*ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ
ಶರಣರು, ಸಂತರು, ಮಹಾತ್ಮರು ಹಾಗೂ ಮಹಾಪುರುಷರು, ಆಡಿದ ನುಡಿಗಳು ಪರುಷ ಸಮಾನ. ಅವುಗಳಿಗೆ ಸರಿದೊರೆಯಾದ ವಸ್ತು ಜಗತ್ತಿನಲ್ಲಿ ಮತ್ತೊಂದಿಲ್ಲ. ಅತಿ ಬೆಲೆಬಾಳುವ ಮುತ್ತು, ಮಾಣಿಕ್ಯ, ರತ್ನ, ಚಿನ್ನ, ಅಮೃತ, ಜ್ಯೋತಿ ಮೊದಲಾದವುಗಳ ಜೊತೆ ಅವುಗಳನ್ನು ಉಪಮಿಸಿ ಹೇಳುವುದುಂಟು. ಆದರೆ ಈ ಪದಗಳಿಗೂ ಅವುಗಳನ್ನು ಸಂಪೂರ್ಣವಾಗಿ ಪ್ರತಿನಿಧಿಸುವ ಸಾಮರ್ಥ್ಯ ಸಾಲದು.
ಶಬ್ದಕ್ಕೆ ಸಿಲುಕದ, ಹೋಲಿಕೆಗೆ ನಿಲುಕದ, ಬೆಲೆಗೆ ಬಲಿಯಾಗದ ಎತ್ತರ ಅವುಗಳದು. ಅಪಾರ ಲೋಕಾನುಭವ, ಆತ್ಮಾನುಭವ ಹಾಗೂ ಆಧ್ಯಾತ್ಮಾನುಭವಗಳಿಂದ ತುಂಬಿ ‘ತೊಟ್ಟು ಬಿಟ್ಟು ಕಳಚಿದ’ ಪರಿಪೂರ್ಣ ಪಕ್ವಫಲಗಳಾದ ಅವುಗಳಿಗೆ ಅವೇ ಹೋಲಿಕೆ. ಭಾರತೀಯ ಸಂಸ್ಕೃತಿಯ ಸಾರಸಂಗ್ರಹವನ್ನು ಸೂರೆಗೈಯುವ ಅವು ಸಾರುವ ಸಂದೇಶ, ಬೀರುವ ನೀತಿ ಅಪಾರ; ಸಾವರ್ತ್ರಿಕ ಹಾಗೂ ಸರ್ವಕಾಲಿಕ, ಜಗತ್ತು ಸುಮಾರ್ಗದಲ್ಲಿ ಸಾಗಲು ಸಹಾಯಕ ಮಾರ್ಗದರ್ಶಕ ಸೂತ್ರಗಳಾಗಿ, ಮಾನವನ ಶೀಲ ಸಂಪ್ರದಾಯ, ನೀತಿ-ಖ್ಯಾತಿಗಳಿಗೆ ಅಡಿಪಾಯವಾಗಿ, ನಿತ್ಯಸತ್ಯ ಧರ್ಮ, ನೀತಿ, ನಿರ್ಮಲತೆಗಳನ್ನು ಕಲಿಸುವ ಕೈದೀವಿಗೆಗಳಾಗಿ ಅವು ಶ್ರೇಷ್ಠತೆಯನ್ನು ಮೆರೆದಿವೆ.
ಮಾನವ ಕೋಟಿಯ ಕಲ್ಯಾಣಕ್ಕೆ ಕಾರಣವಾದ ಕೃತಿಪುಷ್ಟವೇ “ಶರಣರ ನುಡಿಮುತ್ತುಗಳು”. ಇದನ್ನು ಸುಂದರವಾಗಿ ಸಂಪಾದಿಸಿದವರು ಡಾ. ವೀರಣ್ಣ ರಾಜೂರ ಹಾಗೂ ಕಾಶಿಪುಟ್ಟ ಸೋಮಾರಾಧ್ಯರುಗಳು. ಇದು 1978ರಲ್ಲಿ ಮಂಗಳ ಪ್ರಕಾಶನ ಧಾರವಾಡದಿಂದ ಬೆಳಕುಕಂಡಿದೆ. 101 ಪುಟಗಳ ಹರವು ಪಡೆದಿದೆ. ಇಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ, ದೇವರದಾಸಿಮಯ್ಯ, ಉರಿಲಿಂಗ ಪೆದ್ದಿ, ತೋಂಟದ ಸಿದ್ಧಲಿಂಗ, ಸ್ವತಂತ್ರ ಸಿದ್ಧಲಿಂಗೇಶ್ವರ, ಇತರ ಶರಣರ ವಚನಗಳಿಂದಾಯ್ದ 1252 ನುಡಿಮುತ್ತುಗಳು ಅಳವಟ್ಟಿವೆ.
ಸೂಕ್ತಿಗಳನ್ನೊಳಗೊಂಡ ಸೂಕ್ತಿ ಮುಕ್ತಾವಳಿ, ಸುಭಾಷಿತ ಸಂಗ್ರಹ ಹಾಗೂ ವೇದ ಆಗಮ ಉಪನಿಷತ್ತು ಪುರಾಣ ಇತಿಹಾಸ ಮಹಾಕಾವ್ಯ ನಾಟಕಗಳಿಂದಾಯ್ದ ನುಡಿ ಸಂಗ್ರಹಗಳು ಸಂಸ್ಕೃತ ಸಾಹಿತ್ಯದಲ್ಲಿ ಹೇರಳವಾಗಿವೆ. ಕನ್ನಡದಲ್ಲಿ ಇಂಥ ಕೃತಿಗಳು ಕಡಿಮೆ. ಕನ್ನಡ ಜಾಣ, ಚೂಡಾರತ್ನ ಎಂಬ ಅಂಕಿತದಲ್ಲಿ ಕೆಲವು ಸಂಗ್ರಹಗಳು ಪ್ರಾಚೀನ ಸಾಹಿತ್ಯದಲ್ಲಿ ಕಾಣಸಿಗುತ್ತವೆ. ಇತ್ತೀಚೆಗೆ ವಾಕ್ಯಮಾಣಿಕ್ಯ ಕೋಶ, ಅಮೃತ ಬಿಂದುಗಳು, ಜ್ಞಾನಾಮೃತ ಸಂಚಯ ಮುಂತಾದ ಸಂಕಲನಗಳು ಬೆಳಕಿಗೆ ಬಂದಿವೆ. ಈ ಮಾದರಿಯಲ್ಲಿ ಮೂಡಿಬಂದ ಮತ್ತೊಂದು ವಿಶಿಷ್ಟ ಕೃತಿ ಈ ‘ಶರಣರನುಡಿಮುತ್ತುಗಳು’, ಇದುವರೆಗೆ ಕನ್ನಡದಲ್ಲಿ ಬಂದ ಸಂಕಲನಗಳೆಲ್ಲ ಸಮ್ಮಿಶ್ರವಾಗಿವೆ. ಆದರೆ ಇದು ಕೇವಲ ಶರಣರ ನುಡಿಗಳನ್ನಾಯ್ದು ಸಂಕಲಿಸಿದ ಸಂಕಲನವಾಗಿದೆ. ಇಂಥ ಕೃತಿ ಹೊರಬರುತ್ತಿರುವುದು ಇದೇ ಮೊದಲು. ಈ ದೃಷ್ಟಿಯಿಂದ ಇದು ಬಹಳಷ್ಟು ಮಹತ್ವದ ಸಂಪಾದಿತ ಕೃತಿ ಎನಿಸಿಕೊಳ್ಳುತ್ತದೆ.
ಶರಣರು ‘ಸಕಲ ಜೀವಾತ್ಮರಿಗೆ ಲೇಸ ಬಯಸುವ’ ಘನ ಉದ್ದೇಶ ಹೊತ್ತು ಅದನ್ನು ಸಾಧಿಸಿ ತೋರಿಸಿದ ಮಹಾತ್ಮರು. ಅವರ ನುಡಿಚೆನ್ನ, ನಡೆಚಿನ್ನ, ಗೈದ ಕಾರ್ಯಗಳೆಲ್ಲ, ಚೊಕ್ಕಚಿನ್ನ. ಮಾತು ಮುತ್ತಿನಹಾರ, ಸ್ಪಟಿಕದ ಶಲಾಕೆ, ಜ್ಯೋತಿರ್ಲಿಂಗ, ಲಿಂಗಮೆಚ್ಚಿ ಅಹುದಹುದೆನ್ನುವ ಅಮೃತವಾಣಿ; ಅಮರವಾಣಿ, ಅದು ‘ಅಧರಕ್ಕೆ ಕಹಿಯೆನಿಸಿದರೂ ಉದರಕ್ಕೆ ಸಿಹಿ’. ಚಿಕ್ಕ ನುಡಿ, ಚೊಕ್ಕ ವಿಚಾರ, ಅಪಾರ ಅನುಭವ ಅವರ ವಚನಗಳ ವೈಶಿಷ್ಟö್ಯ, ಕಿರಿದರಲ್ಲಿ ಹಿರಿದರ್ಥ ಹಿಡಿದಿಡುವ ಜಾಣ್ಮೆ, ಸಾಸುವೆಯಲ್ಲಿ ಸಾಗರವನ್ನು, ಕನ್ನಡಿಯಲ್ಲಿ ಕರಿಯನ್ನು ಹಿಡಿದಿಡುವ ಕಲಾವಂತಿಕೆ ಮೆಚ್ಚುವಂತಹದು. ಅವರ ಅನುಭವಾಮೃತ ಸಾಗರದಿಂದ ಆಯ್ದು ತೆಗೆದ, ಈ ನುಡಿಮುತ್ತುಗಳೆಲ್ಲ ಒಂದೊ0ದೂ ಅರ್ಥಪೂರ್ಣ. ಗಾದೆ, ಪಡೆನುಡಿ, ಜಾಣ್ಣುಡಿ, ಅನುಭವ ಸೂಕ್ತಿ ರೂಪದಲ್ಲಿರುವ ಈ ನುಡಿಗಡಣದಲ್ಲಿ ಒಳಗೊಂಡ ಆಡುನುಡಿಯು ಸಡಗರ, ವಿಚಾರದ ವೈಭವ, ಅನುಭವದ ಪರಿಪಕ್ವತೆಯನ್ನು ಆಸ್ವಾದಿಸಿಯೇ ಅನುಭವಿಸಬೇಕು; ಆನಂದಿಸಬೇಕು. ಪುಟ ಪುಟಗಳಲ್ಲಿ ಪುಟನೆಗೆಯುವ ಅನುಭವಾಮೃತದ ಸವಿಯನ್ನು ಸರ್ವರೂ ಸವಿಯಲೆಂಬ ಉದ್ದೇಶದಿಂದ ಈ ಕೃತಿ ಸಂಪಾದಿಸಿರುವ ಸದ್ದುದೇಶಗಳನ್ನು ಸಂಪಾದಕರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಈ ಕೃತಿಯಲ್ಲಿ ಅಳವಟ್ಟ ಬಸವಣ್ಣನವರ ವಚನಗಳಲ್ಲಿನ ನುಡಿಮುತ್ತುಗಳನ್ನು ಉದಾಹರಣೆಗೆ ನೋಡಬಹುದು:
• ಅಂಧಕನ ಕೈಯಲ್ಲಿ ದರ್ಪಣವಿದ್ದೇನು ಫಲ?
• ಅರಸು ಮುನಿದರೆ ನಾಡೊಳಗಿರಬಾರದು.
• ಒಮ್ಮೆ ಶರಣೆಂದರೆ ಪಾಪಕರ್ಮ ಓಡುವವು.
• ಕಾಯಕವೇ ಕೈಲಾಸ.
• ಕೋಡಗ ಬಲ್ಲುದೆ ಸೆಳೆಮಂಚದ ಸುಖವ.
ಹೀಗೆ ವಚನದಲ್ಲಿ ಅಡಗಿದ್ದ ಇವುಗಳನ್ನು ಹೆಕ್ಕಿ ತೆಗೆದು ಓದುಗರಿಗೆ ನೀಡಿರುವದು ಶ್ರಮಸಹಿತ ಅರ್ಥಪೂರ್ಣಕರ‍್ಯವೆನಿಸಿದೆ.
ಈ ಕೃತಿಯಲ್ಲಿ ಸುಮಾರು 76 ವಚನಕಾರರ 1252 ನುಡಿಮುತ್ತುಗಳನ್ನು ರಾಶಿಗೊಳಿಸಿದ್ದಾರೆ. ಸಕಲಪುರಾತನ, ನೂತನ ಶರಣಶರಣೆಯರ ನುಡಿಗಳೆಲ್ಲ ಇದರಲ್ಲಿ ಎಡೆಪಡೆದಿವೆ. ಇಲ್ಲಿ ಸಂಗ್ರಹಿಸಿದುವಷ್ಟೆ ನುಡಿ ಮುತ್ತುಗಳೆಂದು ಭಾವಿಸುವಂತಿಲ್ಲ. ಹಾಗೆ ನೋಡಿದರೆ ಶರಣರ ಎಲ್ಲ ವಚನಗಳೂ ನುಡಿ ಮುತ್ತುಗಳೇ ಎಂದು ಸ್ಪಷ್ಟಪಡಿಸಿ. ಅವುಗಳಲ್ಲಿ ಮಹತ್ವದ ಕೆಲವನ್ನು ಮಾತ್ರ ಇಲ್ಲಿ ತೆಗೆದಿಟ್ಟಿದ್ದಾರೆ. ಜನಸಾಮಾನ್ಯರಿಗೂ ವೇದ್ಯವಾಗಲೆಂಬ ಶರಣರ ಉದ್ದೇಶದ ಮೇರೆಗೆ ಇಂದು ಬಳಕೆ ತಪ್ಪಿಹೋದ ಹಳಗನ್ನಡದ (¾) ವರ್ಣವನ್ನು ಬಿಟ್ಟಿದ್ದಾರೆ. ಸರಳ ಸುಂದರವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.