ದಾಂಪತ್ಯದ ಮಹತ್ವ ಸಾರುವ ಗೀತೆಗಳು

*ಎಚ್ ಜಿ ಮಳಗಿ

ನಮ್ಮ ಸಂಪ್ರದಾಯದಲ್ಲಿ ನಾಲ್ಕು ಆಶ್ರಮಗಳು. ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸ. ಗೃಹಸ್ಥಾಶ್ರಮಕ್ಕೆ ದಾಂಪತ್ಯವೇ ಹೇತು. ಎರಡು ವಿಭಿನ್ನ ಪರಿಸರ, ಪಾಲನೆ ಪೋಷಣೆ ಸಂಸ್ಕಾರಗಳಲ್ಲಿ ಬೆಳೆದ ಗಂಡು ಹೆಣ್ಣು ಮದುವೆ ಎಂಬ ಮೂರಕ್ಷರದ ಶಾಶ್ವತ ಬಂಧನಕ್ಕೊಳಗಾಗಿ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಳ್ಳುವ ವಿಶಿಷ್ಠ ಆಶ್ರಮ.

ಉಳಿದ ಮೂರು ಆಶ್ರಮಿಗಳಿಗೆ ಪೋಷಕ ಯಜಮಾನ ಸ್ಥಾನದಲ್ಲಿ ನಿಲ್ಲುವ ಅತ್ಯಂತ ಪವಿತ್ರ ಆಶ್ರಮ. ಗಂಡ ಹೊರಗಿನ ಜವಾಬ್ದಾರಿ ನಿಭಾಯಿಸಿದರೆ ಹೆಂಡತಿ ಮನೆವಾಳ್ತನ ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿ ಹೊರುತ್ತಾಳೆ. ಇಬ್ಬರೂ ಸೇರಿಯೇ ಸಂಸಾರ ಬಂಡಿಯನ್ನು ಸುವ್ಯಸ್ಥಿತವಾಗಿ ಸುರಕ್ಷಿತವಾಗಿ ಎಳೆಯುತ್ತಾರೆ. ಇಬ್ಬರಲ್ಲಿಯ ಪ್ರೀತಿ ವಿಶ್ವಾಸಗಳು ಪ್ರೇಮಾದರಗಳು ಈ ಬೃಹತ್ ಕಾರ್ಯದಲ್ಲಿನ ಆಯಾಸವನ್ನು ಮಂಜಿನ0ತೆ ಕರಗಿಸಿಬಿಡುತ್ತದೆ. ಅವರ ಕರ್ತವ್ಯ ನಿಷ್ಠತೆ, ಪರಾಯಣತೆ, ಚಿಂತನೆ ವರ್ತನೆಗಳು ಸಮಾಜದಲ್ಲಿ ಅವರನ್ನು ಆದರ್ಶ ದಂಪತಿಗಳೆ0ದು ಗುರುತಿಸಿ ಗೌರವಿಸುತ್ತದೆ.

ಲಕ್ಷ್ಮಿಯ ವಿರಹ ತಾಳದೇ ಅವಳನ್ನು ಹುಡುಕಿಕೊಂಡು ಶ್ರೀನಿವಾಸನೆಂಬ ಬಿರುದಾಂಕಿತ ನಾರಾಯಣ ಭೂಮಿಚಿಲ್ಲಿ ಅಂಡಲೆಯುವುದಿಲ್ಲವೆ. ಅದೇ ರೀತಿ ಪರಶಿವನೇ ತನ್ನ ಪತಿ ಎಂದು ತಿಳಿದು ಹಿಮವತ್ಪರ್ವತದಲ್ಲಿ ಘೋರ ತಪವನ್ನಾಚರಿಸಿ ಅವನನ್ನು ಪಾರ್ವತಿಯು ಒಲಿಸಿಕೊಳ್ಳಲಿಲ್ಲವೆ. ಶಾಪಗ್ರಸ್ತ ಪದಭ್ರಷ್ಟ ಇಂದ್ರನಿಗಾಗಿ ಅವನ ಪತ್ನಿ ಶಚಿದೇವಿಯು ಪಡಬಾರದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಲಿಲ್ಲವೆ.
ಇಂತಹ ಆದರ್ಶ ದಂಪತಿಗಳ ಉದಾಹರಣೆಗಳು ನಮ್ಮ ಮುಂದಿವೆ. ರಾಮ ಸೀತೆ, ಕೃಷ್ಣ ರುಕ್ಮಿಣಿ, ಲಕ್ಷಿö್ಮ ನಾರಾಯಣ, ಶಿವ ಪಾರ್ವತಿ, ವಶಿಷ್ಠ ಅರುಂಧತಿ, ಅತ್ರಿ ಅನಸೂಯಾ, ಸತ್ಯವಾನ್ ಸಾವಿತ್ರಿ, ಚ್ಯವನ ಸುಕನ್ಯಾ ಪೃಥ್ವಿರಾಜ್ ರಾಣಿ ಪದ್ಮಿನಿ, ಇತ್ತೀಚೆಗೆ ಬಂದರೆ ಗಾಂಧೀ ಕಸ್ತೂರ್ಬಾ, ಮುಂತಾದ ಅಸಂಖ್ಯ ಮಾದರಿ ದಂಪತಿಗಳು ಕಾಣಸಿಗುತ್ತಾರೆ.

ದಾಂಪತ್ಯ ಜೀವನವನ್ನು ಅದರ ಪಾವಿತ್ರö್ಯವನ್ನು ಅನನ್ಯತೆಯನ್ನು ಜನಪದರಾದಿಯಾಗಿ ಅನೇಕರು ಹಾಡಿಹೊಗಳಿದ್ದಾರೆ. ದಾಂಪತ್ಯದ ರಸಘಳಿಗೆಗಳನ್ನು ವಿರಹ ಸರಸ ಮುನಿಸನ್ನು ಹೃದಯಕ್ಕೆ ತಾಕುವ ಶಬ್ದಗಳಲ್ಲಿ ಹಿಡಿದಿಟ್ಟಿದ್ದಾರೆ ಕವಿಗಳು. ‘ಸಪ್ಪೆ ಬಾಳಿಗಿಂತ ಉಪ್ಪು ನೀರು ಲೇಸ ನನಗೂ ನಿನಗೂ ಅಂಟಿದ ನಂಟಿನ ಕೊನೆಬಲ್ಲವರಾರು ಬಲ್ಲವರಾರು ಕಾಮಾಕ್ಷಿಯೇ’ ಅಂತಾರೆ ಬೇಂದ್ರೆ ಸಖೀಗೀತೆಯಲ್ಲಿ.

ಕೆಎಸ್‌ನ ಅವರ ಮೈಸೂರ ಮಲ್ಲಿಗೆಯಂತೂ ದಾಂಪತ್ಯ ಜೀವನದ ಚರಮ ದಾಖಲೆ ಎನ್ನಿಸಿದೆ. ಅದರ ಮುನ್ನುಡಿ ಬರೆಯುತ್ತ ಡಿವಿಜಿಯವರು ‘ಜೀವನಾನುಭವವಿದ್ದ ಈ ಪದ್ಯಗಳನ್ನು ಓದುವವರಿಗೆ ತಮ್ಮ ಹೃದಯ ಧ್ವನಿಯೇ ಅಲ್ಲಿ ಹೊರಡುತ್ತಿರುವಂತೆ ಕೇಳಿ ಬಂದೀತೆಂದು ನನಗೆ ಅನ್ನಿಸುತ್ತದೆ’ ಅಂತ ಅದರ ಪಾವಿತ್ರ್ಯವನ್ನು ಹೃತ್ಕಂಠವಾಗಿ ಹೊಗಳಿದ್ದಾರೆ. ಇದು ದಾಂಪತ್ಯದ ಉತ್ತುಂಗವನ್ನು ಪ್ರತಿಬಿಂಬಿಸುತ್ತದೆ. ‘ತೌರ ಸುಖದೊಳೆನ್ನ ಮರೆತಿಹಳು ಎನ್ನದಿರಿ’ ಅಂತ ತೌರಿಗೆ ಬಂದ ಮಡದಿ ಪತಿಗೆ ಬರೆದ ಪತ್ರದಲ್ಲಿ ತನ್ನ ಉತ್ಕಟ ಪ್ರೀತಿ ವಿರಹವನ್ನು ತೋಡಿಕೊಳ್ಳುವ ಪರಿಯಂತೂ ಅನ್ಯಾದೃಶ. ‘ಕರಗಿರುವುದೆನ್ನೆದೆಯು; ಮನ್ನಿಸಿರುವೆನು ಬಾರ’ ಯಾವುದೋ ಬೇಸರದ ಘಟನೆಯಿಂದ ಮುನಿಸಿಕೊಂಡ ಗಂಡನು ಪತ್ನಿಯ ವಿರಹ ತಾಳದೇ ಹೆಂಡತಿಯನ್ನು ರಮಿಸುವ ರೀತಿ ನಮ್ಮವೇ ಎನ್ನಿಸುವ ಆಪ್ತತೆ ತುಂಬಿದ ದಾಂಪತ್ಯ ಕವನಗಳು ಜೀವನ ಪಾಠಗಳಾಗಿವೆ.
ದಾಂಪತ್ಯ ಗೀತೆಗಳು ಹೀಗೆ ಹಲವಾರು ಪ್ರಸಿದ್ಧರಿಂದ ಮೂಡಿ ಬಂದು ನಾಡಿಗರ ಮನವನ್ನು ತುಂಬಿರುವಂತೆಯೇ ರಂಗಗೀತೆಗಳಲ್ಲಿ ಕನ್ನಡ ಚಲನಚಿತ್ರಗೀತೆಗಳಲ್ಲು ಹಾಸುಹೊಕ್ಕಾಗಿ ಕೇಳಿದಾಗಲೆಲ್ಲಾ ಯಾವುದೋ ಲೋಕಕ್ಕೆ ಎಳೆದೊಯ್ಯುತ್ತವೆ. ಸುಮಧುರ ಸಂಗೀತದ ಹಿಮ್ಮೇಳವು ಗೀತೆಗಳಿಗೆ ಹೆಚ್ಚು ಅರ್ಥನೀಡಿ ಮನಕ್ಕೆ ಮುದ ನೀಡುತ್ತವೆ. ಅರವತ್ತು ಎಪ್ಪತ್ತರ ದಶಕವು ಕನ್ನಡದಲ್ಲಿ ಪ್ರೇಮ ಚಿತ್ರಗೀತೆಗಳ ಉಛ್ರಾಯ ಕಾಲ. ಚಿತ್ರ ಸಾಹಿತ್ಯವನ್ನು ಎರಡನೆ ದರ್ಜೆಯ ಸಾಹಿತ್ಯವೆಂದು ಮೂಗು ಮುರಿಯುವ ಅನೇಕರಿದ್ದಾರೆ. ಆದರೆ ಅವು ಜನಮನ ಸೂರೆಗೊಂಡಿರುವುದನ್ನು ಅಲ್ಲಗಳೆಯಲಾಗದು. ಆದರ್ಶ, ಸಫಲ ದಾಂಪತ್ಯದ ಕುರಿತಾದ ಒಂದೆರಡು ಚಿತ್ರಗೀತೆಗಳನ್ನು ನೋಡೋಣ.
ಶ್ರೀಕೃಷ್ಣದೇವರಾಯ ಚಿತ್ರದ ಡಾ. ರಾಜ್‌ಕುಮಾರ್ ಭಾರತಿ ಅಭಿನಯದ ‘ಬಹು ಜನ್ಮದಾ ಪೂಜಾ ಫಲ’ ಎಂಬ ಹಾಡು (ರಚನೆ: ಕಣಗಾಲ್ ಪ್ರಭಾಕರ ಶಾಸ್ತ್ರಿ, ಸಂಗೀತ:ಟಿ.ಜಿ.ಲಿAಪ್ಪ, ಗಾಯಕರು ಡಾ. ಪಿ.ಬಿ. ಶ್ರೀನಿವಾಸ್ ಹಾಗೂ ಎಸ್. ಜಾನಕಿ) ಯಶಸ್ವೀ ದಾಂಪತ್ಯಕ್ಕೆ ಭಾಷ್ಯ ಬರೆದಂತಿದೆ. ಡಾ. ರಾಜ್‌ಕುಮಾರ್ ಹಾಗೂ ಜಮುನಾ ಅಭಿನಯದ ಸಾಕ್ಷಾತ್ಕಾರ ಚಿತ್ರದ ‘ಒಲವೇ ಜೀವನ ಸಾಕ್ಷಾತ್ಕಾರಾ’ ಹಾಡು (ರಚನೆ: ಕಣಗಾಲ್ ಪ್ರಭಾಕರ ಶಾಸ್ತ್ರಿ, ಸಂಗೀತ: ಎಂ. ರಂಗರಾವ್, ಗಾಯಕರು, ಡಾ. ಪಿ.ಬಿ.ಶ್ರೀನಿವಾಸ್ ಹಾಗೂ ಪಿ. ಸುಶೀಲಾ) ಅಮರ ಪ್ರೇಮ ಗೀತೆಯಾಗಿದೆ. ಚಿತ್ರದ ನಾಯಕ ನಾಯಕಿಯರು ದಂಪತಿಗಳಾಗದೇ ಹಾಗೆಯೇ ಜೀವನವಿಡೀ ಇದ್ದರೂ ಇಬ್ಬರ ಮನಸ್ಸೂ ಒಂದಾಗಿ ಅವರು ಮಾನಸಿಕವಾಗಿ ದಂಪತಿಗಳೇ ಆಗಿರುತ್ತಾರೆ.

ದಾಂಪತ್ಯವನ್ನು ಒಂದು ತಪಸ್ಸೆಂದು ಭಾವಿಸಿ ಅದರಲ್ಲಿಯೇ ಜೀವನದ ಸಾಕ್ಷಾತ್ಕಾರ ಪಡೆಯುವುದು ಅದ್ಭುತ. ಕೃಷ್ಣದೇವರಾಯ ಚಿತ್ರದ ನಾಯಕಿಯು ಸಾಮ್ರಾಜ್ಯದ ಹಿತದೃಷ್ಟಿಯಿಂದ ಮಹಾರಾಣಿ ಪಟ್ಟವನ್ನು ತ್ಯಾಗ ಮಾಡುತ್ತಾಳೆ. ಸಾಕ್ಷಾತ್ಕಾರ ಚಿತ್ರದ ನಾಯಕಿಯೂ ಜಾತಕದಲ್ಲಿ ಅಂಗಾರಕ ದೋಷದ ಮೂಢನಂಬಿಕೆಗೊಳಗಾಗಿ ಪ್ರೀತಿಸಿದವನ್ನು ಮದುವೆಯಾಗದೇ ಇದ್ದರೂ ಮನದಲ್ಲಿಯೇ ಅವನನ್ನು ಪತಿಯನ್ನಾಗಿ ಆರಾಧಿಸುತ್ತಾ ಜೀವನವನ್ನು ಮುಗಿಸುತ್ತಾಳೆ. ನಾಯಕನೂ ಪ್ರೀತಿಸಿದವಳನ್ನಲ್ಲದೇ ಬೇರೆಯವಳನ್ನು ಮದುವೆಯಾಗುವುದಿಲ್ಲವೆಂಬ ನಿರ್ಧಾರ ತಳೆದು ಮನದಲ್ಲಿಯೇ ಅವಳನ್ನೇ ಮಡದಿಯನ್ನಾಗಿ ಆರಾಧಿಸುತ್ತಾ ಜೀವನವನ್ನು ಸವೆಸುವ ಅದ್ಭುತ ಕಥೆ, ಕ್ಷುಲ್ಲಕ ಕಾರಣಗಳಿಗೆ ದಾಂಪತ್ಯವನ್ನು ಒಡೆದುಕೊಳ್ಳುವ ಈಗಿನ ಪೀಳಿಗೆಗೆ ದಾರಿದೀಪವಾಗಿದೆ.

ರಾಜ್ ಕುಮಾರ್ ಭಾರತಿ ಅಭಿನಯದ ಬಂಗಾರದ ಮನುಷ್ಯ ಚಿತ್ರದ ‘ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು’ ಎಂಬ ಗೀತೆಯು “ಅವನಿಲ್ಲದೇ ತಾನಿಲ್ಲ’ ಎಂಬುದನ್ನು ಅವನಲ್ಲಿ ತನಗಿರುವ ಅನುರಾಗವನ್ನು ಹೇಳುವ ರೀತಿ ಈಗಿನವರಿಗೆ ಅನುಕರಣೀಯ. ಸತೀ ಸುಕನ್ಯಾ ಚಿತ್ರದ ‘ಮಧುರ ಮಧುರವೀ ಮಂಜುಳ ಗಾನಾ’ ಎಂಬ ಅಮರ ಗೀತೆ ದಾಂಪತ್ಯದ ಸಾಫಲ್ಯವನ್ನೇ ಸಾರುತ್ತದೆ. ವೃದ್ಧ ಪತಿಗೆ ಅಶ್ವಿನಿ ದೇವತೆಗಳು ಚಿರಯೌವನವನ್ನು ನೀಡುವಂತೆ ಮಾಡಿದ ಸುಕನ್ಯಳ ಪರಾಯಣತೆ ಅನುಕರಣೀಯ. ಯಮನಿಂದ ಪತಿಯ ಜೀವನವನ್ನೇ ಮರಳಿ ಪಡೆದ ಸಾವಿತಿಯ ಛಲ ಬೆರಗುಗೊಳಿಸುತ್ತದೆ. ಇನ್ನೂಇಂತಹ ಅಸಂಖ್ಯಾತ ಚಿತ್ರಗೀತೆಗಳಲ್ಲಿ ದಾಂಪತ್ಯದ ಮಹತ್ವವನ್ನು ಸಾರುವ ಅದ್ಭುತ ಅಮರ ಸಂದೇಶಗಳಿವೆ.

Related Articles

ಪ್ರತಿಕ್ರಿಯೆ ನೀಡಿ

Latest Articles