ವಸುದೇವನಂತೆಯೇ ನಿನ್ನನ್ನು ಹೀಗೆ ಶಿರದಲ್ಲಿ ನಾನು ಹೊರಲಾರೆ ಹರಿಯೇ ..... ಲಕ್ಷ್ಮಿಯಂತೆ ನಿನ್ನ ಚರಣವನ್ನು ಸದಾ ನಾನು ಸ್ಮರಿಸಲಾರೆ ..... ಚತುರ್ಮುಖನಂತೆ ನಿನ್ನ ಗುಣಗಳ ಕೀರ್ತನೆ ನಾ ಮಾಡಲಾರೆ ... ಶೇಷನಂತೆ ನಿನಗೆ ನಾನು ಮೃದುವಾದ ಮೆತ್ತೆಯಾಗಲಾರೆ ..... ದೇವಗಣದಂತೆ ನಿನ್ನ ಕೈಂಕರ್ಯವ ನಾ ಮಾಡಲಾರೆ ಹರಿಯೇ ..... ಯಶೋದೆಯಂತೆ ನಿನಗೆ ಮುತ್ತನಿಟ್ಟು ತುತ್ತು ತಿನಿಸಲಾರೆ , ಗೋಪಿಕೆಯರ ಹಾಗೆ ಮನದಿ ನಿನ್ನ ಸ್ಮರಿಸಲಾರೆ ... ನನಗಾಗಿ ಎಲ್ಲರಲ್ಲೂ ನಿಂತು , ಅನಂತ ಉಪಕಾರ ನೀ ಮಾಡಿದಾಗ್ಯೂ ಅದನೆಲ್ಲವನ್ನು ನಾ ನೆನೆಯಲಾರೆ ... ಹೀಗೆಂದು ನೀ ದೂರಾದರೆ ನನ್ನ ಗತಿಯೇನು ಹರಿಯೇ ... ಮನದಿ ನಿನ್ನ ಸ್ಮರಣೆಯ ಕೊಟ್ಟು ಹೃದಯದಲ್ಲಿ ನೀನೇ ಭಕ್ತಿಯ ತುಂಬದಿರೇ ಅಸ್ವತಂತ್ರಳಾದ ನಾನು ನಿನ್ನ ಸ್ಮರಿಸಲಾಗುವುದೇ , ನಿನ್ನ ಪೂಜಿಸಲಾಗುವುದೇ , ನಿನ್ನಿಂದ ದೂರವಾದ ಈ ಬದುಕಿಗೆ ನೆಮ್ಮದಿ ದೊರೆಯುವುದೇ ...
* ಗೀತಕೃಷ್ಣ, ಬೆಂಗಳೂರು