ನಾಳೆ ಸಿಲಿಕಾನ್ ಸಿಟಿಯಲ್ಲಿ ವಿವಿಧೆಡೆ ಮಧ್ವನವಮಿ ಉತ್ಸವ

*  ತೀರ್ಥಹಳ್ಳಿ ಅನಂತ ಕಲ್ಲಾಪುರ

ಬೆಂಗಳೂರಿನ ಪದ್ಮನಾಭ ನಗರದ ಸುಮಧ್ವ ವಿಜಯದಲ್ಲಿರುವ ಶ್ರೀ ಮಧ್ವಾಚಾರ್ಯರ ಸನ್ನಿಧಾನ.

ಬೆಂಗಳೂರು: ಸುಮಾರು ಏಳು ಶತಮಾನಗಳ ಹಿಂದೆ ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ತಣ್ತೀವಾದವೆಂಬ ವೇದಾಂತ ಪ್ರಕಾರವನ್ನು ಪ್ರಚಾರಕ್ಕೆ ತಂದ ಮಧ್ವಾಚಾರ್ಯರು ಭೌತಿಕವಾಗಿ ಕೊನೆಯದಾಗಿ ಕಂಡುಬಂದ ದಿನ ಮಧ್ವನವಮಿ. 

ಈ ಪ್ರಯುಕ್ತ ಫೆಬ್ರವರಿ 21 ರಂದು ಸಿಲಿಕಾನ್  ಸಿಟಿಯಲ್ಲಿ ವಿವಿಧೆಡೆ ಮಧ್ವನವಮಿ ಉತ್ಸವವನ್ನು  ಆಚರಿಸಲು  ಸಕಲ ಸಿದ್ದತೆಗಳು ನಡೆಯುತ್ತಿದೆ.

ನಗರದ ಪದ್ಮನಾಭನಗರದ  ಶ್ರೀ ಸುಮಧ್ವ ವಿಜಯ ಸೌಧದಲ್ಲಿ ಶ್ರೀ ರಾಮ  – ಸೀತಾ –  ಲಕ್ಷ್ಮಣ  ಸಮೇತ ಶ್ರೀ ಮುಖ್ಯ ಪ್ರಾಣ ದೇವರು ಹಾಗೂ ದ್ವೈತ ಗುರು ಮಧ್ವಾಚಾರ್ಯರ ಶಿಲಾ ಮೂರ್ತಿ ಇದ್ದು   ಪದ್ಮನಾಭನಗರದ ಶ್ರೀಮತ್ ಆನಂದ ತೀರ್ಥ ಸೇವಾ  ಟ್ರಸ್ಟ್ ನಿಂದ ಶ್ರೀ ಸುಮಧ್ವ ವಿಜಯ ಸೌಧದಲ್ಲಿ  ಮಧ್ವರ ಸನ್ನಿಧಾನಕ್ಕೆ ವಿಶೇಷ ಪೂಜೆ ನಡೆಯಲಿದೆ.

ಬನಶಂಕರಿ  3 ನೇ ಹಂತದ  ಇಟ್ಟಮಡುವಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ  ಸನ್ನಿಧಾನ, ಕಲ್ಪವೃಕ್ಷ  ಕ್ಷೇತ್ರ  -ಪೂರ್ಣಪ್ರಜ್ಞನಗರ, ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಬಸವನಗುಡಿಯಲ್ಲಿಇರುವ ಉತ್ತಾರಾದಿ ಮಠ ಹಾಗೂ ಸಿಲಿಕಾನ್ ಸಿಟಿಯಲ್ಲಿ ಇನ್ನೂ ವಿವಿಧೆಡೆ  ಶ್ರೀ ಮಧ್ವನವಮಿ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ವಿವಿಧೆಡೆ 21 ರಂದು ಬೆಳಗ್ಗೆ 7 ಗಂಟೆಗೆ ಸಾಮೂಹಿಕ ಸುಮಧ್ವ ವಿಜಯ ಪಾರಾಯಣ, ಸರ್ವಮೂಲ ಗ್ರಂಥ ಪಾರಾಯಣ, ಮಧ್ವಾಚಾರ್ಯರಿಗೆ ಪಾದಪೂಜೆ, ಕನಕಾಭಿಷೇಕ, ಪ್ರವಚನ ಮಂಗಳ, ಪ್ರಾಕಾರದಲ್ಲಿ ಶ್ರೀ ಮಧ್ವಾಚಾರ್ಯರ ರಥೋತ್ಸವ, ಮಧ್ಯಾಹ್ನ12 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ , ಸಂಜೆ 6 ರಿಂದ ದೇವರನಾಮಗಳ ಗಾಯನ ಕಾರ್ಯಕ್ರಮ ಇರಲಿದೆ.

ಮಾಸ್ಕ್ ಕಡ್ಡಾಯ: ಕೊರೋನಾ ವೈರಸ್  ಇರುವ ಕಾರಣ ಉತ್ಸವದಲ್ಲಿಭಾಗವಹಿಸುವ ಭಕ್ತರ ಆರೋಗ್ಯ ಹಾಗು  ಶ್ರೀ ಮಠದ ಹಿತದೃಷ್ಟಿಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರು  ಮಧ್ವನವಮಿ  ಉತ್ಸವದಲ್ಲಿ  ಭಾಗವಹಿಸಿ  ವೇದಾಂತ ಸಾಮ್ರಾಜ್ಯದ ಚಕ್ರವರ್ತಿ  ಶ್ರೀ ಮಧ್ವಾಚಾರ್ಯರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಠದ ಆಡಳಿತಮಂಡಳಿಯವರು ವಿನಂತಿಸಿಕೊಂಡಿದ್ದಾರೆ.

ವೇದಾಂತ ಸಾಮ್ರಾಜ್ಯದ ಚಕ್ರವರ್ತಿ  ಶ್ರೀ ಮಧ್ವಾಚಾರ್ಯರು

ಶ್ರೀ ಮಧ್ವಾಚಾರ್ಯರು (೧೨೩೮-೧೩೧೭) ದ್ವೈತಮತದ ಸ್ಥಾಪಕರು ಮತ್ತು ತತ್ವಜ್ಞಾನಿಗಳು. ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರ ಪಾಜಕದಲ್ಲಿ ವಿಜಯ ದಶಮಿಯಂದು ಕ್ರಿ.ಶ.1238 ರಲ್ಲಿ ತಂದೆ ಮಧ್ಯಗೇಹ ಭಟ್ಟ (ನಡ್ಡಿಲ್ಲಾಯ ನಾರಾಯಣ ಭಟ್ಟ), ತಾಯಿ ವೇದವತಿಗೆ ಒಂದು ಚಿಕ್ಕ ಕುಟೀರದಲ್ಲಿ ಜನಿಸಿದರು.

ಅವರು ಆ ಮಗುವಿಗೆ ವಾಸುದೇವನೆಂದು ನಾಮಕರಣ ಮಾಡಿದರು. ನಂತರ ಮಧ್ವರು ಪೂರ್ಣಪ್ರಜ್ಞ, ಪೂರ್ಣ ಬೋಧ, ಆನಂದ ತೀರ್ಥ, ಅನುಮಾನ ತೀರ್ಥ, ಮಧ್ವಾಚಾರ್ಯ ಎಂಬ ಹೆಸರುಗಳಿಂದ ಪ್ರಸಿದ್ಧರಾದರು. ಅವರ ಜನನಕ್ಕೆ ಮುಂಚೆ ಅವರ ತಾಯಿ ತಂದೆ ಉಡುಪಿ ಪೇಟೆಗೆ ಹೋಗಿದ್ದಾಗ ಒಬ್ಬ ಭಿಕ್ಷುಕ ಶ್ರೀ ಅನಂತೇಶ್ವರ ದೇವಸ್ಥಾನದ ಸ್ಥಂಬವನ್ನು ಏರಿ, ‘ಈ ಊರಿನಲ್ಲಿ ವಾಯು ದೇವನು ಅವತರಿಸುವನು’ ಎಂದು ಕೂಗಿ ಹೇಳಿದನೆಂದು ಪ್ರತೀತಿ.

ಹದಿಮೂರು ಹದಿನಾಲ್ಕನೇ [೧೨೩೮-೧೩೧೭] ಶತಮಾನದಲ್ಲಿ  ಅವರು ಭಕ್ತಿ ಮಾರ್ಗದ ಪ್ರವರ್ತಕರಲ್ಲಿ ಪ್ರಮುಖರು, ವೇದಾಂತ ದರ್ಶನದಲ್ಲಿ , ಮಧ್ವಚಾರ್ಯರು ದ್ವೈತ ಸಿದ್ಧಾಂತದ ಉಗ್ರ ಪ್ರತಿಪಾದಕರು, ಅವರು ವಾಯುವಿನ ಅವತಾರದಲ್ಲಿ ಮೂರನೆಯವರಾದ ಮಾರುತಿ ಭೀಮರ ನಂತರ ಬಂದ ಅವತಾರವೆಂದು ಹೇಳುತ್ತಾರೆ (ಮಹಾಭಾರತ ತಾತ್ಪರ್ಯನಿರ್ಣಯದಲ್ಲಿ ಅವರೇ ಹೇಳಿಕೊಂಡಿದ್ದಾರೆ).

ಸಂನ್ಯಾಸ ದೀಕ್ಷೆ

ವಾಸುದೇವನು ಚಿಕ್ಕ ಬಾಲಕನಾಗಿದ್ದಾಗಲೇ ಅಸಾಧಾರಣ ಪ್ರತಿಭೆಯನ್ನು ತೋರಿದನು. ಅವನು ಹನ್ನೊಂದನೇ ವರ್ಷದಲ್ಲಿ ಉಡುಪಿಯಲ್ಲಿದ್ದ ಅಚ್ಯುತ ಪ್ರೇಕ್ಷರಿಂದ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಿದರು. ಅವರು ಸಂನ್ಯಾಸ ದೀಕ್ಷೆ ಕೊಡುವಾಗ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು.

ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡ ಒಂದು ತಿಂಗಳ ನಂತರ ಪಂಡಿತೋತ್ತಮರನ್ನು ವೇದಾಂತ ತರ್ಕದಲ್ಲಿ ಸೋಲಿಸಿದರು. ಅದನ್ನು ನೋಡಿ ಅಚ್ಯುತಪ್ರೇಕ್ಷರು ಅವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿಯೆಂದು ಹೇಳಿ ಆನಂದತೀರ್ಥರೆಂಬ ಬಿರುದನ್ನು ಕೊಟ್ಟರು.

ತತ್ವವಾದ

ವೇದದ ಬಲಿಷ್ಟ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿ ಗ್ರಂಥ ರಚಿಸಿ, ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ಅವರು ಪ್ರಚುರಪಡಿಸಿದ ದ್ವೈತ ಸಿದ್ಧಾಂತ ತತ್ವವಾದ ಅಥವಾ ದ್ವೈತ ಮತವೆಂದು ಪ್ರಸಿದ್ಧವಾಗಿದೆ.

ಸರ್ವ ಮೂಲಗ್ರಂಥ

ದಕ್ಷಿಣ ಭಾರತ ಪ್ರವಾಸ ಕೈಕೊಂಡು ಅನಂತಶಯನ, ಶ್ರೀರಂಗಂ ಮೊದಲಾದ ಕಡೆ ತಮ್ಮ ತತ್ವವಾದ ವನ್ನು ಪ್ರಚಾರ ಮಾಡಿದರು. ಸಂಪ್ರದಾಯವಾದಿಗಳಿಂದ ಇದಕ್ಕೆ ಪ್ರಬಲ ವಿರೋಧ ಕಂಡುಬಂದಿತು. ಮಧ್ವರು ಅದಕ್ಕೆ ಜಗ್ಗದೆ ತಮ್ಮ ವಾದವನ್ನು ಸಮರ್ಥಿಸಿ ಕೊಂಡು  ಉಡುಪಿಗೆ ಹಿಂತಿರುಗಿ ಗೀತೆಗೆ ಭಾಷ್ಯವನ್ನು ಬರೆದ ಅವರು ತತ್ವವಾದ ಸಿದ್ಧಾಂತದ ಆಧಾರದಮೇಲೆ 37 ಗ್ರಂಥಗಳನ್ನು ಬರೆದರು, ಅವನ್ನು ಸರ್ವ ಮೂಲಗ್ರಂಥ ಗಳೆಂದು ಕರೆಯುತ್ತಾರೆ.

ಈ ಗ್ರಂಥಗಳ ಬಗೆಗೆ ಮತ್ತು ತತ್ವವಾದದ ಬಗೆಗೆ ಭಾರತಾದ್ಯಂತ ತೀವ್ರ ಚರ್ಚೆ ನೆಡೆಯಿತು. ಮಧ್ವರು ತಮ್ಮ ವಾದಕ್ಕೆ ಮೂರು ಬಗೆಯ ಪ್ರಮಾಣಗಳನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಅವು ಪ್ರತ್ಯಕ್ಷ, ಅನುಮಾನ [ತಾರ್ಕಿಕ], ಮತ್ತು ಆಗಮ.

ಶ್ರೀ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ

ಉಡುಪಿಗೆ ಬದರಿಯಿಂದ ಬಂದ ಅವರು ಉಡುಪಿಯಲ್ಲಿ ನೆಲೆಸಿ ದಶ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದರು. ಋಗ್ವೇದದ 40 ಸೂಕ್ತಗಳಿಗೆ ಟೀಕೆಯನ್ನು ಬರೆದರು. ಭಾಗವತ (ಮಹಾಭಾರತ ?) ತಾತ್ಪರ್ಯ ನಿರ್ಣಯವನ್ನು ಬರೆದರು. ಪಶ್ಚಿಮ ಸಮುದ್ರ ತೀರದಲ್ಲಿ ಸಿಕ್ಕಿದ ಶ್ರೀ ಕೃಷ್ಣನ ಮೂರ್ತಿಯನ್ನು  ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು .

ಭೀಮನ ಗದೆ

ಶ್ರೀ ಮಧ್ವಾಚಾರ್ಯರು ಕುರುಕ್ಷೇತ್ರಕ್ಕೆ ಬಂದಾಗ ಅಲ್ಲಿ ಒಂದು  ಘಟನೆ ನಡೆಯಿತು. ಅವರು ಒಂದು ಸ್ಥಳದಲ್ಲಿ ತಮ್ಮ ಶಿಷ್ಯರಿಗೆ ಅಗೆಯಲು ಹೇಳಿದರು. ಅವರು ಅಲ್ಲಿ ಅಗೆದಾಗ ಅವರಿಗೆ ಅಲ್ಲಿ ಒಂದು ದೊಡ್ಡ ಗದೆ ಕಂಡಿತು. ಅದು ದ್ವಾಪರದಲ್ಲಿ ಭೀಮನು ಉಪಯೋಗಿಸಿದ ಗದೆಯೆಂದು ತಿಳಿಸಿ ಅದನ್ನು ಪುನಃ ಹಾಗೆಯೇ ಮಣ್ಣಿನಲ್ಲಿ ಮುಚ್ಚಿಸಿದರು.

ದಕ್ಷಿಣ ಯಾತ್ರೆ

ದಕ್ಷಿಣ ಯಾತ್ರೆಯನ್ನು ಮಾಡಿ ಕಾಸರಗೊಡಿನ ಪದ್ಮ ತೀರ್ಥರನ್ನೂ ಪುಂಡರೀಕ ಪುರಿಗಳನ್ನೂ ವಾದದಲ್ಲಿ ಸೋಲಿಸಿದರು. ಪದ್ಮತೀರ್ಥರು ಪೇಜತ್ತಾಯ ಶಂಕರ ಪಂಡಿತರ ಮೂಲಕ ಮಧ್ವರ ಗ್ರಂಥಗಳನ್ನು ಅಪಹರಿಸಿದ್ದರೆಂದೂ ಮಧ್ವರೊಡನೆ ವಾದವಾದ ನಂತರ ಆ ಗ್ರಂಥಗಳನ್ನು ಹಿಂತಿರುಗಿಸಿದರೆಂದೂ ಹೇಳುತ್ತಾರೆ. ಅವರಿಬ್ಬರ ವಾದ ಸಾರಾಂಶವನ್ನು ವಾದ ಅಥವಾ ತತ್ವೋದ್ಯೋತ ಗ್ರಂಥವಾಗಿ ರಚಿಸಿರುವುದಾಗಿ ಹೇಳುತ್ತಾರೆ. ಅವರು ಆನಂತರ ಆಸ್ಥಾನ ಪಂಡಿತರಾದ ತ್ರಿವಿಕ್ರಮ ಪಂಡಿತರನ್ನು ೧೫ ದಿನಗಳಕಾಲ ವಾದ ಮಾಡಿ ಸೋಲಿಸಿದರೆಂದು ಹೇಳುತ್ತಾರೆ. ಅವರು ನಂತರ ಮಧ್ವರ ಬ್ರಹ್ಮ ಸೂತ್ರಕ್ಕೆ ಟೀಕೆಯನ್ನು ಬರೆದರು. ನಾಲ್ಕು ಭಾಗಗಳಲ್ಲಿರುವ ಇದನ್ನು ನಾಲ್ಕು ಶಿಷ್ಯರಿಗೆ ಏಕ ಕಾಲದಲ್ಲಿ ಬಿಡುವಿಲ್ಲದೆ ಹೇಳಿ ಬರೆಸಿದರೆಂದು ಹೇಳುತ್ತಾರೆ. ಅದೇ ಸಮಯದಲ್ಲಿ ನ್ಯಾಯವಿವಾರ್ಣವ ವೆಂಬ ಗ್ರಂಥವನ್ನೂ ರಚಿಸಿದ್ದಾಗಿ ಹೇಳುತ್ತಾರೆ.

ಸುಮರು 70 ವರ್ಷ ವಯಸ್ಸಾದ ಮಧ್ವರು ತಮ್ಮ ಸೋದರನಿಗೆ ಸನ್ಯಾಸ ದೀಕ್ಷೆ ಕೊಟ್ಟು ಅವರನ್ನು ಸೋದೆ ಮಠ ಮತ್ತು ಸುಬ್ರಹ್ಮಣ್ಯ ಮಠಕ್ಕೆ ಅಧಿಪತಿಗಳನ್ನಾಗಿಮಾಡಿದರು.

ಉಡುಪಿಯ ಅಷ್ಟ ಮಠಗಳು

ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು.

೧. ಹೃಷೀಕೇಶ ತೀರ್ಥ (ಫಲಿಮಾರು ಮಠ)

೨. ನರಸಿಂಹ(ನರಹರಿ)ತೀರ್ಥ (ಆದಮಾರು ಮಠ)

೩. ಜನಾರ್ಧನ ತೀರ್ಥ (ಕೃಷ್ಣಾಪುರ ಮಠ)

೪. ಉಪೇಂದ್ರ ತೀರ್ಥ (ಪುತ್ತಿಗೆ ಮಠ)

೫. ವಾಮನ ತೀರ್ಥ (ಶಿರೂರು ಮಠ)

೬. ವಿಷ್ಣು ತೀರ್ಥ (ಸೋದೆ ಮಠ, ಸುಬ್ರಹ್ಮಣ್ಯ ಮಠ)

೭. ಶ್ರೀರಾಮ ತೀರ್ಥ (ಕಾಣಿಯೂರು ಮಠ)

೮. ಅಧೋಕ್ಷಜ(ಅಕ್ಷೋಭ್ಯ) ತೀರ್ಥ (ಪೇಜಾವರಮಠ)

ಉಡುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು.

ಇವರ ತತ್ವವಾದವು ಭಕ್ತಿ ಪಂಥಕ್ಕೂ, ಹರಿದಾಸ ಪಂಥಕ್ಕೂ ದಾರಿಮಾಡಿ ಕೊಟ್ಟಿತು. ಸಂಗೀತದ ಪ್ರೋತ್ಸಾಹಕ್ಕೂ, ಕನ್ನಡದಲ್ಲಿ ದಾಸ ಪಂಥದ ಮಾರ್ಗ ಬೆಳೆಯಲೂ ಇವರ ದರ್ಶನ ಸ್ಪೂರ್ತಿನೀಡಿತು. ಇವರ ಶಿಷ್ಯರಾದ ನರಹರಿ ತೀರ್ಥರು ಯಕ್ಷಗಾನ ಹಾಗೂ ಕೂಚುಪುಡಿ ನೃತ್ಯ ಪ್ರಾಕಾರಗಳ ಪುನರುತ್ಥಾನಕ್ಕೂ , ಬೆಳವಣಿಗೆಗೂ ಪ್ರೋತ್ಸಾಹಿಸಿದರು..

ಶ್ರೀ ರಾಘವೇಂದ್ರ ಯತಿಗಳು

ಹದಿನಾರನೇ ಶತಮಾನದಲ್ಲಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳು ಇವರ ಪರಂಪರೆಯವರಾಗಿದ್ದು ಬಹಳ ಪ್ರಸಿದ್ಧರಾಗಿದ್ದಾರೆ. ಅವರ ಮಠಗಳು ಭಾರತದ ಅನೇಕ ನಗರಗಳಲ್ಲಿ ಸ್ಥಾಪನೆಗೊಂಡಿವೆ. ಈಗೀಗ ಮಧ್ವಮಠಗಳನ್ನೂ ದೇಶ ವಿದೇಶಗಳಲ್ಲಿ ಸ್ಥಾಪಿಸಿ ಮಧ್ವ ತತ್ವ ಪ್ರಸಾರ, ಅನೇಕ ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜ ಸೇವೆ ಮಾಡುತ್ತಿವೆ. ಅನೇಕ ಕಡೆ ವೇದ ಪಾಠಶಾಲೆಗಳನ್ನು ನಡೆಸುತ್ತಿವೆ. ಮೇಲೆ ತಿಳಿಸಿದ ಉಡುಪಿಯ ಅಷ್ಟ ಮಠಗಳು ಪ್ರಸಿದ್ಧವಾಗಿವೆ. ಮಧ್ವರು ತಾವು ಮುಖ್ಯ ಪ್ರಾಣನಾದ ಹನುಮನ, ಭೀಮನ, ನಂತರದ ಮೂರನೇ ಅವತಾರವೆಂದು ಹೇಳಿಕೊಂಡಿದ್ದಾರೆ.

ಮಧ್ವ ನವಮಿ

ತಮ್ಮ 79ನೇ ವಯಸ್ಸಿನಲ್ಲಿ ಕಲಿ 4418 [ಕ್ರಿ.ಶ.೧೩೧೭]ರಲ್ಲಿ ಒಬ್ಬರೇ ಬದರಿಕಾಶ್ರಮಕ್ಕೆ ಪ್ರಯಾಣ ಬೆಳಸಿದರು. ಈ ದಿನವನ್ನು ಮಧ್ವ ನವಮಿ ಎಂದು ಇಂದಿಗೂ ಆಚರಿಸುತ್ತಾರೆ.

(ವಿವಿಧ  ಮೂಲಗಳಿಂದ ಮಾಹಿತಿ  ಕಲೆ ಹಾಕಿ  ಲೇಖನ  ಬರೆಯಲಾಗಿದೆ.)

Related Articles

ಪ್ರತಿಕ್ರಿಯೆ ನೀಡಿ

Latest Articles