ರೈತಾಪಿ ಜನರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ

ಇಂದು ಮಣ್ಣೆತ್ತಿನ ಅಮಾವಾಸ್ಯೆ. ರೈತಾಪಿ ಜನರ ಬಂಧು ಎತ್ತುಗಳನ್ನು ಪೂಜಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವ ವಿಶೇಷ ಹಬ್ಬ.

*ವೈ.ಬಿ.ಕಡಕೋಳ

ಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಮಣ್ಣೆತ್ತಿನ ಅಮಾವಾಸ್ಯೆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದರ ಮುಂದೆ ಒಂದು ಚಿಕ್ಕ ಗ್ವಾದಲಿ(ಮೇವು-ನೀರು ಹಾಕಲು) ಮಾಡಿ ಪೂಜಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ.
ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ
ಮಣ್ಣೇ ಲೋಕದಲಿ ಬೆಲೆಯಾದ್ದು

ಎಂದು ಹುಟ್ಟಿನಿಂದ ಚಟ್ಟದವರೆಗೂ ಮಣ್ಣ ಜೊತೆಗೆ ನಮ್ಮ ಬದುಕಿನಲ್ಲಿ ಆ ಮಣ್ಣಿನಿಂದ ಆರಂಭವಾಗುವ ಮಣ್ಣೆತ್ತು ಅಮಾವಾಸ್ಯೆ.
ಈ ಅಮಾವಾಸ್ಯೆ ಮೊದಲು ಕಾರಹುಣ್ಣಿಮೆ ಸಡಗರದಿಂದ ಆಚರಿಸುವ ರೈತರು, ತಮ್ಮ ರಾಸುಗಳಿಗೆ ಮಳೆಯಿಂದ ಕೆಲವು ಸಮಯ ಬಿಡುವು ಕೊಟ್ಟು ಅವುಗಳನ್ನು ಪೂಜ್ಯನೀಯವಾಗಿ ಗೌರವಿಸುವ ಸಂಪ್ರದಾಯ ಮಣ್ಣೆತ್ತಿನ ಅಮಾವಾಸ್ಯೆ.

ಈ ಅಮಾವಾಸ್ಯೆ ತಮ್ಮ ಮನೆಯ ಎತ್ತುಗಳನ್ನು ಸಿಂಗರಿಸುವುದಷ್ಟೇ ಅಲ್ಲ. ಎತ್ತುಗಳು ಇರಲಿ ಇಲ್ಲದಿರಲಿ ಎಲ್ಲರೂ ಗೌರವಿಸುವರು. ಮಣ್ಣಿಂದ ಎತ್ತಿನ ಮೂರ್ತಿಗಳನ್ನು ಮಾಡಿ ಅವುಗಳನ್ನು ಮನೆಯಲ್ಲಿ ಇಟ್ಟು ಅಮಾವಾಸ್ಯೆಯಂದು ಪೂಜಿಸುವರು.
ಮರುದಿನ ಪಾಡ್ಯ ಕೂಡ ಪೂಜಿಸಿ ಹೊಲ ಹೊಂದಿದವರು ಅವುಗಳನ್ನು ನಾಗರ ಪಂಚಮಿಯವರೆಗೂ ದಿನನಿತ್ಯ ಪೂಜಿಸುತ್ತ ಕೆರೆಕೆಟ್ಟಂಬಲಿ ಅಂತ ಮಾಡಿ ಅಂಬಲಿ ಮಾಡಿಕೊಂಡು ಪಂಚಮಿಯ ನಂತರದ ದಿನ ತಮ್ಮ ಹೊಲಗಳಿಗೆ ತಗೆದುಕೊಂಡು ಹೋಗಿ ಇಡುವರು. ಅಂದರೆ ಮಳೆಯಿಂದ ಬಿತ್ತಿದ ಫಸಲು ಚೆನ್ನಾಗಿ ಬರಲಿ, ತಮ್ಮ ರಾಸುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದುಕೊ0ಡು ಭಕ್ತಿಯಿಂದ ಸ್ಮರಿಸುವ ಅಮಾವಾಸ್ಯೆಯಿದು.

ವಿಶಿಷ್ಟ ನಂಬಿಕೆ
ರೈತರು ಎತ್ತುಗಳನ್ನು ಎಷ್ಟರ ಮಟ್ಟಿಗೆ ನಂಬಿರುವರೆ0ದರೆ ಕಾರಹುಣ್ಣಿಮೆಯ ಕರಿ ಹರಿದು ನಂತರ ಮನೆಗೆ ತರುವಾಗ ಮನೆಯ ಬಾಗಿಲಲ್ಲಿ ತಾವು ಆ ವರ್ಷ ತಮ್ಮ ಹೊಲಗಳಿಗೆ ಯಾವ ಬೆಳೆ ಬಿತ್ತಬೇಕು ಎಂದು ನಿರ್ಧರಿಸವರೋ ಆ ಎಲ್ಲ ಧಾನ್ಯಗಳನ್ನು ಮನೆಯ ಎತ್ತು ಹಾದು ಹೋಗುವ ಬಾಗಿಲಲ್ಲಿ ಇಡುತ್ತಾರೆ ಆಗ ಎತ್ತು ತನ್ನ ಕಾಲಿನಿಂದ ಯಾವ ಧಾನ್ಯವಿದ್ದ ಸೇರನ್ನು ತಳ್ಳಿ ಮುಂದೆ ಸಾಗುತ್ತದೆಯೋ ಆ ಧಾನ್ಯದ ಬೆಳೆಯನ್ನು ಆ ವರ್ಷ ತಮ್ಮ ಹೊಲಕ್ಕೆ ಹಾಕುವ ಮಟ್ಟಿಗೆ ಎತ್ತುಗಳ ಮೇಲೆ ಭಕ್ತಿಯನ್ನು ಹೊಂದಿರುವರು.
ಕಾರಹುಣ್ಣಿಮೆಗೆ ಮಳೆ ಬಿದ್ದು ತಮ್ಮ ಹೊಲಗಳಿಗೆ ಬಿತ್ತನೆ ತಯಾರಿ ಮಾಡಿದ ರೈತ ಮಣ್ಣೆತ್ತು ಅಮವಾಸೆ ದಿನ ಎತ್ತುಗಳನ್ನು ಸಿಂಗರಿಸಿ ಅವುಗಳಿಗೂ ಕೂಡ ವಿಶ್ರಾಂತಿ ನೀಡುವ ಜೊತೆಗೆ ಪೂಜ್ಯನೀಯವಾಗಿ ಪೂಜಿಸುವನು.ಅವುಗಳಿಗೆ ಉತ್ತಮ ಆಹಾರ ನೀಡುವುದು. ಚೆನ್ನಾಗಿ ನೋಡಿಕೊಳ್ಳುವುದು. ಮುಂದೆ ಶ್ರಾವಣ ಆರಂಭವಾಗುವ ಹೊತ್ತಿಗೆ ಅವು ವಿಶ್ರಾಂತಿಯಿ0ದ ಮತ್ತೆ ಹೊಲ-ಗದ್ದೆಗಳ ಕೆಲಸಕ್ಕೆ ಅಣಿಯಾಗಲೆಂದು ಪೂಜಿಸುವನು. ಅಷ್ಟೇ ಅಲ್ಲ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಕೂಡ ಜಗುಲಿಯ ಮೇಲಿಟ್ಟು ನಾಗರ ಪಂಚಮಿಯವರೆಗೂ ಬರುವ ಎಲ್ಲ ಮಂಗಳವಾರದ0ದು ಪೂಜೆ ಸಲ್ಲಿಸುವುದನ್ನು ತಪ್ಪದೇ ಮಾಡುತ್ತಾರೆ.


ಇನ್ನು ಕೆಲವು ಕಡೆ ಸೋಮವಾರದಂದು ಪೂಜಿಸುವರು. ಸೋಮವಾರ ಬಸವಣ್ಣನ ವಾರವೆಂದು ಪ್ರತೀತಿ. ನಾಗರ ಪಂಚಮಿ ನಂತರದ ದಿನ ಕೆರೆಕಟ್ಟಂಬಲಿ ಅಂತಾ ಆಚರಿಸುವರು. ಈ ದಿನ ಮಣ್ಣೆತ್ತಿನ ಅಮವಾಸೆ ಪೂಜಿಸಿದ ಎತ್ತಿನ ಮೂರ್ತಿಗಳನ್ನು ಮನೆಯಲ್ಲಿ ಅಂಬಲಿ ಮಾಡಿಕೊಂಡು ಹೊಲಕ್ಕೆ ಒಯ್ದು ಒಂದೆಡೆ ಆಲದ ಮರ ಅಥವ ಬೇವಿನ ಮರವಿದ್ದರೆ ಅವುಗಳ ಕೆಳಗೆ ಪೂರ್ವಾಭಿಮುಖವಾಗಿ ಇಟ್ಟು ಮನೆಯಿಂದ ತಂದ ಹಂಗನೂಲು ಕೊಕ್ಕಾಬತ್ತಿ ಕೋಡಾಬತ್ತಿ ಹಾಕಿ ಪೂಜೆ ಮಾಡುವರು. ಪಂಚಮಿಗೆ0ದು ಮಾಡಿದ್ದ ಉಂಡಿಗಳು, ಕಡಲೆ ಬೇಳೆಯ ಉಸುಳಿಯ ಜೊತೆಗೆ ಅಂಬಲಿ ಎಡೆ ಹಿಡಿಯುವರು. ಅಂಬಲಿಯನ್ನು ಹೊಲದ ತುಂಬೆಲ್ಲ ಚರಗ ಚೆಲ್ಲುವರು. ಅಂಬಲಿ ಮನಸಿಗೆ ತಣಿವು. ಅಂಬಲಿ ಕುಡಿದ ಮನಸು ಹೇಗೆ ತಣಿದು ಮತ್ತೆ ಚೇತನಗೊಳ್ಳುವುದೋ ಹಾಗೆ ತನ್ನ ಜಾನುವಾರಗಳ ಬದುಕು ಕೂಡ ತಣಿವಿನಿಂದ ವರ್ಷವಿಡೀ ಕೂಡಿರಲಿ ಎಂಬ ಭಕ್ತಿ ಭಾವ. ಇದನ್ನು ಜನಪದರು ಕೆರೆಕಟ್ಟಂಬಲಿ ಎಂದು ಕರೆಯುವರು. ಹೀಗೆ ಮಣ್ಣನ್ನೇ ನಂಬಿದ ಬದುಕು ಮಣ್ಣಿಂದಲೇ ಕೊನೆಗೊಳ್ಳುವ ಜೀವದ ಜೊತೆಗೆ ಜೀವಂತ ಎತ್ತುಗಳ ಪೂಜಿಸುವ ಜೊತೆಗೆ ಮಣ್ಣೆತ್ತುಗಳನ್ನು ಪೂಜಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ.


ಹೆಣ್ಣು ಮಕ್ಕಳಿಗೆ ಇದು ವಿಶೇಷ
ಮಣ್ಣೆತ್ತಿನ ಅಮಾವಾಸ್ಯೆ ಆಷಾಢ ಮಾಸ ಆರಂಭದ ಪ್ರತೀಕ. ಆಷಾಢ ಮಾಸದಾಗ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಅತ್ತೆ ಮಾವನ ಮುಖ ನೋಡಬಾರದು ಎಂಬ ಸಂಪ್ರದಾಯವಿದೆ. ಹೀಗಾಗಿ ತವರು ಮನೆಗೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಮಣ್ಣೆತ್ತಿನ ಅಮಾವಾಸ್ಯೆಯ ಹಿಂದಿನ ದಿನವೇ ಬರುವುದು ವಾಡಿಕೆ. ಈ ರೀತಿ ಬಂದ ಹೆಣ್ಣು ಮಕ್ಕಳು ಮಣ್ಣೆತ್ತಿನ ಅಮಾವಾಸ್ಯೆ, ಗುಳ್ಳವ್ವನ ಪೂಜೆ, ನಾಗರ ಅಮವಾಸೆವರೆಗೂ ತವರು ಮನೆಯಲ್ಲಿ ಹಬ್ಬಗಳನ್ನು ಆಚರಿಸಿ ಮುಂದೆ ಶ್ರಾವಣದಲ್ಲಿ ಗಂಡನ ಮನೆಗೆ ಹೋಗುವುದು ತಲತಲಾಂತರದಿ0ದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.


Related Articles

ಪ್ರತಿಕ್ರಿಯೆ ನೀಡಿ

Latest Articles