ವಿವಿಧ ಬಗೆಯ ಹಲ್ವಾ

ನವರಾತ್ರಿ ಹಬ್ಬ ಹತ್ತಿರದಲ್ಲೇ ಇದೆ. ಶಕ್ತಿ ದೇವತೆಯ ಆರಾಧನೆಯ ಪರ್ವಕಾಲದಲ್ಲಿ ಒಂಬತ್ತು ದಿನವೂ ಸಂಭ್ರಮವೇ. ದೇವಿಗೆ ದಿನಕ್ಕೊಂದು ಬಗೆಯ ನೈವೇದ್ಯ ಸಮರ್ಪಣೆಯಾಗುತ್ತದೆ.
ದೇವರಿಗೆ ನೈವೇದ್ಯವಾಗಿಸಲು ವಿವಿಧ ಬಗೆಯ ಹಲ್ವಾ ರೆಸಿಪಿ ಕುರಿತು ಬರೆದಿದ್ದಾರೆ ಪಾಕ ಪ್ರಾವೀಣ್ಯತೆ ಹೊಂದಿರುವ ಶ್ರೀಮತಿ ವೇದಾವತಿ ಹೆಚ್.ಎಸ್. ಅವರು.

  1. ಬಾದಾಮಿ ಹಲ್ವಾ
    ಬೇಕಾಗುವ ಸಾಮಾಗ್ರಿಗಳು
    : ಬಾದಾಮಿ ಒಂದು ಕಪ್, ಸಕ್ಕರೆ ಒಂದು ಕಪ್, ಕೇಸರಿದಳ ಸ್ವಲ್ಪ, ತುಪ್ಪ ಅರ್ಧ ಕಪ್, ಕೇಸರಿ ದಳ ಸ್ವಲ್ಪ, ಹಾಲು ಅರ್ಧ ಕಪ್.
    ತಯಾರಿಸುವ ವಿಧಾನ:
    ಬಾದಾಮಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ. ಅದರ ಮೇಲಿನ ಸಿಪ್ಪೆಯನ್ನು ತೆಗೆದು, ಸ್ವಲ್ಪ ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ ನೀರನ್ನು ಹಾಕಿ. ಅದಕ್ಕೆ ಸಕ್ಕರೆಯನ್ನು ಹಾಕಿ ಒಂದೆಳೆ ಪಾಕ ಮಾಡಿ. ಈ ಪಾಕಕ್ಕೆ ರುಬ್ಬಿ ಕೊಂಡ ಪೇಸ್ಟ್ ಅನ್ನು ಹಾಕಿ. ಇದು ಗಟ್ಟಿಯಾಗುವವರೆಗೆ ಚೆನ್ನಾಗಿ ಮಗುಚಿ. ಇದಕ್ಕೆ ಬಿಸಿ ಹಾಲಿನಲ್ಲಿ ಕರಗಿಸಿದ ಕೇಸರಿ ದಳವನ್ನು ಸೇರಿಸಿ. ಹಲ್ವಾ ಬಾಣಲೆಯ ತಳಕ್ಕೆ ಅಂಟಿ ಕೊಳ್ಳಲು ಪ್ರಾರಂಭ ಆದಾಗ ಸ್ವಲ್ಪ ಸ್ವಲ್ಪ ತುಪ್ಪವನ್ನು ಸೇರಿಸಿ. ಹಲ್ವಾ ಹದಕ್ಕೆ ಬರುವವರೆಗೆ ಬೇಯಿಸಿ.

೨. ಗೋಧಿ ಹಲ್ವಾ
ಬೇಕಾಗುವ ಸಾಮಾಗ್ರಿಗಳು:
ತುಪ್ಪ 1ಕಪ್
ಗೋಧಿ ಹಿಟ್ಟು 1ಕಪ್
ಸಕ್ಕರೆ 1ಕಪ್
ನೀರು 3ಕಪ್
ಏಲಕ್ಕಿ ಪುಡಿ 1/4ಟೀ ಚಮಚ
ತಯಾರಿಸುವ ವಿಧಾನ:
ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಅದರಲ್ಲಿ ಗೋಧಿ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ. ನಂತರ ಸಣ್ಣ ಉರಿಯಲ್ಲಿ ಕೆಂಬಣ್ಣ ಬರುವರೆಗೆ ಕೈಯಾಡಿಸುತ್ತಾ ಇರಿ.ಕೆಂಬಣ್ಣ ಬರಲು 10-15ನಿಮಿಷಗಳ ಕಾಲ ಬೇಕಾಗಬಹುದು. ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ಸಕ್ಕರೆ ಮತ್ತು ಮೂರು ಕಪ್ ನೀರನ್ನು ಬೆರೆಸಿ ಒಲೆಯಲ್ಲಿಟ್ಟು ಕುದಿಸಿ.ಸಕ್ಕರೆ ಪಾಕ ಬರುವುದು ಬೇಡ. ಕರಗಿದರೆ ಸಾಕು.ಸಕ್ಕರೆ ಕರಗಿದ ನಂತರ ಕೆಂಬಣ್ಣಕ್ಕೆ ಬಂದಿರುವ ಗೋಧಿ ಹಿಟ್ಟಿಗೆ ನಿಧಾನವಾಗಿ ಮಿಶ್ರಣ ಮಾಡಿ. ಗೋಧಿಯೊಂದಿಗೆ ನೀರು ಚನ್ನಾಗಿ ಮಿಶ್ರಣವಾಗಿ ಅದರೊಂದಿಗೆ ಸೇರಿ ಗಟ್ಟಿಯಾಗುತ್ತಾ ಬಂದಾಗ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಗೋಧಿ ಹಲ್ವಾವು ಬಾಣಲೆಯಲ್ಲಿ ತುಪ್ಪ ಬಿಟ್ಟು ಬಂದಾಗ ಒಲೆಯಿಂದ ಇಳಿಸಿ. ರುಚಿಕರವಾದ ಹಲ್ವಾವನ್ನು ಬಿಸಿ ಇರುವಾಗಲೇ ತಿಂದರೆ ಬಹಳ ರುಚಿಯಾಗಿರುತ್ತದೆ.

೩. ತೆಂಗಿನಕಾಯಿ ಹಲ್ವಾ
ಬೇಕಾಗುವ ಸಾಮಾಗ್ರಿಗಳು: ತುರಿದ ತೆಂಗಿನಕಾಯಿತುರಿ ೨ಕಪ್
೧ ಕಪ್ ಬೆಲ್ಲದ ಪುಡಿ
೧೦-೧೫ ಗೋಡಂಬಿ
ಏಲಕ್ಕಿ ಪುಡಿ ೧/೨ ಟೀ ಚಮಚ
ತುಪ್ಪ ೪ ಟೇಬಲ್ ಚಮಚ
ತಯಾರಿಸುವ ವಿಧಾನ:
ತೆಂಗಿನಕಾಯಿ ತುರಿ ಮತ್ತು ಬೆಲ್ಲದ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ೨ ಟೇಬಲ್ ಚಮಚ ತುಪ್ಪ ಹಾಕಿ ಕೆಂಬಣ್ಣ ಬರುವರೆಗೆ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ತುಪ್ಪಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ. ಮಿಶ್ರಣವು ಗಟ್ಟಿಯಾಗುತ್ತಾ ಬರುವಾಗ ಉಳಿದ ೨ ಟೇಬಲ್ ಚಮಚ ತುಪ್ಪವನ್ನು ಹಾಕಿ ಚನ್ನಾಗಿ ಮಗುಚಿ. ನಂತರ ಏಲಕ್ಕಿ ಪುಡಿಯನ್ನು ಮತ್ತು ಹುರಿದ ಗೋಡಂಬಿಯನ್ನು ಹಾಕಿ ಮಿಶ್ರಣ ಮಾಡಿ. ಒಲೆಯಿಂದ ಇಳಿಸಿ. ರುಚಿಕರವಾದ ಹಲ್ವಾವನ್ನು ಎರಡರಿಂದ ಮೂರು ದಿನ ಇಟ್ಟುಕೊಂಡು ಸವಿಯಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles