ಸಾಧನೆಯ ಹಾದಿಯಲ್ಲಿ ಯೋಗಪಟು ಕಾರ್ತಿಕ್ ಬೆಲ್ಲದ

ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನ. ಈ ಹಿನ್ನೆಲೆಯಲ್ಲಿ ಅಪರೂಪದ ಯೋಗಸಾಧಕ ಕಾರ್ತಿಕ್ ಬೆಲ್ಲದ ಅವರ ಕುರಿತು ಪರಿಚಯಾತ್ಮಕ ಲೇಖನ.

*ವೈ.ಬಿ.ಕಡಕೋಳ (ಶಿಕ್ಷಕರು)

ನಮ್ಮ ನಡುವೆ ಅಪರೂಪದ ಸಾಧಕರೂ ಇದ್ದಾರೆ ಎನ್ನುವುದಕ್ಕೆ ಮುನವಳ್ಳಿಯ ಕಾರ್ತಿಕ ಬೆಲ್ಲದ ಅವರು ಕೂಡಾ ಒಬ್ಬರು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರಾದ ಇವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗಿಕ್ ಸೈನ್ಸ್ನಲ್ಲಿ ಎಂಎಸ್ಸಿ ಸ್ನಾತ್ತಕೋತ್ತರ ಪದವಿಯಲ್ಲಿ ಐದನೆಯ ರ‍್ಯಾಂಕ್‌ನೊ0ದಿಗೆ ಉತ್ತೀರ್ಣರಾಗಿದ್ದಾರೆ. ನಾಲ್ಕನೆಯ ತರಗತಿಯಿಂದಲೇ ಯೋಗ ಅಭ್ಯಾಸ ರೂಢಿಸಿಕೊಂಡಿರುವ ಕಾರ್ತಿಕನಿಗೆ ತಾಯಿ ಸುಮಾ, ತಂದೆ ಮಹಾಂತೇಶ ಬೆಲ್ಲದ ಅವರ ಪ್ರೋತ್ಸಾಹ ಸಾಧನೆಗೆ ಹುರಿದುಂಬಿಸುವ0ತೆ ಮಾಡಿದೆ.
ಯೋಗ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರುವ ಅವರು ಪ್ರಾಥಮಿಕ ಶಾಲಾದಿನಗಳಿಂದಲೇ ಹಲವಾರು ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.


ವಿವಿಧ ಸ್ಪರ್ಧೆಳಲ್ಲಿ ಭಾಗಿ
2018 ರಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆ ಪ್ರಯುಕ್ತ ರಾಜಸ್ಥಾನದ ಕೋಟದಲ್ಲಿ ಪತಂಜಲಿ ಸಂಸ್ಥೆಯವರು ನಡೆಸಿದ ಯೋಗ ಪ್ರದರ್ಶನದಲ್ಲಿ ಕಾರ್ತಿಕ್ ಅವರು ಬಾಲಕ ಅಭಿಷೇಕ್ ಜೊತೆಗೂಡಿ ಸರ್ವಾಂಗಾಸನದಲ್ಲಿ ಗಂಡಭೇರು0ಡಾಸನವನ್ನು 8 ನಿಮಿಷ 4 ಸೆಕೆಂಡುಗಳಲ್ಲಿ ಪ್ರದರ್ಶಿಸುವ ಮೂಲಕ ದಾಖಲೆಯನ್ನು ಮಾಡಿದ್ದರು. ಅವರು ಈಗಾಗಲೇ ದೇಶದಾದ್ಯಂತ ಜರುಗಿದ ಯೋಗ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದು, ಯೋಗ ಭಾಸ್ಕರ, ಯೋಗ ಪ್ರವೀಣ ಪುರಸ್ಕಾರಗಳನ್ನು ಕೂಡ ಪಡೆದಿದ್ದಾರೆ.


2020ರ ನವೆಂಬರ್ 24 ರಂದು ಕರ್ನಾಟಕ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಬೆಂಬಲದೊ0ದಿಗೆ ಜರುಗಿದ ವಸ್ತçಧೋತಿ ಯೋಗ ಕಾರ್ಯಕ್ರಮದಲ್ಲಿ ವಸ್ತçಧೋತಿ ಯೋಗವನ್ನು 18 ಸೆಕೆಂಡುಗಳಲ್ಲಿ ಮಾಡಿ ವಿಶ್ವದಾಖಲೆ ಬರೆದರು. ಈ ಹಿಂದಿನ ದಾಖಲೆ ರಾಜಸ್ಥಾನದ ಕೋಟದಲ್ಲಿ 2018ರ ಜೂನ್ 20ರಂದು ರಾಮದಾಸ್ ಚೌಧರಿ ಇಪ್ಪತ್ತೇಳು ಸೆಕೆಂಡುಗಳಲ್ಲಿ ಬಟ್ಟೆಯನ್ನು ನುಂಗಿ ಹೊರತಗೆಯುವ ಮೂಲಕ ವಿಶ್ವದಾಖಲೆ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು.
ಆದರೆ ಕಾರ್ತಿಕ ಬೆಲ್ಲದ ಕೇವಲ 18 ಸೆಕೆಂಡುಗಳಲ್ಲಿ ಎಂಟು ಮೀಟರ್ ಉದ್ದ ಮೂರು ಮೀಟರ್ ಅಗಲ ಬಟ್ಟೆ ಬಳಸಿ ನುಂಗುವ ಮತ್ತು ಹೊರತೆಗೆಯುವ ಮೂಲಕ ಹಿಂದಿನ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದಿದ್ದಾರೆ.

ಅದರ ಪ್ರತಿಫಲವೇ ಶಾಲಾ ಹಂತದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಗಿಟ್ಟಿಸಿದಾಗ ಮತ್ತಷ್ಟು ಆತ್ಮವಿಶ್ವಾಸ ಇಮ್ಮಡಿಯಾಯಿತು. ಮುನವಳ್ಳಿಯ ಅಜ್ಜಪ್ಪ ಗಡಮಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾದ ಪ್ರೊ.ಆರ್.ಎಚ್.ಪಾಟೀಲರ ಹಾಗೂ ಅಶೋಕ ಸಂಕಣ್ಣವರ ಇವರ ಪ್ರೋತ್ಸಾಹ ಇವರನ್ನು ತಾಲೂಕ, ಜಿಲ್ಲೆ, ರಾಜ್ಯ ಮಟ್ಟದವರೆಗೂ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿತು. ಒಂದರಿ0ದ ಮೂರನೆ ತರಗತಿ ಮುನವಳ್ಳಿಯ ಎಂ.ಎಲ್.ಇ.ಎಸ್ ಶಾಲೆಯಲ್ಲಿ ಓದಿ,ಧಾರವಾಡ ಜಿಲ್ಲೆಯ ಹೆಬಸೂರಿನಲ್ಲಿ4 ಮತ್ತು 4 ನೇ ತರಗತಿ ವ್ಯಾಸಾಂಗ ಮಾಡಿದ ಕಾರ್ತಿಕ 6 ರಿಂದ 7 ನೇ ತರಗತಿಯನ್ನು ಬೈಲಹೊಂಗಲದ ಕೆ.ಆರ್.ಸಿ.ಎಸ್. ಶಾಲೆಯಲ್ಲಿ ಓದಿರುತ್ತಾರೆ. 8 ರಿಂದ 10 ರ ವರೆಗೆ ಕುಮಾರೇಶ್ವರ ಪ್ರೌಢಶಾಲೆ ಸವದತ್ತಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿ.ಯು.ಸಿ ಮುಗಿಸಿ ಸವದತ್ತಿಯ ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಕಾಂ ಓದಿ ಕಾರ್ತಿಕ ಈ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ನೋಡಿದರೆ ಎಂಥವರೂ ಬೆರಗಾಗುವುದರಲ್ಲಿ ಸಂದೇಹವಿಲ್ಲ. ೨೦೦೯ ರಲ್ಲಿ ಮುನವಳ್ಳಿಯಲ್ಲಿ ಜರುಗಿದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ ಕಾರ್ತಿಕ ಅದೇ ವರ್ಷ ಕರ್ನಾಟಕ ರಾಜ್ಯ ಯೋಗ ಚಾಂಪಿಯನ್ ಶಿಪ್ ದಲ್ಲಿ ಕೂಡ ಭಾಗವಹಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ.

2010ರಲ್ಲಿ ಮುನವಳ್ಳಿಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಯೋಗ ಚಾಂಪಿಯನ್ ಶಿಪ್‌ದಲ್ಲಿ ದ್ವಿತೀಯ ಸ್ಥಾನ, ೨೦೧೧ ರಲ್ಲಿ ಪಾಂಡಿಚೇರಿಯ ಪ್ರವಾಸೋದ್ಯಮ ಇಲಾಖೆಯವರು ನಡೆಸಿದ ಅಂತರಾಷ್ಟ್ರೀಯಯೋಗ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ, ಬೆಂಗಳೂರಿನಲ್ಲಿ ೨೦೧೪ರಲ್ಲಿ ಉತ್ತರ ಭಾರತ ಯೋಗಾಸನ ಶಾಲೆ ಹಾಗೂ ಎಸ್.ಜಿ.ಎಸ್ ಅಂತರಾಷ್ಟ್ರೀಯ ಯೋಗಾ ಸಂಸ್ಥೆಯವರು ಜಂಟೀಯಾಗಿ ನಡೆಸಿದ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವ, ಬೀದರ್‌ನಲ್ಲಿ ಜರುಗಿದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಯೋಗಾ ತಂಡದೊಳಗೆ ಆಯ್ಕೆಯಾಗುವ ಮೂಲಕ ಪಿ.ಯು.ಸಿ ವಿದ್ಯಾರ್ಥಿಗಳ ಯೋಗಾ ತಂಡದಲ್ಲಿ ಅವಕಾಶ ಪಡೆಯುತ್ತಾರೆ.
೨೦೧೪-೧೫ರಲ್ಲಿ ಪತಂಜಲಿಯವರು ಹರಿಯಾಣದಲ್ಲಿ ನಡೆಸಿದ ಅಖಿಲ ಭಾರತೀಯ ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ, ೨೦೧೫ರಲ್ಲಿ ಪಾಂಡಿಚೇರಿಯ ಪ್ರವಾಸೋದ್ಯಮ ಇಲಾಖೆಯವರು ಜರುಗಿಸಿದ ಅಂತರಾಷ್ಟ್ರೀಯಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.


ಅಲ್ಲಲ್ಲಿ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಾರ್ತಿಕ್ ಅವರಿಗೆ ಹಲವರ ಒಡನಾಟ ಬೆಳೆಯುತ್ತದೆ. ಇರುವ ಚಿಕ್ಕೊಪ್ಪ ಶಿವಾನಂದ ಸ್ವಾಮಿಗಳು, ಬೆಳ್ಳಿಕಟ್ಟಿಯ ಸತ್ಯ ದೇವದಾಸ್ , ಯೋಗ ಪ್ರತಿನಿಧಿ ನಿರಂಜನ ಮೂರ್ತಿ(ಬೆಂಗಳೂರು) ಹಾಗೂ ವಿದೇಶದಲ್ಲಿ ನೆಲೆಸಿರುವ ಗೌರವ ಶರ್ಮಾ (ಜಾಗತಿಕ ಯೋಗ ಚಾಂಪಿಯನ್.ವಿಯೆಟ್ನಾ0) ಅವರಿ0ದ ಸಲಹೆಗಳನ್ನು ಪಡೆಯುತ್ತಿರುತ್ತೇನೆ. ಅದು ಕೂಡಾ ನನ್ನ ಸಾಧನೆಗೆ ಕಾರಣವಾಯಿತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರವರು.

ಅಷ್ಟೇ ಅಲ್ಲ ಪ್ರತಿವರ್ಷ ಪಾಂಡಿಚೇರಿಯ ಯೋಗಾ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಗಳಿಸುತ್ತ ಬಂದಿದ್ದ ಕಾರ್ತಿಕನ ಪ್ರತಿಭೆ ಮೆಚ್ಚಿ 2016 ಜನೇವರಿ 4 ರಿಂದ 7 ರ ವರೆಗೆ ಪಾಂಡಿಚೇರಿಯಲ್ಲಿ ಜರುಗಿದ ಜಾಗತಿಕ ಯೋಗ ಸ್ಪರ್ಧೆಯಲ್ಲಿ ಕಾರ್ತಿಕನಿಗೆ “ಅತ್ಯತ್ತಮ ಮೌಲ್ಯವುಳ್ಳ ಯೋಗ ಸಾಧಕ” ಪ್ರಶಸ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಇದೆಲ್ಲದರ ಜತೆಗೆ ಮುನವಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಯೋಗ ಕಲಿಸಿಕೊಡುವಂತೆ ಕೇಳಿದರೆ ತಾನು ಪಡೆದುಕೊಂಡ ಯೋಗ ಶಿಕ್ಷಣವನ್ನು ಇತರರಿಗೂ ಕಲಿಸಿಕೊಡುತ್ತಿರುವುದು ಶ್ಲಾಘನೀಯ.
ಯೋಗ ಸಂಸ್ಕೃತ ವಿಶ್ವವಿದ್ಯಾಲಯ ಪ್ಲೋರಿಡಾ, ತಮಿಳುನಾಡಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜರುಗಿದ ‘ಯೋಗ ಪ್ರದರ್ಶನ ಮತ್ತು ಸ್ಪರ್ಧೆ’ ಕಾರ್ಯಕ್ರಮದಲ್ಲಿ ಕಾರ್ತಿಕ್ ಅವರಿಗೆ “ಯೋಗ ಭಾಸ್ಕರ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸದ್ಯ ಆನ್‌ಲೈನ್ ಮೂಲಕ ಯೋಗ ಚಿಕಿತ್ಸಕನಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಯೋಗ ವಿಷಯದಲ್ಲಿ ಪಿಎಚ್ಡಿ ಮಾಡುವ ಇಚ್ಛೆ ಕಾರ್ತಿಕ್ ಅವರದ್ದು.
ಕಾರ್ತಿಕ್ ಅವರ ಸಂಪರ್ಕಿಸಲು : 9742471071.



Related Articles

ಪ್ರತಿಕ್ರಿಯೆ ನೀಡಿ

Latest Articles