ಜಗದ ವೈರಾಗ್ಯದ ತವನಿಧಿ ಭಗವಾನ್ ಬುದ್ಧ

*ಟಿ.ಪಿ.ಉಮೇಶ್ , ಹೊಳಲ್ಕೆರೆ

2585 ವರ್ಷಗಳ ಹಿಂದೆ ನಮ್ಮ ನಿಮ್ಮಂತೆಯೇ ತಂದೆ ಶುದ್ಧೋದನ ಹಾಗೂ ತಾಯಿ ಮಾಹಾಮಾಯೆಯ ಗರ್ಭ ಸಂಜಾತನಾಗಿ ಗೌತಮನೆಂಬ ಅಭಿದಾನ ಹೊಂದಿ ಜನಿಸಿದವರು ಬುದ್ಧ ಮಹಾಶಯರು. ಅವರೇ ಮುಂದೆ ಸಮಸಮಾಜದ ನಿರ್ಮಾಣಕಾರರಾಗಿ ಏಷ್ಯಾದ ಬೆಳಕೆಂದು ವರ್ಣಿಸಲ್ಪಟ್ಟು ಜಗದ ವೈರಾಗ್ಯದ ತವನಿಧಿಯಾದವರು. ಲೋಕದ ಅಂಧಕಾರ ತೊಲಗಿಸುವ ಸೂತ್ರವಾದವರು. ಮಾನವರೆದೆಯ ಬೆಳಗುವ ಅರಿವಾದವರು. ವಿಶ್ವದ ಎಲ್ಲ ಜೀವಜಂತುಗಳ ಪ್ರೀತಿಗೆ ಪಾತ್ರರಾದವರು.

ರಾಜಕುಮಾರನಾಗಿ ಜನಿಸಿದ ಸಿದ್ಧಾರ್ಥ
ಅಂದಿನ ಅವರ ಹುಟ್ಟು ಕಾಲ ಸಂದರ್ಭಗಳು ಇಂದಿನಷ್ಟೂ ಸಮಾನತೆ ಸಹೋದರತೆ ನ್ಯಾಯದ ಸಮ ಸಮಾಜದ ಪರಿಕಲ್ಪನೆ ಹೊಂದಿರಲಿಲ್ಲ. ಗಣರಾಜ್ಯದಿ ಬಹುಸಂಖ್ಯಾತರ ಬಲದ ಮೇಲೆಯೋ, ಪಾಳಿ ಪದ್ಧತಿಯ ಮೇಲೆಯೋ, ಆಸ್ತಿ ಅಂತಸ್ತುಗಳ ಮೇಲೆಯೋ, ಒಂದಷ್ಟು ವರ್ಷಗಳ ಕಾಲ ತಮ್ಮ ವ್ಯಾಪ್ತಿಯ ಪಾಳಿಪಟ್ಟಿನ ನಾಡನ್ನು ಆಳುವ ಅಧಿಕಾರ ಪ್ರತಿಷ್ಠಿತ ಕುಟುಂಬಗಳಿಗೆ ದೊರೆಯುತ್ತಿತ್ತು. ಹಾಗೆ ಗೌತಮನ ಜನನದ ಸಂದರ್ಭದಲ್ಲಿ ಕಪಿಲವಸ್ತು ಗಣರಾಜ್ಯದ ಮಾಂಡಲಿಕರಾಗಿದ್ದವರು ಶುದ್ಧೋಧನನ ಪರಿವಾರದವರು. ಇವರು ಶಾಕ್ಯ ಕುಲವೆಂಬ ಬಹುಗಣ್ಯ ಮನೆತನದವರು. ಈಗಿನ ಸಂದರ್ಭದಲ್ಲಿ ಮೇಲು ವರ್ಗದವರು ಎನ್ನಬಹುದು. ವರ್ಣ ಆಧರಿತ ವ್ಯವಸ್ಥೆಯಲ್ಲಿ ಬ್ರಾಹ್ಮಣ್ಯದ ನಂತರದ ಕ್ಷತ್ರಿಯ ಕುಲಾಚಾರಗಳ ಪಾಲಿಸುವವರು. ಅಂದಮೇಲೆ ಗೌತಮನಿಗೆ ಹುಟ್ಟು ಬಡತನ ಇರಲಿಲ್ಲ. ಹಾಗೆಯೇ ಹುಟ್ಟುತ್ತಲೇ ರಾಜಕುಮಾರನೆಂಬ ಅಭಿಮಾನದ ಸಂಕೇತವನ್ನು ಧರಿಸಿದನು. ಮೊದಲ ಮಗನೆಂಬ ಸಂಭ್ರಮ ಮನೆ ಮಾಡಿತು ಅರಮನೆಯಲ್ಲು, ಗುರುಮನೆಯಲ್ಲು ಕಪಿಲವಸ್ತುವಿನಲ್ಲು.ರಾಜಕುಮಾರನಾಗಿ ಜನಿಸಿದ ಸಿದ್ಧಾರ್ಥ

ಸಿದ್ಧಿ ಪುರುಷನ ಜನನ
ಬುದ್ಧನ ಜನನದ ಕಾಲದಲ್ಲಿ ಕುಲಪುರೋಹಿತರಾಗಿದ್ದ ಅಸಿತ ಮಹಾ ಮುನಿಗಳು ದಿವ್ಯವಾದ ಸಂದೇಶದ ಲಕ್ಷಣಗಳನ್ನು ನಭೋ ಮಂಡಲದಿ ಗಮನಿಸಿದರು. ಆಕಾಶದಲ್ಲಿ ಮೋಡಗಳು ಬಹಳ ಉಲ್ಲಾಸದಿಂದ ಚಲಿಸುತ್ತಿರುವುದನ್ನು; ಅವು ಒಂದೇ ಮಾರ್ಗದ ಕಡೆಗೆ ಅದು ಕಪಿಲವಸ್ತುವಿನ ಕಡೆಗೆ! ಸುಖ ಕೋಮಲ ತಂಪು ಗಾಳಿಯು ಕಪಿಲವಸ್ತುವಿನ ಮಾರ್ಗದೆಡೆಗೇ ಬೀಸುತ್ತಿತ್ತು. ಗಿಡಮರಗಳು ರಾಜ್ಯದ ಕಡೆಗೆ ವಾಲಿಕೊಂಡು ವಂದಿಸುತ್ತಿರುವ0ತೆ ಗೋಚರಿಸಿದವು. ಪಕ್ಷಿ ಸಂಕುಲ ಮೃದು ಮಧುರ ಉಲ್ಲಾಸದಿ ಗಗನದಿ ನರ್ತಿಸುತ್ತ ಸಾಗುತ್ತಿದ್ದವು. ಕಾಡುಮೇಡುಗಳಲ್ಲಿ ಕಾಡು ಮೃಗಗಳ ಘರ್ಜನೆಯೂ ಸೌಮ್ಯವಾಗಿತ್ತು. ಸಮತೋಷಭರಿತವಾಗಿತ್ತು. ಇದೆಲ್ಲ ಶುಭ ಸೂಚನೆಗಳನ್ನು ಕಂಡ ಅವರು ಆ ತಕ್ಷಣ ಶುದ್ಧೋದನನ ಅರಮನೆಗೆ ಆಗಮಿಸಿದರು.

ಅಲ್ಲಿ ಅವರಿಗೆ ರಾಜನಿಗೆ ಗಂಡು ಮಗುವಿನ ಜನನದ ಸುದ್ಧಿ ತಿಳಿದು ಸಂತೋಷವಾಯಿತು. ಹಾಗೆಯೇ ಸಿದ್ಧಿ ಪುರುಷನೊಬ್ಬನ ಜನನವಾಗಿರುವ ಖಚಿತತೆಯು ದೊರಕಿತು. ಕೂಡಲೇ ಮಗುವನ್ನು ಕಾಣುವ ಹಂಬಲ ವ್ಯಕ್ತಪಡಿಸಿದ ಅಸಿತ ಮಹಾಮುನಿಗಳು ಶುದ್ಧೋದನನ ಬಳಿ ತಮ್ಮ ಬಯಕೆ ವ್ಯಕ್ತಪಡಿಸಿದರು. ರಾಜ ಮಗು ನಿದ್ರಿಸುತ್ತಿರುವುದಾಗಿ ಭಿನ್ನವಿಸಿಕೊಂಡನು. ಅಸಿತರು ‘ಇಲ್ಲ ಮಹಾರಾಜನ್, ಮಗು ನಿದ್ರಿಸುತ್ತಿಲ್ಲ, ಅವನು ಯೋಗಸಿದ್ಧಿಪುರುಷನೇ ಇರುವನು. ಸಕಲ ಪ್ರಕೃತಿಯೇ ಅವನ ಬರುವಿಕೆಯನ್ನು ಸ್ವಾಗತಿಸಿ ಎಚ್ಚೆತ್ತು ಶೋಭಿಸುತ್ತಿರುವಾಗ ಈ ಲೋಕದ ಕಾಯುವಿಕೆಗಾಗಿಯೇ ಬಂದಿರುವ ಅವ ಮಲಗಲು ಹೇಗೆ ಸಾಧ್ಯ?’ ಎಂದೊಡನೆ ಮಗುವಿನ ಅಳು ಅಂತಃಪುರದಿoದ ತೇಲಿಬಂತು. ಆ ಕೂಡಲೇ ಶುದ್ಧೋಧನ ಓಡಿ ಹೋಗಿ ಅಸೀಮ ಸಂಭ್ರಮದಿ0ದ ಮಗುವನ್ನು ಕೋಮಲವಾದ ವಸ್ತ್ರಗಳಿಂದ ಶೃಂಗರಿಸಿಕೊ0ಡು ತನ್ನ ತೋಳ್ತೆಕ್ಕೆಯಲ್ಲಿ ಅವುಚಿಕೊಂಡು ಕರೆ ತಂದನು. ಆ ದಿವ್ಯ ಮಗುವನ್ನು ನೋಡುತ್ತಲೇ ಆನಂದ ಭಾಷ್ಪ ನೇತ್ರನಾಗಿ, ತೇಜೋವಂತ ಮಗುವಿನ ಸುತ್ತ ಕೈ ಮುಗಿದು ಪ್ರದಕ್ಷಿಣೆ ಹಾಕಿ ಶುದ್ಧೊಧನನಿಗೆ ‘ರಾಜನ್ ಈ ಮಗು ಈ ಪ್ರಪಂಚದಲ್ಲಿಯೇ ಜನ್ಮ ತಳೆದಿರುವ ಒಂದು ಅದ್ಬುತ ಶಿಶು! ಮೂವತ್ತೆರಡು ಗುಣ ಲಕ್ಷಣಗಳ ಯೋಗ್ಯತೆ ಪಡೆದು ಹುಟ್ಟಿರುವ ಈ ಮಗುವಿನ ಭವಿಷ್ಯ ಅತ್ಯೋಜ್ವಲವಾಗಿದೆ! ಇವ ಒಂದು ಸದ್ಗೃಹಸ್ತನಾದರೆ ಲೋಕಮಾನ್ಯ ರಾಜಪ್ರಭುವಾಗಿ ಪ್ರಜೆಗಳ ಹಿತರಕ್ಷಣೆ ಮಾಡುವನು. ಒಂದು ವೇಳೇ ಸರ್ವಸಂಗ ಪರಿತ್ಯಾಗಿಯಾಗಿ ಅರಮನೆಯಿಂದ ಹೊರ ಹೊರಟರೆ ಪರಿಪೂರ್ಣತೆ ಸಾಧಿಸಿ ಬೋಧಿಸತ್ವ ಅಂದರೆ ಜ್ಞಾನೋದಯ ಪಡೆದು ಬುದ್ಧನಾಗಿ ಇಡೀ ಮಾನವ ಕುಲದ ದುಃಖ ಕಳೆವ ಉದ್ಧಾರಕನಾಗುವನು!’ ಎಂದು ಹೇಳಿ ಕಣ್ಣೀರುಗರೆಯ ಹತ್ತಿದನು. ಇದರಿಂದ ವಿಚಲಿತನಾದ ಶುದ್ಧೋಧನ ಮಹಾಮುನಿಗಳನ್ನು ದುಃಖಕ್ಕೆ ಕಾರಣ ಪ್ರಶ್ನಿಸಲು, ‘ರಾಜನ್ ಈ ಮಗುವಿನ ಆಯುಷ್ಯ ಸುದೀರ್ಘವಾಗಿದೆ, ಆದರೆ ನನ್ನ ಆಯುಷ್ಯ ಬೆಳೆದು ಅದಾಗಲೇ ತೀರಲು ಬಂದಿದೆ. ಈ ಮಗು ಖಂಡಿತ ಲೋಕಕಲ್ಯಾಣದ ಮಾರ್ಗ ಅನುಸರಿಸಿ ಸಂನ್ಯಾಸಿಯಾಗುವುದರಲ್ಲಿ ಸಂಶಯವಿಲ್ಲ! ಆದರೆ ಇವನಿಂದ ಬೋಧೆಗೊಳಗಾಗಿ ನನ್ನ ಭವನಾಶ ಮಾಡಿಕೊಳ್ಳುವ ಪುಣ್ಯ ನನಗಿಲ್ಲವೆಂದೇ ದುಃಖವಾಗುತ್ತಿದೆ!’ ಎಂದು ಮರುಗಿ ಮತ್ತೊಮ್ಮೆ ಮಗುವಿಗೆ ಸಾಷ್ಟಾಂಗ ನಮಸ್ಕರಿಸಿ ಹೊರಟು ಹೋದನು.

ಶುದ್ಧೋದನನ ಮನಸ್ಸನ್ನು ಕಲಕಿದ ಭವಿಷ್ಯವಾಣಿ
ಇತ್ತ ಶುದ್ಧೋದನ ಮಗುವಿನ ಉಜ್ವಲ ಭವಿಷ್ಯವಾಣಿ ಜೊತೆಗೆ ಸಂನ್ಯಾಸಿಯಾಗಿ ಹೋಗುವ ವಿಚಾರ ಮನಸ್ಸನ್ನು ಕಲಕಿತು. ಇದೇ ಸಂದರ್ಭದಲ್ಲಿ ಯೋಚನೆಗೂ ಅವಕಾಶ ಕೊಡದೆ ತಾಯಿ ಮಾಯಾದೇವಿ ಅನಾರೋಗ್ಯದಿಂದ ನಿಧನವಾದಳು. ಮಗು ಗೌತಮ ತಾಯಿ ಸಹೋದರಿ ಪ್ರಜಾಪತಿಯ ಮಡಿಲಿನಲ್ಲಿ ಬೆಳೆಯಬೇಕಾಯಿತು. ಚಿಕ್ಕಮ್ಮನ ಅಕ್ಕರೆಯಲ್ಲಿ ಬೆಳೆದ ಗೌತಮನನು ಪ್ರಜಾಪತಿ ಗೌತಮನೆಂದು ಗುರುತಿಸುವರು. ಇತ್ತ ತಂದೆ ಬೆಳೆಯುತ್ತಿದ್ದ ಗೌತಮನಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಮಾಡಿದನು. ಸುಖದಿಂದ ನೋಡಿಕೊಳ್ಳಲು, ವೈರಾಗ್ಯದ ಕನಸು ಸಹ ಬೀಳದಂತೆ ವ್ಯವಸ್ಥೆ ಮಾಡಿದನು. ಆದರೆ ಕಾಲಾನುಕಾಲ ರಾಜಪರಿವಾರದಲ್ಲಿ, ಮಂತ್ರಿಗೃಹದ ನ್ಯಾಯ ವಿಚಾರಣೆಗಳಲ್ಲಿ ಜನರ ನೋವು ಸಂಕಟ ಅನ್ಯಾಯಗಳ ಗಮನಿಸ ಹತ್ತಿದನು. ರಾಜಬೀದಿಯಿಂದ ದೂರದ ಗ್ರಾಮೀಣ ಭಾಗದ ಜನರ ನೊವು ಬವಣೆಗಳ ಕಂಡನು. ಸದಾ ಜನರು ತಮ್ಮ ಉಳಿವಿಗಾಗಿ ಅನ್ನಾಹಾರಗಳಿಗಾಗಿ ಪರದಾಡುವ ಪಡಿಪಾಟಲುಗಳ ಗಮನಿಸಿ ಮರುಕಗೊಂಡನು. ಎಲ್ಲರು ನೆಮ್ಮದಿ ಸುಖ ಸಂತೋಷದಿ0ದಿರಲು ಏಕೆ ಆಗುತ್ತಿಲ್ಲವೆಂದು ಏಕಾಂತದಿ ಧ್ಯಾನ ಮಗ್ನನಾಗುತ್ತಿದ್ದನು. ಇವನ ವ್ಯಾಕುಲತೆ ಹೋಗಲಾಡಿಲು ಶುದ್ಧೋದನ ಮುಂದೆ ಹರೆಯದಲ್ಲಿ ಯಶೋಧರೆಯೆಂಬ ಕುಲವಧುವಿನ ಜೊತೆ ವಿವಾಹ ಮಾಡಿಸಿ ರಾಜಕುಮಾರನ ಪಟ್ಟಕಟ್ಟಿ ಆಡಳಿತದಿ ನೆರವಾಗಲು ಬಳಸಿಕೊಳ್ಳಹತ್ತಿದನು. ವರ್ಷಕಾಲದಲ್ಲಿ ರಾಹುಲನ ಜನನವು ಆಯಿತು. ಆ ಸಂದರ್ಭದಲ್ಲಿಯೇ ಬಹಳ ಭೀಕರ ಬರಗಾಲದ ಪರಿಸ್ಥಿತಿಯು ರಾಜ್ಯದಲ್ಲಿ ತಲೆದೋರಿತು.
ಕಪಿಲವಸ್ತುವಿನ ಶಾಕ್ಯ ರಾಜ್ಯದ ಗಡಿಯಲ್ಲಿ ಹರಿಯುತ್ತಿದ್ದ ರೋಹಿಣಿ ನದಿಯ ಬತ್ತುವಿಕೆಯು ಆರಂಭವಾಯಿತು. ಆಗ ಶಾಕ್ಯರು ಸೈನ್ಯದೊಡನೆ ನದಿಗೆ ಅಡ್ಡಲಾಗಿ ಬೃಹತ್ ತಡೆಗೋಡೆ ನಿರ್ಮಿಸಿ ನೀರಿನ ಹರಿವನ್ನು ನಿಯಂತ್ರಿಸಿ ಸಂಗ್ರಹ ಕೋಠಿಯನ್ನಾಗಿ ಭದ್ರಪಡಿಸಿ ಕಾವಲು ನಿಂತರು. ಇದರಿಂದ ನದಿ ಪಾತ್ರದ ಕೆಳಗಿನ ರಾಜ್ಯದ ಕೋಲಿಯವರಿಗೆ ಸಂಕಷ್ಟವಾಯಿತು. ನೀರಿನ ಅಭಾವ ಅಲ್ಲಿಯೂ ತಲೆದೋರಿ ಶುದ್ಧೋದನನ ರಾಜ್ಯಕ್ಕೆ ದೂತರನ್ನು ಅಟ್ಟಿದರು. ಆದರೆ ಯಾವುದೇ ದೂತ ಸಂಧಾನ ಯಶಸ್ವಿ ಆಗಲಿಲ್ಲ. ಕೋಲಿ ರಾಜ್ಯಕ್ಕೆ ನೀರು ಹರಿಯಲಿಲ್ಲ. ದಂಡೆತ್ತಿ ಬಂದ ಕೋಲಿ ಸೈನಿಕರು ಶಾಕ್ಯರೊಡನೆ ಕಾದಾಡುತ್ತಾ ಭೀಕರ ರಕ್ತಪಾತವನ್ನೇ ಮಾಡಿದರು. ಆದರೆ ಯಾರ ಕಡೆಗು ಜಯ ದೊರೆಯದೆ ಬರೀ ಸಾವು ನೋವುಗಳ ಹಿಂಸಾ ವಾತಾವರಣ ಸೃಷ್ಟಿಯಾಯಿತು.
ಇದನ್ನೆಲ್ಲ ಕೂಲಂಕುಶ ಗಮನಿಸಿದ ಗೌತಮನು ತಂದೆಯ ರಾಜ ಸಭೆಯಲ್ಲಿ ‘ನೀರು ಪ್ರಕೃತಿಯ ವರ. ಅದು ಎಲ್ಲರಿಗೂ ಅವಶ್ಯ. ಹರಿವ ನೀರನ್ನು ನಿಯಂತ್ರಿಸುವುದು ತರವಲ್ಲ. ಅದನ್ನೇ ನಂಬಿದ ಕೆಳಪಾತ್ರದವರ ಜನರ ಸಂಕಷ್ಟಕ್ಕೆ ನಾವೀಗ ಕಾರಣರಾಗಿದ್ದೇವೆ. ಅವರಿಗೆ ಅಗತ್ಯ ನೀರು ಕೊಟ್ಟು ಜೀವರಕ್ಷಕರಾಗೋಣ.’ ಎಂದು ವಿಚಾರ ಮಂಡಿಸಿದನು. ಇದರಿಂದ ಕ್ರುದ್ಧರಾದ ಮಂತ್ರಿಮ0ಡಲದ ಸದಸ್ಯರು ಗೌತಮನ ಮೇಲೆ ಕೆಂಡಾಮ0ಡಲವಾದರು. ಕೋಲಿಯವರೊಡನೆ ಗುಪ್ತ ಒಪ್ಪಂದದ ಆರೋಪ ಹೊರಿಸಿದರು! ಇದಕ್ಕೆ ಕಾರಣ ಅವನ ತಾಯಿ ಮಹಾಮಾಯೆ ಹಾಗೂ ಚಿಕ್ಕಮ್ಮ ಪ್ರಜಾಪತಿ ಕೋಲಿ ರಾಜ್ಯದವರಾಗಿದ್ದದ್ದು! ಅಲ್ಲದೆ ಸಂಧಾನ ಅಂತ ಹೋದರೆ ಕೋಲಿಗೆ ಒಂದಷ್ಟು ನೀರು ಬಿಡಲೇಬೇಕೆಂಬ ವಿಚಾರವು ಮಂತ್ರಿಗಳ ಅಸಹನೆಗೆ ಕಾರಣವಾಗಿ, ರಾಜ ಶುದ್ಧೋಧನನ ಮೇಲೆಯೇ ಅನುಮಾನ ವ್ಯಕ್ತಪಡಿಸಿ ತಂದೆ ಮಗ ಸೇರಿಕೊಂಡು ಶಾಕ್ಯರನ್ನು ನಾಶಪಡಿಸುವ ಹುನ್ನಾರ ನಡೆಸಿರುವುದಾಗಿ ಆರೋಪಿಸಿ ರಾಜನ ಪದಚ್ಯುತಿಗೆ ಹೂಂಕರಿಸಿದರು. ಅಪಾಯದ ಸೂಚನೆ ಅರಿತ ಗೌತಮ ತನ್ನ ವಿಚಾರದಿಂದ ತಂದೆಗೆ ಮತ್ತು ತನ್ನ ಮನೆತನಕ್ಕೆ ತೊಂದರೆ ಆಗುವುದು ಬೇಡವೆಂದು ತೀರ್ಮಾನಿಸಿದನು. ‘ಇದು ನನ್ನೊಬ್ಬನ ವಿಚಾರ ಇದಕ್ಕೆ ನಾನೇ ಹೊಣೆ ಹೊರುವೆ. ನನಗೆ ಭವಿಷ್ಯದಲ್ಲಿ ಯಾವ ಅಧಿಕಾರವು ಬೇಡ. ಈಗಲೇ ನಾನು ರಾಜ್ಯ ತ್ಯಜಿಸಿ ಹೋಗುತ್ತೇನೆ. ಮಾನವ ಜೀವಜಂತುಗಳಿಗೆ ಕರುಣೆ ಇರದ ರಾಜ್ಯದಿ ಇದ್ದು ನನ್ನ ಜನ್ಮದ ಪಾಪವನ್ನು ನಾನು ಹೆಚ್ಚು ಮಾಡಿಕೊಳ್ಳಲಾರೆ!’ ಎಂದು ಉಟ್ಟ ಬಟ್ಟೆಯಲ್ಲೆ ರಾಜ್ಯ ಬಿಡುವ ತೀರ್ಮಾನಕ್ಕೆ ಬಂದನು. ಇದು ತಂದೆ ಶುದ್ಧೋಧನನಿಗಷ್ಟೇ ಅಲ್ಲ ಆ ಕ್ಷಣದಿಂದಲೇ ಎಲ್ಲ ಮಂತ್ರಿ ಮಂಡಲದ ಪ್ರಜಾಪ್ರತಿನಿಧಿ ಸಭಾಸದರಿಗೂ, ರಾಜ್ಯದ ಪ್ರಜೆಗಳಿಗೂ ಎಂತಹ ಪ್ರಮಾದ ತಮ್ಮಿಂದಾಯಿತು! ಎಂದು ಮರುಗುವಂತಾಯಿತು.


ಆದರೆ ಯಾವ ಮನವಿ ಕನಿಕರಗಳಿಗೂ ಗೌತಮ ಕರಗಲಿಲ್ಲ. ತನ್ನದೇ ಹಾದಿ ಹಿಡಿದು ಹೋದ. ಮತ್ತೆಂದೂ ಹಿಂತಿರುಗಿ ಬರಲಿಲ್ಲ. ಅವನ ದಾರಿಯಲ್ಲೇ ಸಹೋದರ ಸಂಬ0ಧಿ ಆನಂದನು ಹೊರಟು ಹೋದನು. ಮುಂದೆ ಸಾಗಿ ದೂರದ ಹಿಮಾಲಯ ತಲುಪಿ ಸಾಧು ಸಜ್ಜನರ ಸಂಗದಿ0ದ ಯೋಗ ವಿದ್ಯೆಗಳ ಕಲಿತು, ಧ್ಯಾನದ ವಿಧಿ ವಿಧಾನದ ವಿವಿಧ ಆಯಮಗಳ ಅರಿತು ಬದುಕಿನ ಕುರಿತು ಚಿಂತಿಸುತ್ತ ಮಾನವರೆಲ್ಲರ ಸಂಕಟಗಳಿಗೆ ಕಾರಣ ಹುಡುಕುತ್ತ ಹೊರಟ. ಅಗಾಧ ಪ್ರಾಚೀನ ವೇದ ಉಪನಿಷತ್ತುಗಳಿಂದಲು ತೃಪ್ತಿಯೆಂಬುದು ಅವನಿಗೆ ಸಿಗಲಿಲ್ಲ.

ಮೋಹ ಮಾಯೆಗಳಿಗೆ ಆಸೆಯೆ ಕಾರಣ

ಕಟ್ಟಕಡೆಗೆ ಅವನ ಸ್ವಜ್ಞಾನ ಜಾಗೃತವಾಗಿ ಎಲ್ಲ ಮೋಹ ಮಾಯೆಗಳಿಗೆ ಆಸೆಯೆ ಕಾರಣವೆಂದು ತಿಳಿದು ಮುಗುಳ್ನಕ್ಕನು. ಉತ್ತಮ ದೃಷ್ಟಿ ನಡೆ ನುಡಿ ಯೋಚನೆ ಕಾರ್ಯ ಸತ್ಸಂಗ ಚಾರಿತ್ರö್ಯಗಳಿಂದ ಲೋಕದಿ ಸುಖವಾಗಿ ಬದುಕಬಹುದೆಂದು ಸಾರಿದ. ಸಾರನಾಥದ ಜಿಂಕೆ ವನದಲ್ಲಿ ಶಿಷ್ಯರ ಸ್ವೀಕರಿಸಿ ಧಮ್ಮ ಸಂಘದಲ್ಲಿ ಬೋಧಿಸುತ್ತಾ ಪರಿವ್ರಾಜಕನಾಗಿ ನಡೆದ. ಎಲ್ಲ ಮಾನವ ನಿರ್ಮಿತ ಚಾತುರ್ವರ್ಣ್ಯಗಳ ಸಂಕೋಲೆಗಳನ್ನು ಮುರಿದು ಜಾತಿ ಕುಲ ಗೋಡೆಗಳನ್ನು ಒಡೆದು ಸರ್ವ ದೀನ ದುರ್ಬಲ ಅಬಲರನ್ನು ತನ್ನ ಧಮ್ಮ ಮಾರ್ಗದಿ ಜೊತೆಯಾಗಿಸಿಕೊಂಡು ಸನಾತನ ಹಿಮವತ್ ದೇಶವಾದ ಭರತ ಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ ಮಾನವ ಸಮಾನತೆಯ ಸಹೋದರತೆಯ ಮಾರ್ಗ ಸ್ಥಾಪಿಸಿದನು. ವಿಶ್ವದಾದ್ಯಂತ ಎಲ್ಲ ತುಳಿತಕ್ಕೊಳಗಾದ ಜನವರ್ಗದ ಜೊತೆ ರಾಜ ಮಹಾರಾಜರು ಬುದ್ಧನ ಸರಳ ಮಧ್ಯಮ ಧಮ್ಮ ಜೀವನ ಮಾರ್ಗಕ್ಕೆ ಜೊತೆಯಾಗಿ ಸಾವಿರಾರು ವರ್ಷಗಲ ಕಾಲ ಬುದ್ಧ ಧಮ್ಮ ಜನರ ನೆಮ್ಮದಿಗೆ ಕಾರಣವಾಯಿತು. ಈ ಮೂಲಕ ಮಾನವನಾಗಿ ಬಂದ ಗೌತಮನು ಬೋಧಿಸತ್ವನಾಗಿ ಲೋಕೋತ್ತಮ ಪರಮಪುರುಷನಾಗಿ ಕೀರ್ತಿ ಹೊಂದಿದವರು. ವೈಶಾಖದ ಬೆಳದಿಂಗಳ0ತೆ ಮಾನವರೆಲ್ಲರ ಅರಿವಿನ ದಾರಿದೀಪವಾದವರು.

Related Articles

ಪ್ರತಿಕ್ರಿಯೆ ನೀಡಿ

Latest Articles