದುಕೊಳ್ಳುವುದರಲ್ಲಿ ಸುಖವಿದೆ ಅಲ್ಲವೇ? ಇಷ್ಟಕ್ಕು ಹೆತ್ತಮ್ಮನ, ಹೊತ್ತ ಅಪ್ಪನ ಪ್ರೀತಿ ಅಳೆಯಲು ಇದೊಂದು ಮಾಪನ ಅಂತ ನನಗೆ ಯಾವತ್ತೂ ಅನ್ನಿಸಲೇ ಇಲ್ಲ. ಇದು ಎಲ್ಲರ ವಿಷಯಕ್ಕೂ ಅನ್ವಯಿಸುವಂಥದ್ದಲ್ಲವೇ?
ಈಗಿನ ಬ್ಯುಸಿನೆಸ್ ಯುಗದಲ್ಲಿ, ಧಾವಂತದ ಬದುಕಿನಲ್ಲಿ ಎಲ್ಲವೂ ಯಾಂತ್ರಿಕ. ಸಮಯದ ಅಭಾವ, ಕೆಲಸದ ಒತ್ತಡ, ತಲೆಯಲ್ಲಿ ಸಾವಿರಗ ಆಲೋಚನೆಗಳು, ಹೀಗಿರುವಾಗ ಅಣ್ಣನೋ ತಮ್ಮನೋ ತಂಗಿಯೋ ಅತ್ತೆಯೋ ಮಾವನೋ ಗೆಳೆಯನೋ ಗೆಳತಿಯೋ ನಮ್ಮ ಹುಟ್ಟಿದ ದಿನ ಶುಭ ಹಾರೈಸಲು ಮರೆತಿದ್ದಾರೆ ಎಂದರೆ ಅವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲವೆಂದು ಅರ್ಥವೇ? ನಾವೂ ಸ್ವಲ್ಪ ಅವರನ್ನು ಅರ್ಥಮಾಡಿಕೊಳ್ಳೋಣ. ಆ ದಿನ ಅವರಿಗೆ ನಮ್ಮ ಸಂತೋಷವನ್ನು ಫೋನಾಯಿಸಿ ಹೇಳೋಣ. ಆಗ ಸಿಗುತ್ತೆ ನೋಡಿ ಇಬ್ಬರಿಗೂ ಖುಷಿ. ನೀವೇನಂತೀರಿ? ಮುಂದಿನ ನಮ್ಮ ಹುಟ್ಟಿದ ದಿನದಂದು ಆಪ್ತರ ಶುಭಾಶಯಗಳು ಬರಲಿಲ್ಲವೆಂದು ಬೇಸರಿಸಿಕೊಂಡು ಕೂರದೆ, ಕಾಯದೆ ನಾವೇ ಅವರಿಗೆ ಫೋನ್ ಮಾಡಿ ಶುಭಾಶೀರ್ವಾದ ಪಡೆದುಕೊಳ್ಳೋಣ.
(ವಿಭಾ ಕೃಷ್ಣಪ್ರಕಾಶ್ ಉಳಿತ್ತಾಯ ಅವರು ಕರ್ಣಾಟಕ ಬ್ಯಾಂಕ್ ಉದ್ಯೋಗಿ, ಹಾಸ್ಯಬರಹಗಾರ್ತಿ, ಮಂಗಳೂರು.)
ಬಹಳ ಉತ್ತಮವಾಗಿದೆ.ವಾಸ್ತವವಾಗಿ ನನ್ನ ದಿನಚರಿಯನ್ನೇ ಲೇಖನದಲ್ಲಿಯೂ ಬರೆದಿದಂತಾಗಿದೆ. ಅಜ್ಜ ಅಜ್ಜಿಯಂದಿರೂ ಬಹುಶ ಪ್ರಸ್ತುತ ಕಾಲದಲ್ಲಿ ಸ್ಮಾರ್ಟ್ ಫೋನ್ ಆಪರೇಟಿಂಗ್ ಕಲಿಯುವ ಅನಿವಾರ್ಯ ಇದೆ ಅನಿಸ್ತಿದೆ ನಂಗೆ
ಧನ್ಯವಾದಗಳು🙏
ತುಂಬಾ ಒಳ್ಳೆಯ ಮಾಹಿತಿ ದೊರೆಯುತ್ತಿದೆ
thank you sir