ಮಹಾಶಿವರಾತ್ರಿ ಪ್ರಯುಕ್ತ ಹರರಾತ್ರಿ ಸಂಭ್ರಮ, ಸಾಮೂಹಿಕ ಇಷ್ಟಲಿಂಗ ಮಹಾಪೂಜೆ

ಮಹಾಶಿವರಾತ್ರಿ ಪಾವನ ಪರ್ವಕಾಲದಲ್ಲಿ ಯೋಗಸಿಂಹಾಸನಾಧೀಶ್ವರ ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಪಂಚಮಸಾಲಿ ಜಗದ್ಗುರು ಪೀಠ, ಹರಿಹರದಲ್ಲಿ ಮಾ. 11 ರಂದು ರಾತ್ರಿ 8.30 ಕ್ಕೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಶಿವರಾತ್ರಿಯ ಅಹೋರಾತ್ರಿಯಿಂದ ಸೂರ್ಯೋದಯದವರೆಗೆ ಶ್ರೀ ಪೀಠದ ಹರನಿಗೆ ಅಷ್ಟವಿಧಾರ್ಚನೆ, ಷೋಡಶೋಪಚಾರ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಇಷ್ಟಲಿಂಗ ಪೂಜೆ

ಮಾಘ-ಫಾಲ್ಗುಣ ಮಾಸಗಳ ನಡುವೆ ಬರುವ ಕೃಷ್ಣ ಚತುರ್ದಶಿಯ ದಿನವೇ ಮಹಾಶಿವರಾತ್ರಿ. ಈ ದಿನದಂದು ಶಿವನ ಕೃಪೆಗೆ ಪಾತ್ರರಾಗಬೇಕೆಂದರೆ ಉಪವಾಸವಿದ್ದು ರಾತ್ರಿಯಿಡೀ ಪೂಜೆ ಸಲ್ಲಿಸಬೇಕು. ಶಿವನ ಜಪ ಮಾಡಬೇಕು. ಹಾಗೆ ಮಾಡಿದರೆ ಶಿವ ಸಂತೃಪ್ತನಾಗಿ ಭಕ್ತರಿಗೆ ಸಕಲ ಸನ್ಮಂಗಳಗಳನ್ನು ದಯಪಾಲಿಸುತ್ತಾನೆ ಅನ್ನೋದು ನಂಬಿಕೆ.

ಹನ್ನೆರಡನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಶಿವನನ್ನು ಇಷ್ಟಲಿಂಗದ ಮೂಲಕ ಆರಾಧಿಸುವ ಒಂದು ವಿಶಿಷ್ಟ ವಿಧಾನವನ್ನು ಪ್ರಚುರಪಡಿಸಿದರು. ಇದನ್ನು ಶಿವಯೋಗ ಅಥವಾ ಇಷ್ಟಲಿಂಗ ಪೂಜೆ ಎಂದು ಕರೆಯುತ್ತಾರೆ.

ಲಿಂಗಾಯತರು ಪ್ರತಿದಿನ ಇಷ್ಟಲಿಂಗ ಪೂಜೆಯೊಂದಿಗೆ ದಿನವನ್ನು ಆರಂಭಿಸುತ್ತಾರೆ. ಆದರೆ ಮಹಾಶಿವರಾತ್ರಿಯಂಥ ಪುಣ್ಯ ದಿನದಂದು ಎಲ್ಲ ಸದ್ಭಕ್ತರೂ ಒಟ್ಟಾಗಿ ಸೇರಿ ಸಮಭಾವದಿಂದ ಇಷ್ಟಲಿಂಗ ಪೂಜೆಗೈದರೆ ಸರ್ವರಿಗೂ ಒಳಿತಾಗುತ್ತದೆ. ಇದನ್ನೇ ಸರ್ವಜ್ಞ ಹೇಳುವುದು “ಲಿಂಗದ ಗುಡಿಲೇಸು,ಗಂಗೆಯ ತಡಿಲೇಸು, ಲಿಂಗಸಂಗಿಗಳ ಸಂಗವೇ ಲೇಸು” ಎಂದು.

* ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿ

Related Articles

ಪ್ರತಿಕ್ರಿಯೆ ನೀಡಿ

Latest Articles