ಬರಹ: ವೈ .ಬಿ. ಕಡಕೋಳ
ಶಿರಸಂಗಿ: ಕೊರೊನಾ ಹೆಚ್ಚುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ಸವದತ್ತಿ ತಾಲೂಕಿನ ಶಿರಸಂಗಿ ಕಾಳಿಕಾ ದೇವಸ್ಥಾನದಲ್ಲಿ ನಡೆಯಬೇಕಿದ್ದ ಯುಗಾದಿ ಯಾತ್ರಾ ಮಹೋತ್ಸವವನ್ನು ಸಂರ್ಪೂವಾಗಿ ರದ್ದುಗೊಳಿಸಲಾಗಿದೆ. ಸಾಂಪ್ರದಾಯಿಕವಾಗಿ ಪೂಜೆ ನಡೆಯಲಿದೆ ಎಂದು ವಿಶೇಷ ಚುನಾವಣಾಧಿಕಾರಿ ಎಸ್ ಎಸ್ ಸಂಪಗಾವ ಎಂದು ತಿಳಿಸಿದ್ದಾರೆ.
ಏಪ್ರಿಲ್ 12 ರಿಂದ 14ರವರೆಗೆ ರವರೆಗೆ ನಡೆಯಬೇಕಾಗಿದ್ದ ಯಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಆ ನಿಟ್ಟಿನಲ್ಲಿ ಸಿರಸಂಗಿ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ದೇವಸ್ಥಾನ ಒಳಗೆ ಯಾರಿಗೂ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆ ನಿಟ್ಟಿನಲ್ಲಿ ಗ್ರಾಮದ ಸುತ್ತಲೂ ಅತಿ ಬಿಗಿಯಾದ ಭದ್ರತೆಯನ್ನು ಮಾಡಲಾಗಿದೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಯಾವ ಭಕ್ತರಿಗೂ ಯಾರಿಗೂ ದರುಶನಕ್ಕೆ ಅವಕಾಶ ಇರುವುದಿಲ್ಲ. ಸಿರಸಂಗಿ ಕಾಳಿಕಾದೇವಿ ಯುಗಾದಿ ಯಾತ್ರಾ ಮಹೋತ್ಸವ ಸಂಪೂರ್ಣ ಬಂದ್ ಮಾಡಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ತಹಶೀಲ್ದಾರ ಪ್ರಶಾಂತ ಬಿ ಪಾಟೀಲ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದಂತೆ ಈ ಬಾರಿ ನಡೆಯಬೇಕಾದ ಸಿರಸಂಗಿ ಕಾಳಿಕಾ ದೇವಸ್ಥಾನದಲ್ಲಿ ಯುಗಾದಿ ಯಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು
ನಂತರ ಸಭೆಯಲ್ಲಿ ಮಾತನಾಡಿದ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅದ್ಯಕ್ಷ ಪಿ ಬಿ ಬಡಿಗೇರ ಈ ಬಾರಿ ದೇವಸ್ಥಾನದಲ್ಲಿ ನಡೆಯಬೇಕಾದ ಸಾಂಪ್ರದಾಯಿಕ ಯುಗಾದಿ ಹಬ್ಬದ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಯಾರಿಗೂ ಒಳಗಡೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಕೇವಲ ಅರ್ಚಕರು ಮತ್ತು ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಅವಕಾಶವಿರುತ್ತದೆ. ನಾವೆಲ್ಲರೂ ಸರಕಾರದ ಆದೇಶವನ್ನು ಪಾಲಿಸಲೇಬೇಕಾಗಿದೆ ಎಂದರು.
ಸಿ ಪಿ ಐ ಮಂಜುನಾಥ ನಡುವಿನಮನಿ ಮಾತನಾಡಿ ದೇವಸ್ಥಾನದ ಮುಂದೆ ಹಾಗೂ ಸಿರಸಂಗಿ ಗ್ರಾಮಕ್ಕೆ ಬರುವ ಎಲ್ಲ ಮಾರ್ಗಗಳಲ್ಲಿಯೂ ಬಿಗಿ ಭದ್ರತೆ ಮಾಡಲಾಗುತ್ತದೆ. ಆದ್ದರಿಂದ ಎಲ್ಲರೂ ತಮ್ಮ ತಮ್ಮ ಬಳಿ ಆಧಾರ ಕಾರ್ಡಗಳನ್ನು ಇಟ್ಟುಕೊಂಡೆ ಸಂಚಾರ ಮಾಡಬೇಕು. ಸಂಸ್ಥೆಯ ಸಿಬ್ಬಂದಿಗಳು ಅರ್ಚಕರು ತಮ್ಮ ಭಾವಚಿತ್ರ ಇರುವ ಗುರುತಿನ ಚೀಟಿ ಹಾಗೂ ಪಾಸ್ ಗಳನ್ನು ಕಡ್ಡಾಯವಾಗಿ ತೋರಿಸಿ ದೇವಸ್ಥಾನಕ್ಕೆ ಪ್ರವೇಶ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚುನಾವಣಾ ನಿಮಿತ್ಯವಾಗಿ ಆಗಮಿಸಿದ ಪಿಎಸಐ ನಿಂಗಪ್ಪ ಪೂಜಾರ, ತಾಲೂಕಾ ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ, ತಾಲೂಕಾ ಪಂಚಾಯತನ ಸಂಗನಗೌಡಾ ಹಂದ್ರಾಳ, ಗ್ರಾಮ ಪಂಚಾಯತ ಅದ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅದ್ಯಕ್ಷ ಪಿ ಬಿ ಬಡಿಗೇರ, ವಿಶ್ವಕರ್ಮ ಪ್ರತಿಷ್ಟಾನದ ಅದ್ಯಕ್ಷ ಮೌನೇಶ ಸುಳ್ಳದ, ಅರುಣ ಸೋನಾರ.ಸುರೇಶ ಜುಂಝರವಾಢ, ವಿ ಎ ಗೌಡರ, ಮೋಹನ ಎಮ್ ಪತ್ತಾರ, ಗೋವಿಂದ ಬಡಿಗೇರ, ಚಂದ್ರಶೇಖರ ವೇದ ಪಾಠಕ, ರಮೇಶ ಪತ್ತಾರ, ಅರವಿಂದ ಪತ್ತಾರ, ಮಲ್ಲಿಕಾರ್ಜುನ ಪತ್ತಾರ, ಗ್ರಾಮದ ಗಣ್ಯರಾದ ಶಿವಾಜಿ ಶಿಂಧೆ, ಕಾಳಿಕಾ ದೇವಸ್ಥಾನದ ಅರ್ಚಕರಾದ ಇಂದ್ರಾಚಾರ್ಯ ಗಂಗಯ್ಯನವರ, ನಾಗಾಚಾರ್ಯ ಗಂಗಯ್ಯನವರ ಹಾಗೂ ಪ್ರಕಾಶ ಪ್ರಸಾದ ಉಪಸ್ಥಿತರಿದ್ದರು.
ಶಿರಸಂಗಿಯ ಶ್ರೀ ಕಾಳಿಕಾದೇವಿ
ನಾನು ನೀನು ಮೋಡಮೋಡವಾಗಿ ತೇಲಿಬಂದು
ನಮ್ಮ ನಾಡ ಮುಗಿಲಿನಲ್ಲಿ ಮೇಳಗೂಡಿ ನಿಂದು,
ಬನವಾಸಿಯ ಮಧುಕೇಶ್ವರ,ಕಡಲ ಕಾರವಾರ
ಸೊಗಲಕೊಲಿದ ಸೋಮೇಶ್ವರ,ಗೋಕರ್ಣ ತೀರ,
ಶಿರಸಂಗಿ ಮಾತೆ ಶ್ರೀ ಕಾಳಿಕಾ ಪ್ರಧಾಮ
ಗಜಶಾಲೆಯ ವಿಜಯನಗರ ಪಂಪಾಪತಿಪುರ,
ಜೋಗದ ಜಲ ತುಂಬಿ ಬರಲಿ ಜೀವನದಲಿ ಸಾರ”
ಎಂದು ಕವಿ ಡಿ.ಎಸ್. ಕರ್ಕಿಯವರು ತಮ್ಮ ಕವನದಲ್ಲಿ ಉತ್ತರ ಕರ್ನಾಟಕದ ವಿವಿಧ ಸ್ಥಳಗಳ ವರ್ಣನೆಯಲ್ಲಿ ಶಿರಸಂಗಿಯನ್ನು ಕೂಡ ನೆನೆದಿದ್ದು, ಇಂಥ ಪವಿತ್ರ‍್ ಸ್ಥಳ ಇಂದು ಕಾಳಿಕಾದೇವಿ ದೇವಾಲಯ ಹಾಗೂ ಲಿಂಗರಾಜರ ಕೋಟೆ ಮೂಲಕ ಪ್ರಸಿದ್ದಿ ಪಡೆದಿದೆ.
ಹಿಂದೆ ರಾಮಕೃಷ್ಣ ಪರಮಹಂಸರು “ಕಾಳಿಕಾ ದೇವಿಯನ್ನು ಪೂಜಿಸಿ ಸಾಕ್ಷಾತ್ಕಾರ ಮಾಡಿಕೊಂಡು ದೇವಿ ಭಕ್ತರಾಗಿದ್ದು ಸ್ವಾಮಿ ವಿವೇಕಾನಂದರೂ ಕೂಡ “ಕಾಳಿಕಾ ದೇವಿ” ಬಗ್ಗೆ ಭಕ್ತಿಪರವಶರಾಗಿ ಚೈತನ್ಯಮಯರೂಪ ಎಂಬುದಾಗಿ ಹೇಳಿರುವರು.
ಹಿಂದೂ ಧರ್ಮದಲ್ಲಿ ವಿಶ್ವಕರ್ಮ ಜನಾಂಗವು ತಮ್ಮ ಕುಶಲಕಲೆಯಿಂದ ತನ್ನದೇ ಆದ ವೈಶಿಷ್ಟö್ಯವನ್ನು ಹೊಂದಿದೆ. ವಿಶ್ವಕರ್ಮರ ಆರಾಧ್ಯ ದೇವತೆ ಕಾಳಿಕಾಮಾತೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಎಂಬ ಗ್ರಾಮದಲ್ಲಿ ಈ ದೇವಿಯ ದೇವಾಲಯವಿದೆ. ಶಿರಸಂಗಿ ಬೆಳಗಾವಿಯಿಂದ 80 ಕಿ.ಮೀ, ಬೆಂಗಳೂರಿನಿ0ದ 400 ಕಿ.ಮೀ ಸವದತ್ತಿಯಿಂದ 22 ಕಿ.ಮೀ ಅಂತರದಲ್ಲಿದೆ. ಸವದತ್ತಿಯಿಂದ ರಾಮದುರ್ಗ ಕಡೆಗೆ ಚಲಿಸುವ ಎಲ್ಲ ವಾಹನಗಳಿಗೂ ನಿಲುಗಡೆ ಹೊಂದಿರುವ ಸ್ಥಳ ಶಿರಸಂಗಿ.
ಪುರಾಣ ಕಾಲದ ಇತಿಹಾಸ, ರಾಜಮಹಾರಾಜರ ಕಾಲದ ಐತಿಹಾಸಿಕ ಚರಿತ್ರೆ ಎರಡನ್ನೂ ಈ ಸ್ಥಳ ಹೊಂದಿದೆ. ಶ್ರೀ ಮಾರ್ಕಂಡೇಯ ಪುರಾಣದಂತೆ ಸಾವರ್ಣಿಕ ಮನ್ವಂತರದ ಸಪ್ತಋಷಿಗಳಲ್ಲಿ ಓರ್ವರಾದ ಋಷ್ಯಶೃಂಗರಿಗೆ ಕಾಳಿಕಾದೇವಿ ಪ್ರತ್ಯಕ್ಷಳಾಗಿ ಆಶೀರ್ವದಿಸಿದ ಸ್ಥಳ ಈ ಶಿರಸಂಗ
ಕಲ್ಯಾಣ ಚಾಳುಕ್ಯರ ಆಡಳಿತ ಅವಧಿಯಲ್ಲಿ ಮೊದಲನೆಯ ಜಗದೇಕಮಲ್ಲ-2 ಹಾಗೂ ಎರಡನೆಯ ವೀರಸೋಮೇಶ್ವರ ಕಾಲದ ಶಾಸನಗಳು ಇಲ್ಲಿ ಲಬ್ಯವಾಗಿದ್ದು, ಕ್ರಿ.ಶ.1145 ರ ಶಾಸನದಲ್ಲಿ “ಕುಂತಳದಲ್ಲಿ ಬರುವ ಚಿನ್ನ ಹೂ ಬೆಳುವಲ” ಎಂದು ಹೇಳುವ ಮೂಲಕ 30 ಗ್ರಾಮಗಳಿಗೆ ಮುಖ್ಯ ಪಟ್ಟಣವೆನಿಸಿಹುದು ರಿಶ್ಯಶ್ರಿಂಗಿಗ್ರಾಮ ಎಂದು ಹೇಳಿದೆ. ಇನ್ನೊಂದು ಶಾಸನ ಹೆಬ್ಬಯ್ಯನಾಯಕನಿಗೆ ಸಂಬ0ಧಿಸಿದ ವಿವರಣೆ ಹೊಂದಿದೆ.
ಶಿರಸಂಗಿ ಕಾಳಿಕಾ ಮಾತೆಯ ದೇವಾಲಯ ಆವರಣದಲ್ಲಿ ಹಬ್ಬೇಶ್ವರ ದೇವಾಲಯ, ಕಲ್ಮೇಶ್ವರ ದೇವಾಲಯ, ಬೈರವೇಶ್ವರ ದೇವಾಲಗಳಲ್ಲಿ ಕಂಡು ಬರುವ ಗಣೇಶ, ಷಣ್ಮುಖ, ಉಮಾಮಹೇಶ್ವರ, ಕಾಳಬೈರವ, ಚನ್ನಬೈರವ, ಸಪ್ತಮಾತೃಕೆಯರು, ಸೂರ‍್ಯ ನಾರಾಯಣ ಶಿಲ್ಪಗಳು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ವೈಭವಕ್ಕೆ ಹಿಡಿದ ಕೈಗನ್ನಡಿಯಾಗಿವೆ.
ಕಲ್ಮೇಶ್ವರ ದೇವಾಲಯ ಗರ್ಭಗೃಹ, ಅರ್ಧಮಂಟಪ, ನವರ0ಗ ಮತ್ತು ಮುಖಮಂಟಪ ಹೊಂದಿದ್ದು ಈ ದೇವಾಲಯದಲ್ಲಿ ಶಿವಲಿಂಗವಿದ್ದು ಇಳಿಜಾರಾದ ಮೇಲ್ಚಾವಣೆ ಈ ದೇವಾಲಯದ ವಿಶೇಷ. ದೇವಾಲಯ ಪಕ್ಕದಲ್ಲಿ ಕ್ರಿ.ಶ.1145 ರ ಶಿಲಾಶಾಸನವಿದೆ. ಇವುಗಳಲ್ಲದೇ ಭೀಮರತಿ ಹೊಂಡ, ಮೌನೇಶ್ವರ ದೇವಾಲಯ, ಖಡ್ಗತೀರ್ಥ, ರಾಮಲಕ್ಷö್ಮಣರ ದೇವಾಲಯಗಳು ಕೂಡ ಇಲ್ಲಿನ ಪ್ರಮುಖ ಆಕರ್ಷಣೆ.
ವಿಶ್ವಕರ್ಮ ವಂಶಜ, ಕಾಶ್ಯಪ ಗೋತ್ರಜರಾದ ವಿಭಾಂಡಕ ಮುನಿಯ ಮಗನಾದ ಋಷ್ಯಶೃಂಗ ಮುನಿ. ಇವರು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿರಲು ನಲುಂದಾಸುರ, ಬೆಟ್ಟಾಸುರ, ಹಿರಿಕು0ಬಾಸುರ, ಚಿಕ್ಕು0ಬಾಸುರ, ನರು0ದಾಸುರ ಎಂಬ ಪಂಚ ರಾಕ್ಷಸರು ಮುನಿಗಳ ತಪಸ್ಸಿಗೆ ಭಂಗವನ್ನು0ಟು ಮಾಡಲು ಋಷಿಗಳು ಆದಿಶಕ್ತಿ ಜಗನ್ಮಾತೆಯನ್ನು ಸ್ಮರಿಸಲು ಕಾಳಿಕಾದೇವಿ ಅವತಾರದಲ್ಲಿ ದೇವಿ ಪ್ರತ್ಯಕ್ಷಳಾಗಿ ಐದು ಜನ ರಾಕ್ಷಸರನ್ನು ಕೊಂದು ಅವರ ರುಂಡಗಳನ್ನು ಕಡಿದು ಆಕಾಶದತ್ತ ತೂರಿದಳಂತೆ. ಆಗ ಋಷ್ಯಶೃಂಗ ಮುನಿಗಳ ಕೋರಿಕೆಯಂತೆ ಐದು ರುಂಡಗಳನ್ನು ಮಾತೆಯು ತನ್ನ ಕೊರಳಲ್ಲಿ ಧರಿಸಿ ಈ ಸ್ಥಳದಲ್ಲಿ ನೆಲೆಸಿದಳು ಎಂಬುದು ಪುರಾಣ ಐತಿಹ್ಯ.
ಇನ್ನು ರಾಮಾಯಣಕ್ಕೆ ಸಂಬ0ಧಿಸಿದ0ತೆ ರಘುವಂಶದ ಚಕ್ರವರ್ತಿ ದಶರಥನು ಅನೇಕ ವರ್ಷಗಳ ಕಾಲ ಮಕ್ಕಳಾಗದೇ ಇದ್ದಾಗ ಯಜ್ಞಯಾಗಾದಿಗಳನ್ನು ಮಾಡುವ ಸಂದರ್ಭದಲ್ಲಿ ಋಷ್ಯಶ್ರಂಗ ಮುನಿಗಳನ್ನು ಆಹ್ವಾನಿಸಿ ಆ ಯಾಗಕ್ಕೆ ಅಗ್ನಿಹೋತ್ರಿಯಾಗಲು ಕೋರಿಕೆ ಸಲ್ಲಿಸಿದ್ದನಂತೆ,ಇದರ ಕುರುಹಾಗಿ ಲಂಕಾಸುರನ ಸಂಹರಿಸಿ ಅಯೋದ್ಯಯಿಂದ ರಾಮನು ಮರಳಿ ಬರುವಾಗ ಇಲ್ಲಿಗೆ ಆಗಮಿಸಿ ಕಾಳಿಕಾ ಮಾತೆಯನ್ನು ಪೂಜಿಸಿ ಋಷ್ಯಶ್ರಂಗ ಮುನಿಗಳ ಆಶೀರ್ವಾದ ಪಡೆದ ಬಗ್ಗೆ ಕೂಡ ಉಲ್ಲೇಖಗಳು ಪುರಾಣದಲ್ಲಿ ಬರುತ್ತವೆ,
ದೇವಾಲಯ ಗರ್ಭಗೃಹದಲ್ಲಿ ಕಂಡು ಬರುವ ದೇವಿ ಕಾಳಿಕಾಮಾತೆಯ ವಿಗ್ರಹವು ೯ ಅಡಿ ಎತ್ತರವಿದ್ದು ಸ್ವರ್ಣ ರೇಖಾಂಕಿತ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತನೆ ಹೊಂದಿದ್ದು,ಬಲಗೈಯಲ್ಲಿ ಖಡ್ಗ,ತ್ರಿಶೂಲ,ಬಾಕು,ಎಡಗೈಯಲ್ಲಿ ಡಮರು,ಸರ್ಪ,ಖೇಟಕ ಮತ್ತು ಪಾನ ಪಾತ್ರೆ ಹೊಂದಿದ್ದು ಆಕರ್ಷಕವಾಗಿದ್ದು,ಪೂಜಾ ಸಮಯದಲ್ಲಿ ದೇವಿ ತನ್ನದೇ ಆಭರಣಗಳ ಮೂಲಕ ಶೋಭಿಸುತ್ತಾಳೆ. ಕಾಳಿಕಾ ದೇವಿಯ ಮೂರ್ತಿ ಆಕರ್ಷಕವಾಗಿದೆ, ಪ್ರತಿ ವರ್ಷ ನಡೆಯುವ ಯುಗಾದಿಗೆ ದೇವಿಯ ಪಲ್ಲಕ್ಕಿ ಉತ್ಸವ ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತದೆ.