ಮಾರ್ಚ್ 28 ಹೋಳಿ ಹಬ್ಬ. ಕಾಮನ ಹಬ್ಬ ಎಂದು ಕರೆಸಿಕೊಳ್ಳುವ ಹೋಳಿ ಹಬ್ಬವು ಕಾಮನೆಗಳನ್ನು, ಬಯಕೆಗಳನ್ನು ದಹಿಸುವಂತಹ ಸಂದೇಶವನ್ನು ನೀಡುತ್ತದೆ. ನಮ್ಮ ಎಲ್ಲಾ ದುಃಖಗಳಿಗೆ ಕಾರಣ ದುರಾಸೆ. ಅಂತಹ ದುರಾಸೆಯ ಮನೋಭಾವ ಕಳೆದು ಹೋಗಲಿ, ಬದುಕಿನ ಬಣ್ಣ ಬದಲಾಗಲಿ ಎಂಬ ಹಾರೈಕೆಯೊಂದಿಗೆ ಎಲ್ಲ ಓದುಗರಿಗೆ ಹೋಳಿ ಹಬ್ಬದ ಶುಭಾಶಯಗಳು.
* ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಬಣ್ಣಗಳ ಹಬ್ಬ ಹೋಳಿ ಹಬ್ಬ ಮತ್ತೊಮ್ಮೆ ಬಂದಿದೆ. ನಮ್ಮ ಸಂಸ್ಕೃತಿಯಲ್ಲಿ ಬಣ್ಣಗಳಿಗೆ ಅರ್ಥವಿದೆ, ಭಾವನೆಗಳಿವೆ. ಅವು ಜೀವನ ಸಂದೇಶ ಸಾರುತ್ತವೆ.
ಹೋಳಿ ಹಬ್ಬಕ್ಕೆ ಹಲವು ಕಥೆಗಳಿವೆ. ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ಎಲ್ಲರೂ ತನ್ನನ್ನೇ ದೇವರೆಂದು ಪೂಜಿಸಬೇಕೆಂದು ಆದೇಶಿಸುತ್ತಾನೆ. ಆದರೆ, ಅವನ ಮಗನಾದ ಪ್ರಹ್ಲಾದ ವಿಷ್ಣುವಿನ ಭಕ್ತನಾಗಿರುತ್ತಾನೆ. ಕೋಪಗೊಂಡ ಹಿರಣ್ಯಕಶಿಪು ಮಗನನ್ನೇ ಕೊಲ್ಲಲು ನಿರ್ಧರಿಸುತ್ತಾನೆ. ಪ್ರಹ್ಲಾದನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಅಗ್ನಿ ಪ್ರವೇಶಿಸಬೇಕೆಂದು ತನ್ನ ಸಹೋದರಿ ಹೋಲಿಕಾಳನ್ನು ಕೇಳುತ್ತಾನೆ. ಬೆಂಕಿಯಲ್ಲಿ ಸುಡದ ವರವನ್ನು ಹೋಲಿಕಾ ಪಡೆದಿರುತ್ತಾಳೆ. ಹೋಲಿಕಾ ಪ್ರಹ್ಲಾದನ ಜೊತೆ ಬೆಂಕಿಯನ್ನು ಪ್ರವೇಶಿಸಿದಾಗ ವಿಷ್ಣುವು ಪ್ರಹ್ಲಾದನನ್ನು ರಕ್ಷಿಸುತ್ತಾನೆ. ದುಷ್ಟ ಬುದ್ಧಿಯ ಹೋಲಿಕಾ ಸುಟ್ಟು ಭಸ್ಮವಾಗುತ್ತಾಳೆ. ದುಷ್ಟ ಶಕ್ತಿಯ ವಿರುದ್ಧ ಜಯ ಸಾಧಿಸುವ ಶುಭ ಸಂಕೇತವಾಗಿ ಹೋಳಿ ಆಚರಣೆಯಲ್ಲಿ ಬೆಂಕಿಯ ಕುಂಡ ಮಾಡಿ ದೇವರನ್ನು ಆರಾಧಿಸುತ್ತಾರೆ.
ಇನ್ನೊಂದು ಪುರಾಣ ಕಥೆಯ ಪ್ರಕಾರ, ಪೂತನಿಯ ಸಂಹಾರದ ಸಂಕೇತವಾಗಿ ಹೋಳಿ ಆಚರಿಸಲಾಗುತ್ತದೆ. ತನ್ನ ಸಹೋದರಿಯ ಮಗನಿಂದಲೇ ತನಗೆ ಸಾವು ಎಂಬ ಭವಿಷ್ಯವನ್ನು ಕೇಳಿ ಕಂಸನು ಎಲ್ಲ ಮಕ್ಕಳನ್ನೂ ಸಾಯಿಸುತ್ತಿರುತ್ತಾನೆ. ಶ್ರೀಕೃಷ್ಣನ ಸಾಯಿಸಲು ಪೂತನೀಯನ್ನು ಕಳಿಸುತ್ತಾನೆ. ರಾಕ್ಷಸಿಯಾದ ಪೂತನಿ ಮಗು ಶ್ರೀಕೃಷ್ಣನಿಗೆ ವಿಷದಿಂದ ತುಂಬಿದ ತನ್ನ ಎದೆ ಹಾಲನ್ನು ಕುಡಿಸಿದಾಗ, ಕೃಷ್ಣ ಹಾಲಿನ ಜೊತೆ ಅವಳ ರಕ್ತವನ್ನೂ ಹೀರಿ ಸಾಯಿಸುತ್ತಾನೆ. ಚಳಿಗಾಲದ ಅಂತ್ಯವನ್ನು ಪೂತನಿಯ ಅಂತ್ಯವೆ0ದು ಭಾವಿಸಲಾಗುತ್ತದೆ.
ಕಾಮದೇವನ ಹಬ್ಬ
ದಕ್ಷಿಣ ಭಾರತದಲ್ಲಿ ಹೋಳಿ ಕಾಮದೇವನ ಹಬ್ಬ. ಇದರ ಹಿನ್ನೆಲೆ ಹೀಗಿದೆ: ಪಾರ್ವತಿಯು ಶಿವನನ್ನು ಒಲಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿರುತ್ತಾಳೆ. ಆದರೆ, ಶಿವ ಆಸಕ್ತಿಯನ್ನು ತೋರಿಸದೆ ಸದಾ ಧ್ಯಾನಮಗ್ನನಾಗಿರುತ್ತಾನೆ. ಆಗ ಕಾಮದೇವ ಶಿವನ ಮೇಲೆ ಹೂಬಾಣವನ್ನು ಹೂಡುತ್ತಾನೆ. ಶಿವನಲ್ಲಿ ಪ್ರೇಮ ಭಾವನೆಯನ್ನು ಮೂಡಿಸುವುದು ಅವನ ಉದ್ದೇಶವಾಗಿರುತ್ತದೆ. ಧ್ಯಾನಕ್ಕೆ ಭಂಗವಾದ್ದರಿ0ದ ಶಿವ ಕೋಪಗೊಂಡು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ. ಕಾಮದೇವ ಸುಟ್ಟು ಭಸ್ಮವಾಗುತ್ತಾನೆ. ಕೊನೆಗೆ ಕಾಮದೇವನ ಪತ್ನಿ ರತಿಯ ಕೊರಿಕೆಯಂತೆ ಶಿವ ಜೀವ ನೀಡುತ್ತಾನೆ. ಇಲ್ಲಿ ಕುತೂಹಲದ ಸಂಗತಿಯೆ0ದರೆ, ಪ್ರಕೃತಿಯೇ ಈ ಎಲ್ಲಾ ಪಾತ್ರಗಳನ್ನು ಮಾಡುತ್ತಿರುವುದು. ಪಾರ್ವತಿ ಎಂದರೆ ವಸುಂಧರೆ. ಶಿವ ಅಂದರೆ, ಸೂರ್ಯ, ಚಳಿಗಾಳಿಗೆ ನಲುಗಿದ ವಸುಂಧರೆ, ಸೂರ್ಯನ ಪ್ರಭೆಗಾಗಿ ಹಾತೊರೆಯುತ್ತಿರುತ್ತಾಳೆ. ಶಿವನ ಅಂದರೆ, ಸೂರ್ಯನ ಬೆಚ್ಚನೆಯ ಸ್ಪರ್ಶ ಅವಳಲ್ಲಿ ನವೋಲ್ಲಾಸವನ್ನು ತರುತ್ತದೆ. ಬಣ್ಣ ಬಣ್ಣದ ಹೂ ಅರಳುತ್ತದೆ. ಹೀಗೆ ಶಿವ ಮತ್ತು ಪಾರ್ವತಿಯರ ಮಿಲನವನ್ನು ನಾವು ಪ್ರಕೃತಿಯಲ್ಲಿ ಕಾಣಬಹುದು. ಶಿವ ಮೂರನೇ ಕಣ್ಣು ತೆರೆಯುವುದು ಅಂದರೆ, ಸುಡುವಂಥ ಪ್ರಖರತೆ ಬೇಸಿಗೆಯ ಸುಡು ಬಿಸಿಲಯ ಭೂಮಿಯ ಮೇಲೆ ಬೀಳುವುದು. ಚಳಿಗಾಲ ಅಂತ್ಯವಾಗಿ ಬೇಸಿಗೆ ಪ್ರಾರಂಭವಾಗುವ ಪ್ರೀತಿ-ಪ್ರೇಮದ ಸಂಕೇತವಾಗಿ ಹೋಳಿ ಆಚರಿಸಲಾಗುತ್ತದೆ.
ವಸಂತ ಋತು ಆರಂಭ
ಫಾಲ್ಗುಣ ಮಾಸದಲ್ಲಿ ಬರುವ ಹೋಳಿ ಹುಣ್ಣಿಮೆಯ ಮಾರನೆಯ ದಿನದಿಂದ ವಸಂತ ಋತು ಪ್ರಾರಂಭವಾಗುತ್ತದೆ. ಹಾಗಾಗಿ ಇದನ್ನು ವಸಂತೋತ್ಸವವನ್ನಾಗಿಯೂ ಆಚರಿಸಲಾಗುತ್ತದೆ. ಕ್ರಿಸ್ತಪೂರ್ವ ಕಾಲದಿಂದಲೂ ಹೋಳಿಹಬ್ಬದ ಆಚರಣೆ ಜಾರಿಯಲ್ಲಿತ್ತು ಎನ್ನಲಾಗಿದೆ. ಶ್ರೀ ಕೃಷ್ಣ ರಾಧೆಯನ್ನು ಛೇಡಿಸಲು, ಪ್ರೇಮದಾಟವಾಡಲು ಹೋಳಿ ಆಡುತ್ತಾನೆ. ಗೋಪಿಕಾಸ್ತಿçÃಯರೆಲ್ಲರೂ ಹೋಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ಪುರಾಣಗಳಲ್ಲಿ ನೋಡುತ್ತೇವೆ. ಹೋಳಿ ಆಡುವಾಗ ಜಾತಿ ಮತ ಧರ್ಮಗಳ ಭೇದವಿಲ್ಲದೆ ಎಲ್ಲರನ್ನೂ ಒಂದು ಮಾಡುತ್ತದೆ. ಶತ್ರುಗಳನ್ನೂ ಸ್ನೇಹಿತರನ್ನಾಗಿ ಮಾಡುತ್ತದೆ. ದ್ವೇಷವು ಬಣ್ಣಗಳಲ್ಲಿ ಕರಗಿ ನೀರಾಗುತ್ತದೆ.
ಕರ್ನಾಟಕದಲ್ಲಿ ಹೋಳಿ ಹಬ್ಬ
ಕರ್ನಾಟಕದಲ್ಲೂ ಹೋಳಿ ಹಬ್ಬವನ್ನು ಕಾಮನ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಶಿರಸಿ ತಾಲೂಕಿನ ಸೋಂದೆಯಲ್ಲಿ ಹೋಳಿ ಹುಣ್ಣಿಮೆಯಂದು ಭೂತರಾಜನಿಗೆ ಪೂಜೆ ಸಲ್ಲಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಹೋಳಿ ಆಚರಣೆ ಜೋರು. ಹುಬ್ಬಳ್ಳಿಯಲ್ಲಿ ಐದು ದಿನ ಹೋಳಿ ಆಚರಣೆ. ಇದನ್ನು ‘ರಂಗ ಪಂಚಮಿ’ ಎನ್ನುತ್ತಾರೆ.
ಬೆಳಗಾವಿ ಜಿಲ್ಲೆಯ ಶಿರಗಾಪುರದಲ್ಲಿ ವಿಶಿಷ್ಟ ಕಾಮನ ಜಾತ್ರೆ ನಡೆಯುತ್ತದೆ. ಹುಣ್ಣಿಮೆಗೆ ಮೂರು ದಿನ ಮೊದಲಿನಿಂದ ಇದು ಶುರುವಾಗುತ್ತದೆ. ಗ್ರಾಮಸ್ಥರೆಲ್ಲರೂ ಮನೆಗಳಿಂದ ಹಳೆ ಬಟ್ಟೆ, ಮರದ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಸುಮಾರು ಮೂವತ್ತು ಅಡಿ ಎತ್ತರ ಮತ್ತು ಇಪ್ಪತ್ತು ಅದಿ ಅಗಲದ ಕಾಮನನ್ನು ಭತ್ತದ ಒಣ ಹುಲ್ಲಿನಿಂದ ಮಾಡುತ್ತಾರೆ. ಬಟ್ಟೆಗಳಿಂದ ಅಲಂಕರಿಸುತ್ತಾರೆ. ಕರಿಯ ಎಳ್ಳಿನಿಂದ ಮುಖವನ್ನು ತಯಾರಿಸಿ ಬಣ್ಣ ಬಳಿಯುತ್ತಾರೆ. ಹತ್ತಾರು ದರ್ಜಿಗಳು ಸೇರಿಕೊಂಡು ಕಾಮಣ್ಣನಿಗೆ ದೊಡ್ಡ ಬಿಳಿ ಅಂಗಿಯನ್ನು ಹೊಲಿದು ತೊಡಿಸುತ್ತಾರೆ.
ಸಾವಿರಾರು ಸಂಖ್ಯೆಯಲ್ಲಿ ನೆರೆದ ಭಕ್ತರು ಹರಕೆ ಸಲ್ಲಿಸುತ್ತಾರೆ. ಮಕ್ಕಳಾಗಲು ಹರಕೆ ಹೊತ್ತವರು 6 ವರ್ಷದ ಬಾಲಕನ ತೂಕದಷ್ಟು ತೆಂಗಿನಕಾಯಿಗಳನ್ನು ಕೊಡುತ್ತಾರೆ. ಹರಕೆಯ ನಂತರ ರತಿಯ ಚಿತ್ರದೊಂದಿಗೆ ಕಾಮನಿಗೆ ಮದುವೆ ಮಾಡುತ್ತಾರೆ. ಹುಣ್ಣಿಮೆ ಕಳೆದು ಮೂರನೇ ದಿನದಂದು ಕಾಮನ ಗೊಂಬೆಯನ್ನು ಮೆರವಣಿಗೆಯಲ್ಲಿ ಸ್ಮಶಾನಕ್ಕೆ ಸಾಗಿಸಿ ಕಾಮನನ್ನು ಸುಡುತ್ತಾರೆ.
ವರ್ಣಮಯ ಕಾರಂಜಿಯಾಗಿರಿ
ಹೋಳಿಯು ಬಣ್ಣಗಳ ಹಬ್ಬ. ಪ್ರಕೃತಿಯು ವೈವಿಧ್ಯಮಯವಾಗಿ ಇರುವಂತೆಯೇ ನಮ್ಮ ಭಾವನೆ ಮತ್ತು ಅನಿಸಿಕೆಗಳ ವೈವಿಧ್ಯತೆಯೊಡನೆ ವಿವಿಧ ಬಣ್ಣಗಳು ಸಂಬ0ಧಪಟ್ಟಿವೆ. ಪ್ರತಿಯೊಬ್ಬರೂ ಬಣ್ಣಗಳ ಕಾರಂಜಿಯ0ತೆ ಮತ್ತು ಈ ಬಣ್ಣಗಳು ಬದಲಿಸುತ್ತಲೇ ಇರುತ್ತವೆ. ನಿಮ್ಮ ಭಾವನೆಗಳು ಮತ್ತು ಬಯಕೆಗಳು ನಿಮ್ಮನ್ನು ಬೆಂಕಿಯ0ತೆ ಸುಡುತ್ತವೆ. ಆದರೆ ಇವುಗಳು ಬಣ್ಣಗಳ ಕಾರಂಜಿಯಾಗಿಬಿಟ್ಟರೆ ನಿಮ್ಮ ಜೀವನದಲ್ಲಿ ಸೊಬಗನ್ನು ತರುತ್ತವೆ. ಪುರಾಣ ಕಥೆಯು ಹೇಳುವಂತೆ, ಪಾರ್ವತಿಯು ತಪಸ್ಸಿನಲ್ಲಿದ್ದಾಗ ಮತ್ತು ಶಿವನು ಸಮಾಧಿಯಲ್ಲಿದ್ದಾಗ ಕಾಮದೇವನು ಇವರಿಬ್ಬರ ದಿವ್ಯ ಮಿಲನವನ್ನು ಉಂಟು ಮಾಡಲು ಪ್ರಯತ್ನಿಸಿದಾಗ ಶಿವನು ಕಾಮದೇವನನ್ನು ಸುಟ್ಟು ಬೂದಿಯಾಗಿಸುತ್ತಾನೆ. ಶಿವನು ಸಮಾಧಿಯಿಂದ ಹೊರಬಂದ ನಂತರವೇ ಪಾರ್ವತಿಯೊಡನೆ ಸೇರಲು ಸಾಧ್ಯವಾಯಿತು.
‘ಪರ್ವ’ ಎಂದರೆ ಹಬ್ಬ. ಪಾರ್ವತಿಯೆಂದರೆ ಹಬ್ಬದಿಂದ ಜನಿಸಿರುವಂತಹ ಉತ್ಸವ. ಸಮಾಧಿಯು ಉತ್ಸವದೊಡನೆ ಮಿಲನವಾಗಲು ಬಯಕೆಯ ಇರುವಿಕೆಯು ಅವಶ್ಯಕವಾಗಿತ್ತು. ಆದ್ದರಿಂದ ಬಯಕೆಯಾದ ಕಾಮನನ್ನು ಆಹ್ವಾನಿಸಲಾಯಿತು ಆದರೆ ಉತ್ಸವಾಚರಣೆ ಮಾಡಲು ಬಯಕೆಯನ್ನು ಮೀರಿ ಹೊರಬರಬೇಕು. ಆದ್ದರಿಂದ ಶಿವನು ತನ್ನ ಮೂರನೆಯ ಕಣ್ಣನ್ನು ತೆರೆದು ಕಾಮನನ್ನು ದಹಿಸಿದ. ನಿಮ್ಮಲ್ಲಿ ಬಯಕೆಗಳಿದ್ದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ಆ ಬಯಕೆಗಳು ನಿಮ್ಮನ್ನು ಆವರಿಸಿ ಬಿಡದಂತೆ ಎಚ್ಚರಿಕೆ ವಹಿಸಿ. ಬಯಕೆಗಳು ಎದ್ದಾಗ ಅದರಿಂದ ನಿಮಗೆ ಲಾಭವಾಗುತ್ತದೊ ಇಲ್ಲವೊ ಎಂದು ನೋಡಿಕೊಳ್ಳಿ. ಯೋಗ್ಯವಲ್ಲದ ಬಯಕೆಯು ನಿಮ್ಮಲ್ಲಿ ಎದ್ದಾಗ ಅದರಿಂದ ಉಂಟಾಗುವುದು ಕೇವಲ ಸಮಸ್ಯೆಗಳು. ಮನಸ್ಸಿನಲ್ಲಿರುವ ಬಯಕೆಯನ್ನು ಸುಟ್ಟಾಗ, ಆಗ ಉತ್ಸವಾಚರಣೆ ಉಂಟಾಗಿ ಜೀವನವು ವರ್ಣಮಯವಾಗುತ್ತದೆ.
ಎಲ್ಲಾ ಆಲೋಚನೆಗಳು ಮತ್ತು ಭಾವನೆಗಳು ಆತ್ಮದಿಂದ ಉದ್ಭವಿಸುತ್ತವೆ. ಆತ್ಮವು ನಮ್ಮ ದೇಹದ ಒಳಗೆ ಮತ್ತು ಹೊರಗೆ ಆಕಾಶದಂತೆ ವ್ಯಾಪಿಸಿದೆ. ಈ ಆಕಾಶವು ನಮ್ಮ ಜೀವನವನ್ನು ಆಳುತ್ತದೆ ಮತ್ತು ನಾವು ಇದರ ಕೀಲು ಗೊಂಬೆಗಳ0ತೆ. ಮಾನವರ ಸಮಸ್ಯೆಯೆಂದರೆ ನಮ್ಮದೇ ಭಾವನೆಗಳನ್ನು, ನಮ್ಮದೇ ಆಲೋಚನಾ ಮಾದರಿಗಳನ್ನು ಮತ್ತು ನಮ್ಮೊಳಗೆ ಏನಾಗುತ್ತಿದೆಯೆಂದು ನೋಡಿಕೊಳ್ಳಲು ಸಮಯವನ್ನು ತೆಗೆದುಕೊಳ್ಳದಿರುವುದು. ಆಲೋಚಿಸುವ ಮೊದಲೇ ಕಾರ್ಯ ಪ್ರವೃತ್ತರಾಗಿ ಬಿಡುತ್ತೇವೆ. ನಿಯಮಗಳು ಇರಬಹುದು, ಆದರೆ ಭಾವನೆಗಳು ತಾರಕಕ್ಕೆ ಏರಿದಾಗ ನಮ್ಮದೇ ಭಾವನೆಗಳಿಗೆ ನಾವು ಬಲಿಯಾಗಿದ್ದೇವೆ. ಆಂತರಿಕ ನಿಯಮಗಳು ಬಾಗಿಲು ಕಾಯುವ ಸೇವಕನಂತೆ. ಆದರೆ ನಮ್ಮ ಭಾವನೆಗಳು ಮನೆಯ ಯಜಮಾನನಂತೆ. ಮನೆಯ ಯಜಮಾನರು ಒಳಗೆ ನುಗ್ಗಿದಾಗ ಸೇವಕನು ಸುಮ್ಮನಾಗಿ ದಾರಿಯನ್ನು ಬಿಟ್ಟುಕೊಡುತ್ತಾನೆ. ಆದ್ದರಿಂದ ಆಲೋಚನೆಗಳು ಬಂದು ಹೋಗುತ್ತವೆ, ಭಾವನೆಗಳು ಬಂದುಹೋಗುತ್ತವೆ, ಆದರೆ ನಮ್ಮ ಅಂತರಾಳದೊಳಗೆ ಹೊಕ್ಕಾಗ ಇರುವುದೆಲ್ಲವೂ ಕೇವಲ ಖಾಲಿ ಆಕಾಶ, ಅದೇ ನಮ್ಮ ನಿಜ ಸ್ವಭಾವ. ನಮ್ಮ ಆಲೋಚನೆಗಳೊಡನೆ, ಅನಿಸಿಕೆಗಳೊಡನೆ ಮತ್ತು ಭಾವನೆಗಳೊಡನೆ ಬಹಳವಾಗಿ ಗುರುತಿಸಿಕೊಂಡಾಗ ನಾವು ಸಿಲುಕಿಕೊಂಡು ಬಹಳ ಸಣ್ಣವರಾಗಿ ಬಿಡುತ್ತೇವೆ. ಆದರೆ ನೀವೇ ಆಗಿರುವ ನಿಮ್ಮ ಆಂತರ್ಯದೊಳಗಿರುವ ಆಗಾಧವಾದ ಆ ಆಕಾಶವು ಪೂರ್ಣವಾಗಿ ಶಾಂತವಾಗಿರುತ್ತದೆ. ನೀವು ಪೂರ್ಣವಾಗಿ ಶಾಂತವಾಗಿರುವ ಕ್ಷಣಗಳಲ್ಲಿ, ಪೂರ್ಣವಾದ ಪ್ರೇಮವನ್ನು ಅನುಭವಿಸುತ್ತಿರುವ ಕ್ಷಣಗಳಲ್ಲಿ ನಿಮ್ಮೊಳಗೆ ಏನೋ ಒಂದು ವಿಸ್ತಾರವಾದಂತೆ ಅನಿಸುತ್ತದೆ. ನಿಮಗೊಂದು ಎಲ್ಲೆಯೆ ಇಲ್ಲವೆಂದು ಅನಿಸುತ್ತದೆ. ಅದೇ ನಮ್ಮ ನಿಜ ಸ್ವಭಾವ. ಸೌಂದರ್ಯವೆ0ದರೆ ಇದೇ. ಅಜ್ಞಾನದಲ್ಲಿ ಭಾವನೆಗಳು ಒಂದು ಸಮಸ್ಯೆಯಾದರೆ, ಜ್ಞಾನದಲ್ಲಿ ಅದೇ ಭಾವನೆಗಳು ಮೆರಗನ್ನು ಹೆಚ್ಚಿಸುತ್ತವೆ.
ಬಣ್ಣದ ಮಹಿಮೆ – ವರ್ಣಪ್ರಭಾವ
ಹೋಳಿಯಂತೆ ಜೀವನವು ಅನೇಕ ಬಣ್ಣಗಳಿಂದ ತುಂಬಿರಬೇಕು ಮತು ಪ್ರತಿಯೊಂದು ಬಣ್ಣವೂ ಸ್ಪಷ್ಟವಾಗಿ ಕಾಣಬೇಕು. ಪ್ರತಿಯೊಂದು ಪಾತ್ರ ಮತ್ತು ಭಾವನೆಯೂ ಸುಸ್ಪಷ್ಟವಾಗಿರಬೇಕು. ಭಾವನಾತ್ಮಕ ಗೊಂದಲದಿ0ದ ಕೇವಲ ಸಮಸ್ಯೆಗಳು ಉಂಟಾಗುತ್ತವೆ. ನೀವು ಮಾಡುವ ಎಲ್ಲಾ ಪ್ರಾತ್ರಗಳಿಗೂ ನ್ಯಾಯವನ್ನು ಮಾಡುತ್ತೀರಿ ಎಂದು ನಿರ್ಧರಿಸಿಕೊಳ್ಳಿ, ಒಳ್ಳೆಯ ಪತಿ/ಪತ್ನಿಯಾಗಿ, ಮಗ/ಮಗಳಾಗಿ, ಒಳ್ಳೆಯ ಪೋಷಕರಾಗಿ, ಒಳ್ಳೆಯ ನಾಗರಿಕರಾಗಿಯೂ ನೀವು ಪಾತ್ರವನ್ನು ವಹಿಸಬಹುದು. ಈ ಎಲ್ಲಾ ಗುಣಗಳು ನಿಮ್ಮಲ್ಲಿ ಆಗಲೇ ಇವೆಯೆಂದು ತಿಳಿದುಕೊಳ್ಳಿ. ಅವುಗಳಿಗೆ ಪೂರ್ಣವಾಗಿ ಅರಳುವ ಅವಕಾಶವನ್ನು ಕೊಡಿ. ವೈವಿಧ್ಯತೆಯಲ್ಲಿ ಸಾಮರಸ್ಯವಿದ್ದಾಗ ಜೀವನವು ಸಂತೋಷಮಯವಾಗುತ್ತದೆ ಮತ್ತು ವರ್ಣರಂಜಿತವಾಗುತ್ತದೆ. ಉತ್ಸವಾಚರಣೆಯು ಆತ್ಮದ ಸ್ವಭಾವ ಮತ್ತು ಮೌನದಿಂದ ಹೊರಬರುವ ಉತ್ಸವಾಚರಣೆಯೇ ನೈಜವಾದದ್ದು. ಅದನ್ನೇ ಧ್ಯಾನ ಎಂದು ಕರೆಯುತ್ತಾರೆ. ನೀವು ಧ್ಯಾನ ಮಾಡಿದಾಗ ಕೇವಲ ನಿಮ್ಮೊಳಗೆ ಮಾತ್ರ ಸಾಮರಸ್ಯವನ್ನು ತಂದುಕೊಳ್ಳುವುದಲ್ಲದೆ ಈ ಸೃಷ್ಟಿಯ ಸೂಕ್ಷö್ಮವಾದ ಹಂತಗಳಲ್ಲಿರುವ ಸೂಕ್ಷö್ಮ ದೇಹಗಳಲ್ಲೂ ಇದೇ ಪ್ರಭಾವವನ್ನು ಉಂಟುಮಾಡುತ್ತೀರುವಿರಿ. ಧ್ಯಾನ ಮಾಡಿದಾಗ ಮಾತ್ರವೇ ಚೈತನ್ಯದ ಉನ್ನತ ಸ್ಥಿತಿಯ ಅರಿವು ಉಂಟಾಗಲು ಸಾಧ್ಯ ಮತ್ತು ಇಡೀ ವಿಶ್ವವು ಒಂದೇ ಚೈತನ್ಯದಿಂದ ಮಾಡಲ್ಪಟ್ಟಿದೆ ಎಂಬ ಅನುಭವ ಉಂಟಾಗಲು ಸಾಧ್ಯ. ಒಂದು ಉತ್ಸವಾಚರಣೆಯೊಡನೆ ಪವಿತ್ರತೆಯೂ ಬೆರೆತಿದ್ದರೆ, ಅಂತಹ ಉತ್ಸವವು ಪರಿಪೂರ್ಣವಾಗುತ್ತದೆ. ಆಗ ಕೇವಲ ದೇಹ ಮತ್ತು ಮನಸ್ಸು ಮಾತ್ರ ಸಂಭ್ರಮಿಸದೆ ಚೈತನ್ಯವೂ ಸಂಭ್ರಮಿಸುತ್ತದೆ. ಆಗ ಇಂತಹ ಸಂಭ್ರಮವು ಸ್ವಯಂಸ್ಫುರಿತವಾಗಿ ಚಿಮ್ಮಿದಾಗ ಜೀವನವೆಲ್ಲವೂ ವರ್ಣರಂಜಿತವಾಗುತ್ತದೆ.