ಶ್ರಮದ ಬೆವರಿನ ಫಲ ಸುಖದಾಯಕ : ಶ್ರೀ ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು): ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಸ್ವಾರ್ಥ ರಹಿತ ಬದುಕಿಗೆ ಬೆಲೆಯಿದೆ. ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ೩೦ನೇ ವರ್ಷದ ಪೀಠಾರೋಹಣ ವರ್ಧಂತಿ ಅಂಗವಾಗಿ ಫೆಬ್ರುವರಿ- 13 ರಂದು ಜರುಗಿದ ಶತರುದ್ರ ಯಾಗದ 4 ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು. ಸತ್ಯಾನ್ವೇಷಣೆಯ ದಾರಿಯಲ್ಲಿ ನಡೆದಾಗ ಜೀವನ ಮೌಲ್ಯ ಸಮೃದ್ಧಿಗೊಳ್ಳುತ್ತದೆ. ಸಂಘಟನೆಗಳು ಸಂಸ್ಕೃತಿ ಸಂವರ್ಧನೆಗೆ ಪೂರಕವಾಗಿರಬೇಕೆ ವಿನ: ಮಾರಕವಾಗಬಾರದು. ಆತ್ಮವಿಶ್ವಾಸ, ನಿಶ್ಚಿತ ಗುರಿ ಮತ್ತು ಸಂಯಮ ಈ ಮೂರು ಯಶದ ಹಾದಿಗೆ ಕರೆದೊಯ್ಯುವ ಸದ್ಗುಣಗಳಾಗಿವೆ. ಮನುಷ್ಯ ಧರ್ಮದಿಂದ ವಿಮುಖನಾದರೆ ಅವನತಿ ಕಟ್ಟಿಟ್ಟ ಬುತ್ತಿ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಚ್ಚರಿಸಿದ್ದಾರೆ ಎಂದರು.


ಸಮಾರಂಭದಲ್ಲಿ ಪಾಲ್ಗೊಂಡ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಹಾತ್ಮರ ಸಂದೇಶಗಳು ನಮ್ಮೆಲ್ಲರ ಬಾಳಿಗೆ ದಾರಿದೀಪ. ಆತ್ಮ ವಿಶ್ವಾಸವುಳ್ಳ ವ್ಯಕ್ತಿಯ ಕಣ್ಣಿಗೆ ಗುಲಾಬಿ ಹೂ ಕಾಣಿಸುವುದೇ ಹೊರತು ಅದರ ಮುಳ್ಳಲ್ಲ. ನಿರಂತರ ಶ್ರಮ ಸಾಧನೆಯಿಂದ ಜೀವನಕ್ಕೆ ಶ್ರೇಯಸ್ಸು ಪ್ರಾಪ್ತವಾಗುವುದೆಂದರು.

ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿ0ಗ ಶ್ರೀಗಳು ಮತ್ತು ಸಿದ್ಧರಬೆಟ್ಟದ ವೀರಭದ್ರ ಶ್ರೀಗಳು ಶತರುದ್ರ ಯಾಗದ ಮುಂದಾಳತ್ವ ವಹಿಸಿದ್ದರು. ಎಮ್ಮಿಗನೂರು, ಮಳಲಿಮಠ, ಲಿಂಗದಹಳ್ಳಿ, ಕೊಟ್ಟೂರು, ಹಾವೇರಿ, ಸಂಗೊಳ್ಳಿ, ಅರಗಿನಡೋಣಿ, ಸಿಂಧನೂರು, ದೊಡ್ಡಸಗರ, ಚಿಮ್ಮಲಗಿ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನ ವೇದವಿದ್ವಾಂಸ ಚನ್ನಬಸವಾರಾಧ್ಯರನ್ನು ಮೊದಲ್ಗೊಂಡು ೨೧ ಜನ ಪುರೋಹಿತರಿಂದ ಶತರುದ್ರ ಯಾಗದ ಪೂಜೆ ನೆರವೇರಿತು. ಹಾಸನದ ಬಿ.ಪಿ.ಐಸಾಮಿಗೌಡ, ಕೊಡಿಯಾಲ ಹೊಸಪೇಟೆ ಜುಂಜಪ್ಪ ಹೆಗ್ಗಪ್ಪನವರ, ಹುಬ್ಬಳ್ಳಿ ಆರ್.ಎಂ.ಹಿರೇಮಠ, ಪ್ರಕಾಶ ಬೆಂಡಿಗೇರಿ, ನ್ಯಾಮತಿಯ ಮಂಜುನಾಥ-ಹೇಮಲತಾ, ಎನ್.ಆರ್.ಪುರದ ಶಿವಾನಂದ-ಚ0ದ್ರಕಲಾ, ಸಾಗರದ ಪಂಚಾಕ್ಷರಯ್ಯ-ಜಯಮ್ಮ ಮೊದಲಾದವರು ಶತರುದ್ರಯಾಗ ಪೂಜಾ ಸೇವೆ ಸಲ್ಲಿಸಿದರು.
ವರದಿ: ಸಿ.ಎಚ್. ಬಾಳನಗೌಡ್ರ

Related Articles

ಪ್ರತಿಕ್ರಿಯೆ ನೀಡಿ

Latest Articles