ಸಕಲ ಕಷ್ಟ ನಿವಾರಣೆಗೆ ಶ್ರೀ ಲಲಿತೆಯ ನಾಮದ ಅನುಸಂಧಾನ

*ಕೃಷ್ಣ ಪ್ರಕಾಶ್ ಉಳಿತ್ತಾಯ

ಕರಾಂಗುಲಿನಖೋತ್ಪನ್ನನಾರಾಯಣದಶಾಕೃತಿಃ|
ಮಹಾಪಾಶುಪತಾಸ್ತ್ರಾಗ್ನಿರ್ದಗ್ಧಾಸುರಸೈನಿಕಾ||

ಭಂಡಾಸುರನ ಸಮರ ಮತ್ತೂ ಘೋರರೂಪನ್ನು ಪಡೆದುಕೊಳ್ಳುತ್ತದೆ. ಆತ ತನ್ನ ಶರೀರದಿಂದ ಸೋಮಕ, ರಾವಣ, ಬಲಿ, ಹಿರಣ್ಯಾಕ್ಷ, ಮುಂತಾದ ರಾಕ್ಷಸ ಸ್ವರೂಪಿಗಳನ್ನು ಹುಟ್ಟಿಸಿ ಲಲಿತೆಯ ಸೇನೆಯ ವಿರುದ್ಧ ಹೋರಾಡಲು ಉಜ್ಜುಗಿಸುತ್ತಾನೆ. ಈ ಸಂದರ್ಭದಲ್ಲಿ ಲಲಿತಾ ಪರಮೇಶ್ವರಿಯು ತನ್ನ ಹತ್ತುಬೆರಳುಗಳ ಉಗುರುಗಳಿಂದ(ನಖ) ಹತ್ತು ಆಕೃತಿಗಳುಳ್ಳ ನಾರಾಯಣನನ್ನು ಸೃಷ್ಟಿಸುತ್ತಾಳೆ. ಇವು ಮತ್ಸ, ವರಾಹ, ನರಸಿಂಹವೇ ಮೊದಲಾದ ಅವತಾರಗಳಾಗಿವೆ. ತಾಯಿಯ ಸೃಷ್ಟಿಕರ್ಮದ ರೂಪವೇ “ಕರಾಂಗುಲಿನಖೋತ್ಪನ್ನನಾರಾಯಣದಶಾಕೃತಿಃ”.
ಈ ನಾಮದಲ್ಲಿ ಪುರಾಣಗಳಲ್ಲಿ ಬರುವ ದಶಾವತಾರ ಮತ್ತು ಅಲ್ಲಿರುವ ಹಿರಣ್ಯಾಕ್ಷಾದಿ ರಾಕ್ಷಸರು ಎಂಬ ವಿಚಾರದಲ್ಲಿ ಗೊಂದಲ ಮೂಡುವುದು ಸಹಜ. ಇಲ್ಲಿ ನಾವು ನೋಡಬೇಕಾದದ್ದು ಭಂಡಾಸುರ ಇಂತಹಾ ರಾಕ್ಷಸರ ವಿಕ್ರಮಕ್ಕೆ ಸಮವಾದ ಅಸುರೀ ಶಕ್ತಿಯನ್ನು ಸೃಷ್ಟಿಸಿದಾಗ ಅವನ್ನು ನಿವಾರಿಸಲು ಆಯಾ ಪ್ರತಿಬಂಧಕ ಶಕ್ತಿಯನ್ನು ಸೃಷ್ಟಿಸಿದಳು ಎಂಬುದಷ್ಟೆ.

ಲಲಿತೆ ಮಹಾಪಾಶುಪತಾಸ್ತ್ರದ ಅಗ್ನಿಯಿಂದ ಭಂಡಾಸುರನ ಸೈನ್ಯವನ್ನು ಸುಟ್ಟುಬಿಟ್ಟಳು ಎಂಬ ಚಿಂತನೆಯ ಹೆಸರೇ “ಮಹಾಪಾಶುಪತಾಸ್ತ್ರಾಗ್ನಿರ್ದಗ್ಧಾಸುರಸೈನಿಕಾ”. ಈ ನಾಮದ ಅನುಸಂಧಾನ ಭಜಕರ ಪಾಪ ಕರ್ಮಗಳು, ಪಾಪ ಭೀತಿಯೂ, ಸಕಲ ಕಷ್ಟಗಳೂ ನಿವಾರಣೆಯಾಗುವಂಥ ಧೈರ್ಯ ಸಾಂತ್ವನವನ್ನು ಕೊಡಬಲ್ಲುದೆಂಬ ಶ್ರದ್ಧೆ ಆಸ್ತಿಕರಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles