ಮನದ ನಂದನದಲ್ಲೊಂದು ಸುತ್ತು

* ಜಯಶ್ರೀ.ಜೆ. ಅಬ್ಬಿಗೇರಿ

‘ನೀವು ಸುಂದರವಾದ ತರುಣಿಯ ಜೊತೆ ಕುಳಿತಿದ್ದರೆ ಸಮಯ ಹಾರಿ ಹೋದೆಂತೆನಿಸುತ್ತದೆ. ಆದರೆ ವೃದ್ಧರ ಜೊತೆ ಕೂತಾಗ ಹೊತ್ತೇ ಹೋಗುವುದಿಲ್ಲ ಅನಿಸುತ್ತದೆ’ ಇದು ಐನ್‌ಸ್ವೀನ್ ತನ್ನ ಸಾಪೇಕ್ಷ ಸಿದ್ದಾಂತ ಕುರಿತು ಹೇಳಿದ ಮಾತು. ಅವು ಐನ್‌ಸ್ವೀನ್‌ ಸಾಪೇಕ್ಷ ಸಿದ್ದಾಂತವನ್ನು ಪ್ರಕಟಿಸಿದ್ದ ದಿನಗಳು. ಜನರಲ್ಲಿ ಅದೆಷ್ಟು ಸಂಚಲನ ಮೂಡಿಸಿತ್ತೆಂದರೆ, ಜನ ತಮ್ಮ ಮಾತಿನಲ್ಲಿ ಅವಕಾಶ ಸಿಕ್ಕರೆ ಸಾಕು ರಿಲೇಟಿವಿಟಿ ಪದವನ್ನು ನಡುನಡುವೆ ಬಳಸುತ್ತಿದ್ದರು.

ಐನ್‌ಸ್ವೀನ್‌ರನ್ನು ಜನ ಹೋದಲೆಲ್ಲ ಈ ಬಗ್ಗೆ ಪ್ರಸ್ತಾಪಿಸಿ ಮಾತಿಗೆಳೆಯುತ್ತಿದ್ದರು. ಒಂದು ಸಲ ಚಹಕೂಟದಲ್ಲಿ ಒಬ್ಬ ಮಹಿಳೆ ಅವರ ಬಳಿ ಸಾರಿ ‘ನನಗೆ ವಿಜ್ಞಾನದ ಬಗ್ಗೆ ತಿಳಿವಳಿಕೆ ಇಲ್ಲ. ಆದರೆ ನೀವೇನೋ ರಿಲೇಟಿವಿಟಿ ಅಂತ ಮಾಡಿದ್ದೀರಲ್ಲ ಅದರ ಬಗ್ಗೆ ಸ್ವಲ್ಪ ತಿಳಿಯಬೇಕಿದೆ. ದಯವಿಟ್ಟು ನನಗೆ ಅರ್ಥವಾಗುವ ಹಾಗೆ ಹೇಳಿಕೊಡಿ ಎಂದು ಪೀಡಿಸಿದಳು. ಐನ್‌ಸ್ಟೀನ್‌ಗೆ ರೇಜಿಗೆಯಾದರೂ ಅದನ್ನು ತೋರಗೊಡದೆ ನಿಮಗೆ ಅದನ್ನು ಒಂದು ಕಥೆಯ ಮೂಲಕ ಹೇಳುತ್ತೇನೆ ಎಂದರು. ಮಹಿಳೆ ಕುತೂಹಲಭರಿತಳಾಗಿ ಕೇಳ ತೊಡಗಿದಳು.
ನಾನು ಒಮ್ಮೆ ಕುರುಡನ ಜೊತೆ ಮಾತನಾಡುತ್ತಿದ್ದೆ. ಮಾತಿನ ನಡುವೆ ಹಾಲು ಕುಡಿಯುವುದರ ಪ್ರಸ್ತಾಪ ಬಂತು. ಆಗ ಅವನು ಹೇಳಿದ ಕುಡಿಯುವುದು ಗೊತ್ತು ಆದರೆ ಹಾಲು ಎಂದರೇನು? ನಾನು ಅದೊಂದು ಬಿಳಿಯ ದ್ರವ ಎಂದೆ. ದ್ರವ ಎಂದರೆ ಗೊತ್ತು ಬಿಳಿ ಎಂದರೇನು ಎಂದನಾತ. ಹಂಸದ ಗರಿಗಳ ಬಣ್ಣ ಎಂದೆ ನಾನು. ಆದರೆ ಕುರುಡ ಅಷ್ಟಕ್ಕೆ ಬಿಡಲಿಲ್ಲ. ಗರಿ ಗೊತ್ತು ಹಂಸ ಎಂದರೆ ಪ್ರಶ್ನಿಸಿದ. ಅದು ಓರೆ ಕುತ್ತಿಗೆ ಇರುವ ಹಕ್ಕಿ ಎಂದು ಆತನಿಗೆ ವಿವರಿಸಿದೆ. ಕುತ್ತಿಗೆ ಗೊತ್ತು ಓರೆ ಎಂದರೇನು-ಕೇಳಿದ! ನಾನು ಆತನ ಕೈಯನ್ನು ಎಳೆದು ನೀಳವಾಗಿ ಹಿಡಿದು ನೋಡು, ಇದು ನೇರ ಎಂದು ಹೇಳಿ ನಂತರ ಕೈಯನ್ನು ತಿರುಗಿಸಿ ಮಡಚಿ ಇದು ಓರೆ ಎಂದೆ. ಹ್ಞಾಂ! ಹಾಲು ಎಂದರೇನು ಎಂದು ಈಗ ಅರ್ಥವಾಯಿತು ಎಂದ ಕುರುಡ. ಸಾಪೇಕ್ಷತೆ ಬಗ್ಗೆ ವಿಜ್ಞಾನದ ತಿಳಿವಳಿಕೆ ಇಲ್ಲದವರಿಗೆ ನಾನು ಹೇಳಹೋದರೆ ಅದು ಕುರುಡನಿಗೆ ಹಾಲಿನ ಬಗ್ಗೆ ವಿವರಿಸಿದಂತೆ ಇರುತ್ತದೆ ಎಂದರು ಐನ್‌ಸ್ಟೀನ್. ಹಾಲಿನಂತೆ ಬೆಳ್ಳಗಿದ್ದ ಮಹಿಳೆಯ ಮುಖ ಕಪ್ಪು ಹಲಗೆಯ ಬಣ್ಣಕ್ಕೆ ತಿರುಗಿತು. ಅಂತೆಯೇ ನಾವು ಮನದ ಚಟುವಟಿಕೆಗಳ ಬಗ್ಗೆ ಗೊತ್ತಿಲ್ಲದವರಿಗೆ ಹೇಳಹೊರಟರೆ ನಮ್ಮ ಸ್ಥಿತಿಯೂ ಐನ್‌ಸ್ಟೀನ್ ಸ್ಥಿತಿಯಾಗುತ್ತದೆ.

ನಿಜ ಹೇಳಬೇಕೆಂದರೆ ಮನದ ಹಲವು ಚಿತ್ತಾರಗಳನ್ನು ಕಂಡ ನಮಗೆ ಅದರ ಸರಳ ವಕ್ರಗೆರೆಗಳನ್ನು ಚೆನ್ನಾಗಿ ಗೊತ್ತು ಹಿಡಿದು ಪಕ್ಕಾಗಿ ಆಡಲು ಬರುವುದೇ ಇಲ್ಲ. ಮನಸ್ಸು ಒಮ್ಮೊಮ್ಮೆ ನಮಗರಿವಿಲ್ಲದಂತೆ ಗೆಳೆಯನಂತೆ ಕೈ ಹಿಂಡುತ್ತದೆ. ವೈರಿಯಂತೆ ಬೆನ್ನಿಗೆ ಕೈ ಹಚ್ಚಿ ನೂಕುತ್ತದೆ. ತನಗೆ ಸಂತಸವಾದರೆ ಪ್ರೇಯಸಿಯಂತೆ ಗಲ್ಲ ಸವರಿ ನಮ್ಮನ್ನು ಜೂಟಾಟಕ್ಕೆ ಎಳೆಯುತ್ತದೆ. ಕೆಲವೊಮ್ಮೆ ಬದುಕಿನಲ್ಲಿ ಮನಸು ವಿಚಿತ್ರ ಆಟವಾಡಿ ಬಿಡುತ್ತದೆ. ಸುಂದರ ಜೀವನಕ್ಕೆ ಬೇಕಾದುದೆಲ್ಲವೂ ಇದ್ದರೂ ಏನೋ ಕಳೆದುಕೊಂಡ ಭಾವ ಕಾಡುತ್ತಲೇ ಇರುತ್ತದೆ. ಬೇಕಾದುದೆಲ್ಲವೂ ಬೇಕೆಂದಾಗ ಸಿಗುತ್ತಿದ್ದರೂ ಮನಸ್ಸಿಗೆ ಸಮಾಧಾನದ ಛಾಯೆ ಮಾತ್ರ ದೂರ ದೂರ. ಮನೆಯ ಗೋಡೆಗೆ ಛಾವಣಿಗೆ ನೇತು ಹಾಕಿಕೊಂಡಿರುವ ಮನದ ನೋವು ಪ್ರಶಾಂತ ಸರೋವರದಲ್ಲಿ ಕಲ್ಲೊಂದು ಬಿದ್ದಂತೆನಿಸುತ್ತಿರುತ್ತದೆ. ಎಲ್ಲವೂ ಸರಿಯಾಗಿದೆ ಅನಿಸಿದರೂ ಇಲ್ಲ ಇಲ್ಲ ಯಾವುದೂ ನೆಮ್ಮದಿಗೆ ಸರಿಸಾಟಿಯಾಗುವುದಿಲ್ಲ.

ಯಾವುದೇ ಪಕ್ಷಿ ಪ್ರಾಣಿ ಜೀವ ಬಿಟ್ಟಿಲ್ಲವಾದರೂ ಸಿಟ್ಟೆಂಬ ಹದ್ದೊಂದು ಸುಯ್ಯೊಂದು ನೆಲಕ್ಕಿಳಿದು ಹರಿದು ಬಿಡುತ್ತದೆ. ಮೇಲೆ ಕುಳಿತು ಯಾರೋ ಕೀಲುಗೊಂಬೆ ಆಟ ಆಡಿಸಿದಂತೆನಿಸುತ್ತದೆ. ಇಂದೋ ನಾಳೆಯೋ ಹಾರಿ ಹಾಗುವ ಈ ಜೀವಕ್ಕೆ ಏಕೆ ಬೇಕು ಬೇರೆ ಎಲ್ಲದರ ಹಂಗು?

ಇದೆಲ್ಲ ಒಂದೆಡೆಯಾದರೆ ಇನ್ನೊಂದೆಡೆ ಬದುಕಿನ ಏರಿಳಿತಕ್ಕೆ ಕಷ್ಟ ಕಾರ್ಪಣ್ಯಗಳಿಗೆ ಅಂಗಲಾಚುವ ಮನಸ್ಸು. ದಶ ದಿಕ್ಕುಗಳಿಗೂ ಕೈ ಬೀಸುವ ಆಕ್ಟೋಪಸ್‌ನಂತಾಗುತ್ತದೆ. ಒಂದೊಂದುದು ಸಲ ಇನ್ನೇನು ಬದುಕು ಶೃತಿ ಹಿಡಿಯಿತು ಎನ್ನುವಷ್ಟರಲ್ಲಿ ಕಾರ್ಗತ್ತಲಲ್ಲಿ ಉಗಿಬಂಡಿಯೊ0ದು ದಡದಡನೆ ದುಃಖದ ಭೋಗಿಗಗಳನ್ನು ಹೊತ್ತುಕೊಂಡು ಬಂದು ಎದೆ ಮೇಲೆ ನಿಲ್ಲಿಸಿ ಬಿಡುತ್ತದೆ. ದುಃಖ ಒಂದಲ್ಲ ಎರಡಲ್ಲ ಒಮ್ಮೆಲೇ ಸಾಲು ಸಾಲು ರೂಪದಲ್ಲಿ ಸರದಿ ಹಚ್ಚಿ ನಿಂತು ಬಿಡುತ್ತವೆ. ಹೇಗೋ ಉಸಿರು ಬಿಗಿ ಹಿಡಿದು ಮೈಯಲ್ಲಿರುವ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಎಲ್ಲವನ್ನೂ ಬಗ್ಗಿಸಿ ಬಿಡುವ ಹುಚ್ಚು ಸಾಹಸಕ್ಕೆ ಕೈ ಹಾಕಿ ಬಿಡುವ ರಂಗ ಸಜ್ಜಿಕೆಯ ಪ್ರಸಂಗವೂ ನಿರ್ಮಾಣವಾಗಿ ಬಿಡುತ್ತದೆ. ಅದು ನೋಡೋಕೆ ಬಲು ಚಂದ. ಸಾಹಸ ಕೈಗೂಡಿದರೆ ಎತ್ತರದ ಆಕಾಶದಲ್ಲಿಂದ ನಕ್ಷತ್ರಗಳು ಮೈ ಮೇಲೆ ಹೂವಾಗಿ ಬೀಳುತ್ತವೆ. ಆಗ ಮನಸ್ಸೆಂಬ ಗೆಲುವಿನ ಕೈದೋಟದಲ್ಲಿಯೇ ನಲಿದು ಬಿಡಬಹುದು.

ಸೂತ್ರದ ಹಂಗು ತೊರೆದು ಬಿಟ್ಟರೆ….
ಬೆವರ ಹನಿಗಳ ಲೀಲೆಯಿಂದ ಗೆಲುವಿನ ಗಾಳಿಪಟ ಎಷ್ಟೇ ಎತ್ತರಕ್ಕೆ ಹಾರಿದರೂ ಅದರ ಸೂತ್ರ ಕೆಳಗೆ ಇರುತ್ತದೆ. ನಾನೀಗ ಬಾನೆತ್ತರದಲ್ಲಿ ಹಾಯಾಗಿದ್ದೇನೆ ನನಗೇನು ಸೂತ್ರದ ಅವಶ್ಯಕತೆಯಿಲ್ಲವೆಂದು ಸೂತ್ರದ ಹಂಗು ತೊರೆದು ಬಿಟ್ಟರೆ, ಗಾಳಿಪಟ ನೆಲಸಮವಾಗಿಬಿಡುತ್ತದೆ ಮಣ್ಣುಪಾಲಾಗುತ್ತದೆ. ತಿಪ್ಪೆಯ ಮೇಲೆ ಬಿದ್ದಿರುತ್ತದೆ. ಅಧಿಕಾರದ ಅಬ್ಬರ ಆಟಾಟೋಪ ಅದೆಷ್ಟೋ ಬಾರಿ ನಯ ನವುರುಗಳನ್ನು ಘಾಸಿಗೊಳಿಸುತ್ತದೆಂಬುದು ಜ್ಞಾನಿಗಳ ಹಳಹಳಿಕೆ. ಅಧಿಕಾರ, ಸ್ಥಾನಮಾನ, ಸಿರಿವಂತಿಕೆಯ ಮತ್ತಿನಲ್ಲಿ ಮೈಮರೆತು ಮೇಲೆ ಹಾರಿದರೆ ಕೊನೆಗೊಂದು ದಿನ ತನ್ನ ಪೂರ್ಣ ಅಸ್ತಿತ್ವವನ್ನೇ ಕಳೆದುಕೊಂಡು ಬಿಡುತ್ತದೆ. ಮೋಹ ಬಿಂಬಗಳನ್ನು ದಾಟುವುದಂತೂ ಇನ್ನೂ ಕಷ್ಟ.

ಅಹಂಕಾರದ ಕಳೆ

ಮನದ ನಂದನದಲ್ಲಿ ನಾನೇ ಎಂಬ ‘ಅಹಂಕಾರದ ಕಳೆ’ ಹುಟ್ಟಿಕೊಂಡರೆ ಸಾಕು ಅದು ಸರ್ವ ನಾಶ ಮಾಡಿಬಿಡುತ್ತದೆ. ಅದರ ಬದಲಾಗಿ ಉತ್ಸಾಹವೆಂಬುದು ಗೋಡೆಗೆ ಒಗೆದ ಚೆಂಡಿನ0ತೆ ಪುಟಿಪುಟಿದು ನಮ್ಮೊಳಗೆ ನೆಗೆಯುತ್ತಿದ್ದರೆ ಸ್ವರ್ಗ ಸ್ವರ್ಗವೆಂದು ಹಂಬಲಿಸುತ್ತಿರುವುದು ಕಣ್ಣಿಗೆ ಕಂಡ0ತಾಗುತ್ತದೆ. ಮನದ ಭಾವರೇಖೆಗಳನ್ನೆಲ್ಲ ಜೋಡಿಸಿ ಹೂಮಾಲೆ ಮಾಡಿದರೆ ಎಲ್ಲೆಲ್ಲೂ ಸುಗಂಧ ಸೂಸುವುದು. ಭವಸಾಗರದ ಅಲೆಗಳ ಅಬ್ಬರ ತಣಿಸಿ ಮನದ ಕೊಳವ ತಿಳಿಗೊಳಿಸಿದರೆ ಮಾತ್ರ ಬದುಕ ಬಂಡಿಯ ದುಃಖ ಗೀತೆಗೆ ಪೂರ್ಣ ವಿರಾಮ ಹೇಳಿ ಸರ್ವ ಋತುಗಳ ಸುಖಸಾರ ಸವಿಯಬಹುದು ಅಲ್ಲವೇ?

Related Articles

ಪ್ರತಿಕ್ರಿಯೆ ನೀಡಿ

Latest Articles