ಮಾ. 19 ರಂದು ‘ಬದುಕು ಬಂಡಿ’ ಚಲನಚಿತ್ರ ಪ್ರೋಮೋ ಮತ್ತು ‘ಮನೆಮದ್ದು’ ಕೃತಿ ಬಿಡುಗಡೆ ಕಾರ್ಯಕ್ರಮ

* ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ

ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ

‘ಬದುಕು ಬಂಡಿ’ ಚಲನಚಿತ್ರ ಪ್ರೋಮೋ ಮತ್ತು ವೈ.ಬಿ.ಕಡಕೋಳರ ಸಂಪಾದಕತ್ವದ ‘ಮನೆಮದ್ದು’ ಕೃತಿ ಬಿಡುಗಡೆ ಕಾರ್ಯಕ್ರಮ ಮಾ. 19 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯಲಿದೆ.

ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಚಲನಚಿತ್ರ ಪ್ರೋಮೋ ಬಿಡುಗಡೆಗೊಳಿಸುವರು.


ಬದುಕು ಬಂಡಿ’ ಚಲನಚಿತ್ರ ಕುರಿತು

ಸವದತ್ತಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವೈ.ಬಿ.ಕಡಕೋಳ ಸಂಪಾದಿಸಿ ಪ್ರಕಟಿಸಿದ್ದ “ಕತೆಯಲ್ಲ ಜೀವನ”(೨೦೧೮) ಕೃತಿಯಾಧಾರಿತ ವಿಷಯವನ್ನಿಟ್ಟುಕೊಂಡು ಧಾರವಾಡದ ನವರಸ ಸ್ನೇಹಿತರ ವೇದಿಕೆಯಲ್ಲಿ ಶಿಕ್ಷಕರಾದ ಬಾಬಾಜಾನ್ ಮುಲ್ಲಾ ಮತ್ತು ನಂದಕುಮಾರ ದ್ಯಾಂಪುರ ಸೇರಿ “ಬದುಕು ಬಂಡಿ” ಚಲನಚಿತ್ರ ಚಿತ್ರೀಕರಣ ಮಾಡಿ ಶಿಕ್ಷಕರೊಬ್ಬರ ಆತ್ಮಕಥನವನ್ನು ಸಿನಿಮಾ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಜೀವನದಲ್ಲಿ ಮನುಷ್ಯನಿಗೆ ಅನೇಕ ಕಷ್ಟಗಳು ಬರುವುದು ಸಹಜ. ಆ ಕಷ್ಟಗಳನ್ನು ಮೆಟ್ಟಿನಿಂತು ಸಮಾಜಕ್ಕೆ ಅದರಲ್ಲಿಯೂ ದೇಶದ ಭಾವೀ ಸತ್ಪçಜೆಗಳಾದ ಶಾಲಾ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ನಿಸ್ವಾರ್ಥವಾಗಿ ಸೇವೆ ಮಾಡಿ ಈಗ ನಿವೃತ್ತರಾದರೂ ಮಕ್ಕಳಿಗೆ ಪಾಠ ಮಾಡುತ್ತ ಒಂಟಿ ಪಯಣದ ಬದುಕನ್ನು ಬದುಕುತ್ತಿರುವ ದತ್ತಿದಾನಿ ಮಾತೆ ಲೂಸಿ ಸಾಲ್ಡಾನಾ.
ಉಡುಪಿ ಹತ್ತಿರದ ಬೈಂದೂರಿನ ಕುಟುಂಬದ ಲೂಸಿ ಬಾಲ್ಯದಲ್ಲಿ ತಂದೆ ತಾಯಿಯೊಂದಿಗೆ ಮುಂಬೈಗೆ ರೈಲಿನಲ್ಲಿ ಹೊರಟಾಗ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ರೈಲು ನಿಂತ ಸಂದರ್ಭ, ವಿಪರೀತ ಬಾಯಾರಿಕೆಯಾದ ಲೂಸಿ ರೈಲಿನಿಂದಿಳಿದು ಹತ್ತಿರದ ನಲ್ಲಿಯಲ್ಲಿ ನೀರು ಕುಡಿಯುವಷ್ಟರಲ್ಲಿ ರೈಲು ಹೊರಟು ಹೋಗಿ ಅನಾಥಳಾಗಿ ಸವದತ್ತಿ ತಾಲೂಕಿನ ವ್ಯಕ್ತಿಯೋರ್ವರು ಅವಳನ್ನು ಜೋಪಾನ ಮಾಡುವ ಮೂಲಕ ಬದುಕಿನ ಹೊಸ ಅಧ್ಯಾಯವನ್ನು ಕಂಡ ಲೂಸಿಯವರ ಬದುಕಿನ ಕಥಾನಕ ‘ಕಥೆಯಲ್ಲ ಜೀವನ’.

ಕರಳು ಕರಗಿಸುವ ‘ಕಥೆಯಲ್ಲ ಜೀವನ

‘ಜಗವೆಲ್ಲ ನಗುತಿರು, ಜಗದಳಿವು ನನಗಿರಲಿ’ ಎಂದಿರುವ ಕವಿ ಈಶ್ವರ ಸಣಕಲ್ಲ ಅವರ ಮಾತುಗಳು ಲೂಸಿ ಸಾಲ್ಡಾನ ಗುರುಮಾತೆಯವರ ಬದುಕಿಗೆ ಹೇಳಿಮಾಡಿಸಿದಂತಿದೆ. “ಬದುಕಿನ ಬವಣೆ ಬೆನ್ನಿಗೆ ಕಟ್ಟಿಕೊಂಡು ಹೆಣ್ಣು ಅಬಲೆಯಲ್ಲಿ ಸಬಲೆ” ಎಂದು ಸಾಧಿಸಿ ವರ್ತಮಾನ ಸಮಾಜಕ್ಕೆ ತೋರಿಸಿಕೊಟ್ಟು; ಶಿಕ್ಷಕ ವೃತ್ತಿಗೆ ಕಳೆ ತಂದವರು. ಬದುಕಿನ ಬೆಂಕಿಯಲ್ಲಿ ಬಹಳಷ್ಟು ಬೆಂದು ನೊಂದು ಸಹಜವಾಗಿ ಸಾಧಿಸಿದವರು. ಸಮಾಜದಲ್ಲಿ, ವೃತ್ತಿಯಲ್ಲಿ ಬಾನಂಗಳದ ಬೆಳ್ಳಿಚುಕ್ಕೆಯಂತೆ ಬೆಳಕಾದವರು ಅವರ ಈ ಆತ್ಮಕಥೆಯಲ್ಲಿ ಮೂಡಿ ಬಂದಿರುವ ಹಲವಾರು ವಿಚಾರಗಳು ಸಾಕ್ಷಿಕರಿಸಿ ಪುಷ್ಠಿ ನೀಡುತ್ತವೆ. ಈ ಗುರುಮಾತೆಯ ವ್ಯಕ್ತಿತ್ವ ಎತ್ತರದಲ್ಲಿ ತಂದು ನಿಲ್ಲಿಸಿವೆ. ಸದಾ ತಾವು ಕಾರ್ಯ ಮಾಡುವ ‘ಶಾಲೆ’ ಹೀಗೆ ಇರಬೇಕು ಎಂದು ಬಯಸಿ, ಶಾಲಾಮಕ್ಕಳ ಬೆಳವಣಿಗೆ ಅಭಿವೃದ್ಧಿಯಾಗಿ, ಸುಂದರ ಸಮಾಜಕ್ಕೆ ಬೆಳೆವ ಈ ಶಶಿಗಳು ಮುಂದೆ ಹೆಮ್ಮರವಾಗಿ ಸಮಾಜಕ್ಕೆ ನೇರಳಾಗಬೇಕೆಂದು ಕನಸು ಕಂಡು, ನನಸು ಮಾಡತೋರಿದ ಗಟ್ಟಿ ಹೃದಯದವರು ಈ ಸಾಲ್ಡಾನ್ ಗುರುಮಾತೆ ಅವರು. ಶಾಲೆಯೇ ದೇವಾಲಯ, ಮಕ್ಕಳೇ ದೇವರು, ನಾವು ಅರ್ಚಕರೆಂದು ಭಾವಿಸಿ ಈ ಪವಿತ್ರ ವೃತ್ತಿಗೆ ಗೌರವ ತಂದವರು. ವೃತ್ತಿ ಜೀವನದ ತೊಡಕು ತೊಂದರೆ ಸಹಿಸಿ ಸುಂದರ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ನಿಂತು ಪ್ರೇರಣೆಯಾದವರು ವಾಸ್ತವಕ್ಕೆಲೂಸಿ ಸಾಲ್ಡಾನ ಅವರ ಬದುಕು ಕಷ್ಟಗಳ ಸರಮಾಲೆಯಲ್ಲಿ ಮೈದಾಳಿ ಅರಳಿರುವದಂತಹದ್ದು. ಇವರು ಮೂಲತಃ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ, ಬೈಲೂರಿನ ಕ್ರಿಶ್ಚಿಯನ್ ಸಮುದಾಯದಲ್ಲಿ ಜನಿಸಿದವರು. ಇವರ ತಂದೆ-ತಾಯಿಗಳಿಗೆ ಹತ್ತು ಜನ ಮಕ್ಕಳು ಅದರಲ್ಲಿ ಕೊನೆಯ ಮಗಳೆ ಸಾಲ್ಡಾನ ಅವರು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಮೂರನೆಯ ತರಗತಿ ಕಲಿಯುವಾಗ ರಜೆಯಲ್ಲಿ ಇವರ ತಂದೆ ಇವರನ್ನು, ಮುಂಬೈನ ಅವರ ಅಕ್ಕನ ಮನೆಗೆ ಕರೆದುಕೊಂಡು ಹೋಗುವಾಗ ರೈಲಿನಲ್ಲಿ ಪ್ರಯಾಣ ಬೆಳೆಸಿದರು ಕಡೂರಿನಿಂದ. ಇವರಿಗೆ ಬಹಳಷ್ಟು ಬಾಯಾರಿಕೆ ಅಷ್ಟರಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣ ಬರುವದು. ಇವರ ತಂದೆಗೆ ನಿದ್ರೆ ಆವರಿಸಿರುವುದು. ಅವರಿಗೆ ಹೇಳದೆ ನೀರು ಕುಡಿಯಲು ಇಳಿದಾಗ ರೈಲು ಹೋಗುವುದು. ಇವರ ಮಾತೃಭಾಷೆ ಕೊಂಕಣಿ. ಹುಬ್ಬಳ್ಳಿ ರೈಲು ಇಲಾಖೆಯವರು ಇವರು ಅಳುವುದನ್ನು ಗಮನಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಜೋಪಾನ ಮಾಡುವರು. ಮುಂದೆ ಆಶ್ರಯ ನೀಡಿದವರೆ ಇವರನ್ನು ಮುದುವೆಯಾಗುವರು. ಮದುವೆಯಾದ ಹೊಸತರಲ್ಲಿ ಗಂಡ ತೀರಿ ಹೋಗುವನು. ಮುಂದೆ ದಿಕ್ಕು ತೋಚದೆ ತಾನು ಹುಟ್ಟಿ ಬೆಳೆದ ಊರಿಗೆ ಹೋಗುವರು. ಅಲ್ಲಿನ ಪರಿಸರವೂ ಒಗ್ಗದೆ ಮತ್ತೆ ಹುಬ್ಬಳ್ಳಿಗೆ ಬಂದು ಕಷ್ಟದಲ್ಲೆ ಕಲಿತು ಶಿಕ್ಷಕಿಯಾಗುವರು. ಮುಂದೆ ಸಾಕಷ್ಟು ವರ ಮದುವೆಯಾಗಲು ಬಂದರೂ ಮದುವೆ ತಿರಸ್ಕರಿಸಿ ಏಕಾಂಗಿ ಜೀವನ ನಡೆಸಿದವರು. ಜೀವನದ ಬಹುಪಾಲು ಸಮಯವನ್ನು ಶಾಲೆಯ ಮಕ್ಕಳು, ಶಾಲೆ ಪಾಠ ಬೋಧನೆಗೆ ಮುಡಿಪಾಗಿ ಇಟ್ಟವರು. ಅನೇಕ ಸರಕಾರಿ ಶಾಲೆಗಳಿಗೆ ದತ್ತಿ ನಿಧಿ ಸ್ಥಾಪಿಸಿ ಪ್ರೇರಣೆಯಾಗಿದ್ದಾರೆ.

ವೃತ್ತಿಯಿಂದ ನಿವೃತ್ತರಾದರೂ ಸರಕಾರಿ ಶಾಲೆಗೆ ದಿನವೂ ಹೋಗಿ ಉಚಿತವಾಗಿ ಪಾಠಮಾಡಿ ಬರುವುದು ಇವರ ಹವ್ಯಾಸ. ಇಂತಹ ಅಮೂಲ್ಯ ವಿಚಾರಗಳು ತುಂಬಿರುವ ಆದರ್ಶ ಮಹಿಳಾ ಶಿಕ್ಷಕಿಯ ಜೀವನ ಅನೇಕ ಮಜಲುಗಳ ಸುಂದರ ಹೂರಣವೆ ಈ ಕೃತಿ.
ಪರಿವಿಡಿಯಲ್ಲಿ ಹೊಂದಿಸಿದ ಶಿರ್ಷಿಕೆ, ಉಪಶಿರ್ಷಿಕೆಗಳು ಸುಂದರವಾಗಿ ಮೂಡಿ ಬಂದಿರುವದನ್ನು ಕಾಣಬಹುದು. ಲೂಸಿ ಸಾಲ್ಡಾನಾ ಆತ್ಮ ಚರಿತ್ರೆ ಬದುಕಿನ ಪುಟಗಳು, ಬಾಲ್ಯ, ಮರೆಯದ ಘಟನೆ, ತಂದೆಯ ಬದುಕು ಕಲಿಸಿದ ಪಾಠ, ಜಾತೀಯತೆಯ ಭೇದಭಾವ ಅಂದು, ಅಕ್ಕನ ಸ್ವಭಾವ, ಬದುಕಿನ ತಿರುವು, ತಿರುವಿನೊಡನೆ ಜೀವನ ಪಯಣ, ನೋವಿನ ನುಡಿ ತಿರುವಿನ ಒಡಲು, ಬದುಕು ಜಟಕಾ ಬಂಡಿ, ಬದುಕಿಗೆ ನೆರವಾದವರ ಹಿನ್ನೆಲೆ, ಕಣ್ಣೀರಧಾರೆ ಇದೇಕೆ ಹೀಗೇಕೆ?, ಭಯ ನಿರ್ಭಯ, ಅರಳಿದ ಕುಸುಮ, ಮದುವೆಯ ಈ ಬಂಧ, ಟೈಫಾಯ್ಡಗೆ ತುತ್ತಾಗಿದ್ದು, ಬದುಕೊಂದು ದೈವ ಲೀಲೆ ಚದುರಂಗದ ಆಟ, ನೋವುಗಳ ನಡುವೆ ಮರಳಿ ಊರಿಗೆ, ಜ್ಞಾನದ ಬೆಳಕಿನೆಡೆಗೆ, ನೆಚ್ಚಿನ ಗುರು ವೃಂದದ ಒಡನಾಡದಲ್ಲಿ, ಕಾಲೇಜು ವ್ಯಾಸಂಗದತ್ತ, ವಿವಾಹದ ಚರ್ಚೆಯಲ್ಲಿ ವಿದ್ಯಾರ್ಥಿ ಜೀವನ, ಸಹೋದರ ಸಹೋದರಿಯರ ಬದುಕು, ವಿದ್ಯಾರ್ಥಿ ಬದುಕಿನ ನೆನಪುಗಳು, ವೆಂಕಟೇಶರ ಮದುವೆ ಪ್ರಸ್ತಾಪ, ಉನ್ನತ ವ್ಯಾಸಂಗದ ಬದುಕು, ಶಿಕ್ಷಕ ವೃತ್ತಿಯ ಬದುಕು, ಸದ್ಲಾಪೂರರ ನಿಧನದ ಆಘಾತ, ಕಲಘಟಗಿಯಿಂದ ಹುಬ್ಬಳ್ಳಿಯತ್ತ ವೃತ್ತಿ ಬದುಕು, ಲೂಸಿ ಸಾಲ್ಡಾನರವರ ದತ್ತಿ ಇಟ್ಟ ಶಾಲೆಗಳ ವಿವರ. ವೃತ್ತಿ ಬದುಕಿನ ಕೊನೆಯ ಪುಟಗಳು, ದತ್ತಿ ಇಟ್ಟ 65 ಶಾಲೆಗಳ ವಿವರ ಇದರಲ್ಲಿ ಅಡಕವಾಗಿದೆ.

ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ
ಮೊ: 9901510259

Related Articles

ಪ್ರತಿಕ್ರಿಯೆ ನೀಡಿ

Latest Articles