ವಿಶ್ವವಂದ್ಯನ ವಿಶಿಷ್ಟ ಅವತಾರಗಳಿವು

ಜಗದ್‍ವಂದ್ಯ ವಿನಾಯಕನ ಅವತಾರಗಳು ಅನೇಕ. ವಿಘ್ನವನ್ನು ಕಳೆಯುವ ವಿನಾಯಕನನ್ನು ವಿಘ್ನೇಶ, ಗಣೇಶ,ಲಂಬೋದರ, ಹೇರಂಭ ಹೀಗೆ ನಾನಾ ಹೆಸರುಗಳಿಂದ ಪೂಜಿಸಲಾಗುತ್ತದೆ.

ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.

ಬಾಲ ಗಣಪತಿ: ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.

ತರುಣ ಗಣಪತಿ: ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.

ಭಕ್ತಿ ಗಣಪತಿ: ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.

ವೀರ ಗಣಪತಿ: ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ ” ವೀರ” ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.

ಶಕ್ತಿ ಗಣಪತಿ: ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.

ದ್ವಿಜ ಗಣಪತಿ: “ದ್ವಿಜ” ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.

ಸಿದ್ಧಿ ಗಣಪತಿ: ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.

ಉಚ್ಚಿಷ್ಟ ಗಣಪತಿ: ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.

ವಿಘ್ನ ಗಣಪತಿ: ಗಣಪತಿಯನ್ನು “ವಿಘ್ನೇಶ್ವರ, ವಿಘ್ನನಾಶಕ” ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.

ಕ್ಷಿಪ್ರ ಗಣಪತಿ: ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.

ಹೇರಂಬ ಗಣಪತಿ: ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.

ಲಕ್ಷ್ಮೀ ಗಣಪತಿ: ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.

ಮಹಾ ಗಣಪತಿ:  “ಮಹಾ” ಎಂಬ ಮಾತೇ “ಶ್ರೇಷ್ಟ” ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.

ವಿಜಯ ಗಣಪತಿ: ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ “ವಿಜಯ”ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.

ನೃತ್ಯ ಗಣಪತಿ: ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?

ಊರ್ಧ್ವ ಗಣಪತಿ: ಊರ್ಧ್ವ ಗಣಪತಿ ಎಂದರೆ” ಉದ್ದವಾಗಿ ಇರುವ ಗಣಪತಿ” ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.

ಏಕಾಕ್ಷರ ಗಣಪತಿ: “ಏಕಾಕ್ಷರ ಗಣಪತಿ”ಯು ಹೆಸರೇ ಸೂಚಿಸುವಂತೆ “ಒಂದೆ ಅಕ್ಷರದ “ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.

ವರದ ಗಣಪತಿ: ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ “ಮೂರನೆ ಕಣ್ಣು” ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.

ತ್ರಯಾಕ್ಷರ ಗಣಪತಿ: ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.

ಕ್ಷಿಪ್ರ ಪ್ರಸಾದ ಗಣಪತಿ: ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.

ಹರಿದ್ರ ಗಣಪತಿ: ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.

ಏಕದಂತ ಗಣಪತಿ: ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.

ಸೃಷ್ಟಿ ಗಣಪತಿ: ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.

ಉದ್ಧಂಡ ಗಣಪತಿ: ಉದ್ಧಂಡ ಗಣಪತಿಯು ವಿಶ್ವದಲ್ಲಿ ‘ಧರ್ಮವನ್ನು ಪರಿಪಾಲಿಸುತ್ತಾನೆ”. ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.

ಋಣಮೋಚನ ಗಣಪತಿ: ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.

ದುಂಧಿ ಗಣಪತಿ: ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.

ದ್ವಿಮುಖ ಗಣಪತಿ: ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ, ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.

ತ್ರಿಮುಖ ಗಣಪತಿ: ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.

ಸಿಂಹ ಗಣಪತಿ: ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.

ಯೋಗ ಗಣಪತಿ: ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.

ದುರ್ಗಾ ಗಣಪತಿ: ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.

ಸಂಕಷ್ಟ ಹರ ಗಣಪತಿ: ಗಣಪತಿಯ ಈ ಅದ್ಭುತ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ.

ಸಂಗ್ರಹ: ಹೆಚ್.ಎಸ್.ರಂಗರಾಜನ್, ಅರ್ಚಕರು ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ, ಹುಸ್ಕೂರು, ಬೆಂಗಳೂರು.                        

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles