- ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರು
ಕುಕ್ಕೆ ಸುಬ್ರಹ್ಮಣ್ಯ ಮಠ
ಭಗವಂತ ಈ ಜಗತ್ತಿನ ರಕ್ಷಣೆಗೋಸ್ಕರ ಮತ್ತು ಧರ್ಮ ಹಾನಿಯಾಗಿ ಅಧರ್ಮ ತಾಂಡವವಾಡುವ ಸಂದರ್ಭ ಬಂದಾಗಲೆಲ್ಲ ಅವತಾರ ಮಾಡಿದ್ದಾನೆ. ಅಂತಹ ಅವತಾರಗಳಲ್ಲಿ ನರಸಿಂಹ ಅವತಾರವೂ ಕೂಡಾ ಒಂದು ಪ್ರಮುಖ ಅವತಾರ. ಈ ಪ್ರಪಂಚದಲ್ಲಿ ಅನೇಕ ಮನುಷ್ಯರು, ನಾಸ್ತಿಕರು ಅಂದುಕೊAಡಿದ್ದಾರೆ ದೇವರು ಬಹಳ ದೊಡ್ಡ ಸಂಗತಿ ಏನಲ್ಲ. ನಮ್ಮಂತೆಯೇ. ನಾವೆಲ್ಲಾ ಹೇಗೆ ನಮ್ಮ ತಂದೆ ತಾಯಿಗಳಿಂದ ಜನ್ಮ ತಳೆದಿದ್ದೇವೆಯೋ ಹಾಗೆಯೇ ಭಗವಂತ ಅವತಾರ ತಳೆದಾಗಲೂ ಎಂದು. ಶ್ರೀರಾಮ ಶ್ರೀಕೃಷ್ಣ ಅವತಾರ ತಳೆದಾಗಲೂ ಹಾಗೆಯೇ ಎಂದು ಭಾವಿಸಿದ್ದಾರೆ.
ಹಾಗಾಗಿ ಭಗವಂತ ಅನ್ನುವುದು ವಿಶಿಷ್ಠವಾದ ಸಂಗತಿ ಏನಲ್ಲ ಎಂಬ ಕಲ್ಪನೆಯೊಂದಿಗೆ ಅಧರ್ಮ ಮಾಡಿದಾಗ ಅಂತಹವರಿಗೂ ಭಗವಂತ ತನ್ನ ಅಸ್ತಿತ್ವವನ್ನು ತಿಳಿಸಿಕೊಡುವುದಕ್ಕೋಸ್ಕರ ಭಗವಂತ ನರಸಿಂಹ ಅವತಾರವೆತ್ತುತ್ತಾನೆ. ತಾನು ತಂದೆ ತಾಯಿಗಳನ್ನು ಹೊಂದಿಲ್ಲ, ನಾನೇ ಜಗತ್ತಿನ ತಂದೆತಾಯಿ ಎಂದು.
ನನಗೆ ತಂದೆ ತಾಯಿ ಇಲ್ಲ ಎಂದು ಹೇಳುವುದಕ್ಕಾಗಿಯೇ ಒಂದು ಜಡವಾದ ಕಂಬದಿ0ದ ಭಗವಂತ ಆವಿರ್ಭವಿಸಿದ. ಈ ಮೂಲಕವಾಗಿ ಭಗವಂತ ಎಲ್ಲೆಡೆ ತುಂಬಿದವನು ಮತ್ತು ಅಸಾಧಾರಣವಾದ ಸಾಮರ್ಥ್ಯ ಉಳ್ಳವನು ಎಂದು ತಿಳಿಸಿಕೊಟ್ಟ.
ತನಗೆ ಮನುಷ್ಯನಿಂದ ಮರಣ ಬರಬಾರದು, ಪ್ರಾಣಿಗಳಿಂದ ಮರಣ ಬರಬಾರದು, ಒಳಗೂ ಅಲ್ಲ, ಹೊರಗೂ ಅಲ್ಲ, ಹಗಲಿನಲ್ಲಿ ಅಲ್ಲ, ರಾತ್ರಿಯಲ್ಲೂ ಅಲ್ಲ ಎಂದು ಹೇಳಿ ಅತ್ಯಂತ ಬುದ್ಧಿವಂತಿಕೆಯಿ0ದ ವರವನ್ನು ಕೇಳಿದವನು ಹಿರಣ್ಯಕಶಿಪು. ಆ ಎಲ್ಲಾ ಸಾಧ್ಯತೆಗಳನ್ನು ಮೀರಿ ನಿಂತವನು ಭಗವಂತ ಆಗಿರುವುದರಿಂದ ಅವನು ಅಂತಹ ವಿಶಿಷ್ಟ ಅವತಾರವನ್ನು ತಾಳಿ ಮನುಷ್ಯನ ಕಲ್ಪನೆಗೆ ಅತೀತವಾದ ವ್ಯಕ್ತಿತ್ವ ತನಗೆ ಇದೆ ಎಂದು ತೋರಿಸಿಕೊಟ್ಟವನು ಲಕ್ಷ್ಮೀ ನರಸಿಂಹ ಅಥವಾ ಉಗ್ರ ನರಸಿಂಹ.
ಅಂತಹ ನರಸಿಂಹ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಸ್ವಾತಿ ನಕ್ಷತ್ರದ ದಿನ ಅವತಾರ ಮಾಡಿದ್ದರಿಂದ ಆ ದಿನದಂದು ನರಸಿಂಹ ಜಯಂತಿಯನ್ನು ಆಚರಿಸುವ ಪದ್ಧತಿ ಇದೆ. ಹಾಗಾಗಿ ಎಲ್ಲೆಡೆ ನರಸಿಂಹ ಜಯಂತಿಯನ್ನು ಆಚರಣೆ ಮಾಡುವ ಸಂದರ್ಭ ಇದು. ನಮ್ಮ ಸುಬ್ರಹ್ಮಣ್ಯ ಮಠದಲ್ಲಿ ಕೂಡಾ ಮುಖ್ಯವಾದ ಆರಾಧ್ಯ ಮೂರ್ತಿ ನರಸಿಂಹ ಆದ್ದರಿಂದ ನಮ್ಮಲ್ಲಿ ನರಸಿಂಹ ಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡುತ್ತೇವೆ.
ಹೀಗೆ ನರಸಿಂಹ ದೇವರು ದುರಿತ ನಿವೃತ್ತಿಗೆ ಕಾರಣವಾದ ದೇವತೆ. ಪ್ರಹ್ಲಾದನ ಸಂಹಾರ ಮಾಡುವುದಕ್ಕಾಗಿ ಹಿರಣ್ಯಕಶಿಪು ಮಾಡಬಾರದ್ದನ್ನೆಲ್ಲಾ ಮಾಡಿದ. ಹಾವಿನಿಂದ ಕಚ್ಚಿಸಿದ, ಸಮುದ್ರಕ್ಕೆ ಕೈಕಾಲುಕಟ್ಟಿ ಎಸೆದ. ಮಾಡಬಾರದ್ದೇನಿದೆ? ಎಲ್ಲವೂ ಅಸಾಧ್ಯ ಎಂಬುದು ತಿಳಿದಾಗ ಕೊನೆಗೆ ಮಾಟ ಮಂತ್ರಗಳನ್ನು ಕೂಡಾ ಮಾಡಿಸಿದ. ಕೊನೆಗೆ ಅದನ್ನು ಮೀರಿ ನಿಂತವನು ಪ್ರಹ್ಲಾದ. ಅದು ನರಸಿಂಹನ ಕೃಪೆಯಿಂದ.
ಹಾಗಾಗಿ ನರಸಿಂಹನ ಅನುಗ್ರಹ ಇದ್ದರೆ ದುಃಖ ದುರಿತಗಳು, ವಿಷಪ್ರಾಶನಾದಿ ದೋಷಗಳೂ ಕೂಡಾ ಪರಿಹಾರ ಆಗುತ್ತವೆ, ಸ್ಥಳದಲ್ಲಿ ಯಾವುದೇ ಅನಿಷ್ಟಗಳಿದ್ದರೂ ಅದನ್ನು ನರಸಿಂಹ ದೇವರು ಪರಿಹಾರ ಮಾಡುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಅಂತಹ ನರಸಿಂಹ ನಮ್ಮ ಅನೇಕ ಜನ್ಮಗಳ ದುರಿತಗಳನ್ನು ನಾಶ ಮಾಡತಕ್ಕಂತಹ ಸಮರ್ಥ ಅಧಿದೇವತೆ. ದುರಿತವನ್ನು ನಿವೃತ್ತಿ ಮಾಡು, ಸದ್ಬುದ್ಧಿಯನ್ನು ಕರುಣಿಸು ಎಂದು ನಾವೆಲ್ಲಾ ನರಸಿಂಹ ದೇವರಲ್ಲಿ ಪ್ರಾರ್ಥನೆ ಮಾಡುವ ಸಂದರ್ಭ ಇದು. ಆದ್ದರಿಂದ ಎಲ್ಲ ಭಗವದ್ಭಕ್ತರಿಗೆ ನರಸಿಂಹ ದೇವರ ವಿವಿಧ ರೂಪಗಳು, ಯೋಗನರಸಿಂಹ ಲಕ್ಷ್ಮೀ ನರಸಿಂಹ, ಉಗ್ರನರಸಿಂಹ ಭಗವಂತನ ನವರೂಪಗಳ ಅನುಗ್ರಹ ಆಗಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತೇವೆ.
ಶ್ರೀಮಠದಲ್ಲಿ ನರಸಿಂಹ ಜಯಂತಿ ಆಚರಣೆ
ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನಡೆಯುವ ಶ್ರೀ ನರಸಿಂಹ ಜಯಂತಿ ಮಹೋತ್ಸವವು ಈ ಬಾರಿ ಕೊರೊನ ಮಹಾವ್ಯಾಧಿಯ ಕಾರಣದಿಂದ ಸರಳವಾಗಿ ಜರಗಲಿರುವುದು.ಆ ದ್ದರಿಂದ ತಾವೆಲ್ಲರೂ ಇರುವ ಸ್ಥಳದಲ್ಲೇ ನರಸಿಂಹದೇವರನ್ನು ಪ್ರಾರ್ಥಿಸಿ ಶ್ರೀ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿ ಮಾಡಿದ್ದಾರೆ.
ಉತ್ಸವಗಳ ವಿವರ:
24/05/2021 ಶ್ರೀ ಪ್ಲವ ನಾಮ ಸಂವತ್ಸರದ ವೈಶಾಖ ಶುದ್ಧ 12/ 13 ಸೋಮವಾರ ವಸಂತ ದ್ವಾದಶಿ ಪ್ರಾತ:ಕಾಲ ಗಣ ಹೋಮ ಶ್ರೀ ನರಸಿಂಹ ಹೋಮ, ಶ್ರೀ ವೇದವ್ಯಾಸ ಜಯಂತಿ , ವಸಂತ ಪೂಜೆ
25/05/2021 ಶ್ರೀ ಪ್ಲವ ನಾಮ ಸಂವತ್ಸರದ ವೈಶಾಖ ಶುದ್ಧ14 ಮಂಗಳವಾರ ಶ್ರೀ ನರಸಿಂಹ ಜಯಂತಿ, ಪ್ರಾತ; ಕಾಲ ಶ್ರೀ ನರಸಿಂಹ ದೇವರ ಮಹಾಭಿಷೇಕ ವಸಂತ ಪೂಜೆ.
26/05/2021 ಶ್ರೀ ಪ್ಲವ ನಾಮ ಸಂವತ್ಸರದ ವೈಶಾಖ ಶುದ್ಧ 15 ಬುಧವಾರ ಪೂರ್ವಾಹ್ನ ವ್ಯಾಸಪೂರ್ಣಿಮಾ ವ್ಯಾಸ ಪೂಜೆ ವಸಂತ ಪೂಜೆ
27/05/2021 ಶ್ರೀ ಪ್ಲವನಾಮ ಸಂವತ್ಸರ ವೈಶಾಖ ಬಹುಳ 1 ಗುರುವಾರ ಅವಭೃತೋತ್ಸವ ವಸಂತ ಪೂಜೆ.