ಬೇಸಿಗೆ ಕಾಲದಲ್ಲಿ ಬೆಟ್ಟ ಹತ್ತಲು ಅಷ್ಟೇನೂ ತ್ರಾಸ ಪಡಬೇಕಿಲ್ಲವಾದರೂ ಮಳೆಗಾಲದಲ್ಲಿ ಮಾತ್ರ ಗಟ್ಟಿ ಗುಂಡಿಗೆ ಬೇಕು. ಬೆಟ್ಟ ಏರುವಾಗ ಸಾಕಷ್ಟು ಎಚ್ಚರಿಕೆ ವಹಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
– ಶಶಿಧರ ಬೆಳ್ಳಾಯರು
ತೀರ್ಥಹಳ್ಳಿ … ಅಪ್ಪಟ ಮಲೆನಾಡು, ಸದಾಕಾಲ ಕೂಲ್ ಆಗಿರುವ ವಾತಾವರಣ ಇಲ್ಲಿನ ಪ್ಲಸ್ ಪಾಯಿಂಟ್. ಕಳೆದ ಐದು ವರ್ಷಗಳಲ್ಲಿ ಅತೀ ಹೆಚ್ಚು ಮಳೆ ಬೀಳುವಲ್ಲಿ ಆಗುಂಬೆಯನ್ನು ಹಿಂದಿಕ್ಕಿರುವ ಹುಲಿಕಲ್ಗೆ ಸಮೀಪದಲ್ಲಿದೆ. ಹಿಮದ ಹನಿಯಂತೆ ಧರೆಗಿಳಿಯುವ ಮಳೆರಾಯ ತುಂಗೆಯ ಮೈದುಂಬಿಸಿದಾಗ ತೀರ್ಥಹಳ್ಳಿ ಇನ್ನೂ ಸುಂದರ. ಮಳೆಯ ನೀರಿಗೆ ಕಪ್ಪನೆ ಹೊಳೆಯುವ ಇಲ್ಲಿನ ಪುರಾಣ ಪ್ರಸಿದ್ಧ ಸಿದ್ದೇಶ್ವರ ಬೆಟ್ಟದ ಸೊಬಗಂತೂ ಅವರ್ಣನೀಯ.
ನಿಜಕ್ಕೂ ಜೀವನದಲ್ಲಿ ಥ್ರಿಲ್ ಬಯಸೋ ಸಾಹಸಿಗರು, ಚಾರಣಿಗರು ದಿಲ್ಖುಷ್ ಆಗಬೇಕೆಂದಿದ್ದರೆ ಮಳೆ ಮುಗಿಯುವ ಮುನ್ನ ಸಿದ್ಧರಾಗಿ ಒಮ್ಮೆ ಸಿದ್ದೇಶ್ವರ ಬೆಟ್ಟ ಹತ್ತಿ ಬನ್ನಿ… ಬೆಟ್ಟದ ತುತ್ತತುದಿಯ ಮೇಲೆ ನಿಂತಾಗ ಬೆಂಕಿಪೊಟ್ಟಣದ0ತೆ ಕಾಣುವ ತೀರ್ಥಹಳ್ಳಿ, ಮಬ್ಬುಮಬ್ಬಾಗಿ ಗೋಚರಿಸೋ ತುಂಗೆಯ ಸೇತುವೆ, ಅಡಿಕೆಯ ತೋಟ ಎಲ್ಲವೂ ಖುಷಿ ಕೊಡುತ್ತೆ.
ಸುಮಾರು 200 ಅಡಿಗಳಷ್ಟು ಎತ್ತರದಲ್ಲಿರುವ ಸಿದ್ದೇಶ್ವರ ಬೆಟ್ಟದ ತುದಿಯ ಮೇಲೆ ಸಿದ್ದೇಶ್ವರನ ಪುಟ್ಟದಾದ ಗುಡಿಯಿದೆ. ಬೇಸಿಗೆ ಕಾಲದಲ್ಲಿ ಬೆಟ್ಟ ಹತ್ತಲು ಅಷ್ಟೇನೂ ತ್ರಾಸ ಪಡಬೇಕಿಲ್ಲವಾದರೂ ಮಳೆಗಾಲದಲ್ಲಿ ಮಾತ್ರ ಗಟ್ಟಿ ಗುಂಡಿಗೆ ಬೇಕು. ಬೆಟ್ಟ ಏರುವಾಗ ಸಾಕಷ್ಟು ಎಚ್ಚರಿಕೆ ವಹಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅಡಿಗಡಿಗೆ ಜಾರುವ ಕಾರಣ ಬ್ಯಾಲೆನ್ಸ್ ತಪ್ಪಿದರೆ ಬಿದ್ದು ಏಟು ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಆದ್ದರಿಂದ ಬೆಟ್ಟ ಏರುವಾಗ ಪೂರ್ವಸಿದ್ಧತೆ ಮಾಡಿಕೊಂಡಿರಬೇಕು. ಬೆಟ್ಟದ ಅರ್ಧಭಾಗ ಏರಿದ ನಂತರ ಮೇಲ್ಭಾಗಕ್ಕೆ ಏರಲು ಕಿರಿದಾದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಬೆಟ್ಟದ ಮೇಲ್ಭಾಗವೂ ಅಷ್ಟೇ ಅಪಾಯಕಾರಿ. ಸಿದ್ದೇಶ್ವರನ ಗುಡಿಯ ಸುತ್ತಲಿನ ಕಪ್ಪು ಬಂಡೆ ಜಾರುತ್ತದೆ. ಗ್ರಿಪ್ ಇಲ್ಲದ ಚಪ್ಪಲಿ, ಶೂಸ್ ಧರಿಸಿ ಮೇಲೇರುವ ಸಾಹಸ ಪ್ರಾಣಕ್ಕೆ ಎರವಾಗಬಲ್ಲುದು. ಆದ್ದರಿಂದ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದಾದರೂ ಸಿದ್ದೇಶ್ವರ ಬೆಟ್ಟ ಚಾರಣ ಹೇಳಿದಷ್ಟು ಸುಲಭವೇನಲ್ಲ. ಬೆಟ್ಟದಿಂದ ಇಳಿಯುವಾಗಲಂತೂ ಭಾರೀ ಜಾಗ್ರತೆ ವಹಿಸಬೇಕು. ಪೂರ್ವಸಿದ್ಧತೆಯೊಂದಿಗೆ ಬೆಟ್ಟ ಏರಿದರೆ ಮಾತ್ರ ತೀರ್ಥಹಳ್ಳಿಯ ಸುಂದರ ಸೊಬಗನ್ನು ಮನಸೋ ಇಚ್ಛೆ ಕಣ್ತುಂಬಿಕೊಳ್ಳಬಹುದು.
ಹೀಗೆ ಬನ್ನಿ
ತೀರ್ಥಹಳ್ಳಿ ಬೆಂಗಳೂರಿನಿ0ದ 335 ಕಿಮೀ. ದೂರದಲ್ಲಿದೆ. ಮಂಗಳೂರಿನಿ0ದ 131 ಕಿಮೀ. ಹಾಗೂ ಉಡುಪಿಯಿಂದ 87 ಕಿಮೀ. ದೂರದಲ್ಲಿದೆ. ಹತ್ತಿರದ ರೈಲು ನಿಲ್ದಾಣ ಉಡುಪಿ. ಇಲ್ಲಿಂದ ಹೆಬ್ರಿ-ಆಗುಂಬೆ ಮೂಲಕ ತೀರ್ಥಹಳ್ಳಿಗೆ ಹೋಗಬಹುದು. ಕುಂದಾಪುರ- ಹುಲಿಕಲ್ ಘಾಟ್ ಮಾರ್ಗವಾಗಿಯೂ ತಲುಪಬಹುದು. ಆಗುಂಬೆ, ಶೃಂಗೇರಿ ಪೇಟೆ ಹತ್ತಿರದಲ್ಲಿ ಇರುವ ಕಾರಣ ಇಲ್ಲಿಂದ ಟ್ಯಾಕ್ಸಿ, ಬಸ್ಗಳ ಸೌಲಭ್ಯವಿದೆ.
ತೀರ್ಥಹಳ್ಳಿ ಸುತ್ತಮುತ್ತ…
ತೀರ್ಥಹಳ್ಳಿ ಸುತ್ತಮುತ್ತ ಚಾರಣ, ಪ್ರವಾಸಕ್ಕೆ ಯೋಗ್ಯವಾದ ಕೆಲವು ಸ್ಥಳಗಳಿವೆ. ಇಲ್ಲಿಂದ ಮುಂದೆ ಕುಂದಾಪುರ ಮಾರ್ಗವಾಗಿ ಸಂಚಾರ ನಡೆಸಿದರೆ ಹುಲಿಕಲ್ ಘಾಟ್ ಸಿಗುತ್ತದೆ. ಮದಗ, ಮತ್ಸö್ಯಧಾಮ ತೀರ್ಥಹಳ್ಳಿ ಸಮೀಪದಲ್ಲೇ ಇದೆ. ಕವಲೇದುರ್ಗ ಕೋಟೆಯೂ ಇಲ್ಲಿಗೆ ಹತ್ತಿರವಾಗುತ್ತದೆ. ಮುಖ್ಯರಸ್ತೆಯಿಂದ ಕಾಡಿನ ನಡುವೆ ಆರು ಕಿ.ಮೀ. ಚಾರಣ ಕೈಗೊಂಡರೆ ಗತವೈಭವ ಸಾರುವ ಸುಂದರ ಕೋಟೆ ಇದಿರಾಗುತ್ತದೆ. ಆಗುಂಬೆ, ಶೃಂಗೇರಿಗೂ ಇಲ್ಲಿಂದ ಪ್ರಯಾಣ ಬೆಳೆಸಬಹುದು.