ಪ್ರಥಮ ಪೂಜಿತ ಗಣೇಶನ ಕಥೆ ಹೇಳುವ ವಿನಾಯಕ ವನ

ನೂರಾರು ಹೆಸರುಗಳಿಂದ ಕರೆಯಲ್ಪಡುವ ಗಣೇಶನಿಗೆ ಲಂಬೋದರ, ವಿನಾಯಕ, ಗಣೇಶ, ಗಣಪ, ವಿಘ್ನೇಶ, ಏಕದಂತ, ಗಜಾನನ … ಹೀಗೆ ಇನ್ನೂ ಹಲವಾರು ಹೆಸರುಗಳುಂಟು.
ಗಣಪ ಅಂದಾಕ್ಷಣ ಆನೆಯ ಸೊಂಡಿಲು ಹೊಂದಿದ ದೇವರು ಎಂಬುದಾಗಿ ಪುಟ್ಟ ಮಕ್ಕಳು ಕೂಡಾ ನೆನಪಿಟ್ಟುಕೊಳ್ಳುತ್ತಾರೆ. ಗಣೇಶನನ್ನು ಬಹಳ ಬೇಗ ಗುರುತಿಸಿಬಿಡುತ್ತಾರೆ.

ಬಾಲ್ಯದಿಂದಲೇ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬಂದಿರುತ್ತೇವೆ. ಎಲ್ಲರ ಮೆಚ್ಚಿನ ಹಬ್ಬ, ಸಾರ್ವಜನಿಕ ಹಬ್ಬ ಮಾತ್ರವಲ್ಲ, ಮಕ್ಕಳೂ ಕೂಡಾ ಬಹಳ ಸಂಭ್ರಮದಿ0ದ ಆಚರಿಸುವ ಹಬ್ಬ ಇದಾಗಿದೆ. ಹಾಗಾಗಿ ಗಣೇಶನ ಕಥೆಗಳು ಕೂಡಾ ತುಂಬಾ ಪ್ರಸಿದ್ಧಿ. ಗಣಪನ ಬಗೆಗಿನ ನೂರಾರು ಪೌರಾಣಿಕ ಕಥೆಗಳಲ್ಲಿ ಒಂದೆರಡು ಕಥೆಯಾದರೂ ಮಕ್ಕಳಿಗೆ ನೆನಪಲ್ಲಿ ಇರುತ್ತದೆ.


ಗಣೇಶನಿಗೆ ಆನೆಯ ಸೊಂಡಿಲು ಹೇಗೆ ಬಂತು, ಗಣೇಶ ಹೇಗೆ ತನ್ನ ತಂದೆತಾಯಿಯನ್ನು ಗೆದ್ದ, ಗಣೇಶನ ಜನನ ಹೇಗಾಯಿತು?, ಗಣೇಶನ ಹೊಟ್ಟೆಯನ್ನು ಸುತ್ತಿಕೊಂಡಿರುವ ಸರ್ಪದ ಹಿಂದಿನ ಕಥೆ, ಗಣೇಶ ಮತ್ತು ಚಂದ್ರನ ಕಥೆ, ಕುಬೇರನ ಗರ್ವಭಂಗ ಮಾಡಿದ ಗಣೇಶ, ಇಂತಹ ಕಥೆಗಳನ್ನು ಶಿಲ್ಪಕಲಾಕೃತಿಗಳ ಮೂಲಕ ಹೇಳುವ ವಿನಾಯಕ ವನವೊಂದು ಹೊನ್ನಾವರದ ಪ್ರಸಿದ್ಧ ಪುಣ್ಯಕ್ಷೇತ್ರ ಇಡಗುಂಜಿಯ ವಿನಾಯಕದ ದೇವಸ್ಥಾನದ ಸಮೀಪದಲ್ಲಿಯೇ ಇದೆ.

ಇಡಗುಂಜಿ ವಿನಾಯಕ ದೇವಸ್ಥಾನವನ್ನು ತಲುಪುವುದಕ್ಕೂ ಮೊದಲು ಗಣಪನ ಕಥೆ ಹೇಳುವ ಮೂರ್ತಿಗಳನ್ನೊಳಗೊಂಡ ಒಂದು ಸುಂದರ ಉದ್ಯಾನ ಕಾಣಿಸುತ್ತದೆ. ಅರಣ್ಯ ಇಲಾಖೆಯವರು ನಿರ್ಮಿಸಿದ ಈ ಉದ್ಯಾನವನ ದೊಡ್ಡ ಸ್ವಾಗತ ಕಮಾನಿನೊಂದಿಗೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ.
ಅರಣ್ಯ ಇಲಾಖೆಯವರ ಮುತುವರ್ಜಿಯಿಂದ ನಿರ್ಮಾಣಗೊಂಡ ಈ ಉದ್ಯಾನದಲ್ಲಿ ಗಿಡಮೂಲಿಕೆಗಳನ್ನು ಬೆಳೆಸಲಾಗಿದೆ. ಸುತ್ತಲೂ ಹಸಿರು ವನ ಕಣ್ಣಿಗೆ ಮನಕ್ಕೆ ತಂಪು ನೀಡುತ್ತದೆ.

ಗಣೇಶನ ಕಥೆ ಹೇಳುವ ಹಲವಾರು ಪ್ರತಿಮೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಪ್ರತಿಮೆಗಳನ್ನು ನೋಡಿದಕ್ಷಾಣ ಗಣೇಶನ ಬಗ್ಗೆ ಕೇಳಿದ ಕಥೆಗಳು ಹಾಗೆಯೇ ಸ್ಮೃತಿಪಟಲದಲ್ಲಿ ಹಾದು ಹೋಗುತ್ತವೆ. ಕಥೆಗಳು ಮರೆತು ಹೋಗಿದದ್ದರೆ ಪ್ರತಿಮೆಯ ಮುಂಭಾಗದಲ್ಲಿ ಕಥೆಗಳನ್ನು ಹೇಳುವ ಫಲಕಗಳಿದ್ದು ತಿಳಿದುಕೊಳ್ಳಬಹುದು.
ಮಕ್ಕಳಿಗೆ ಆಟವಾಡಲು ಜಾರುಬಂಡಿ, ಉಯ್ಯಾಲೆ ವ್ಯವಸ್ಥೆ ಒದೆ. ಕುಳಿತುಕೊಳ್ಳಲು ಕಲ್ಲು ಬೆಂಚುಗಳು ಅಲ್ಲಿಲ್ಲಿ ಇವೆ.

ಹೋಗುವುದು ಹೇಗೆ ?
ಬೆಂಗಳೂರಿನಿ0ದ 502 ಕಿಮೀ ದೂರದಲ್ಲಿದೆ. ಹೊನ್ನಾವರದಿಂದ ಕೇವಲ 32 ಕಿಮೀ. ರಾಷ್ಟಿçÃಯ ಹೆದ್ದಾರಿಯಲ್ಲಿ ಸಾಗುವಾಗ ಇಡಗುಂಜಿ ಕ್ರಾಸ್ ಸಿಗುತ್ತದೆ. ಆ ದಾರಿ ಮೂಲಕ ಇಡಗುಂಜಿ ದೇವಸ್ಥಾನದ ಮಾರ್ಗವಾಗಿ ಸಾಗಿದರೆ ದೇವಸ್ಥಾನಕ್ಕೂ ಮೊದಲೇ ವಿನಾಯಕ ವನ ಸಿಗುತ್ತದೆ.

ಭಕ್ತರ ಪೊರೆವ ಇಡಗುಂಜಿ ಮಹಾಗಣಪ

ಶರಾವತಿ ನದಿ ದಂಡೆಯ ಭಕ್ತಿ ಕೇಂದ್ರ ಇಡಗುಂಜಿ. ದ್ವಿಬಾಹು ಕಪ್ಪುಶಿಲೆಯ ಶ್ರೀ ಗಣಪತಿ ವಿಗ್ರಹ ಇದಾಗಿದ್ದು ಬಲಗೈಯಲ್ಲಿ ತಾವರೆಯ ಮೊಗ್ಗು, ಎಡಗೈಯಲ್ಲಿ ಮೋದಕವನ್ನು ಹಿಡಿದಿರುವ ಆಕಾರದಲ್ಲಿದೆ. ಇದು ಸುಮಾರು 800 ವರ್ಷಗಳ ಹಿಂದಿನ ಪುರಾತನ ದೇವಾಲಯವಾಗಿದೆ ಇಡಗುಂಜಿಗೆ ಇಡಕುಂಜ, ಕುಂಜವನ, ಯಿಡಗುಂದಿ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಈ ಮೂರ್ತಿಯು ನಾರದ ಮುನಿಯಿಂದ ಸ್ಥಾಪಿಸಲ್ಪಟ್ಟಿದ್ದು ಎಂಬ ಐತಿಹ್ಯವಿದೆ.

ಪೌರಾಣಿಕ ಹಿನ್ನೆಲೆ:

ತಪೋ ಮುನಿಗಳಾದ ವಾಲಖಿಲ್ಯ ಋಷಿಗಳ ತಪಸ್ಸಿಗಾದ ವಿಘ್ನ ನಿವಾರಣೆಗಾಗಿ ನಾರದ ಮುನಿಗಳ ಸಲಹೆಯಂತೆ ಶ್ರೀ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿದರು. ವಾಲಖಿಲ್ಯ ಋಷಿಗಳಿಗೆ ತಪಸ್ಸಿಗೆ ಭಂಗವಾದ ಸಂದರ್ಭದಲ್ಲಿ ನಾರದ ಮುನಿಗಳ ಸಂಪರ್ಕ ಪಡೆದು ಕೈಲಾಸದಲ್ಲಿರುವ ಬಾಲ ಗಣಪನನ್ನು ಇಡಗುಂಜಿಗೆ ತರುವ ಪ್ರಯತ್ನ ನಡೆಯುತ್ತದೆ. ನಾರದ ಮುನಿ ಕೈಲಾಸಕ್ಕೆ ಹೋದ ಶಿವ-ಪಾರ್ವತಿಯರ ಮಗ ಗಣಪತಿ ಆಟವಾಡುತ್ತಿರುತ್ತಾನೆ. ಆದ್ರೆ ಶಿವ-ಪಾರ್ವತಿಯರ ಮನವೊಲಿಸಿ ಬಾಲ ಗಣಪನನ್ನು ಇಡಗುಂಜಿಗೆ ಕಳುಹಿಸುವಂತೆ ಮನವಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಪಾರ್ವತಿ ಒಪ್ಪುವುದಿಲ್ಲ. ಆಗ ನಾರದ ಮುನಿಗಳು ಕೈಲಾಸದಲ್ಲೇ ಇದ್ದು, ಬಾಲ ಗಣಪ ಏಕಾಂತದಲ್ಲಿರುವ ಸಂದರ್ಭದಲ್ಲಿ ಪಂಚಕಜ್ಜಾಯ ನೀಡುತ್ತಾರೆ. ಪಂಚಕಜ್ಜಾಯ ಸವಿದ ಗಣಪ ಇನ್ನಷ್ಟು ಪಂಚಕಜ್ಜಾಯ ಬೇಕು ಎಂದಾಗ ನಾರದ ಮುನಿ, ಎಷ್ಟು ಬೇಕಾದರೂ ಪಂಚಕಜ್ಜಾಯ ಕೊಡುತ್ತೇನೆ ಇಡಗುಂಜಿಗೆ ಬರುವಂತೆ ಕೇಳಿಕೊಳ್ಳುತ್ತಾರೆ. ಪಂಚಕಜ್ಜಾಯದ ಆಸೆಗೆ ಬಾಲಗಣೇಶ ಇಡಗುಂಜಿಗೆ ಬರುತ್ತಾನೆ.

ಯಾವತ್ತು ಇಡಗುಂಜಿಯಲ್ಲಿ ಪಂಚಕಜ್ಜಾಯದ ಸೇವನೆ ಬಾಲ ಗಣಪನಿಗೆ ಆಗುವುದಿಲ್ಲವೋ ಅಂದು ಬಾಲ ಗಣಪ ಕೈಲಾಸಕ್ಕೆ ವಾಪಸ್​ ಬರುತ್ತಾನೆ ಎಂದು ನಾರದ ಮುನಿಗಳು ಹೇಳುತ್ತಾರೆ. ಅಂದಿನಿಂದ ಇಂದಿನವರೆಗೂ ಬಾಲ ಗಣಪ ಇಡಗುಂಜಿಯಲ್ಲಿಯೇ ನೆಲೆನಿಂತಿದ್ದಾನೆಂಬ ನಂಬಿಕೆಯಲ್ಲಿ ನಿತ್ಯವೂ ಶ್ರೀ ಕ್ಷೇತ್ರ ಇಡಗುಂಜಿಯ ದೇವಸ್ಥಾನದಲ್ಲಿ ಪಂಚಕಜ್ಜಾಯವನ್ನು ಸಮರ್ಪಿಸಲಾಗುತ್ತಿದೆ.

ಇಡಗುಂಜಿ ಗಣೇಶನ ಪ್ರತಿಮೆ, ಕಪ್ಪು ಶಿಲೆಯ ವಿಗ್ರಹದಿಂದ ಸುಂದರವಾಗಿ ಕೆತ್ತಲ್ಪಟ್ಟಿದೆ. ಜಗತ್ತಿನಾದ್ಯಂತ ಏಕದಂತ ಚತುರ್ಬುಜ ಗಣಪನ್ನು ಪೂಜಿಸುವುದು ವಾಡಿಕೆ. ಆದರೆ ಇಡಗುಂಜಿಯ ದೇವಸ್ಥಾನದಲ್ಲಿರುವುದು ಬಾಲ ಗಣಪತಿ. ಎರಡು ದಂತಗಳನ್ನು ಹಾಗೂ ಎರಡು ಕೈಗಳನ್ನು ಹೊಂದಿರುವುದು ವಿಶೇಷವಾಗಿದೆ. ಜಗತ್ತಿನ ಬೇರೆಡೆ ಈ ರೀತಿಯ ಗಣಪನನ್ನು ನೋಡಲು ಸಾಧ್ಯವಿಲ್ಲ. ಬಲಗೈಯಲ್ಲಿ ಪದ್ಮ, ಎಡಗೈಯಲ್ಲಿ ಮೋದಕ ತುಂಬಿದ ಪಾತ್ರೆಯನ್ನು ಹಿಡಿದುಕೊಂಡಿರುವ ಬಾಲ ಗಣಪನ ಸೊಂಡಿಲು ಎಡಮುರಿಯಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles