* ಶ್ರೀನಿವಾಸ ಮೂರ್ತಿ ಎನ್ ಎಸ್
ದೇವಾಲಯಗಳ ಪರಂಪರೆಯನ್ನ ಹೊಂದಿರುವ ನಾಡಿನಲ್ಲಿ ಹಲವು ದೇವಾಲಯಗಳು ನಿರ್ಮಾಣಗೊಂಡಿದೆ. ಇದರಲ್ಲಿ ಹಲವು ದೇವಾಲಯಗಳು ಇತಿಹಾಸದ ಕೊಂಡಿಯನ್ನ ಹೊತ್ತಿದ್ದರೆ ಕೆಲವು ದೇವಾಲಯಗಳಿ ಪೌರಾಣಿಕ ಐತಿಹ್ಯ ಹೊಂದಿದೆ. ಈ ಎರಡನ್ನೂ ಬೆಸೆದ ದೇವಾಲಯವೊಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆಯಲ್ಲಿದೆ.
ಇತಿಹಾಸ ಪುಟದಲ್ಲಿ ಅಗ್ರಹಾರವಾಗಿದ್ದ ಈ ಗ್ರಾಮವನ್ನು ಮೃಗವಸೆ – ಮೃಗಸೆ – ಮರುವಾಸೆ – ಮೊರಶೆ ಎಂದು ಕರೆಯಲಾಗಿದೆ. ಇಲ್ಲಿ ಕಲ್ಯಾಣಿ ಚಾಲುಕ್ಯರ ಮೂರನೇ ತೈಲಪ ತ್ರಿಭುವನಮಲ್ಲನ ಶಾಸನವಿದೆ. 1060 ರಲ್ಲಿ ಈ ದೇವಾಲಯ ಇವರ ಕಾಲದಲ್ಲಿ ದೇವಾಲಯ ನಿರ್ಮಾಣವಾಗಿದೆ, ಸುಮಾರು 11 ನೇ ಶತಮಾನಕ್ಕೆ ಸೇರಿದ ಈ ಶಾಸನದಲ್ಲಿ ಸಾಂತರಸರ ಉಲ್ಲೇಖವಿದೆ. 1728 ರಲ್ಲಿ ಕೆಳದಿಯ ಅರಸ 3 ನೇ ಸೋಮಶೇಖರ ನಾಯಕರ ಕಾಲದಲ್ಲಿ ನವೀಕರಣಗೊಂಡಿದೆ. ಗರ್ಭಗುಡಿ ಹೊರತು ಪೊಡಿಸಿ ದೇವಾಲಯದ ಉಳಿದ ಭಾಗಗಳು ಇವನ ಕಾಲದ ಸೇರ್ಪಡೆ. ಇನ್ನು ನಂತರ ಕಾಲದಲ್ಲಿ ಅರಮನೆ ಕೇರಿ ಮನೆತನದವರ ಅಧೀನದಲ್ಲಿ ಈ ಭಾಗ ಇತ್ತು.
ಸ್ಥಳೀಯ ಪುರಾಣದಂತೆ ರಾಮ ತನ್ನ ವನವಾಸದ ಕಾಲದಲ್ಲಿ ಇಲ್ಲಿನ ತುಂಗಾ ನದಿಯ ತೀರದಲ್ಲಿ ಕುಟೀರವನ್ನ ನಿರ್ಮಿಸಿ ವಾಸವಾಗಿರುತ್ತಾನೆ. ಇಲ್ಲಿ ತಪೋನಿರತರಾಗಿದ್ದ ಹಲವು ಮುನಿಗಳಿಗೆ ತೊಂದರೆ ನೀಡುತ್ತಿದ್ದ ರಾಕ್ಷಸರನ್ನು ಸಂಹರಿಸಿ ಸಹಾಯ ಮಾಡುತ್ತಿರುತ್ತಾನೆ. ಈ ಸಮಯದಲ್ಲಿ ರಾವಣ ಸೀತೆಯನ್ನ ಅಪಹರಿಸಲು ಮಾರೀಚನನ್ನು ಕೋರುತ್ತಾನೆ. ಮಾರೀಚನು ಮಾಯ ಜಿಂಕೆಯ ರೂಪದಲ್ಲಿ ಇಲ್ಲಿ ಕಾಣಿಸಿಕೊಂಡಾಗ ಸೀತೆಯ ಆಶಯದಂತೆ ಲಕ್ಷಣನನ್ನು ರಕ್ಷಣೆಗೆ ನಿಯೋಜಿಸಿ ಭೇಟೆಯಾಡಲು ತೆರಳುತ್ತಾನೆ. ಬಹುದೂರ ಹೋದ ಜಿಂಕೆಯನ್ನ ಬೆನ್ನಟ್ಟಿ ಇಲ್ಲಿನ ಭ್ರಾಹ್ಮಿ ನದಿಯ ತೀರದಲ್ಲಿ ಜಿಂಕೆಯನ್ನ ಸಂಹರಿಸುತ್ತನೆ. ಅವನ ಹೄದಯದಲ್ಲಿದ್ದ ಶಿವಲಿಂಗವನ್ನು ಇಲ್ಲಿಯೇ ಸ್ಥಾಪಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗೆ ಮೃಗವಧೆಯಾದ ಜಾಗವಾದ ಕಾರಣ ಈ ಸ್ಥಳಕ್ಕೆ ಅದೇ ಹೆಸರು ಬಂದಿದೆ. ಇನ್ನು ಶಿವಲಿಂಗವನ್ನು ಶ್ರೀ ಉಮಸಹಿತ ಮಲಹಾನಿಕರೇಶ್ವರ ಎಂದು ಕರೆಯುವ ರೂಡಿ ಇದೆ.
ಇನ್ನು ದೇವಾಲಯ ಗರ್ಭಗುಡಿ, ಸುಖನಾಸಿ, ನವರಂಗ (ಮುಚ್ಚಿದ ಪಡಸಾಲೆ) ಹಾಗು ಮುಖಮಂಟಪ ಹೊಂದಿದ್ದು ಏಕಕೂಟ ದೇವಾಲಯ ಗ್ರಾನೈಟ್ ಶಿಲೆಯಿಂದ ನಿರ್ಮಿತವಾದ ಈ ದೇವಾಲಯ ಇಂಡೋ ಇಸ್ಮಾಮಿಕ್ ಶೈಲಿಯಲ್ಲಿದೆ. ಗರ್ಭಗುಡಿಯಲ್ಲಿ ಮಲ್ಲಿಕಾರ್ಜುನ ಎಂದು ಕರೆಯುವ ಶಿವಲಿಂಗವಿದೆ. ನವರಂಗದಲ್ಲಿನ ವಿತಾನದಲ್ಲಿನ ಅಷ್ಟದಿಕ್ಪಾಲಕರ ಕೆತ್ತೆನೆ ಇದೆ. ಇನ್ನು ಇಲ್ಲಿ ನಾಲ್ಕು ಕಂಭಗಳಿದ್ದು ಮಧ್ಯದಲ್ಲಿ ಬಸವಣ್ಣನಿ ಶಿಲ್ಪವಿದೆ. ದೇವಾಲಯಕ್ಕೆ ಡ್ರಾವಿಡ ಮಾದರಿಯ ಶಿಖರವಿದ್ದು ಮಂಟಪ ಹಾಗು ಪಡಸಾಲೆಗಳು ಕೆಳದಿ ಅರಸರ ಶೈಲಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿನ ಕಂಭಗಳಲ್ಲಿನ ಶ್ರೀ ರಾಮ ಹಾಗು ಆಂಜನೇಯನ ಕೆತ್ತೆನೆ ಇದ್ದು ಸುಂದರ ದ್ವಾರ ಪಾಲಕರ ಕೆತ್ತೆನೆ ಸಹ ನೋಡಬಹುದು.
ಇನ್ನು ದೇವಾಲಯಕ್ಕೆ ಪ್ರತಿ ವರ್ಷ ಫಾಲ್ಕುಣ ಮಾಸದಲ್ಲಿ 5 ದಿನದ ರಥೋತ್ಸವ ನಡೆಯಲಿದೆ. ಇನ್ನು ಸನಿಹದಲ್ಲಿ ಶ್ರೀ ಶಂಕರೀಶ್ವರ ದೇವಾಲಯವಿದ್ದು ಇಲ್ಲಿ ಅರಮನೆಯ ಅವಶೇಷಗಳನ್ನ ನೋಡಬಹುದು. ಮೊದಲು ಇಲ್ಲಿ ಕದಂಬರ ಕಾಲದ ನರಸಿಂಹನ ವಿಗ್ರಹವಿತ್ತು. ಆದರೆ ಇದರಿಂದ ತೊಂದರೆಯಾದ ಕಾರಣ ಇದನ್ನ ನೆಲದಲ್ಲಿ ಹುಗಿದು ಕಂಭ ಸ್ಥಾಪಿಸಲಾಗಿದೆ. ಈಗ 1955 ರಲ್ಲಿ ಕಾರ್ಕಳದ ಶ್ರೀ ರಂಜಾಳ ಗೋಪಾಲಕೃಷ್ಣ ಶೈಣೈ ಕೆತ್ತಿದ ನರಸಿಂಹ ವಿಗ್ರಹ ಸ್ಥಾಪಿಸಲಾಗಿದೆ. ಇನ್ನು ಸನಿಹದಲ್ಲಿ ಆಂಜನೇಯನ ದೇವಾಲಯವಿದೆ.
ತಲುಪವ ಬಗ್ಗೆ : ಮೃಗವಧೆ ತೀರ್ಥಹಳ್ಳಿಯಿಂದ ಸುಮಾರು 26 ಕಿ ಮೀ ದೂರದಲ್ಲಿ ಪ್ರಶಾಂತ ವಾತವರಣದಲ್ಲಿದೆ. ಕೊಪ್ಪದಿಂದು ಸುಮಾರು 23 ಕಿ ಮೀ ದೂರದಲ್ಲಿದೆ.