ತ್ರೈಪುರುಷ ರೂಪದಲ್ಲಿ ಪೂಜಿಸಲ್ಪಡುವ ಕಿರಗೇರಿಯ ಕಲ್ಲೇಶ್ವರ ದೇವ

ಚಾಲುಕ್ಯರ ಕಾಲದ ತ್ರಿಕುಟಾಚಲ ಶೈಲಿಯ ಹಲವು ದೇವಾಲಯಗಳಿದ್ದುಇವುಗಳಲ್ಲಿ ಹಿರೆಕೇರೂರು ತಾಲ್ಲೂಕಿನ ಕಿರಗೇರಿಯಲ್ಲಿನ ಕಲ್ಲೇಶ್ವರ ದೇವಾಲಯವೂ ಒಂದು.

*ಶ್ರೀನಿವಾಸ ಮೂರ್ತಿ ಎನ್ ಎಸ್

ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಗಳಲ್ಲಿ ಹೆಚ್ಚಿನ ದೇವಾಲಯಗಳು ಇರುವ ಜಿಲ್ಲೆಯಲ್ಲಿ ಹಾವೇರಿ ಜಿಲ್ಲೆಯೂ ಒಂದು. ಇಲ್ಲಿನ ತುಂಗಭದ್ರ ನದಿಯ ತೀರದ ಉದ್ದಕ್ಕೂ ಹಲವು ದೇವಾಲಯಗಳು ನಿರ್ಮಾಣ ಆಗಿದೆ. ಇಲ್ಲಿ ಚಾಲುಕ್ಯರ ಕಾಲದ ತ್ರಿಕುಟಾಚಲ ಶೈಲಿಯ ಹಲವು ದೇವಾಲಯಗಳಿದ್ದು ಇವುಗಳಲ್ಲಿ ಹಿರೆಕೇರೂರು ತಾಲ್ಲೂಕಿನ ಕಿರಗೇರಿಯಲ್ಲಿನ ಕಲ್ಲೇಶ್ವರ ದೇವಾಲಯವೂ ಒಂದು. ಸುಂದರ ದೇವಾಲಯಗಳನ್ನು ಸಾಕಷ್ಟು ಸುಂದರವಾಗಿ ಇಟ್ಟಿರುವಲ್ಲಿ ಮಾತ್ರ ಹೋಗುವ ಪ್ರವಾಸಿಗರು ಸರಳತೆಯಲ್ಲಿಯೂ ತನ್ನದೇ ವಿಶಿಷ್ಟ ಸೊಬಗನ್ನು ಹೊಂದಿದ್ದರೂ ಜನರ ಗಮನ ಸೆಳೆಯದೇ ಇರುವುದು ದುರಂತ.

ದೇಗುಲದ ವಿಶೇಷತೆ
ಈ ದೇವಾಲಯದ ನಿರ್ಮಾಣದ ಬಗ್ಗೆಯಾಗಲಿ ಅಥವಾ ದತ್ತಿ ನೀಡಿದ ಬಗ್ಗೆ ಆಗಲಿ ಖಚಿತ ಮಾಹಿತಿ
ಸಿಕ್ಕದಿದ್ದರೂ ಸುಮಾರು 12 ನೇ ಶತಮಾನಕ್ಕೆ ಸೇರುವ ಈ ದೇವಾಲಯ ಮೂರು ಗರ್ಭಗುಡಿ, ಸುಖನಾಸಿ
ಹಾಗು ನವರಂಗ ಹೊಂದಿದ್ದು ಪೂರ್ವ ಭಾಗದ ಗರ್ಭಗುಡಿಯಲ್ಲಿ ಸುಮಾರು ಒಂದು ಅಡಿ ಎತ್ತರದ ನಂದಿ
ಇದೆ. ಇಲ್ಲಿನ ಬಾಗಿಲುವಾಡದ ಕೆತ್ತನೆ ಸುಂದರ. ಇನ್ನು ಇಲ್ಲಿ ಜಾಲಂದ್ರ ಇದ್ದು ಲಲಾಟದಲ್ಲಿ ಯಾವ
ಬಿಂಬ ಇರದೇ ಇರುವುದು ವಿಶೇಷ. ಗರ್ಭಗುಡಿಯ ಎದುರು ಭಾಗದ ಸುಖನಾಸಿಯಲ್ಲಿ ಚಿಕ್ಕ ನಂದಿ ಇದೆ.
ಇಲ್ಲಿನ ಉತ್ತರದ ಗರ್ಭಗುಡಿಯು ಖಾಲಿ ಇದ್ದು ಯಾವ ಶಿಲ್ಪ ಇರುವದಿಲ್ಲ. ದಕ್ಷಿಣ ದಿಕ್ಕಿನ
ಗರ್ಭಗುಡಿಯಲ್ಲಿ ಬ್ರಹ್ಮಲಿಂಗವಿದೆ. ಇಲ್ಲಿನ ಲಲಾಟದಲ್ಲಿ ಯಾವ ಬಿಂಬ ಇರದೇ ಉತ್ತರ ದಿಕ್ಕಿನಲ್ಲಿ
ಮಾತ್ರ ಗಜಲಕ್ಷ್ಮಿಯ ಕೆತ್ತೆನೆ ಇರುವುದು ವಿಶೇಷ. ಸುಖನಾಸಿಯಲ್ಲಿನ ಬಾಗಿಲುವಾಡದ ಜಾಲಂದ್ರಗಳ ಕೆತ್ತನೆ ಸುಂದರವಾಗಿದೆ.
ಇನ್ನು ದೇವಾಲಯದ ನವರಂಗದಲ್ಲಿ ನಾಲ್ಕು ಕಂಭಗಳಿದ್ದು ಮಧ್ಯದ ವಿತಾನದಲ್ಲಿ ಕಮಲದ ಕೆತ್ತನೆ ಇದೆ.
ಮಧ್ಯದಲ್ಲಿ ಚೌಕಾಕಾರದ ಪೀಠ ಇದ್ದು ಇಲ್ಲಿನ ನಾಲ್ಕು ಮುಖದಲ್ಲೂ ಅಲಂಕಾರವಿರುವುದು ವಿಶೇಷ.
ನವರಂಗದ ಭಿತ್ತಿ ಸಾಕಷ್ಟು ನವೀಕರಣವಾಗಿದ್ದು ದೇವ ಕೋಷ್ಟಕಗಳಿವೆ. ನವರಂಗದಲ್ಲಿ ಇರುವ
ಮಹಿಶಮರ್ಧಿನಿಯ ಶಿಲ್ಪ ಸುಂದರವಾಗಿದೆ. ನವರಂಗದ ಬಾಗಿಲುವಾಡ ಒಂದು ಪಟ್ಟಿಕೆಯಿಂದ
ಅಲಂಕೃತಗೊಂಡಿದ್ದು ಲಲಾಟ ಸರಳವಾಗಿದೆ. ದೇವಾಲಯದ ಬಳಿ ವೀರಗಲ್ಲುಗಳು ಇದ್ದು ಗತಕಾಲದ
ವೈಭವದ ಕುರುಹಾಗಿ ಉಳಿದುಕೊಂಡಿದೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಮೂರು ಶಿವಲಿಂಗಗಳನ್ನು ತ್ರೈಪುರುಷ ರೂಪದಲ್ಲಿ ಪೂಜಿಸುವ
ದೇವಾಲಯಗಳಲ್ಲಿ ಈ ದೇವಾಲಯವೂ ಒಂದು. ಮೂರು ಗರ್ಭಗುಡಿ ಇರುವ ಕಾರಣ ಈ
ದೇವಾಲಯವನ್ನು ಸ್ಥಳೀಯವಾಗಿ ತ್ರಿಕುಟೇಶ್ವರ ದೇವಾಲಯ ಎಂದೇ ಕರೆಯುವ ವಾಡಿಕೆ ಇದೆ.

ಹೋಗುವುದು ಹೀಗೆ

ಪ್ರಸಿದ್ದ ಕ್ಷೇತ್ರ ಉಕ್ಕಡಗಾತ್ರಿಗೆ ಅತ್ಯಂತ ಸಮೀಪದಲ್ಲಿ ಇರುವ ದೇವಾಲಯವನ್ನು
ಸುಲಭವಾಗಿ ತಲುಪಬಹುದು. ಉಕ್ಕಡಗಾತ್ರಿ, ನಂದಿಗುಡಿ ಕ್ಷೇತ್ರಕ್ಕೆ ಬರುವವರು ಈ ದೇವಾಲಯಕ್ಕೂ
ಹೋಗಿ ಬರಬಹುದು. ತಾಲ್ಲೂಕು ಕೇಂದ್ರ ಹಿರೇಕೆರೂರಿನಿಂದ ಸುಮಾರು 18 ಕಿ.ಮೀ ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles