ಅಪರೋಕ್ಷ ಜ್ಞಾನದ ಅಪ್ರತಿಮ ದಾರ್ಶನಿಕರು – ಆಚಾರ್ಯ ಮಧ್ವರು

ಆಚಾರ್ಯ ಪುರುಷರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದವರು ಶಂಕರ, ರಾಮಾನುಜ ಮತ್ತು ಮಧ್ವರು. ವಿಶ್ವಮಾನ್ಯವಾದ ಸಂದೇಶ ಹೊತ್ತು ಬಂದ ಈ ಮೂವರಲ್ಲಿ ಮಧ್ವರು ಕನ್ನಡದ ಕೊಡುಗೆಯೆಂಬುದು ಹೆಮ್ಮೆಯ ಸಂಗತಿ, ಶ್ರೀ ಮಧ್ವಾಚಾರ್ಯರು ದ್ವೈತ ಸಿದ್ಧಾಂತ ಪ್ರತಿಪಾದಕರು. ಸೃಷ್ಟಿ, ಭಗವಂತನ ಆರಾಧನೆ ಇತ್ಯಾದಿ ಕುರಿತು ಅವರ ಚಿಂತನೆಗಳು ಬೋಧಪ್ರದ.

*ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಚೇತನಾಚೇತನ ಜಗಕ್ಕೆಲ್ಲ ಒಡೆಯ ವಾಯು ಜೀವೋತ್ತಮ. ತ್ರೇತೆಯಲ್ಲಿ ಹನುಮನಾಗಿ, ದ್ವಾಪರದಲ್ಲಿ ಭೀಮಸೇನನಾಗಿ ಹಾಗೂ ಕಲಿಯುಗದಲ್ಲಿ ಶ್ರೀಮದಾಚಾರ್ಯರಾಗಿಯೂ ಅವತರಿಸಿದ ಈ ಮಹಿಮರು ಜ್ಞಾನಬಲದೈಸಿರಿಗಳ ಅದ್ಭುತ ಸಂಗಮ. ಭಕ್ತಿಪಂಥ ಪ್ರವರ್ತಕ ಮನೀಷಿಗಳು.
ಇನ್ನು ನಾಸ್ತಿಕವಾದಗಳು, ಅವೈದಿಕವಾದಗಳು, ವೇದ ವಿರುದ್ಧವಾದಗಳು, ಮಾಯಾವಾದ ಮೊದಲಾದ ದುರ್ಮತಗಳೂ ಸಜ್ಜನರ ಮತಿಯನ್ನು ಕಲುಷಿತಗೊಳಿಸಿದ್ದವು. ಹೀಗಿರಲು ಎಲ್ಲಕ್ಕೂ ಉತ್ತರ ರೂಪವಾಗಿ ಅವತರಿಸಿ ಬಂದವರು ಶ್ರೀ ಮಧ್ವಾಚಾರ್ಯರು. ಇವರು ಜಗತ್ತು ಕಂಡ ಅಸದೃಶ ದಾರ್ಶನಿಕರು, ದರ್ಶನೀಯರು.
ಶ್ರೀ ಮಧ್ವರು ಬುದ್ಧಿಪ್ರಪಂಚದ ವಿದ್ಯಾಗುರು, ಭಕ್ತಿಮಾರ್ಗದ ಭೂಮಾಪುರುಷ. ಧರ್ಮಮಾರ್ಗದ ಧೀಮಂತ. ಸ್ವರೂಪತಃ ಸಿದ್ಧಪುರುಷ ಋಜುಯೋಗಿ, ವೇದಪ್ರಸಿದ್ಧ ಪವನಪುತ್ರ, ಸದಾ ದೇವರ ಒಡನಾಡಿ. ಜೀವಕುಲದ ಜೀವನಾಡಿ, ಹನುಮ ಭೀಮರ ಅವತಾರಿ, ವಿಷ್ಣುಧರ್ಮದ ರೂವಾರಿ. ವಿಶ್ವಕ್ಕೇ ಕೈವಾರಿ, ಶ್ರೀ ಮಧ್ವರು ಧರ್ಮದ ವ್ಯಕ್ತ ಹಾಗೂ ಅವ್ಯಕ್ತ ಶಕ್ತಿಯ ಪ್ರತೀಕರು. ಅನಂತ ಗುಣಗಳ ಪ್ರತಿಮೆ, ವ್ಯಕ್ತಿ ಎನಿಸಿದ ಪ್ರಾಣತತ್ತ್ವ, ಸಮಗ್ರ ಶಕ್ತಿಗಳ ಸಂಕೇತರು. ಹೀಗೆ ಆಚಾರ್ಯ ಮಧ್ವರದ್ದು ಭಾರತೀಯ ಇತಿಹಾಸದಲ್ಲಿ ಅಪೂರ್ವವಾದ ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಅವರು ತತ್ವಶಾಸ್ತ್ರದಲ್ಲಿ ಅದ್ವಿತೀಯ ವಿದ್ವಾಂಸರಾಗಿದ್ದರು. ಜ್ಯೋತಿಷ್ಯ, ವಾಙ್ಮಯದ ಅಪೂರ್ವ ಸಂಶೋಧಕರಾಗಿದ್ದರು. ಜ್ಯೋತಿಷ್ಯ, ಶಿಕ್ಷಾ ಕಲ್ಪ ಮುಂತಾದ ವೇದಾಂಗಗಳಲ್ಲಿ ಪಗಲ್ಭ ಪಂಡಿತರಾಗಿದ್ದರು, ಶಿಲ್ಪಶಾಸ್ತ್ರದಲ್ಲಿ ಪರಿಣಿತರಾಗಿದ್ದರು. ಕರ್ನಾಟಕ ಸಂಗೀತಕ್ಕೆ ಮೂಲ ರೂಪವನ್ನು ಕೊಟ್ಟ ಆಚಾರ್ಯ ಪುರುಷರಾಗಿದ್ದರು. ವಾಗ್ಗೇಯಕಾರರಾಗಿದ್ದರು. ಮಹಾವಾಗ್ಮಿಗಳಾಗಿದ್ದರು. ಜತೆಗೆ ಸರ್ವಾಂಗ ಸುಂದರವಾದ, ಪ್ರಮಾಣಬದ್ಧ ಮೈಕಟ್ಟನ್ನು ಪಡೆದ ದೃಢಕಾಯರೂ ಆಗಿದ್ದರು. ಸ್ವತಃ ಇದಾವುದನ್ನು ಅಂಟಿಸಿಕೊಳ್ಳದ ಬದುಕಿನ ನಿರ್ಲಿಪ್ತ ಧೀರ ಸನ್ಯಾಸಿಗಳಾಗಿದ್ದರು.


ಮಧ್ಯಗೇಹ ವೇದವತಿ ದಂಪತಿಗಳ ಸತ್ಪುತ್ರರಾಗಿ ಭುವಿಗವತರಿಸಿದ ಶ್ರೀ ಮಧ್ವರು. ಉಡುಪಿ ಸಮೀಪದ ಪಾಜಕ ಕ್ಷೇತ್ರ, ನಿವಾಸಿಗಳಾದ ಮಧ್ಯಗೇಹ ವೇದವತಿ ದಂಪತಿಗಳು ಸತ್ಪುತ್ರನಾಗಬೇಕೆಂಬ ಉದ್ದೇಶದಿಂದ 12 ವರ್ಷಗಳ ಕಾಲ ಕಠಿಣ ವ್ರತಗಳನ್ನು ಆಚರಿಸುತ್ತ ಶ್ರೀ ಅನಂತೇಶ್ವರ ದೇವರನ್ನು ಆರಾಧಿಸುತ್ತಿದ್ದರು. ಈ ದಂಪತಿಗಳಿಗೆ ಹಿಂದೆ ಹುಟ್ಟಿದ ಈರ್ವರು ಪುತ್ರರು ಅಸುನೀಗಿದ್ದರು. ಕಲ್ಯಾಣಿ ದೇವಿ ಎಂಬಾಕೆ ಪುತ್ರಿ ಇದ್ದಳು. ಮಧ್ಯಗೇಹರು ಶ್ರೀ ಅನಂತೇಶ್ವರದಲ್ಲಿ ಪುರಾಣ ಪ್ರವಚನ ಮಾಡುತ್ತಿದ್ದರು.
ಪಾಂಡವರು ಸ್ವರ್ಗವನ್ನು ಹೊಂದಿ 4300 ವರ್ಷಗಳು ಕಳೆದಾಗ ಶ್ರೀಮನ್ನಾರಾಯಣನು ಮುಖ್ಯಪ್ರಾಣ ದೇವರನ್ನು ಕರೆದು ಭೂಮಿಯಲ್ಲಿ ಅವತರಿಸಿ ತತ್ತ್ವಜ್ಞಾನವನ್ನು ತನ್ನ ಗುಣಗಳನ್ನು ಸಜ್ಜನರಿಗೆ ಬೋಧಿಸುವಂತೆ ಆಜ್ಞಾಪಿಸಿದರು. ದೇವತೆಗೂ ಇದನ್ನು ಅನುಮೋದಿಸಿ ಸಜ್ಜನರನ್ನು ಉದ್ಧರಿಸುವಂತೆ ಪ್ರಾರ್ಥಿಸಿದರು. ಅದೇ ಸಂದರ್ಭದಲ್ಲಿ ಸಾಧಕರಾದ ವಿಷ್ಣು ಭಕ್ತರು ವೇದ-ಉಪನಿಷತ್ ಬ್ರಹ್ಮಸೂತ್ರ ಮಹಾಭಾರತ ಪುರಾಣ ಇವುಗಳ ಸರಿಯಾದ ಅರ್ಥವನ್ನು ಯತಾರ್ಥಜ್ಞಾನವನ್ನು ಕರುಣಿಸುವಂತೆ ಶ್ರೀ ಅನಂತೇಶ್ವರಸ್ವಾಮಿಯಲ್ಲಿ ಪ್ರಾರ್ಥಿಸುತ್ತಿದ್ದರು.


ಅಚ್ಚರಿಯ ಘಟನೆಗೆ ಸಾಕ್ಷಿಯಾದ ಜನಸ್ತೋಮ
ಒಮ್ಮೆ ಶ್ರೀದೇವರ ಸಾನ್ನಿಧ್ಯದಲ್ಲಿ ಮಕರ ಸಂಕ್ರಮಣೋತ್ಸವ ನಡೆಯುತ್ತಿತ್ತು. ಆಗ ಇದ್ದಕ್ಕಿದ್ದಂತೆ ಶ್ರೀ ಅನಂತೇಶ್ವರದಲ್ಲಿ ಸ್ವಾಮಿಯು ಓರ್ವ ವ್ಯಕ್ತಿಯ ಮೇಲೆ ಆಕರ್ಷಣೆಯಾದ, ದೇವರಾಕರ್ಷಣೆಯಾದ ಆ ವ್ಯಕ್ತಿಯು ಓಡುತ್ತ ಅಲ್ಲಿದ್ದ ಧ್ವಜಸ್ತಂಭದ ಮೇಲೆ ಸರಸರನೇ ಏರಿದ. ತುತ್ತತುದಿಯಲ್ಲಿ ನಿಂತು ನರ್ತನ ಮಾಡತೊಡಗಿದ ದೃಶ್ಯವನ್ನು ಎಲ್ಲರೂ ಬೆರಗಾಗಿ ನೋಡುತ್ತಿದ್ದರು. ಆಗ ಎರಡೂ ಕೈಗಳನ್ನೂ ಎತ್ತಿ ಹಿಡಿದು ಏರುದನಿಯಲ್ಲಿ ಎಲ್ಲರಿಗೂ ಕೇಳಿಸುವಂತೆ ಹೀಗೆ ಹೇಳಿದ… ಕೇಳಿರಪ್ಪಾ ಕೇಳಿರಿ, ಜಗತ್ತಿಗೆ ಹಿತವನ್ನು ಬಯಸುವ ಸರ್ವಜ್ಞನಾದ ಮಹಾನುಭಾವನೊಬ್ಬ ಅತಿ ಶೀಘÀ್ರವಾಗಿ ಇಲ್ಲೇ ಸಮೀಪದಲ್ಲಿ ಅವತರಿಸಲಿರುವನು. ತತ್ವಜ್ಞಾನವನ್ನು ಉಪದೇಶಿಸಿ ನಿಮ್ಮಲ್ಲರನ್ನು ಅಜ್ಞಾನಾಂಧಕಾರದಿ0ದ ಪಾರು ಮಾಡುವನು, ದುಃಖದಿಂದ ಬಿಡಿಸಲಿಸಲಿರುವನು, ಇಷ್ಟಾರ್ಥಗಳನ್ನು ಈಡೇರಿಸಲಿಕ್ಕಿದ್ದಾನೆ, ಇದು ಸತ್ಯ, ಇದು ಸತ್ಯ, ಕೇಳಿರಪ್ಪಾ ಕೇಳಿರಿ’ ಎಂದುಸುರಿ ಧ್ವಜಸ್ತಂಭದಿ0ದ ಇಳಿದು ಬಂದ. ಈ ಸಂದೇಶವನ್ನು ಕೇಳಿದ ಜನರು ಇದು ಶ್ರೀ ಅನಂತೇಶ್ವರನ ಸಂದೇಶವೆ0ದು ನಂಬಿ, ನಮ್ಮೆಲ್ಲರ ಸಕಲ ಇಷ್ಟಾರ್ಥಗಳು ಈಡೇರುವ ಕಾಲ ಸನ್ನಿಹಿತವಾಯಿತೆಂದು ಆನಂದದಿ0ದ ಮುಳುಗಿದರು.

ಕಾಲಾಂತರದಲ್ಲಿ ಗರ್ಭಿಣಿಯಾದ ವೇದವತಿಯು ಆಶ್ವೀಜಮಾಸ ವಿಜಯದಶಮಿಯಂದು ಮಗುವೊಂದಕ್ಕೆ ಜನ್ಮವಿತ್ತಳು. ಅದೇ ಸಂದರ್ಭದಲ್ಲಿ ಭಗವಂತನ ಆಜ್ಞೆ, ದೇವತೆಗಳ ಪ್ರಾರ್ಥನೆ ಇವುಗಳಿಂದಾಗಿ ಶ್ರೀ ವಾಯುದೇವರು ಭುವಿಗಿಳಿದು ಶ್ರೀ ಅನಂತೇಶ್ವರನಿಗೆ ವಂದಿಸಿ ಪಾಜಕಕ್ಕೆ ಬಂದರು. ಮಧ್ಯಗೇಹರ ಮನೆಯನ್ನು ಪ್ರವೇಶಿಸಿದರು. ಆಗ ತಾನೆ ವೇದವತಿ ಹಡೆದಿದ್ದಳು. ವಾಯುದೇವರು ಆ ಮಗುವಿನ ದೇಃದಲ್ಲಿದ್ದಮಣಿಭದ್ರ’ ಎಂಬ ಜೀವವನ್ನು ಹೊರಗಿಡಿಸಿ ತಾನು ಪ್ರವೇಶಿಸಿದರು.
ಕುಬೇರನ ಭಕ್ತನೂ, ವಾಯುದೇವರ ಶಿಷ್ಯನೂ ಆದ ಮಣಿಭದ್ರನು ಶ್ರೀ ವಾಯುದೇವರ ಆಜ್ಞಾನುಸಾರ ತನ್ನ ಲೋಕಕ್ಕೆ ತೆರಳಿದನು. ಅದೇ ದೇಹದಲ್ಲಿದ್ದ ಲಾತವ್ಯ’ ಎಂಬ ಋಜುಗಳು ಶ್ರೀ ವಾಯುದೇವರಿಂದ ಬೀಳ್ಕೊಂಡು ತಮ್ಮ ಲೋಕಕ್ಕೆ ತೆರಳಿದರು. ಮೊದಲನೇ ಅವತಾರದಲ್ಲಿ ಹನುಮಂತನಾಗಿ ಶ್ರೀರಾಮನ ಸೇವೆಯನ್ನು ಕೈಗೊಂಡರೆ, ದ್ವಿತೀಯ ಅವತಾರದಲ್ಲಿ ಭೀಮನಾಗಿ ಶ್ರೀಕೃಷ್ಣನ ಸೇವೆಯನ್ನೂಅದರ ಫಲವಾಗಿ ಜಗದ್ಗುರುಗಳಾದ ವಾಯುದೇವರೇ ಅವರಲ್ಲಿ ಅವತರಿಸಿದರು. ಮಧ್ಯಗೇಹ ದಂಪತಿಗಳು ಆ ಶಿಶುವಿಗೆ ‘ವಾಸುದೇವ’ ಎಂದು ನಾಮಕರಣ ಮಾಡಿದರು.
`ವಾ’ ಎಂದರೆ ಜ್ಞಾನ, ಅಸುದೇವ ಎಂದರೆ ಮುಖ್ಯಪ್ರಾಣ, ವಾಸುದೇವ ಎಂದರೆ ಜ್ಞಾನ ಕಾರ‍್ಯಕ್ಕಾಗಿ ಅವತರಿಸಿದ ಮುಖ್ಯಪ್ರಾಣ ಎಂದರ್ಥ. ಮಗುವು ಹಾಲು ಕುಡಿಯಲು ಗೋದಾನ ಮಾಡಿದ ಮೂಡಿಲ್ಲಾಯ ಎಂಬವರು ದಾನದ ಫಲವಾಗಿ ತನ್ನ ಮಗನ ಮಗನಾಗಿ ಹುಟ್ಟಿ ಮಧ್ವಶಾಸ್ತç ಓದಿ ಮೋಕ್ಷವನ್ನೇ ಪಡೆದರು.

ವಾಸುದೇವನು ಮಗುವಾಗಿದ್ದಲೇ ಹುರುಳಿ ತಿಂದು ಜೀರ್ಣಿಸಿಕೊಂಡನು. ಮೂರು ವರ್ಷದಲ್ಲಿ ತಂದೆ, ತಾಯಿಗಳಿಂದ ಕಣ್ತಪ್ಪಿಸಿಕೊಂಡು ಏಕಾಂಗಿಯಾಗಿ ಅರಣ್ಯಪ್ರದೇಶವನ್ನು ದಾಟಿ, ಉಡುಪಿಯ ಅನಂತೇಶ್ವರನ ಬಳಿ ತೆರಳಿದನು. ತಂದೆ ಮಾಡಿದ ಸಾಲವನ್ನು ಹುಣಸೆ ಬೀಜಗಳನ್ನು ಕೊಡುವ ಮೂಲಕ ತೀರಿಸಿದನು. ಆ ಮಗುವನ್ನು ಮಣಿಮಂತನು ಹಾವಾಗಿ ಕಚ್ಚಲು ಬಂದಾಗ ಹೆಬ್ಬೆಟ್ಟಿನಿಂದ ತುಳಿದು ಕೊಂಡನು. ಐದನೆಯ ವರ್ಷದಲ್ಲಿ ಅಕ್ಷರಾಭ್ಯಾಸವಾಯಿತು. ಉಪನಯನವೂ ಆಯಿತು. ಹತ್ತು ವರ್ಷಗಳಲ್ಲಿ ಗುರುಕುಲವಾಸವೇ ಮುಗಿಯಿತು. ಹನ್ನೊಂದನೆಯ ವರ್ಷಕ್ಕೆ ಸನ್ನಾö್ಯಸಾಶ್ರಮವನ್ನು ಸ್ವೀಕರಿಸಿ ವಾಸುದೇವನೇ ಪೂರ್ಣಪ್ರಜ್ಞನಾದನು.


ಹನ್ನೊಂದನೆಯ ವರ್ಷದ ಪೂರ್ಣಪ್ರಜ್ಞರಿಗೆ ಗಂಗಾಸ್ನಾನ ಮಾಡಲು ತವಕ ಉಂಟಾದಾಗ ಗಂಗಾದೇವಿಯೇ ಮಧ್ವಸರೋವರಕ್ಕೆ ಆಗಮಿಸಿದಳು. ವಾದಿಸಿಂಹ ಹಾಗೂ ಬುದ್ಧಿಸಾಗರರೆಂಬ ಅದ್ವೆöÊತ ಪಂಡಿತರನ್ನು ವಾದದಲ್ಲಿ ಸೋಲಿಸಿದರು. ದಕ್ಷಿಣ ಭಾರತದಲ್ಲಿ ದಿಗ್ವಿಜಯಕ್ಕಾಗಿ ಹೊರಟರು. ಸರ್ವಮೂಲಗ್ರಂಥಗಳಲ್ಲಿ ಮೊದಲನೆಯದಾದ ಗೀತಾಭಾಷ್ಯವನ್ನು ಬದರಿಕಾಶ್ರಮದಲ್ಲಿ ನಾರಾಯಣನಿಗೆ ಸಮರ್ಪಣೆ ಮಾಡಿದರು. ಅನಂತರ ದೊಡ್ಡ ಬದರಿಕಾಶ್ರಮಕ್ಕೆ ತೆರಳಿ ಬ್ರಹ್ಮಸೂತ್ರಗಳ ಅಪೂರ್ವ ಪ್ರಮೇಯಗಳನ್ನು ವೇದವ್ಯಾಸದೇವರ ಬಳಿ ಉಪದೇಶ ಪಡೆದುಕೊಂಡರು. ಪುನಃ ಆಗಮಿಸಿ ಬ್ರಹ್ಮಸೂತ್ರಭಾಷ್ಯ ಮೊದಲಾದ ಅನೇಕ ಗ್ರಂಥಗಳನ್ನು ರಚನೆ ಮಾಡಿದರು. ಅದ್ವೆöÊತ ಮತ ಮೊದಲಾದ ಎಲ್ಲ ದುರ್ಮತಗಳನ್ನು ನಿರ್ಮೂಲಗೊಳಿಸಿ, ವೈಷ್ಣವಸಿದ್ಧಾಂತವನ್ನು ಪ್ರತಿಷ್ಠಾಪನೆ ಮಾಡಿದರು. ವಿಷ್ಣುವೇ ಸರ್ವೋತ್ತಮನಾಗಿದ್ದಾನೆ. ವಾಯುದೇವರು ಜೀವೋತ್ತಮರಾಗಿದ್ದಾರೆ, ಪಂಚಭೇದಗಳು ಸತ್ಯವಾಗಿವೆ. ಪ್ರತಿಯೊಬ್ಬರಲ್ಲಿಯೂ ತಾರತಮ್ಯವಿದೆ. ಮೋಕ್ಷದಲ್ಲೂ ಕೂಡ ತಾರತಮ್ಯವಿದೆ. ಸಮಗ್ರ ವೇದದಿಂದ ಪರಮಮುಖ್ಯ ವೃತ್ತಿಯಿಂದ ಪ್ರತಿಪಾದ್ಯನಾದವನು ಮಹಾವಿಷ್ಣು ಮಾತ್ರ. ಇವೇ ಮೊದಲಾದ ತತ್ವಗಳನ್ನು ಜಗತ್ತಿನಲ್ಲಿ ಸ್ಥಾಪನೆ ಮಾಡಿದರು. ಈ ತತ್ತ÷್ವವಾದವನ್ನು ನಾನು ಹುಟ್ಟು ಹಾಕಿದ್ದಲ್ಲ. ಎಲ್ಲವೂ ಕೂಡ ಶ್ರುತಿ ಸ್ಮೃತಿ, ಬ್ರಹ್ಮಮೀಮಾಂಸಶಾಸ್ತç ಹಾಗೂ ಪುರಾಣಗಳಲ್ಲಿ ಪ್ರತಿಪಾದನೆ ಮಾಡಿದ್ದೇ ಆಗಿದೆ ಎಂದು ಸಾಬೀತು ಮಾಡಿದರು. ಇಂಥ ಶ್ರೇಷ್ಠರಾದ ಮಧ್ವಾಚಾರ್ಯರೇ ನಮ್ಮ ಗುರುಗಳು, ಎಂದೆ0ದೂ ಇವರೇ ನಮ್ಮ ಉದ್ಧಾರಕರು.


ವಿಶ್ವಮಾನ್ಯ
ಹದಿಮೂರನೆಯ ಶತಮಾನದಲ್ಲಿ ಹುಟ್ಟಿದ ಮಧ್ವಾಚಾರ್ಯರ ಕೊಡುಗೆ ದಾರ್ಶನಿಕ ಪ್ರಪಂಚದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. ಅತ್ಯಂತ ಸರಳ ರೀತಿಯಲ್ಲಿ ಜನಸಾಮಾನ್ಯರಿಗೂ ಮನವರಿಕೆಯಾಗುವ ಪರಸ್ಪರ ಮನಗಳನ್ನು ಬೆಸೆಯುವ, ಸುಲಭದಲ್ಲಿ ಮುಕ್ತಿಪಥ ತೋರುವ ತತ್ತ÷್ವವಾದವನ್ನು ಜಗತ್ತಿಗೆ ನೀಡಿದರು. ವೇದ, ಉಪನಿಷತ್ತುಗಳು, ರಾಮಾಯಣ, ಇತಿಹಾಸ ಪುರಾಣಗಳು, ಬ್ರಹ್ಮ ಸೂತ್ರಗಳು ಹೀಗೆ ನಮ್ಮ ಪ್ರಾಚೀನ ಸಂಸ್ಕೃತ ಸಾಹಿತ್ಯದ ಗುರಿ ಒಂದೇ, ನೆಲೆ ಒಂದೇ, ಅದು ಭಗವಂತನ ಸರ್ವೋತ್ತಮ ವ್ಯಕ್ತಿತ್ವವನ್ನು ವಿಶದಪಡಿಸುವುದು. ಸಜ್ಜನರಿಗೆ ಸುಖದ ದಾರಿಯನ್ನು ತೋರುವುದು.
ಅದೃಶ್ಯರಾಗಿ ಉಡುಪಿ ಕ್ಷೇತ್ರದಲ್ಲಿ ಶ್ರೀಕೃಷ್ಣ ಶ್ರೀ ಅನಂತೇಶ್ವರನ ಸೇವೆಯನ್ನೂ ದೃಶ್ಯರಾಗಿ ಎಲ್ಲರ ಕಣ್ಣಿಗೆ ಗೋಚರಿಸುತ್ತ ಬದರಿಯಲ್ಲಿ ಶ್ರೀ ವೇದವ್ಯಾಸರ ಹಾಗೂ ಶ್ರೀ ನಾರಾಯಣರ ಸೇವೆಯನ್ನೂ ಗೈದವರು. ದೇವಮಾನದ ನೂರು ವರ್ಷಕಾಲ (36 ಸಾವಿರ ವರ್ಷಗಳ ಕಾಲ) ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಅದೃಶ್ಯರೂಪದಿಂದಲೂ, ಬದರಿಯಲ್ಲಿ ದೃಶ್ಯ ರೂಪದಿಂದಲೂ ಭಕ್ತರನ್ನು ಅನುಗ್ರಹಿಸುತ್ತಿರುವರು.


ಪರಮ ಪಾವನ ಪಾಜಕ ಕ್ಷೇತ್ರ
ಉಡುಪಿಯಿಂದ 12 ಕಿ.ಮೀ.ದೂರದಲ್ಲಿದೆ. ಶ್ರೀ ಮಧ್ವಾಚಾರ್ಯರ ಜನ್ಮಸ್ಥಳ ಪಾಜಕದಲ್ಲಿ. ಶ್ರೀ ಮಧ್ವಾಚಾರ್ಯರ ಪಾದದ ಗುರುತು, ಮಧ್ವರು ತಾಯಿಗೆ ಕೊಟ್ಟ ವಚನದಂತೆ ರಾತ್ರೋರಾತ್ರಿ ಗೋಚರಿಸಿದ ದೋಣಿ ತೀರ್ಥ, ಮಧ್ವವನ, ಅನಂತಪದ್ಮನಾಭ ದೇಗುಲ, ಶ್ರೀ ಮಧ್ವಾಚಾರ್ಯರ ಆಲಯಗಳಿವೆ, ಪ್ರಸ್ತುತ ಪಾಜಕ ಕ್ಷೇತ್ರದ ಉಸ್ತುವಾರಿಯನ್ನು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ವಹಿಸಿಕೊಂಡಿದ್ದಾರೆ.
ಐದು ತೀರ್ಥಗಳು : ಕುಂಜಾರು ಗಿರಿಯಲ್ಲಿ ಪರಶುರಾಮರಿಂದ ನಿರ್ಮಿತವಾದ ಪರಶುತೀರ್ಥ, ಧನುಶ್‌ತೀರ್ಥ, ಬಾಣತೀರ್ಥ, ಗದಾತೀರ್ಥವಿದೆ. ನಾರಾಯಣ ನಡ್ಡಿಲ್ಲಾಯ ಹಾಗೂ ವೇದವತಿ ದಂಪತಿಗಳ ಮಗನಾಗಿ ಜನಿಸಿದ ಮುಖ್ಯಪ್ರಾಣ ನಿರ್ಮಿಸಿದ ವಾಸುದೇವತೀರ್ಥವು ಕುಲದೇವತೆಯ ಮಂದಿರದ ಹಿಂಭಾಗದಲ್ಲಿದೆ.
ಬಾಲಲೀಲೆಯ ಕುರುಹುಗಳು : ಸರ್ಪ ರೂಪದಲ್ಲಿ ಮಣಿಮಂತನೆ0ಬ ಅಸುರ ವಾಸುದೇವನನ್ನು ಕಚ್ಚಲು ಬಂದಾಗ ತನ್ನ ಪುಟ್ಟಪಾದಗಳಿಂದ ವಾಸುದೇವನು ಅದನ್ನು ಸಂಹರಿಸಿದ ಬಂಡೆಗಳ್ಳಿನಲ್ಲಿ ಸರ್ಪ ಹಾಗೂ ವಾಸುದೇವನ ಹೆಜ್ಜೆಯ ಗುರುತುಗಳಿವೆ. ಅಲ್ಲಿ ಪುಟ್ಟ ಸ್ಮಾರಕವೊಂದನ್ನು ಕಟ್ಟಲಾಗಿದೆ. ತಾಯಿಯ ಕರೆಗೆ ಓಗೊಟ್ಟ ವಾಸುದೇವ, ಬೆಟ್ಟದಿಂದ ಕೆಳಗೆ ಜಿಗಿದಾಗ ಅವನ ಪಾವನ ಪಾದದ ಹೆಗ್ಗುರುತು ಮೂಡಿತು. ಅಲ್ಲಿಯೇ ಶ್ರೀ ವಾದಿರಾಜರು ಮಧ್ವರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.
ಬಾಲಕ ವಾಸುದೇವನು ಹಾಲು ಮೊಸರುಗಳ ಪಾತ್ರೆಯ ಮೇಲೆ ಇಟ್ಟ ಹಾಸುಗಲ್ಲುಗಳನ್ನು ಇಂದಿಗೂ ಇಲ್ಲಿ ತೋರಿಸುತ್ತಾರೆ. ಬಾಲಕ ವಾಸುದೇವನು ತಂದೆಯ ಸಾಲವನ್ನು ತೀರಿಸಲು ಹುಣಸೇಮರದ ಬೀಜಗಳನ್ನು ಸಾಲ ಕೊಟ್ಟವನಿಗೆ ಹೆಕ್ಕಿ ನೀಡಿದ ಘಟನೆಯನ್ನು ಇಲ್ಲಿ ವಿವರಿಸುತ್ತಾರೆ. ಆ ಹುಣಸೇಮರದ ಪರಂಪರೆಯ ಮರವೊಂದು ಅಂದಿನ ಘಟನೆಗೆ ಮೂಕಸಾಕ್ಷಿಯಂತೆ ಇದೆ.
ಹತ್ತು ಹಲವು ಸಿದ್ಧಾಂತಗಳು ಭೂಮಂಡಲದಲ್ಲಿ ಬೇರು ಬಿಟ್ಟಾಗ ನೀನು ಪ್ರತಿಪಾದಿಸುವ ಹೊಸ ಸಿದ್ಧಾಂತವು ಹೇಗೆ ಜನಪ್ರಿಯವಾಗಬಲ್ಲದು? ಎಂಬ ತಂದೆಯ ಶಂಕೆಗೆ ವಾಸುದೇವನು ಕೈಯಲ್ಲಿರುವ ಒಣಗಿದ ವಟವೃಕ್ಷದ ಪುಟ್ಟ ಕೋಲು ನೆಟ್ಟು, `ಇದು ಹೆಮ್ಮರವಾಗಿ ಬೆಳೆದಲ್ಲಿ ನನ್ನ ಸಿದ್ಧಾಂತವು ವಿಶ್ವವನ್ನು ಬೆಳಗುವುದು’ ಎಂದು ಸಂದೇಶ ನೀಡಿದನೆಂಬ ಕಥೆಯಿದೆ. ಹಾಗೆ ನೆಟ್ಟ ಮರವು, ಬೃಹದಾಕಾರದಲ್ಲಿ ಬೆಳೆದಿರುವುದನ್ನು ಇಲ್ಲಿ ನೋಡಬಹುದು.

ಕುಂಜಾರುಗಿರಿ
ಉಡುಪಿಯಿ0ದ 11 ಕಿ.ಮೀ. ದೂರದಲ್ಲಿದೆ, ಇದನ್ನು ಕುಂಜಾರು (ಆನೆ)ಗಿರಿ, ದುರ್ಗಾಬೆಟ್ಟ ಮತ್ತು ವಿಮಾನಗಿರಿ ಎಂತಲೂ ಕರೆಯುತ್ತಾರೆ. ಇಲ್ಲಿರುವ ದುರ್ಗಾದೇವಿಯನ್ನು ಪರಶುರಾಮ ಪ್ರತಿಷ್ಠಾಪಿಸಿದ ಎಂಬ ಐತಿಹ್ಯವಿದೆ. ದುರ್ಗಾದೇವಿಯನ್ನು ಯೋಗಮಾಯಾ ಸ್ವರೂಪಿಣಿ ಎಂದೂ ಬಣ್ಣಿಸುತ್ತಾರೆ. ನಾರಾಯಣಾಚಾರ್ಯರ ಸುಮಧ್ವ ವಿಜಯ ಮತ್ತು ವಾದಿರಾಜರ ತೀರ್ಥ ಪ್ರಬಂಧ ಗ್ರಂಥಗಳಲ್ಲಿ ಕುಂಜಾರುಗಿರಿಯ ಉಲ್ಲೇಖವಿದೆ. ಕಟೀಲಿನ ದುರ್ಗೆ ಜಲದುರ್ಗೆ’ ಎನಿಸಿದರೆ, ಕುಂಜಾರು ಬೆಳ್ಮಣಗಳಲ್ಲಿರುವ ದುರ್ಗೆಗಿರಿದುರ್ಗೆ’ಯಾಗಿದ್ದಾಳೆ, ಬಪ್ಪನಾಡಿನಲ್ಲಿರುವ ದುರ್ಗೆಯನ್ನು ‘ಸ್ಥಲದುರ್ಗೆ’ ಎನ್ನುತ್ತಾರೆ. ಪರಶುರಾಮರ ಆಲಯವನ್ನೂ ನೋಡಬಹುದು.


ವಡಭಾಂಡೇಶ್ವರ ದೇಗುಲ
ಬಲರಾಮರಿಗೆ ಮೀಸಲಾದ ಕ್ಷೇತ್ರ. ಈ ಸ್ಥಳದಲ್ಲೇ ಮಧ್ವಾಚಾರ್ಯರಿಗೆ ಗೋಪಿಚಂದನದಲ್ಲಿ ಗುಪ್ತನಾಗಿದ್ದ ಶ್ರೀ ಕೃಷ್ಣನ ವಿಗ್ರಹ ಗೋಚರಿಸಿತು ಎನ್ನಲಾಗಿದೆ. ಹಡಗಿನ ಕ್ಯಾಪ್ಟನ್ ಒಬ್ಬನಿಂದ ಕೃಷ್ಣನ ವಿಗ್ರಹವನ್ನು ಪಡೆದ ಸ್ಥಳ ಎಂದೂ ಹೇಳಲಾಗುತ್ತದೆ. ಅದಕ್ಕೆ ಪೂರಕವೆನ್ನುವಂತೆ, ಒಂದು ಪುಟ್ಟ ಆಲಯವನ್ನು ಟ್ಯಾಂಕಿನ ಎದುರು ಕಟ್ಟಲಾಗಿದೆ. ಇದು ಮಲ್ಪೆಯಿಂದ ಅರ್ಧ ಕಿ.ಮೀ. ದೂರದಲ್ಲಿದೆ.
ಸಮುದ್ರ ಪ್ರೀತಿಯು ಆಚಾರ್ಯರಿಗೆ ನೀಲಮೇಘ ಶ್ಯಾಮನನ್ನು ನೀಡಿತು. ಈ ಮುಕುಂದನನ್ನು ಸ್ವೀಕರಿಸಿದ ಮಧ್ವರು ಸ್ತೋತ್ರದೊಂದಿಗೆ ಉಡುಪಿಗೆ ತಂದು ಮತ್ತೆ ಪ್ರತಿಷ್ಠಾಪಿಸಿ ತನ್ನ ಮಂಗಳ ಧ್ವನಿಗೆ ಪ್ರತಿಮಾ ರೂಪವನ್ನು ನೀಡಿದರು. ಕೃಷ್ಣನೆಷ್ಟು ಪ್ರಿಯನೋ ಮಧ್ವರ ದ್ವೆöÊತವೂ ಮಧುರವಾಗಲು ಅಷ್ಟೇ ಸಹಕಾರಿಯಾಯಿತು. ವೈದಿಕದ ವಿಸ್ತತವಾದ ಪೂಜಾವಿಧಾನ, ಹಾಗೂ ಮಣ್ಣಿನ ಆರಾಧನಾ ಸೊಗಡಿನ ಮೌಲ್ಯಗಳನ್ನು ಜೋಡಿಸಿಕೊಂಡು ಶ್ರೀಕೃಷ್ಣಮಠದಲ್ಲಿ ನಿತ್ಯ ಉಪಾಸನಾ ಶೈಲಿ ರೂಪುಗೊಂಡಿತು. ಈ ಪೂಜಾಕ್ರಮ ನಿಬ್ಬೆರಗು ಗೊಳಿಸುವಷ್ಟು ವೈವಿಧ್ಯಮಯ ಮತ್ತು ವಿಸ್ತತ ಹರವುವುಳ್ಳದ್ದು.
ಅಧ್ಯಯನ ಅಧ್ಯಾಪನ, ಧರ್ಮಪ್ರಸಾರ ಅನ್ನದಾಸೋಹ ಪ್ರಧಾನವಾಗಿ ನಿತ್ಯೋತ್ಸವ ನಡೆಸುತ್ತಾ ಉಡುಪಿ ಧರ್ಮ ಸಂಸ್ಕೃತಿ ವಿಜೃಂಭಿಸುವ ಕ್ಷೇತ್ರವಾಗುವುದಕ್ಕೆ ಆಚಾರ್ಯ ಮಧ್ವರ ಅಂದಿನ ಕನಸು ಕಾರಣವಲ್ಲವೇ?


ಅಷ್ಟಮಠಗಳು: ಉಡುಪಿಯಲ್ಲಿ ರುಕ್ಮಿಣಿ ಕರಾರ್ಚಿತ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ದ್ವಾರಕಾಧೀಶನ ಪೂಜೆಗಾಗಿ ಎಂಟು ಯತಿಗಳನ್ನು ನೇಮಿಸಿ ಪರ್ಯಾಯ ಕ್ರಮದಲ್ಲಿ ಅರ್ಚಿಸಲು ಆದೇಶಿಸಿದರು. ಆಚಾರ್ಯರು ಮಠಸಂಸ್ಥಾನಗಳನ್ನು ಕಟ್ಟಿದವರಲ್ಲ ,ಅವರು ತನ್ನ ಸನ್ಯಾಸಿ ಶಿಷ್ಯರಿಗೆ ನೀಡಿದ ಆಸ್ತಿಯೆಂದರೆ ದೇವರ ಪ್ರತಿಮೆ, ದಂಡ,ಜೋಳಿಗೆ ಮಾತ್ರ, ಮುಂದೆ ಶಿಷ್ಯಸಂಪತ್ತುಬೆಳೆದ0ತೆಲ್ಲ ಮಠಗಳು ರೂಪುಗೊಂಡವು. ಅಹಿಂಸೆ, ಇಂದ್ರಿಯ ನಿಗ್ರಹ, ಭೂತದಯೆ, ಕ್ಷಮೆ, ಜ್ಞಾನ, ಸ್ವಧರ್ಮಾಚರಣೆ ಸತ್ಯಸಂಧತೆ ಮತ್ತು ಧ್ಯಾನಗಳೆಂಬ ಎಂಟು ಪ್ರಸ್ಥಾನಗಳ ಮೂಲಕ ಕೃಷ್ಣಪೂಜೆ ನಡೆಯಲು ಮಧ್ವರು ಅಷ್ಟಮಠಗಳನ್ನು ಸ್ಥಾಪಿಸಿದರು. ಅಷ್ಟಯತಿಗಳನ್ನು (ತನ್ನ ಶಿಷ್ಯರು) ಅಷ್ಟಮಠಕ್ಕೆ ನಿಯೋಜಿಸಿ ಪರ್ಯಾಯದಲ್ಲಿ ಶ್ರೀಕೃಷ್ಣಪೂಜಾ ಕೈಂಕರ್ಯಕ್ಕೆ ವ್ಯವಸ್ಥೆಗೊಳಿಸಿದರು.


ಮಧ್ವರ ಬಂಡೆ- ಆಚಾರ್ಯರ ಜ್ಞಾನ ದೇಹಬಲಕ್ಕೆ ಪುರಾವೆ
ಸನಾತನ ಸಂಸ್ಕೃತಿಯ ರಕ್ಷಣೆಗೆ ಬುದ್ಧಿ ಬಲದಂತೆ ದೇಹಬಲವೂ ಅಗತ್ಯ’ ಎಂದು ದೃಢವಾಗಿ ನಂಬಿದ್ದ ಆಚಾರ್ಯ ಮಧ್ವರು ಬಾಲ್ಯದ ಆಟಪಾಠ ಊಟಗಳಲ್ಲಿ ತೋರಿದ ಪವಾಡಗಳೆಲ್ಲ ದೇಹಬಲ ಪ್ರತಿಪಾದ್ಯವೇ ಆಗಿತ್ತು.ಮುಂದೆ ತನ್ನ ತತ್ತ÷್ವವಾದದ ಮಂಡನೆಯಲ್ಲಿ ವಾದವನ್ನೇ ಪ್ರಧಾನವಾಗಿರಿಸಿಕೊಂಡು ನೂತನ ಚಿಂತನೆಧಾರೆಯನ್ನು ಸ್ಥಾಪಿಸುವಲ್ಲಿ ಜ್ಞಾನದ ಬೆಂಬಲವನ್ನು ಪಡೆದರು.
ಹೀಗೆ ಜ್ಞಾನ ದೇಹಬಲದ ಆಧಾರದಲ್ಲಿ ಅದ್ಭುತ ಆತ್ಮವಿಶ್ವಾಸವನ್ನು ಸಾಧಿಸಿದ ಆಚಾರ್ಯರು ಭಾರತದ ಉದ್ದಗಲ ಎರಡು ಬಾರಿ ಪರ್ಯಟನೆ ನಡೆಸಿದರು. ಅಂತರ್ಮುಖಿಯಾಗದೆ ಸಮಾಜಮುಖಿಯಾಗಿದ್ದ ಪೂರ್ಣಪ್ರಜ್ಞರ ಬದುಕು ಸವಾಲುಗಳನ್ನು ಸ್ವೀಕರಿಸುತ್ತಾ, ಉತ್ತರಿಸುತ್ತಾ ತನ್ನ ಅನುಭೂತಿಯನ್ನು ಸರಳವಾಗಿ ಪ್ರತಿಪಾದಿಸುತ್ತಾ, ಸಂಸ್ಕೃತಿ ಜ್ಞಾನವನ್ನು ಸಾಮಾನ್ಯನೂ ತಿಳಿಯುವಂತೆ ಮಾಡಿತು.
ಈ ಹಂತ ಬಹುಶಃ ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸುವ ಆಚಾರ್ಯರ ಸಹಜ ಮನಃಸ್ಥಿತಿ ಅರಳಿದ ಕಾಲವಿರಬೇಕು. ಪ್ರಾಯಃ ೪೦ ವರ್ಷ ಹರೆಯ, ತುಂಬು ಯೌವ್ವನದ ಕೊನೆಯ ಹಂತ, ಸಂಚಾರ ಪ್ರಿಯರಾಗಿದ್ದ ಅವರು ಭದ್ರಾನದಿಯ ಪ್ರದೇಶಕ್ಕೆ ಬಂದಿದ್ದಾರೆ. ಅದು ಕಳಸ ಕುಗ್ರಾಮದಲ್ಲಿ ಭದ್ರಾ ನದಿ ರಭಸದಿಂದ ಹರಿಯುವ ಪ್ರದೇಶ. ನದಿ ಬಂಡೆಯಲ್ಲಿ ಅನತಿ ದೂರದಲ್ಲಿ ಹೆಬ್ಬಂಡೆಯೊAದಿದೆ. ಇದನ್ನು ನದಿಯ ಮಧ್ಯೆ ಇಟ್ಟು ಬಿಟ್ಟರೆ ಭದ್ರೆಯ ರಭಸ ಕಡಿಮೆಯಾಗಿ ನದಿಯ ಕೆಳಭಾಗದ ಕೃಷಿಕರಿಗೆ ಅನಾಯಾಸವಾಗಿ ಭದ್ರೆಯ ಪೂರ್ಣ ಪ್ರಯೋಜನ ಪಡೆಯಬಹುದು.
ಇಲ್ಲದಿದ್ದರೆ ಕೃಷಿನಾಶ, ಗದ್ದೆಗಳಲ್ಲಿ ಹೂಳು ತುಂಬುವುದನ್ನು ತಡೆಯಬಹುದು. ಆದರೆ ಫಲಾನುಭವಿ ಜನಸ್ತೋಮ ಈ ಕಲ್ಲನ್ನು ನದಿ ಮಧ್ಯಕ್ಕೆ ಸಾಗಿಸಲಾರದೆ ಕೈಚೆಲ್ಲಿ ನಿಂತಿದ್ದಾರೆ. ಸಜ್ಜನರ ಉದ್ಧಾರವಾದಂತಹ ಲೋಕದೃಷ್ಟಿಯ ಆಚಾರ್ಯರು ಕೈಚೆಲ್ಲಿ ನಿಂತ ಜನರಿಂದ ವಿವರ ತಿಳಿದು ತಾನೇ ಆ ಬಂಡೆಯನ್ನು ಕೈಯಲ್ಲಿ ಎತ್ತಿ ನದಿಗೆ ಒಯ್ದು ನದಿಯ ಪಥದಲ್ಲಿ ಸರಿಯಾದ ಸ್ಥಳದಲ್ಲಿ ಸ್ಥಾಪಿಸಿದರು. ಇದೇ ಮಧ್ವಬಂಡೆ.’ ಭದ್ರಾನದಿಯಲ್ಲಿ ಈ ಮಧ್ವಬಂಡೆಯನ್ನು ಇಂದಿಗೂ ಕಾಣಬಹುದು. ಚಿಕ್ಕಮಗಳೂರು ಜಿಲ್ಲೆಯ ಕಳಸ ಪೇಟೆಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಭದ್ರಾನದಿಯಲ್ಲಿ ೮೦೦ ವರ್ಷ ಪುರಾತನ ಇತಿಹಾಸವಿರುವ ಈ ಮಧ್ವಬಂಡೆಯಲ್ಲಿ ಶ್ರೀ ಮಧ್ವಾಚಾರ್ಯರ ರೇಖಾಚಿತ್ರವೂ ಇದೆ.ಶ್ರೀ ಮಧ್ವಾಚಾರ್ಯೈರೇಕ ಹಸ್ತೇನ ಆನೀಯ ಸ್ಥಾಪಿತಾ ಶಿಲಾ’ ಎಂಬ ವಾಕ್ಯವೂ ಕೆತ್ತಲ್ಪಟ್ಟಿದೆ. ಈಗ ಮಾತ್ರ ಭದ್ರಾನದಿ ಅಗಲವಾಗಿದೆ. ಶಿಲೆ ಮಾತ್ರ ಸಾಕ್ಷಿಯಾಗಿ ನಿಂತಿದೆ. ಆದರೆ ಭೌಗೋಳಿಕ ಸ್ವರೂಪ ಬದಲಾವಣೆಯ ಸಹಜ ಪ್ರಾಕೃತಿಕ ಪ್ರಕ್ರಿಯೆಯ ಜ್ಞಾನವಿದ್ದರೆ ಈ ಘಟನೆ ನಡೆದುದು ಸ್ಪಷ್ಟವಾಗುತ್ತದೆ. ಬಂಡೆಯನ್ನು ನೆಲೆಗೊಳಿಸಿರುವುದರಿಂದ ನದಿಯ ತಳಭಾಗವು ಕೊರೆಯಲ್ಪಟ್ಟು ತಟಾಕವೊಂದು ನಿರ್ಮಾಣವಾಗಿದೆ. ಅದೇ ಲಕ್ಷಿö್ಮÃತೀರ್ಥ’, ಈ ತೀರ್ಥಸ್ನಾನ ಸರ್ವರೋಗನಿವಾರಕವೆಂಬುದು ಸ್ಥಳಿಯರ ನಂಬಿಕೆ. ಚಿಕ್ಕಮಗಳೂರು ಜಿಲ್ಲಾ ಗ್ಯಾಸೆಟಿಯರ್‌ನಲ್ಲಿ ೮೧ನೇ ಶಾಸನವಾಗಿ ಈ ಮಧ್ವಬಂಡೆಯ ಬರಹವನ್ನು ದಾಖಲಿಸಲಾಗಿದೆ. ಎಪಿಗ್ರಾಪಿಕಾ ಕರ್ನಾಟಕದಲ್ಲೂ ಈ ಉಲ್ಲೇಖವಿದ್ದು ಬಂಡೆಯ ಗಾತ್ರದ ವಿವರಣೆ ಇದೆ. ೨೦ ಅಡಿ ಉದ್ದ, ೧೬ ಅಡಿ ಅಗಲ, ಹತ್ತು ಅಡಿ ಎತ್ತರ, ತೂಕವು ೫೦ ಟನ್ನುಗಳು, ಜನೋಪಯೋಗಿ ಕಾರ್ಯ ಮಾಡಿರುವ ಆಚಾರ್ಯರ ಸಾಧನೆಗೆ ಈ ಶಾಸನ, ಬಂಡೆ ಸಾಕ್ಷಿಯಾಗಿದೆ, ಈ ಕೃತಿಮಧ್ವರ ಜನೋಪಕಾರ’ವೆಂದೇ ಮಧ್ವ ಪರ್ಯಟನೆ ಗ್ರಂಥದಲ್ಲಿ ದಾಖಲಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles