ಬಳ್ಳೇಶ್ವರದ ಬಳ್ಳಲಿಂಗೇಶ್ವರ ದೇವಾಲಯ

*ಶ್ರೀನಿವಾಸ ಮೂರ್ತಿ ಎನ್ ಎಸ್

ದೇವಾಲಯಗಳ ಪರಂಪರೆಯಲ್ಲಿ ಕಲ್ಯಾಣ ಚಾಲುಕ್ಯರು ಹಾಗು ಹೊಯ್ಸಳರು ತಮ್ಮದೇ ಆದ ಕೊಡುಗೆಯನ್ನ ನೀಡಿದ್ದಾರೆ. ಭವ್ಯ ದೇವಾಲಯಗಳ ನಿರ್ಮಾಣಕ್ಕೆ ನಾಂದಿ ಹಾಡಿದ ಅವರ ಹಲವು ದೇವಾಲಯಗಳು ದಾವಣಗೆರೆ ಮತ್ತು ಶಿವಮೊಗ್ಗದ ಪರಿಸರದಲ್ಲಿ ನೋಡಬಹುದು. ಅಂತಹ ಅಪರೂಪದ ಸುಂದರ ದೇವಾಲಯಗಳಲ್ಲಿ ಒಂದಾದ ಹೊನ್ನಾಳಿ ತಾಲ್ಲೂಕಿನ ಬಳ್ಳೇಶ್ವರದಲ್ಲಿರುವ ಬಳ್ಳಲಿಂಗೇಶ್ವರ ದೇವಾಲಯವೂ ಒಂದು  ಆದರೆ ಪ್ರಚಾರದ ಕೊರೆತೆಯಿಂದ ಪ್ರವಾಸಿಗರಿಂದ ದೇವಾಲಯ ದೂರ ಉಳಿದಿದೆ.

ಐತಿಹ್ಯ

ಇತಿಹಾದ ಪುಟದಲ್ಲಿ ಬಳ್ಳೇಶ್ವರ ಗ್ರಾಮ ಪ್ರಮುಖ ಪಟ್ಟಣವಾಗಿದ್ದು ಈಗ ಚಿಕ್ಕ ಗ್ರಾಮವಾಗಿದೆ. ಇಲ್ಲಿ ಸೇವುಣರು ಶಾಸನ ದೊರೆತಿದ್ದುಇಲ್ಲಿನ ಶ್ರೀಧರ ದೇವರ ಉಲ್ಲೇಖ ನೋಡಬಹುದು. ಇನ್ನು ಹೊಯ್ಸಳರ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿ ಬೆಳೆದಿದ್ದು ವೀರಬಲ್ಲಾಳ ದೇವಾಲಯ ನಿರ್ಮಿಸಿದ್ದು ಅವನ ಹೆಸರೇ ಈ ಊರಿಗೆ ಬಂದಿರಬಹುದೆಂಬ ನಂಬಿಕೆ ಇದೆ. ಇನ್ನು ಹಲವು ಜಿನ ಮೂರ್ತಿಗಳು ಸಿಕ್ಕಿದ್ದು ಬಹುಶಃ ಇದು ಜೈನ ಕೇಂದ್ರವೂ ಆಗಿರಬಹುದು.

ಈ ದೇವಾಲಯವನ್ನು ಹೊಯ್ಸಳ ದೊರೆ ಎರಡನೇ ವೀರಬಲ್ಲಾಳನ ಕಾಲದಲ್ಲಿ ತನ್ನ ತಂದೆ ನಾರಸಿಂದ ದೇವನ ಹೆಸರಿನಲ್ಲಿ ಶಿವಲಿಂಗ ಸ್ಥಾಪಿಸಿದ ಉಲ್ಲೇಖ ನೋಡಬಹುದು. ಅವನ ಕಾಲದಲ್ಲಿಯೇ ನಿರ್ಮಾಣವಾಗಿರಬಹುದಾದ ಈ ದೇವಾಲಯ ಮೂರು ಗರ್ಭಗುಡಿ, ಸುಖನಾಸಿ, ನವರಂಗ ಹಾಗು ಮುಖಮಂಟಪವನ್ನು ಹೊಂದಿದೆ. ಮೂಲ ಗರ್ಭಗುಡಿಯಲ್ಲಿ ಬಳ್ಳೇಶ್ವರ ಎಂದು ಕರೆಯುವ ಶಿವಲಿಂಗವಿದ್ದರೆ ಉಳಿದ ಗರ್ಭಗುಡಿಯಲ್ಲಿ ಉಮಾ ಮಹೇಶ್ವರ ಹಾಗು ಕಾರ್ತಿಕೇಯನ ಶಿಲ್ಪಗಳಿವೆ. ಅಂತರಾಳದಲ್ಲಿ ಶಿವಲಿಂಗದ ಮುಂದೆ ನಂದಿ ಇದೆ.

ಮುಖ್ಯ ಗರ್ಭಗುಡಿಯ ಅಂತರಾಳದ  ಬಾಗಿಲುವಾಡ ಸುಂದರವಾಗಿ ಅಲಂಕೃತಗೊಂಡಿದ್ದು ಲಲಾಟದಲ್ಲಿ ಗಜಲಕ್ಶ್ಮೀಯ ಕೆತ್ತನೆ ನೋಡಬಹುದು. ತ್ರಿಮೂರ್ತಿಗಳ ಕೆತ್ತನೆ ಸಹ ನೋಡಬಹುದು. ಉಳಿದ ಎರಡೂ ಗರ್ಭಗುಡಿಯಲ್ಲಿನ ಬಾಗಿಲುವಾಡಗಳು ತ್ರಿಶಾಖದಿಂದ ಅಲಂಕೃತಗೊಂಡಿದ್ದು ಕಾರ್ತಿಕೇಯ ದ್ವಾರದಲ್ಲೂ ತ್ರಿಮೂರ್ತಿಗಳ ಕೆತ್ತನೆ ನೋಡಬಹುದು.

ಮೂರು ಗರ್ಭಗುಡಿಗೆ ಸೇರಿದಂತೆ ನವರಂಗ ಇದ್ದು ಇಲ್ಲಿ ನಾಲ್ಕು ತಿರುಗಣೆಯ ಕಂಭಗಳ ನೋಡಬಹುದು. ಭುವನೇಶ್ವರಿಯಲ್ಲಿನ ಅಷ್ಟದಿಕ್ಪಾಲಕರ ಕೆತ್ತನೆ ಸುಂದರವಾಗಿದೆ. ಉಳಿದ 8 ಭುವನೇಶ್ವರಿಗಳು ಸುಂದರವಾಗಿದೆ. ಇಲ್ಲಿನ ದೇವ ಕೋಷ್ಟಕಗಳಲ್ಲಿ ಕಾರ್ತಿಕೇಯ, ಗಣಪತಿ, ವಿಷ್ಣು, ಬ್ರಹ್ಮ ಹಾಗು ನಾಗನ ಶಿಲ್ಪ ನೋಡಬಹುದು. ಇಲ್ಲಿನ ಮುಖಮಂಟಪದಲ್ಲಿ ಕಕ್ಷಾಸನವಿದ್ದು ದ್ವಾರದಲ್ಲಿನ ಶಾಖೆಗಳು ಹಾಗು ಜಾಲಂದ್ರಗಳು ಸುಂದರವಾಗಿದೆ.  ದೇವಾಲಯದ ಮೂರು ಗರ್ಭಗುಡಿಯ ಮೇಲೆ ಶಿಖರವಿದೆ. ಮೂರು ಶಿಖರಗಳು ನವೀಕರಣಗೊಂಡಂತೆ ಕಾಣುತ್ತದೆ.

ದೇವಾಲಯದ ಹತ್ತಿರದಲ್ಲಿ ಒಂದು ಚಿಕ್ಕದಾದ ಗರ್ಭಗುಡಿ ಹಾಗು ಅಂತರಾಳ ಹೊಂದಿರುವ ದೇವಾಲಯವಿದ್ದು ಇಲ್ಲಿ ಶಿವಲಿಂಗ ಹಾಗು ನಂದಿಯನ್ನ ನೋಡಬಹುದು. ಇಲ್ಲಿ ನವೀಕರಣಗೊಂಡ ಬಸದಿ ಇದ್ದು ಇಲ್ಲಿ ದೊರೆತ ಜೈನ ಶಿಲ್ಪಗಳಿವೆ.

ತಲುಪುವ ಬಗ್ಗೆ : ಹೊನ್ನಾಳಿಯಿಂದ ಸುಮಾರು 6 ಕಿ.ಮೀ ದೂರದಲ್ಲಿದ್ದು ಹೊನ್ನಾಳಿ – ರಾಣಿಬೆನ್ನೂರು ರಸ್ತೆಯಲ್ಲಿ ಕೊನಾಯಕನಹಳ್ಳಿಯ ನಂತರ ಬಲಕ್ಕೆ ತಿರುಗಿ ಬಳ್ಳೇಶ್ವರ ತಲುಪಬಹುದು. ಈ ದೇವಾಲಯ ತುಂಗಾ ನದಿಯ ತೀರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles