* ನರಹರಿ ಸುಮಧ್ವ
ತಿಳಿವು ಎಂಬುದು ವಿಕಸಿತವಾದ ಜೀವಗಳ ತಹತಹಿಕೆ. ವಿಕಾಸದ ಏಣಿಯಲ್ಲಿ ಉಳಿದವರಿಗಿಂತ ಎತ್ತರಕ್ಕಿರುವ ಮಾನವನಾದರೋ ತಿಳಿವಿಗಾಗಿ ಅವಿರತವಾಗಿ ತಡಕಾಡುವ ಜೀವಿ. ತಿಳಿವನ್ನು ಸನಾತನ ಭಾರತದಲ್ಲಿ ವೇದವೆಂದು ಕರೆಯಲಾಗಿದೆ. ಈ ವೇದವೇ ಮುಂದೆ ತಿಳಿವಿನ ಹಲವಾರು ಕವಲುಗಳಲ್ಲಿ ಬೇರೆ ಬೇರೆ ಹೆಸರಿನಿಂದ ಹರವಿಕೊಳ್ಳುತ್ತದೆ.
ಮಹರ್ಷಿ ಪರಾಶರರ ಸಂತಾನವಾದ ಕೃಷ್ಣದ್ವೈಪಾಯನರು ಬರುವವರೆಗೂ ಈ ತಿಳಿವಿನ ರಾಶಿ ಅಥವಾ ವೇದ ಅನ್ನುವುದು ವಿಷಯ ಮತ್ತು ಸ್ವರೂಪಗಳಲ್ಲಿಭೇದವಿದ್ದರೂ ಒಂದೇ ಎಂದು ಪರಿಗಣಿತವಾಗಿತ್ತು. ಕೃಷ್ಣದ್ವೈಪಾಯನರು ಕಡಲಿನಷ್ಟು ವಿಸ್ತಾರವಾದ ಆ ತಿಳಿವಿನ ಮೊತ್ತವನ್ನು ವಿಷಯ ಮತ್ತು ಸ್ವರೂಪಗಳಿಗನುಗುಣವಾಗಿ ವಿಭಾಗಿಸುತ್ತಾರೆ. ವಿಭಾಗಿಸುವ ಸಂಗತಿಯನ್ನು ಸಂಸ್ಕೃತದಲ್ಲಿ ‘ವ್ಯಾಸ’ ಎನ್ನುತ್ತಾರೆ.
ವೇದಗಳನ್ನು ಅವುಗಳ ಸ್ವರೂಪಕ್ಕನುಸಾರವಾಗಿ ವಿಭಾಗ ಮಾಡಿದ್ದರಿಂದ ಕೃಷ್ಣದ್ವೈಪಾಯನರು ವೇದವ್ಯಾಸರಾದರು. ಇಷ್ಟೇ ಆಗಿದ್ದರೆ ವೇದವ್ಯಾಸರನ್ನು ವಿಷ್ಣುರೂಪರೆಂದು ಕರೆದು ಗುರುತರವಾದ ಗುರುವೆಂದು ಪೂಜಿಸಲಾಗುತ್ತಿರಲಿಲ್ಲವೇನೋ. ಆದರೆ ವೇದಗಳನ್ನು ವಿಭಾಗ ಮಾಡಿದಲ್ಲಿನಿಂದ ಶುರುವಾದ ವೇದವ್ಯಾಸರ ಈ ಅರಿವಿನ ಯಜ್ಞವು ಅಷ್ಟಕ್ಕೆ ನಿಲ್ಲದೆ ಲೋಕಹಿತಕ್ಕಾಗಿ ನಾನಾ ಬಗೆಯಲ್ಲಿ ನಡೆಯಿತಲ್ಲ, ಅದು ಅವರನ್ನು ಅದ್ವಿತೀಯರನ್ನಾಗಿಸಿತು.
ಗುರುವು ಬರಿಯ ತಿಳಿವಿನ ಮೊತ್ತವಲ್ಲ, ಆತ ತಾಯಿಯಂತೆ ಪ್ರೇಮಮೂರ್ತಿಯೂ ಆಗಿರುತ್ತಾನೆ. ವೇದವ್ಯಾಸರು ಇವೆರಡರ ಸಾಕಾರರೂಪ.
‘ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್’ ಅನ್ನುವ ಮಾತೊಂದು ಸಂಸ್ಕೃತದಲ್ಲಿದೆ. ಅದರ ಅರ್ಥವಿಷ್ಟೆ, ಇತಿಹಾಸ ಮತ್ತು ಪುರಾಣಗಳ ಸಹಾಯದಿಂದ ವೇದಾರ್ಥವನ್ನು ವಿಸ್ತಾರವಾಗಿ, ಆಳವಾಗಿ, ತಿಳಿಸಬೇಕು ಅನ್ನುವುದು. ಅಂದರೆ, ಇತಿಹಾಸ (ರಾಮಾಯಣ ಮತ್ತು ಮಹಾಭಾರತಗಳು) ಹಾಗೂ ಪುರಾಣಗಳಿರುವುದೆಲ್ಲ ವೇದಾರ್ಥವನ್ನು ಇನ್ನಷ್ಟು ವಿಶದಗೊಳಿಸಿ, ಲೋಕೋತ್ತರವಾದ ಉದಾಹರಣೆಗಳ ಮೂಲಕ ಸಾಮಾನ್ಯಜನರಿಗೆ ತಲುಪಿಸುವುದಕ್ಕೇ ಆಗಿದೆ.
ವೇದವ್ಯಾಸರ ಹಿರಿಮೆಯೇನೆಂದರೆ ಇತಿಹಾಸಗಳಲ್ಲಿ ಒಂದಾದ ಮಹಾಭಾರತವನ್ನು ರಚಿಸಿದವರೂ ಅವರೇ, ವೇದಾರ್ಥ ವಿವರಣೆಗಾಗಿ ಇರುವ ಪುರಾಣಗಳನ್ನೆಲ್ಲ ರಚಿಸಿದವರೂ ಅವರೇ. ಹದಿನೆಂಟು ಮಹಾಪುರಾಣಗಳು ಮತ್ತು ಹದಿನೆಂಟು ಉಪಪುರಾಣಗಳು ವ್ಯಾಸರ ಕೊಡುಗೆ! ಇವತ್ತಿನ ಮಾನವಜೀವನದ ಲೆಕ್ಕದಲ್ಲಿ ನೋಡುವಾಗ ವೇದವ್ಯಾಸರ ಎಲ್ಲ ಕೃತಿಗಳನ್ನು ಆಮೂಲಾಗ್ರವಾಗಿ ಅರ್ಥಮಾಡಿಕೊಳ್ಳುವುದಿರಲಿ, ಒಮ್ಮೆ ಸುಮ್ಮನೇ ಓದಿಮುಗಿಸುವುದೂ ದುಸ್ತರವಷ್ಟೆ. ಪೂರ್ಣ ಮನುಕುಲಕ್ಕೆ ಸಹಸ್ರಮಾನಗಳಷ್ಟು ಕಾಲ ಜ್ಞಾನಾನುಸಂಧಾನದ ದೀಕ್ಷೆ ಕೊಡಿಸಿದವರು ವೇದವ್ಯಾಸರು.
ಇದು ವಿದ್ವತ್ತಿನಿಂದ ಮಾತ್ರ ಸಾಧ್ಯವಾದುದಲ್ಲ; ಜ್ಞಾನ ಮತ್ತು ಕಾರುಣ್ಯಗಳಿಂದ ಸಾಧ್ಯವಾದ್ದು
ಲೋಕವೆಲ್ಲವೂ ತಿಳಿವಿನ ತಿಳಿಯನ್ನು ಸವಿಯಲೆಂಬ ವ್ಯಾಸರ ಕಳಕಳಿ ದೊಡ್ಡದು. ಇತಿಹಾಸ ಪುರಾಣಗಳಿಂದಾಚೆಗೆ ಗಹನವಾದ ಬ್ರಹ್ಮಸೂತ್ರಗಳನ್ನು ಬರೆದವರೂ ವೇದವ್ಯಾಸರೇ. ಅವಂತೂ ಬ್ರಹ್ಮವನ್ನು ಅರಿಯಲು ಹೊರಟವರಿಗೆ ಮಾರ್ಗದರ್ಶಿಸೂತ್ರಗಳೇ ಸರಿ. ದ್ವೈತಾದ್ವೈತ ವಿಶಿಷ್ಟಾದ್ವೈತ ಸಿದ್ಧಾಂತಗಳೆಲ್ಲ ಆತುಕೊಂಡಿದ್ದು ಈ ಬ್ರಹ್ಮಸೂತ್ರಗಳು ತೋರಿಸಿದ ದಾರಿಯನ್ನೇ.
ಹೀಗೆ, ಪಂಡಿತ ಪಾಮರಾದಿಯಾಗಿ ಪೂರ್ಣ ಮಾನವಕುಲದ ಬುದ್ಧಿ ಮತ್ತು ಭಾವಗಳನ್ನು ಸೋಕಿದವರು ವೇದವ್ಯಾಸರು. ಜ್ಞಾನ, ಕಾರುಣ್ಯ ಮತ್ತು ಕಲ್ಯಾಣಬುದ್ಧಿಯ ಸಮಾಗಮದಿಂದಾಗಿ ವ್ಯಾಸರು ಅಸಮವಾದ ಮಹತ್ತ್ವವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿಯೇ ವೇದವ್ಯಾಸರನ್ನು ‘ಗುರು’ ಎಂದು ಪೂಜಿಸಲಾಗುತ್ತದೆ. ‘ಗುರು‘ ಎನ್ನುವ ಸಂಸ್ಕೃತ ಪದಕ್ಕೆ ಮಹತ್ತಾದ್ದು, ದೊಡ್ಡದು ಎಂಬ ಅರ್ಥವಿದೆ. ಜ್ಞಾನ ಮತ್ತು ಜ್ಞಾನದಾನದ ವಿಚಾರದಲ್ಲಿ ಕಷ್ಣದ್ವೈಪಾಯನರಷ್ಟು ವಿಶಾಲವಾದ ಇನ್ನೊಂದು ವ್ಯಕ್ತಿತ್ವ ಇಲ್ಲದ್ದರಿಂದಲೇ ಅವರು ಗುರೂಣಾಂ ಗುರುವೇ ಹೌದು.
ಆಷಾಢಮಾಸದ ಹುಣ್ಣಿಮೆಯಂದು ಕೃಷ್ಣದ್ವೈಪಾಯನರ ಅವತಾರವಾಯಿತೆಂದೇ ಆ ದಿನವನ್ನು ‘ವ್ಯಾಸಪೂರ್ಣಿಮೆ’ ಎಂದು ಆಚರಿಸುತ್ತೇವೆ. ಅರಿವಿನ ರಾಶಿಯ ಹಿರಿದಾದ ಗ್ರಾಸವನ್ನು ಮನುಕುಲವೆಂಬೋ ತನ್ನ ಶಿಷ್ಯವೃಂದವೆಲ್ಲ ಉಣ್ಣುವುದಕ್ಕೆ ಅನುವಾಗುವಂತೆ ನಾಲ್ಕು ತುತ್ತುಗಳನ್ನಾಗಿ ವಿಭಾಗಿಸಿದ ದಿನವೂ ಆಷಾಢಪೂರ್ಣಿಮೆಯೇ ಆದ ಕಾರಣ ಅದನ್ನು ಗುರುಪೂರ್ಣಿಮೆಯೆಂದೂ ಕರೆಯುತ್ತೇವೆ. ವೇದವ್ಯಾಸರೆಂಬ ಪರಮಗುರುವಿನ ಕಾರುಣ್ಯಬುದ್ಧಿಯು ಅಷ್ಟಕ್ಕೇ ನಿಲ್ಲದೆ, ತಿಳಿವನ್ನು ಕಾವ್ಯ–ಪುರಾಣಗಳೆಂಬ ಮೂಲಕ ಇನ್ನಷ್ಟು ರಸವತ್ತಾಗಿಸುವ, ರುಚಿಪೂರ್ಣವಾಗಿಸುವ ಮಾತೃಮಮತೆಯನ್ನು ತೋರಿದ್ದರಿಂದಾಗಿ ಅವರನ್ನು ಗುರುವೆಂದೇ ಪೂಜಿಸಲಾಗುತ್ತದೆ.