ಶ್ರೀ ವಾದೀಂದ್ರತೀರ್ಥರ ಪೂರ್ವಾರಾಧನೆ. ಈ ಪ್ರಯುಕ್ತ ವಿಷ್ಣುತೀರ್ಥಾಚಾರ್ಯ ಇಭರಾಮಪುರ ಅವರಿಂದ ಪುಟ್ಟ ಬರಹ.
|| ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀಗುರುರಾಜೋ ವಿಜಯತೇ ||
|| ಶ್ರೀವಾದೀಂದ್ರತೀರ್ಥ ಗುರುಭ್ಯೋ ನಮಃ ||
ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅನೇಕ ತಪಸ್ವಿಗಳು ಪೀಠದಲ್ಲಿ ವಿರಾಜಮಾನರಾಗಿದ್ದಾರೆ. ಇಂತಃ ಭವ್ಯ ಪರಂಪರೆಯಲ್ಲಿ ಜ್ಞಾನಿ ಶ್ರೇಷ್ಠರಾದ ಶ್ರೀ ಉಪೇಂದ್ರ ತೀರ್ಥರ ವರಕುಮಾರರಾದ ಬೃಹಸ್ಪತಿಗಳ ಅಂಶ ಸಂಭೂತರಾದ, ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ, ಶ್ರೀ ವಿಜಯರಾಯರ, ಶ್ರೀ ಗೋಪಾಲದಾಸರಂತಃ ದಾಸಶ್ರೇಷ್ಠರಿಗೆ ಗುರುಗಳೆಂದೆನಿಸಿದ ಶ್ರೀ ಶ್ರೀ ವಾದೀಂದ್ರತೀರ್ಥ ಗುರುಸಾರ್ವಭೌಮರು ಒಬ್ಬರು.
ರಾಯರಿಗೆ ನಿರ್ಮಿತವಾದ ಬೃಂದಾವನವು ಸಾಕ್ಷಾತ್ ರಾಯರೇ ಮುಂದೆ ತಮ್ಮ ಪರಂಪರೆಯಲ್ಲಿ ಬರುವ ಶ್ರೀ ವಾದೀಂದ್ರತೀರ್ಥರಿಗೆ ಮೀಸಲು ಇಟ್ಟಿದುದು ವಿಶೇಷ.
ಜ್ಞಾನಿಗಳಾದ ಶ್ರೀ ವಾದೀಂದ್ರ ತೀರ್ಥರು ಸಾರಸ್ವತ ಲೋಕಕ್ಕೆ ಅನೇಕ ಗ್ರಂಥಗಳು ನೀಡಿದ್ದಾರೆ. ಅದರಲ್ಲಿ ಪರಮಶ್ರೇಷ್ಠ ಕೃತಿ ಪ್ರಸಿದ್ದವಾದ ಖಂಡಕಾವ್ಯ ಗುರುಗುಣಸ್ತವನ. ಗುರುಗುಣಸ್ತವನದಲ್ಲಿ ಪರಮಾತ್ಮನಿಂದ ಆರಂಭಿಸಿ ಪರಂಪರೆಯಲ್ಲಿ ಬರುವ ಶ್ರೀಮದಾಚಾರ್ಯರು, ಟೀಕಾಚಾರ್ಯರು, ವಿಬುದೇಂದ್ರತೀರ್ಥರು , ವಿಜಯಿಂದ್ರತೀರ್ಥರು, ಸುಧೀಂದ್ರತೀರ್ಥರು, ರಾಯರ, ಉಪೇಂದ್ರತೀರ್ಥರೆ ಮೊದಲಾದ ಜ್ಞಾನಿಗಳ ಸ್ತೋತ್ರ ಮಾಡಿದ್ದಾರೆ.
ಈ ಸ್ತೋತ್ರದಲ್ಲಿ ವಿಶೇಷವಾಗಿ ರಾಯರ ಗ್ರಂಥಗಳ ವೈಶಿಷ್ಟ್ಯ, ರಾಯರ ಮಹಿಮೆಯನ್ನು ಕೊಂಡಾಡಿದ್ದಾರೆ. ಶ್ರೀ ವಾದೀಂದ್ರತೀರ್ಥರು ರಾಯರ ಬೃಂದಾವನದ ಮುಂದೆ ಈ ಸ್ತೋತ್ರ ಸಮರ್ಪಣೆ ಮಾಡಿದಾಗ ರಾಯರು ಪರಮಸಂತೋಷರಾಗಿ ಸ್ತೋತ್ರಕೆ ಸಮ್ಮತಿ ಸೂಚಿಸಿ ರಾಯರು ತಲೆ ತೂಗಿದ ಹಾಗೆ ಬೃಂದಾವನವೇ ಅಲುಗಾಡಿ ಶ್ರೀ ವಾದೀಂದ್ರತೀರ್ಥರಿಗೆ ಪರಮಾನುಗ್ರಹ ಮಾಡಿದ್ದಾರೆ.
ವಂದಾರು ಜನ ಸಂದೋಹ ಮಂದಾರ ತರು ಸನ್ನಿಭಮ್ । ವೃಂದಾರಕ ಗುರುಪ್ರಖ್ಯಂ ವಂದೇ ವಾದೀಂದ್ರ ದೇಶಿಕಮ್ ।।