ಸಪ್ತಮಿಯ ಸೂರ್ಯೋಪಾಸನೆ

ಫೆ. 19 ರಂದು ರಥಸಪ್ತಮಿ. ಸೂರ್ಯದೇವನ ಆರಾಧನೆಯ ಪುಣ್ಯದಿನ. ಈ ದಿನದ ಮಹತ್ವ ಏನು? ವ್ರತಾಚರಣೆ ಹೇಗೆ ಮಾಡಬೇಕು? ಎಕ್ಕ ಗಿಡದ ಆರೋಗ್ಯ ಲಾಭಗಳು ಏನು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

* ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಬ್ರಹ್ಮಾಂಡದಲ್ಲಿ ಸೂರ್ಯನಿಗಿಂತ ಅದ್ಭುತವಾದ ಇನ್ನೊಂದು ವಸ್ತುವಿಲ್ಲ. ವ್ಯೂಹದ ಕೇಂದ್ರವಾಗಿ ತನ್ನನ್ನು ಪ್ರದಕ್ಷಿಣೆ ಹಾಕುವ ಪರಿವಾರದ ಬೃಹತ್ ಕಾರ್ಯಗಳಿಗೆಲ್ಲ ಬೆಳಕನ್ನು ನೀಡುವ ಕತ್ತಲೆಯನ್ನು ಕಳೆಯುವ ಸ್ವಯಂಪ್ರಕಾಶ ಮಂಡಲ ಸೂರ್ಯ ಚಿರಂತನವಾದರೂ ಹೊಸತನವನ್ನು ನೀಡುವ ಚೈತನ್ಯದ ನಿಧಿ. ನಮ್ಮ ಬದುಕಿನಲ್ಲಿ ನಿತ್ಯ ಕಂಡರೂ ಹಳಸಲಾಗದ ವಸ್ತುಗಳು ಬಹಳ ಇಲ್ಲ. ಆ ನಿತ್ಯ ನೂತನವಾದ ಕೆಲವೇ ವಸ್ತುಗಳಲ್ಲಿ ಸೂರ್ಯೋದಯವೂ ಒಂದ0ತೆ! ನವೋ ನವೋ ಭವತಿ ಜಾಯಮಾನಃ| ಪರಮೇಶ್ವರನ ಪ್ರತ್ಯಕ್ಷವಾದ ಅಷ್ಟಮೂರ್ತಿಗಳಲ್ಲಿ ಒಂದು ಕಾಲಕಾರಕನು ಕಾಲ ನಿಯಮಕನೂ ಆದ ಸೂರ್ಯ.

ಭೂಮಿಯ ಮೇಲಿನ ಎಲ್ಲ ಕಾಲಗಣನೆಯು ಸೂರ್ಯ ಚಂದ್ರ ಕೇಂದ್ರಿತವಾದದ್ದು. ಒಂದು ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯದ ಮಧ್ಯದ ಕಾಲವೇ ನಮ್ಮ ಅಹೋ ರಾತ್ರಿಗಳ ಒಂದು ದಿನವಲ್ಲವೇ? ಜಗತ್ತಿನ ಜ್ಯೋತಿಯಾದ ಸೂರ್ಯನಿಂದಾಗುವ ಭೌತಿಕ ಪ್ರಯೋಜನಗಳು ಎಲ್ಲರಿಗೂ ತಿಳಿದದ್ದೇ. ಆದರೆ ಆ ಸೂರ್ಯನು ಪರಂಜ್ಯೋತಿಯಾದ ಪರಮಾತ್ಮ ಶ್ರೇಷ್ಠವಾದ ಪ್ರತೀಕವೂ ಆಗಿದ್ದಾನೆ ಎಂದು ಮನಗಂಡ ಭಾರತ ಋಷಿಗಳು ಸೂರ್ಯೋಪಾಸನೆಯಲ್ಲಿ ಅಧ್ಯಾತ್ಮವನ್ನೂ ಜೋಡಿಸಿದರು.


ರಥಸಪ್ತಮಿ
ರಥಸಪ್ತಮಿ ಸೂರ್ಯನಾರಾಯಣನ ಜನ್ಮದಿನ. ಯಾರು ಏನನ್ನೇ ಹೇಳಲಿ, ಸೂರ್ಯಮಂಡಲದಲ್ಲಿ ಅಭಿಮಾನಿ ದೇವತೆಯೊಂದಿದೆ ಎಂದು ಎಲ್ಲರೂ ಒಪ್ಪುತ್ತಾರೆ. ಆ ದೇವತೆಯು ಯಾವಾಗಲೂ ಇರುವುದಾದರೂ ಸಮಸ್ತ ಲೋಕಗಳ ಕಲ್ಯಾಣಕ್ಕಾಗಿ ಶ್ರೀರಾಮಕೃಷ್ಣಾದಿಗಳಂತೆ ಯಾವುದೋ ಒಂದು ಸುದಿನದಲ್ಲಿ ಕಾಣಿಸಿಕೊಂಡಿದೆ. ಕೆಲವೇ ವರ್ಷಗಳಲ್ಲಿ ಅವತಾರದ ಉದ್ದೇಶವು ಸಂಪನ್ನವಾಗಿ ಮೂಲಸ್ಥಾನವನ್ನು ಸೇರುವ ಭಗವಂತನ ವಿಭೂತಿಗಳು ಅಸಂಖ್ಯಾತವಾಗಿವೆ. ಆದರೆ ಸೃಷ್ಟಿಯ ಆದಿಯಿಂದ ಕೊನೆಯವರೆಗೂ ಸರ್ವಜನಹಿತವನ್ನು ಸಂಪಾದಿಸುತ್ತಿರುವ ದೇವತೆಗಳಲ್ಲಿ ಶ್ರೀಸೂರ್ಯದೇವರು ಸುಪ್ತಸಿದ್ಧ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬೆಳಕಿನ ಮೂಲ ಆಗರವಾದ ಆದಿತ್ಯನನ್ನು ತಿಳಿಯದವರು ಯಾರೂ ಇಲ್ಲ. ಶಿಶುಗಳಾಗಲಿ ಪಶುಗಳಾಗಲಿ ಪಂಡಿತರಾಗಲಿ ಪಾಮರರಾಗಲಿ ಎಲ್ಲರಿಗೂ ಬೆಳಕು ಬೇಕೇ ಬೇಕು. ಈ ಕಾರಣಕ್ಕಾಗಿಯೇ ಎಲ್ಲರೂ ಪ್ರಕಾಶಮಯನಾದ ಪರಮಾತ್ಮನನ್ನು ಆರಾಧಿಸುತ್ತಾರೆ.
ಭಾರತದ ಧಾರ್ಮಿಕ ಸಂಪ್ರದಾಯಗಳು ನಮ್ಮ ಪೂರ್ವಿಕರ ಅನೇಕ ಚಿಂತನೆಗಳ ಹಾಗೂ ಸಂಸ್ಕಾರಗಳ ಫಲವಾಗಿದೆ. ವ್ಯಕ್ತಿ, ಸಮಾಜದ ವಿಕಾಸಕ್ಕೆ ದಾರಿದೀಪಗಳಾಗಿವೆ. ದೇಃ, ಮನಸ್ಸು ಮತ್ತು ಬುದ್ಧಿಗಳನ್ನು ಸಂಸ್ಕರಿಸಲು ಸಮರ್ಥವಾಗಿರುವ ಈ ಸಾಂಪ್ರದಾಯಿಕ ಆಚರಣೆಗಳು, ಆಯಸ್ಸು, ಆರೋಗ್ಯ ವೃದ್ಧಿಗೂ ಪೂರಕವಾಗಿದೆ.
ಮಕರ ಸಂಕ್ರಮಣ ದಿನದಂದು ಸಂವತ್ಸರದ ದಕ್ಷಿಣಾಯಣ ಕೊನೆಗೊಂಡು ಉತ್ತರಾಯಣ ಆರಂಭವಾಗುತ್ತದೆ. ಇದರಿಂದ ಸೂರ್ಯನು ಉತ್ತರ ಕಕ್ಷೆಯ ಕಡೆಗೆ ವಾಲುವುದಕ್ಕೆ ಪ್ರಾರಂಭಿಸಿ, ಮಾಘ ಮಾಸದ ಸಪ್ತಮಿಯ ದಿನದಂದು ಕಕ್ಷೆಯಲ್ಲಿ ನೆಲೆಗೊಂಡು ಸಂಚರಿಸಲು ಪ್ರಾರಂಭಿಸುತ್ತಾನೆ. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥೀ ಅರುಣ. ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.
ಬದಲಾಗುವ ಕಾಲಮಾನ
ರಥಸಪ್ತಮಿ ದಿನದಿಂದ ಶಿಶಿರ ಋತುವಿನ ಚಳಿ ಕಳೆದು ಬೇಸಿಗೆಯ ಝಳ ಪ್ರಾರಂಭವಾಗುತ್ತದೆ. ನಭೋಮಂಡಲದಲ್ಲಿನ ಈ ಸಹಜ ಪ್ರಕ್ರಿಯೆ, ಭೂಮಂಡಲದ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಸೂರ್ಯ ಮತ್ತು ವಾಯುವಿನ ಮಾರ್ಗ ಸ್ವಭಾವದಿಂದ ವಾತಾವರಣದಲ್ಲಿ ಉಷ್ಣ, ತೀಕ್ಷ÷್ಣ ಮತ್ತು ಶುಷ್ಕತೆಗಳು ವೃದ್ಧಿಯಾಗಿ ಭೂಮಿಯ ಸೌಮ್ಯಗುಣ ನಾಶವಾಗುತ್ತದೆ. ಇದರ ಪರಿಣಾಮ ಮಾನವನ ದೇಹದ ಬಲ ಕುಗ್ಗುತ್ತದೆ. ಬೇಸಿಗೆಯ ತಾಪದಿಂದ ಉಂಟಾಗಲಿರುವ ಈ ಎಲ್ಲ ಉಪದ್ರವಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಉಪಯೋಗವಾಗುವ ಒಂದು ವಿಶಿಷ್ಟ ಮಾರ್ಗೋಪಾಯವೇ ರಥಸಪ್ತಮಿ ಆಚರಣೆ.


ವ್ರತದ ವೈಶಿಷ್ಟ್ಯ
ರಥಸಪ್ತಮಿಯಂದು ಅಭ್ಯಂಗ ಸ್ನಾನ ಮಾಡುತ್ತಾರೆ. ಅಂದು ಶರೀರದ ವಿವಿಧ ಭಾಗಗಳ ಮೇಲ್ಬದಿಯಲ್ಲಿ (ತಲೆ ಭುಜ, ಬೆನ್ನು ಮತ್ತು ಮಂಡಿ) ಎಕ್ಕದ ಎಲೆಯನ್ನು ಇಟ್ಟುಕೊಂಡು ಸೂರ್ಯ ಮಂತ್ರವನ್ನು ಹೇಳಿಕೊಳ್ಳುತ್ತಾ ಸ್ನಾನ ಮಾಡುತ್ತಾರೆ. ಸ್ನಾನ ಮಾಡಿದ ನಂತರ ಸೂರ್ಯನನ್ನು ಪೂಜಿಸುತ್ತಾರೆ. ಎಕ್ಕದ ಎಲೆಯ ಮೇಲೆ ಮೊಸರು ಅನ್ನವನ್ನು ಎಡೆಯನ್ನಾಗಿ ಇಡುತ್ತಾರೆ. ನಂತರ ಇದನ್ನು ಪ್ರಸಾದ ರೂಪದಲ್ಲಿ ಸೇವಿಸುವ ಸಂಪ್ರದಾಯ ಕೆಲವೆಡೆಯಿದೆ. ಮತ್ತೆ ಕೆಲವರು ಅಭ್ಯಂಗ ಸ್ನಾನ ಮಾಡಿದ ನಂತರ ಸೂರ್ಯ ಸ್ವರೂಪಿಯಾದ ಎಕ್ಕದ ಗಿಡವನ್ನು ಪೂಜಿಸುತ್ತಾರೆ.


ಎಕ್ಕದ ಗಿಡದ ಮಹತ್ವ
ಭಾರತೀಯ ವೈದ್ಯ ಪದ್ಧತಿಯಲ್ಲಿ ಒಂದು ಅಪೂರ್ವ ವನಸ್ಪತಿ ಎಂದು ಪ್ರಸಿದ್ಧ ಪಡೆದಿರುವ ಎಕ್ಕದ ಗಿಡ ಧಾರ್ಮಿಕವಾಗಿಯೂ ಒಂದು ಜನಪ್ರಿಯ ಪೂಜ್ಯನೀಯ ಸಸ್ಯವಾಗಿದೆ. ಸಂಸ್ಕೃತದಲ್ಲಿ ಊರ್ಯಹ್ವಯ, ವಿಕರಣ, ರವಿ, ಭಾಸ್ಕರ, ಅರ್ಕ ಮುಂತಾದ ಅನ್ವರ್ಥ ಹೆಸರುಗಳಿಂದ ಕರೆಯಲ್ಪಡುತ್ತದೆ. ಇದು ಉಷ್ಣ, ತೀಕ್ಷ÷್ಣ ಹಾಗೂ ಕ್ಷಾರ ಗುಣಗಳಿಂದ ಕೂಡಿದೆ. ವಾತ-ಕಫ ದೋಷಗಳನ್ನು ನಿವಾರಣೆ ಮಾಡುತ್ತದೆ. ನೋವು ನಿವಾರಕವಾಗಿದೆ. ಕೆಮ್ಮ, ಮೂಲವ್ಯಾಧಿ, ಕೀಲುನೋವು, ಚರ್ಮರೋಗ, ಯಕೃತ್ ರೋಗ ಮುಂತಾದ ಅನೇಕ ರೋಗಗಳಿಗೆ ಉತ್ತಮ ಔಷಧವಾಗಿದೆ. ಎಕ್ಕದ ಗಿಡವನ್ನು ಸೂರ್ಯನ ಪ್ರತಿನಿಧಿಯನ್ನಾಗಿ ಪೂಜಿಸುತ್ತಾರೆ. ಅಂಬಾಸುತನಿಗೆ ಪ್ರಿಯವಾದ ಎಕ್ಕದ ಗಿಡದಲ್ಲಿ ಗಜಮುಖನು ವಾಸಿಸುತ್ತಾನೆ ಎಂಬ ನಂಬಿಕೆಯಿದೆ. ಸೂರ್ಯನಂತೆ ಉಷ್ಣ, ತೀಕ್ಷ÷್ಣ ಗುಣಗಳುಳ್ಳ ಅರ್ಕ ಅಥವಾ ಎಕ್ಕೆಗಿಡದ ಎಲೆಗಳನ್ನು ಬೇಸಿಗೆಯ ಪ್ರಾರಂಭ ದಿನವಾದ ರಥ ಸಪ್ತಮಿಯಂದು ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಅಭ್ಯಂಗ ಸ್ನಾನದ ಸಮಯದಲ್ಲಿ ಉಪಯೋಗಿಸುತ್ತಾರೆ. ಬೇಸಿಗೆಯ ಬಿಸಿಲಿನ ಝಳದ ಪ್ರಭಾವದಿಂದ ಆರೋಗ್ಯ ರಕ್ಷಿಸಿಕೊಳ್ಳುವ ಪೂರ್ವ ಸಿದ್ಧತೆಯೇ ರಥಸಪ್ತಮಿ ವ್ರತದ ಮಹತ್ವ.


ವ್ರತಾಚರಣೆ
ಸೂರ್ಯನ 108 ಹೆಸರುಗಳನ್ನು ಉಚ್ಛರಿಸಿ ನಮಸ್ಕಾರ ಮಾಡುತ್ತಾರೆ. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಸೂರ್ಯ ಮಂತ್ರ ಪಠಿಸಿ ನಮಸ್ಕಾರ ಮಾಡುತ್ತಾರೆ. 108 ಆಗದಿದ್ದವರು 12 ನಾಮಗಳನ್ನಾದರೂ ಜಪಿಸಿ ನಮಸ್ಕಾರ ಮಾಡುವ ಪದ್ಧತಿಯಿದೆ. ಹೀಗೆ ಬಳಕೆಯಾಗುವ ಹನ್ನೆರಡು ನಾಮಗಳೆಂದರೆ ಇಂದ್ರ, ವಿಧಾತ, ಪರ್ಜನ್ಯ, ತ್ವಷ್ಟ, ಪೂಷನ್, ಆರ್ಯಮ, ಭಾಗ, ವಿವಿಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳನ್ನು ಸೂಚಿಸುತ್ತದೆ. ಇದೇ ರೀತಿ ಸೂರ್ಯನಿಗೆ ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಬಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ ಎನ್ನುವ ಹೆಸರುಗಳೂ ಇವೆ.


ಅಕ್ಷಯ ಪಾತ್ರೆ
ದ್ವಾಪರಯುಗದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ವ್ರತವನ್ನು ಬೋಧಿಸುತ್ತಾನೆ. ಈ ವ್ರತಕ್ಕೆ ಹಿನ್ನೆಲೆಯಾಗಿ ಯಶೋಧರ್ಮ ರಾಜನ ಕಥೆಯನ್ನು ಹೇಳುತ್ತಾನೆ. ಈ ಕಥೆ ಹೀಗಿದೆ.
ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನು ಹುಟ್ಟಿನಿಂದಲೇ ರೋಗಿಷ್ಟನಾಗಿರುತ್ತಾನೆ. ಸಂಚಿತ ಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸುವಂತೆ ಕುಲಪುರೋಹಿತರು ಹೇಳುತ್ತಾರೆ. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾಧನೆ ಮಾಡಲಾಗಿ ರಾಜಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆಗುತ್ತಾನೆ. ಇದನ್ನು ಹೇಳಿ ಕೃಷ್ಣನು ಪಾಂಡವರಿಗೆ ದ್ರೌಪದೀಸಹಿತರಾಗಿ ಸೂರ್ಯಾರಾಧನೆ ಮಾಡುವಂತೆ ಸೂಚಿಸುತ್ತಾನೆ. ಅದರಂತೆ ಸೂರ್ಯೋಪಾಸನೆ ಮಾಡಿದ ಪಾಂಡವರು ಎಂದಿಗೂ ಬರಿದಾಗದ ಅಕ್ಷಯಪಾತ್ರೆಯನ್ನು ವರವಾಗಿ ಪಡೆಯುತ್ತಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles