ದೂರ್ವಾಸ ಮುನಿಗಳು ಸ್ಥಾಪಿಸಿದ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ

*ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನ ದೇವಾಲಯಗಳಿಗೆ ಅದರದೇ ಆದ ಇತಿಹಾಸವಿದೆ. ದೇವಾಲಯಗಳ ವಾಸ್ತುಶಿಲ್ಪದ  ಹಿನ್ನೆಲೆಯಲ್ಲಿ ಗಮನ ಸೆಳೆದರೆ, ಕೆಲವು ಕಡೆ ದೇಗುಲಗಳಲ್ಲಿನ ವೈಭವದ ಮೂರ್ತಿ ಶಿಲ್ಪಗಳು ಗಮನ ಸೆಳೆಯುತ್ತವೆ.  ಇನ್ನು ಹಲವು ದೇವಾಲಯಗಳು ಅರಾಧಿಸುವ ಮೂರ್ತಿ ಶಿಲ್ಪಕ್ಕೆ ಪುರಾಣದ ನಂಟು ನೋಡಬಹುದು. ಅಂತಹ ದೇವಾಲಯಗಳಲ್ಲಿ ಶಿವಮೊಗ್ಗದ ನಗರದಲ್ಲಿರುವ ಕೋಟೆ ಆಂಜನೇಯ ದೇವಾಲಯವೂ ಒಂದು.

ಇತಿಹಾಸದ ಪುಟದಲ್ಲಿ ಗಂಗರ ಕಾಲದಿಂದ ಕೆಳದಿ ಅರಸರ ಕಾಲದವರೆಗೂ ಶಿವಮೊಗ್ಗದಲ್ಲಿ ಆಳ್ವಿಕೆ ನಡೆಸಿದ್ದು ಇಲ್ಲಿನ ರಂಗನಾಥ ದೇವಾಲಯವನ್ನು ಗಂಗರ ಕಾಲದಲ್ಲಿ ನಿರ್ಮಿಸಲಾಗಿತ್ತು. 1043 ರ ಶಾಸನದಲ್ಲಿ ಸಿಮೊಗೆ ಎಂದು ಉಲ್ಲೇಖವಿದ್ದು ಇನ್ನು ಹೊಯ್ಸಳರ ವೀರ ಬಲ್ಲಾಳನ ಕಾಲದಲ್ಲಿ ಇಲ್ಲಿನ ಸೋಗಾನೆ ಗ್ರಾಮವನ್ನು ದತ್ತಿ ನೀಡಿ ಹೊಸಳೇಶಪುರ ಎಂದು ಕರೆದ ಉಲ್ಲೆಖ ನೋಡಬಹದು. ಇಲ್ಲಿ ಸ್ಥಳೀಯ ಪುರಾಣದಂತೆ ಇಲ್ಲಿನ ತುಂಗಾ ತೀರದಲ್ಲಿ ದೂರ್ವಾಶ್ರಮವಿತ್ತು ಎಂಬ ನಂಬಿಕೆ ಇದೆ. ಇನ್ನು ದಡಿಗ ಮಾಧವರ ಕಾಲದಲ್ಲಿ ಇಲ್ಲಿನ ಬಸದಿಗೆ ಭೂದಾನ ನೀಡಿದ ಉಲ್ಲೇಖವೂ ಇದೆ.

ಸ್ಥಳೀಯ ಐತಿಹ್ಯ

ಇನ್ನು ಇಲ್ಲಿನ ಸ್ಥಳೀಯ ಪುರಾಣದಂತೆ ದೂರ್ವಾಸ ಮುನಿಗಳು ಇಲ್ಲಿ ಅಶ್ವತ್ಥ ಮರದ ಕೆಳಗೆ ತಪಸ್ಸು ಮಾಡಿ ಇಲ್ಲಿ ಬಾಲ ಅಂಜನೇಯ, ಮಾರುತಿಯಂತ್ರ ಹಾಗು ಶಿವಲಿಂಗವನ್ನು ಪೂಜಿಸತ್ತಿದ್ದರು ಎಂಬ ನಂಬಿಕೆ ಇದೆ. ಈ ದೇವಾಲಯ ಶಿವಪ್ಪನಾಯಕನ ಅರಮನೆಯ ಸಮೀಪದಲ್ಲಿದ್ದು ಕೆಳದಿ ಅರಸರ ಕಾಲದಲ್ಲಿ ಕೋಟೆ ಭಾಗವಾದ ಕಾರಣ ಕೋಟೆ ಆಂಜನೇಯ ದೇವಾಲಯ ಎಂದು ಹೆಸರು ಬಂದಿದೆ.

ಗರ್ಭಗುಡಿಯಲ್ಲಿ ಬಾಲ ಆಂಜನೇಯನ ಮೂರ್ತಿ

ಸಾಕಷ್ಟು ನವೀಕರಣಗೊಂಡಿರುವ ಈ ದೇವಾಲಯದಲ್ಲಿ ಗರ್ಭಗುಡಿ, ಅಂತರಾಳ ಹಾಗು ನವರಂಗ ಇದ್ದು ಹೊಸದಾಗಿ ನಿರ್ಮಿಸಿದ ರಾಜಗೋಪುರವಿದೆ. ಗರ್ಭಗುಡಿಯಲ್ಲಿ ಬಾಲ ಆಂಜನೇಯನ ಮೂರ್ತಿ ಇದ್ದರೆ ಇನ್ನೊಂದು ಗರ್ಭಗುಡಿಯಲ್ಲಿ ಶ್ರೀ ರಾಮ, ಸೀತಾ, ಲಕ್ಷಣ ಹಾಗು ಆಂಜನೇಯನ ಶಿಲ್ಪ ನೋಡಬಹುದು.  ಅಂತರಾಳದ ಬಾಗಿಲುವಾಡಗಳು ಗಮನ ಸೆಳೆಯುತ್ತದೆ. ನವರಂಗದಲ್ಲಿ ಹೊಯ್ಸಳರ ಕಾಲದ ಕಂಭಗಳಿದ್ದು ಇದರ ಆಧಾರದ ಮೇಲೆ ಹಾಗು ಇಲ್ಲಿನ ವೀರ ಬಲ್ಲಾಳನ ಶಾಸನದಿಂದ, ಹೊಯ್ಸಳ ಅರಸರಿಂದ ಈ ದೇವಾಲಯ ನಿರ್ಮಾಣಗೊಂಡಿದೆ ಎನ್ನಲಾಗಿದೆ. ವೈಷ್ಣವ ದ್ವಾರಪಾಲಕರನ್ನು ನೋಡಬಹುದು. ಕೆಳದಿ ಅರಸರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿಯನ್ನ ಈ ದೇವಾಲಯ ಪಡೆಯಿತು.

ಇಲ್ಲಿನ ರಾಮನ ಪರಿವಾರದ ಶಿಲ್ಪಗಳು ಸುಂದರವಾಗಿದ್ದು ಶ್ರೀ ರಾಮ ಮತ್ತು ಲಕ್ಷಣರು ಕೋದಂಡದಾರಿಯಾಗಿದ್ದು ಆಂಜನೇಯ ಗಧಾದಾರಿಯಾಗಿದ್ದಾನೆ. ದೇವಾಲಯದ ಮುಂದೆ ಬಲಿಕಲ್ಲಗಳು ಇರುವುದು ವಿಷೇಶ. ಇಲ್ಲಿ ದೇವಾಲಯಕ್ಕೆ ಕದಂಬ ನಾಗರ ಶೈಲಿಯ ಗೋಪುರವಿತ್ತು ಎನ್ನಲಾಗಿದೆ.  ದೇವಾಲಕ್ಕೆ ಸುಮಾರು 80 ಅಡಿ ಎತ್ತರದ ರಾಜ ಗೋಪುರವನ್ನು ನೂತನವಾಗಿ ನಿರ್ಮಿಸಲಾಗಿದೆ. ದೇವಾಲಯಕ್ಕೆ ತ್ರಿಕಾಲ ಪೂಜೆ ನಡೆಯಲಿದ್ದು ರಾಮನವಮಿ ಹಾಗು ದಸರೆಯಲ್ಲಿ ವಿಷೇಶ ಪೂಜೆಗಳು ನಡೆಯಲಿದೆ.

ಆಧುನಿಕ, ಇತಿಹಾಸ ಹಾಗು ಪುರಾಣದ ಕೊಂಡಿಯಂತಿರುವ ಈ ದೇವಾಲಯವು ಊರ ಮಧ್ಯದಲ್ಲಿದ್ದು ಪಕ್ಕದಲ್ಲಿರುವ  ಶಿವಪ್ಪನಾಯಕನ ಅರಮನೆಯನ್ನ ಹಾಗು ಅಲ್ಲಿನ ಶಿಲ್ಪ ಲೋಕದ ವೈಭವವನ್ನು ನೋಡಬಹುದು. 

Related Articles

ಪ್ರತಿಕ್ರಿಯೆ ನೀಡಿ

Latest Articles