ಹಲಸಿನಕಾಯಿಯ ಸೀಸನ್ ಶುರುವಾಗಿದೆ. ಕೆಲವೆಡೆ ಈಗಾಗಲೇ ಹಲಸಿನಕಾಯಿ ಹಣ್ಣಾಗಿ ಘಮ ಸೂಸುತ್ತಿದೆ. ಹಲಸಿನಕಾಯಿಯಿಂದ ಹಪ್ಪಳ, ಚಿಪ್ಸ್, ಗುಜ್ಜೆ ಪಲ್ಯ, ಸಾಂಬಾರು ಹೀಗೆ ವಿಧ ವಿಧ ಖಾದ್ಯಗಳನ್ನು ತಯಾರು ಮಾಡಿ ಸವಿಯಬಹುದು.
ಹಲಸಿನ ಹಣ್ಣನ್ನು ಹಾಗೆಯೇ ತಿನ್ನುವುದರ ಜತೆಗೆ ಅದರಿಂದ ಪಾಯಸ ಕೂಡಾ ತಯಾರಿಸಿ ಸವಿಯಬಹುದು.
ಬೇಕಾಗುವ ಸಾಮಗ್ರಿ: ಹಲಸಿನ ಹಣ್ಣಿನ ಸೊಳೆ ಮಧ್ಯಮ ಗಾತ್ರದಲ್ಲಿ ಹೆಚ್ಚಿಟ್ಟುಕೊಂಡಿದ್ದು 2 ಕಪ್, ಹಾಲು 2 ಕಪ್, ಚಿಟಿಕೆ ಉಪ್ಪು, ಸಕ್ಕರೆ 1 ಕಪ್, ಸೂಜಿ ರವೆ ಕಾಲು ಕಪ್, ಏಲಕ್ಕಿ ಪುಡಿ ಸ್ವಲ್ಪ.
ಮಾಡುವ ವಿಧಾನ: ಸೂಜಿ ರವೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕೈಯಾಡಿಸಿ, ಬಸಿದು 10 ನಿಮಿಷ ನೆನೆಯಲು ಬಿಡಬೇಕು. ಒಂದು ಪಾತ್ರೆಯಲ್ಲಿ 2 ಕಪ್ನಷ್ಟು ನೀರನ್ನು ಕಾಯಲಿಡಿ. ನೀರು ಬಿಸಿಯಾದಾಗ ಅದಕ್ಕೆ ಸಕ್ಕರೆ ಸೇರಿಸಿ ಒಂದೆರಡು ನಿಮಿಷ ಕುದಿಸಿ. ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿದ್ದ ಹಲಸಿನ ಹಣ್ಣಿನ ಸೊಳೆಗಳನ್ನು ಸೇರಿಸಿ.
2 ನಿಮಿಷ ಬೇಯಿಸಿ. ನಂತರ ಅದಕ್ಕೆ ರವೆ ಸೇರಿಸಿ, ರವೆ ಬೆಂದಾಗ ಮಿಶ್ರಣ ಗಟ್ಟಿಯಾಗುತ್ತಾ ಬರುತ್ತದೆ. ಆಗ ಅದಕ್ಕೆ ಹಾಲು, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚಿಟಿಕೆ ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ 2 ನಿಮಿಷ ಕುದಿಸಿದರಾಯಿತು. ನಂತರ ತುಪ್ಪದಲ್ಲಿ ಹುರಿದ ಒಣದ್ರಾಕ್ಷಿ, ಗೋಡಂಬಿ ಚೂರುಗಳನ್ನು ಸೇರಿಸಿ.