ಯಾರನ್ನೂ ಮೆಚ್ಚಿಸಲು ಬದುಕಬೇಕಿಲ್ಲ…

*ಪ್ರಜ್ವಲ್ ಸಿ

*ಪ್ರಜ್ವಲ್ ಸಿ

ಮಾನವ ಸ್ವಭಾವದಲ್ಲಿ ದೃಢವಾಗಿರುವುದು, ಒಳ್ಳೆಯದು. ಬಲಶಾಲಿಯಾಗಿರುವುದೆಲ್ಲಾ ಆ ದಿವ್ಯತೆಯಿಂದ ಬಂದುದು. ಇದು ನಮ್ಮಲ್ಲಿ ಸುಪ್ತವಾಗಿದ್ದರೂ ಒಬ್ಬರಿಗೂ ಮತ್ತೊಬ್ಬರಿಗೂ ಯಾವ ವ್ಯತ್ಯಾಸವೂ ಇಲ್ಲ. ಮೂಲತಃ ಎಲ್ಲರೂ ಪವಿತ್ರಾತ್ಮರು. ಅದು ನಮ್ಮ ಹಿಂದೆ ಒಂದು ಅಸೀಮ ಸಾಗರವಿರುದಂತೆ ಇದೆ. ನೀವು- ನಾವುಗಳೆಲ್ಲ ಆ ಅನಂತ ಸಾಗರದಿಂದ ಏಳುವ ಅಲೆಗಳಂತೆ.

ನಮ್ಮಲ್ಲಿ ಪ್ರತಿಯೊಬ್ಬರೂ ಆ ದಿವ್ಯತೆಯನ್ನು ಹೊರಗೆ ವ್ಯಕ್ತಗೊಳಿಸಲು ಸಾಧ್ಯವಾದಷ್ಟು ಯತ್ನಿಸುತ್ತಿರುತ್ತೇವೆ. ಪ್ರತಿಯೊಬ್ಬರಲ್ಲಿಯೂ ಆ ಸಚ್ಚಿದಾನಂದ ಸೂಕ್ತವಾಗಿದ್ದಾನೆ. ಅದೇ ನಮ್ಮ ಸ್ವಭಾವಸಿದ್ಧ ಹಕ್ಕು. ನಮ್ಮಲ್ಲಿರುವ ವ್ಯತ್ಯಾಸಗಳಿಗೆ ನಾವು ಅದನ್ನು ವ್ಯಕ್ತಗೊಳಿಸುತ್ತಿರುವಲ್ಲಿನ ತಾರತಮ್ಯವೇ ಕಾರಣ.

ತಾಯಿಯ ಹೊಟ್ಟೆಯಲ್ಲಿ ಜನ್ಮ ತಾಳುತ್ತೇವೆ, ಅದು ಕೇಳಿ ಬರುವ ಹುಟ್ಟಲ್ಲ. ಕೆಲವು ಸಮಯ ಬದುಕಿ ನಂತರ ಪ್ರಾಣ ಬಿಡುತ್ತೇವೆ, ಈ ಸಾವು ಕೂಡಾ ಹೇಳಿ ಬರುವುದಿಲ್ಲ. ನಮ್ಮ ಕೈಯಲ್ಲಿರುವುದು ಈ ಎರಡರ ನಡುವೆ ಇರುವುದೇ ಜೀವನ. ಅದೂ ಕೂಡಾ ಶಾಶ್ವತವಲ್ಲ. ಆದ್ದರಿಂದ ಇರುವಷ್ಟು ದಿನ ತನ್ನಿಂದ ಪರರಿಗೆ ಆಸರೆಯಾಗುವ ಹಾಗೆ ಬದುಕಬೇಕಿದೆ. ಯಾರನ್ನೂ ಮೆಚ್ಚಿಸಲು ಬದುಕಬೇಕಿಲ್ಲ. ನಮ್ಮ ಅಂತರಾತ್ಮ ಏನು ಹೇಳುತ್ತದೆಯೋ ಅದನ್ನು ಮಾಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗಬಹುದು. ಇಲ್ಲದಿದ್ದರೆ “ಬದುಕಿಯೂ ಸತ್ತಹಾಗೆ” ಎನ್ನಬಹುದಷ್ಟೇ..

ನಾವು ದರಿದ್ರರಲ್ಲ

ಮನುಷ್ಯನಲ್ಲಿರುವ ದೌರ್ಬಲ್ಯತೆಗೆ ಅದರ ಕುರಿತು ಚಿಂತಿಸುವುದೇ ಔಷಧವಲ್ಲ. ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ. ಮನುಷ್ಯರಿಗೆ ಅವರಲ್ಲಿ ಈಗಾಗಲೇ ಅಡಗಿರುವ ಶಕ್ತಿಯನ್ನು ಕುರಿತು ಬೋಧಿಸಿ. ಮನುಷ್ಯರನ್ನು ಪಾಪಿಗಳು, ನೀಚರು, ಎಂದು ಹೇಳುವುದಕ್ಕೆ ಬದಲಾಗಿ ವೇದಾಂತವು “ನೀನು ಆಗಲೇ ಪರಿಶುದ್ಧ, ಪರಿಪೂರ್ಣ, ಯಾವುದನ್ನು ದೌರ್ಬಲ್ಯವೆಂದು ಕರೆಯುವೆವು ಅದು ನಿನಗೆ ಸೇರಿದ್ದಲ್ಲ” ಎಂದು ಸಾರುತ್ತದೆ ಎಂದು ಹೇಳಿ ಕೊಡಿ. ಇತರರಿಗೆ ಅಥವಾ ನಿಮಗೆ ನೀವೇ ಆಗಲಿ ದರಿದ್ರ, ದುರ್ಬಲ ಎಂದು ಹೇಳಿಕೊಳ್ಳಬೇಡಿ ಎಂದರು ಸ್ವಾಮಿ ವಿವೇಕಾನಂದರು.

ಅದ್ಭುತ ಯಂತ್ರ ನಮ್ಮ ದೇಹ! ಎಷ್ಟು ಅದ್ಭುತ ಶಕ್ತಿ ಹುದುಗಿದೆ ನಮ್ಮಲ್ಲಿ! ಆದರೂ ಕಣ್ಣುಮುಚ್ಚಿಕೊಂಡು ಕತ್ತಲು ಎಂದು ಅಳುವವರು ನಾವು. ನಮ್ಮ ಜೀವನದಲ್ಲಿ ನಿರ್ದಿಷ್ಟ ಉದ್ದೇಶಗಳಿಲ್ಲ, ನಮ್ಮ ಶಕ್ತಿಯಲ್ಲಿ ನಮಗೆ ವಿಶ್ವಾಸವೂ ಇಲ್ಲ, ನಿಯಮಗಳನ್ನು ಅನುಸರಿಸಿ ಕೆಲಸ ಮಾಡುತ್ತಿಲ್ಲ, ಹರಟೆ ಹೊಡೆಯಲು ಮಾತ್ರ ಇಚ್ಚಿಸುತ್ತೇವೆ. ನಾವು ಯಶಸ್ವಿಗಳಾಗಬೇಕಾದರೆ ಈ ಮೂರು ಅಂಶಗಳು ಮುಖ್ಯ: ಕಲಿಯಬೇಕು, ತಿಳಿಯಬೇಕು ಎಂಬ ತೀವ್ರ ಹಂಬಲ. ಅನವರತ ಶ್ರದ್ಧೆಯಿಂದ ಕೂಡಿದ ಪರಿಶ್ರಮ, ಜೊತೆಗೆ ಅವಕಾಶದ ಸದುಪಯೋಗ.

ಶಕ್ತಿಯೇ ಜೀವನ

ಜಗತ್ತು ಪೂಜಿಸುವುದು ಶಕ್ತಿಯನ್ನು, ದುರ್ಬಲತೆಯನ್ನಲ್ಲ ಎಂಬುದನ್ನು ಯುವಕರು ಸರಿಯಾಗಿ ತಿಳಿದಿರಬೇಕು.ಶಕ್ತಿಯನ್ನು ಎಲ್ಲರೂ ಭಕ್ತಿ, ಗೌರವಗಳಿಂದ ನೋಡುತ್ತಾರೆ. ಶಕ್ತನಾದರೆ ನೆಂಟರೆಲ್ಲ ಹಿತರು, ಅಶಕ್ತನಾದರೆ ಆಪ್ತ ಜನರೇ ವೈರಿಗಳು ಎಂದು ಪುರಂದರದಾಸರು ಹೇಳಿದ ಮಾತು ಎಷ್ಟು ಸತ್ಯವಲ್ಲವೇ? ತಂದೆ-ತಾಯಂದಿರು ಪ್ರೀತಿಯಿಂದ ಸಾಕಿ ಸಲಹಿದ ಮಗು ಬೆಳೆದು ದುರ್ಬಲನೂ, ರೋಗಿಷ್ಟನೂ ಆದರೆ ಏನೆನ್ನುವರು ಬಲ್ಲಿರಾ? “ಯಾಕಾಗಿ ಹುಟ್ಟಿದವನು ಕುಲಕ್ಕೆ ಕಳಂಕ” ಅಲ್ಲವೇ? ಹುಟ್ಟು-ಸಾವಿನ ಮಧ್ಯದ ಬದುಕಿನಲ್ಲಿ ದೈಹಿಕ, ಮಾನಸಿಕ, ಭೌತಿಕ, ನೈತಿಕ ಬಲಗಳ ಜೊತೆಗೆ ನಾವು ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಬೇಕು. “ಆತ್ಮಶೋಧನೆಯೇ ಹುಟ್ಟು, ಶಕ್ತಿಯೇ ಜೀವನ ದುರ್ಬಲತೆಯೇ ಮರಣ.”

(ಪ್ರಜ್ವಲ್ ಸಿ, ಪ್ರಥಮ ಬಿ.ಎ, ಪತ್ರಿಕೋದ್ಯಮ ವಿಭಾಗ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು)

Related Articles

ಪ್ರತಿಕ್ರಿಯೆ ನೀಡಿ

Latest Articles