ಸಾಕುವರು ತಾವಾದ ಬಳಿಕ ನೂಕುವರು ತಾವಾಗಬಾರದಯ್ಯ

ಶರಣರ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತ. ತಾನು ಮಾಡುವ ಕಾಯಕದಲ್ಲಿ ನಿಷ್ಠೆ ಇರಬೇಕು ಎಂದು ಸಾರಿ ಹೇಳುವ ಶರಣರ ವಚನಗಳನ್ನು ಪ್ರಜೆಗಳಿಂದಲೇ ಆರಿಸಿ ಬಂದ, ಅಧಿಕಾರದಲ್ಲಿರುವ ವ್ಯಕ್ತಿಗಳು ಜತೆಗೆ ಪ್ರತಿಯೊಬ್ಬ ಪ್ರಜೆಯೂ ಪಾಲಿಸುವಂತಾದರೆ ಸಮಾನತೆಯ ಸೌಹಾರ್ದಯುತ ಬದುಕು ಸಾಧ್ಯ ಅಲ್ಲವೇ?

*ಬಸಮ್ಮ ಏಗನಗೌಡ್ರ, ಹಾವೇರಿ

ಬಸವಾದಿ ಶರಣರಿಂ ಪಸರಿಸಿಹ ವಚನಗಳು ಹಸನಾಗಿ ಮಾಡುವವು ಬಾಳಭವಣೆ ಕೃಶವಾದ ಬದುಕಿನಲಿ ಯಶಪಡೆಯಲೋಸುಗವೆ ತುಸುಪಠಿಸು ವಚನಗಳ ಸತ್ಯಪ್ರಿಯೆ//” ಎಂಬ ಆಧುನಿಕ ವಚನದಂತೆ ಬಸವಾದಿ ಶರಣರ ವಚನಗಳು ಅಂದಿನ ಕಾಲಘಟ್ಟದಲ್ಲಿ ಜನಸಾಮಾನ್ಯರ ಮನೆ ಮನದಲಿ ಜ್ಞಾನ ದೀವಿಗೆ ಹೊತ್ತಿಸಿ ಅವರು ಇದ್ದುದರಲ್ಲಿಯೇ ಹಂಚಿಕೊಂಡು ಸರಳ ಜೀವನ ನಡೆಸುವ ಕಾಯಕದಲ್ಲಿ ನಿರತರಾಗಿ ಜೀವನ ನಡೆಸುವ ಪರಿಯನ್ನು ಅರುಹಿದ್ದವು. ಆದರೂ ಆ ವಚನಗಳು ಈಗಲೂ ಸಹ ನಮ್ಮ ಇಂದಿನ ಅವಸರದ ಬದುಕಿಗೆ ದಾರಿದೀಪವಾಗಿವೆ ಎಂದರೆ ತಪ್ಪಾಗಲಾರದು.

ಕಲ್ಲುದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಮರ ದೇವರು ದೇವರಲ್ಲ ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ ತನ್ನ ತಾನರಿತು ತಾನಾರೆಂದು ತಿಳಿದಡೆ ತಾನೆ ದೇವ ಅಪ್ರಮಾಣ ಕೂಡಲಸಂಗಮದೇವ/ ಬಸವಣ್ಣನವರು ಮೂರ್ತಿಪೂಜೆಯನ್ನು ಖಂಡಿಸಿದರು. ದೇವರು ನಮ್ಮ ಅಂತರಾತ್ಮ ಮತ್ತು ನಾವು ಮಾಡುವ ಕಾಯಕದಲ್ಲಿರುವನು ಎನ್ನುತ್ತಾ ಕಾಯಕನಿರತ ಎಲ್ಲಾ ವರ್ಗದ ಸಾಮಾನ್ಯ ಪ್ರಜೆಯನ್ನೂ ಶರಣರು ಎಂದು ಸಂಬೋಧಿಸಿದ ಮಹಾನಾಯಕ ಬಸವಣ್ಣನವರು.

ಸರಳತೆ, ಸಮಾನತೆ, ಮಾನವೀಯತೆಗೆ ಕೈಗನ್ನಡಿಯ ಹಿಡಿದು ಅದರಂತೆ ಪ್ರಜಾಪ್ರತಿನಿಧಿಗಳನ್ನೂ ಶರಣರ ದಾರಿಯಲ್ಲಿ ನಡೆಸಿದಂತ ಶಕ್ತಿ ಬಸವೇಶ್ವರರಂತಹ ವಚನಕಾರರ ವಚನಗಳಿಗಿದೆ.

ಸಾಕುವರು ತಾವಾದ ಬಳಿಕ ನೂಕುವರು ತಾವಾಗಬಾರದಯ್ಯ ಹೇಳಿದವರು ತಾವಾದ ಬಳಿಕ ಈ ಪ್ರಪಂಚದಲ್ಲೆನ್ನ ಗೋಳಾಡಿಸಬಾರದಯ್ಯ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ” ಎಂಬ ಸಿದ್ಧರಾಮ ಶರಣರ ವಚನದಂತೆ ಪ್ರಜೆಗಳನ್ನು ಸುಖವಾಗಿ ಬಾಳುವಂತೆ ಅನ್ನ ಆರೋಗ್ಯ ಶಿಕ್ಷಣ ನೀಡಿ ಕಾಪಾಡುವೆನೆಂದು ಪ್ರಮಾಣ ಮಾಡಿ ಪ್ರಜೆಗಳಿಂದ ಆಯ್ಕೆಯಾದ ಇಂದಿನ ನಮ್ಮ ನಾಯಕರು ತಮ್ಮ ಬೊಕ್ಕಸಕ್ಕೆ ಬೀಳುವ ಧನದ ಮಾರ್ಗದಲ್ಲಿ ಸಾಗಿ ಆ ಮಾರ್ಗದಲ್ಲಿ ಎಷ್ಟೋ ಅಮಾಯಕ ಜನರನ್ನು ತುಳಿದು ಸಾಯಿಸುತ್ತ ಗೋಳಾಡಿಸುವ ಪರಿ ಅಮಾನವೀಯತೆ ಎಂದು ಶರಣರು ಅಂದೇ ಸಾರಿ ಹೇಳಿದ್ದಾರೆ.

ಕಾಯಕದಲ್ಲಿ ನಿರತನಾದರೆ ಗುರು ದರುಶನವಾದರೂ ಮರೆಯಬೇಕು ಲಿಂಗ ಪೂಜೆಯಾದಡೂ ಮರೆಯಬೇಕು ಜಂಗಮ ಮುಂದಿದ್ದರೂ ಹಂಗು ಹರಿಯಬೇಕು ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರರತ್ತಾದಮಾ ಕಾಯಕದೊಳಗು/” ಎಂದು ಆಯ್ದಕ್ಕಿ ಮಾರಯ್ಯನವರು ಹೇಳಿದಂತೆ ದೇಶದ ಯಾವೊಬ್ಬ ಪ್ರಜೆ ಅಥವಾ ಪ್ರಜಾನಾಯಕ ಕಾಯಕದಲ್ಲಿ ನಿರತನಾದಡೆ ಬೇರೆ ಯಾವುದರ ಕಡೆಗೂ ಲಕ್ಷ್ಯ ವಹಿಸಿದೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮನಸ್ಥಿತಿಯುಳ್ಳವರಾಗಬೇಕು. ಪ್ರತಿ ದುಡಿಯುವವನಿಗೂ ಸಮಾನ ವೇತನ ಸಿಗುವಂತಾಗಬೇಕು. ಆಗ ಬಡವ, ಬಲ್ಲಿದ, ಕೂಲಿಯವ ಎಂಬ ಬೇಧವಿಲ್ಲದೆ ಎಲ್ಲರೂ ಸಂತೋಷದಿಂದ ಬಾಳುವ ಅವಕಾಶ ದೊರೆಯುವುದು.

“ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪ ರಾಜ್ಯವಿತ್ತಡೆ ಒಲ್ಲೆ ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ ಸಾಕು ರಾಮನಾಥ/” ಎಂಬ ಭಾವ ಪ್ರತಿಯೊಬ್ಬ ಪ್ರಜೆಯ ಮನದಲ್ಲಿ ಮೂಡಿದರೆ ಶಾಂತತೆ ಸೌಹಾರ್ದತೆ ತಾನಾಗಿಯೇ ಬರುತ್ತದೆ. ಆದರೆ ಇಂದು ನಮ್ಮ ಪ್ರಜಾಪ್ರತಿನಿಧಿ ಗಳು ಅಧಿಕಾರಿವರ್ಗದವರು ಸಿರಿಸಂಪತ್ತು ಅಧಿಕಾರದ ಆಸೆಯಿಂದ ಒಬ್ಬರಿಗೊಬ್ಬರು ಪರಸ್ಪರ ಹಳಿಯುತ್ತಾ ಸಾಮಾನ್ಯ ಪ್ರಜೆಯ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ.

ಅಲ್ಲಮಪ್ರಭು ದೇವರ ಅಧ್ಯಕ್ಷತೆಯಲ್ಲಿ ಸರ್ವ ಶರಣರು ಮಹಿಳಾವಚನಗಾರ್ತಿಯರು ಸೇರಿಕೊಂಡು ತಮ್ಮ ಕಾಯಕದ ಜೊತೆಗೆ ತಮ್ಮ ಅನುಭವಗಳನ್ನು ಅನುಭವಮಂಟಪದೊಳಗೆ ವಚನೋಕ್ತಿಗಳ ಮೂಲಕ ಸಾರಿ ಹೇಳಿದ್ದಾರೆ. ಅವರೆಲ್ಲರ ವಚನಗಳು ಇಂದೂ, ಮುಂದೂ ಎಂದೆಂದೂ ಮನುಜರಿಗೆ ದಾರಿದೀಪವಾಗಿವೆ.

ಶರಣರನು ನೆನೆಯುತಿರೆ ನರಜನುಮ ಪಾವನವು ಭರಿಸಿಹವು ವಚನದಿಂ ಮೌಲ್ಯಗಳು ಬೆರೆಸುತಲಿ ನೀತಿಯನು ಮರೆಸುವವು ನೋವುಗಳ ಕರಣಗಳ ತುಂಬಿಸಿಕೊ ಸತ್ಯಪ್ರಿಯೆ// ಎಂಬಂತೆ ಶರಣರ ವಚನಗಳ ಅಧ್ಯಯನದಿಂದ ಎಲ್ಲ ಮಾನವರಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡುವ ಅನಿವಾರ್ಯತೆ, ಅವಶ್ಯಕತೆ ಬಹಳಷ್ಟು ಮಹತ್ವದ ಕಾರ್ಯವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಸಾಗೋಣ.

Related Articles

1 COMMENT

ಪ್ರತಿಕ್ರಿಯೆ ನೀಡಿ

Latest Articles