ಸಂಕಷ್ಟಹರ ಚತುರ್ಥಿಯ ಮಹತ್ವ, ಆ ದಿನ ನಾವೇನು ಮಾಡಿದರೆ ಒಳಿತು?

ಸಂಕಷ್ಟಹರ ಚತುರ್ಥಿ ವ್ರತವನ್ನು ಸಂಕಷ್ಟಿ ಎಂದೂ ಕರೆಯುತ್ತಾರೆ. ಗಣೇಶ ಎಲ್ಲಾ ಶುಭ ಸಂದರ್ಭಗಳಲ್ಲೂ ಮೊದಲ ಬಾರಿಗೆ ಪೂಜಿಸಲ್ಪಡುವವನು. ವಿಘ್ನ ವಿನಾಶಕ ಎಂದೇ ಕರೆಸಿಕೊಂಡಿರುವ ವಿನಾಯಕನನ್ನು ಪೂಜಿಸುವುದರಿಂದ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬುದು ಆಸ್ತಿಕರ ಅಭಿಪ್ರಾಯ. ಈ ಬಾರಿ ಸೋಮವಾರ ಅಕ್ಟೋಬರ್ 5, 2020ರಂದು ಸಂಕಷ್ಟಹರ ಚತುರ್ಥಿ. ಸಂಕಷ್ಟಿಯ ಮಹತ್ವ, ಆಚರಣೆ ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ.

ನಮ್ಮ ಸಮಯವನ್ನು ಅಂದರೆ ನಮ್ಮ ಕಾಲವನ್ನು ಸರಿ ಮಾಡಿಕೊಳ್ಳುವುದಕ್ಕೆ ಈ ಸಂಕಷ್ಟ ಹರ ಚತುರ್ಥಿ ನಮಗೆ ಒಂದು ವರವಾಗಿದೆ. ಆ ದಿನ ನಾವು ಏನು ಮಾಡಬೇಕು ? ಪ್ರಾತ ಕಾಲದಲ್ಲಿ ಬೆಳಗ್ಗೆ ಬೇಗನೆ ಎದ್ದು, ಗಣೇಶನಿಗೆ ನಮಸ್ಕಾರವನ್ನು ಮಾಡಿ, ಮೊದಲು ಸಂಕಲ್ಪವನ್ನು ಮಾಡಬೇಕು. ನಿರಾಹಾರವಾಗಿ ಇರುತ್ತೇನೆ ಎಂದು ಮೊದಲು ಸಂಕಲ್ಪವನ್ನು ಮಾಡಿಕೊಳ್ಳಬೇಕು. ನಂತರ ಸಾಯಂಕಾಲ ನಮ್ಮ ಶಕ್ತಿಗೆ ಅನುಗುಣವಾಗಿ ಗಣೇಶನ ದೇವಾಲಯಕ್ಕೆ ಹೋಗಿ, ಸಂಕಲ್ಪವನ್ನು ಮಾಡಬೇಕು.

ಸಂಕಷ್ಟಹರ ಚತುರ್ಥಿಯನ್ನು ನಿರಾಹಾರವಾಗಿ ಆಚರಣೆ ಮಾಡಿದ್ದೇನೆ. ನನ್ನ ಜೀವನದಲ್ಲಿ ಇರುವ ಸಂಕಷ್ಟಗಳೆಲ್ಲವನ್ನೂ ಪರಿಹರಿಸು ಎಂದು ಭಕ್ತಿ, ಶ್ರದ್ಧೆಯಿಂದ ಆ ಮಹಾ ಗಣಪತಿಯನ್ನು ಕೇಳಿಕೊಂಡು ಪ್ರಾರ್ಥಿಸಬೇಕು. ಸಂಪೂರ್ಣವಾಗಿ ವ್ರತವನ್ನು ಆಚರಣೆ ಮಾಡಬೇಕು. ರಾತ್ರಿ ಚಂದ್ರೋದಯದ ಸಮಯಕ್ಕೆ ಚಂದ್ರನ ದರ್ಶನವಾಗಲಿದೆ. ನಂತರ ಚಂದ್ರನ ದರ್ಶನ ಮಾಡಿ ಚಂದ್ರನಿಗೆ ಅರ್ಘ್ಯ ನೀಡಿ, ಪ್ರಾರ್ಥನೆ ಸಲ್ಲಿಸಿ, ನಮಸ್ಕಾರ ಮಾಡಿ. ಲವಣವಿಲ್ಲದ ಆಹಾರವನ್ನು ಸ್ವೀಕರಿಸಬೇಕು.

ನಂತರ ಬೆಳಗ್ಗೆ ಸೂರ್ಯೋದಯವಾದ ಮೇಲೆ ಸ್ನಾನ ಮಾಡಿ, ಶುಚಿರ್ಭೂತರಾಗಿ ಇಷ್ಟ ದೇವತೆಗೆ ತುಪ್ಪದ ದೀಪವನ್ನು ಹಚ್ಚಿ, ಲವಣವನ್ನು ಉಪಯೋಗಿಸಿ. ಈ ರೀತಿ ಯಾರು ನಿಯಮಬದ್ಧವಾಗಿ ಸಂಕಷ್ಟಹರ ಚತುರ್ಥಿಯನ್ನು ಆಚರಣೆ ಮಾಡುತ್ತಾರೋ, ಅವರಿಗೆ ಸಂಕಷ್ಟಗಳೆಲ್ಲವೂ ನಿವಾರಣೆಯಾಗುತ್ತವೆ.

ಮಾಹಿತಿ: ಧರ್ಮಗ್ರಂಥ
ಸಂಗ್ರಹ: ಹೆಚ್.ಎಸ್.ರಂಗರಾಜನ್, ಅರ್ಚಕರು ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ, ಹುಸ್ಕೂರು, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles