*ಜ್ಯೋತಿ ಸಿ ಕೋಟಗಿ
ಕಿತ್ತೂರ ನಾಡಿನ್ಯಾಗ ಸಂಗೊಳ್ಳಿ ಊರಾಗ
ಇತ್ತಪ್ಪ ಒಂದು ಹುಲಿ
ಅದರ ಹೆಸರ ಕೇಳಿದರ ಸಾಕ
ಎಂಥಾವರಿಗೂ ಮೈಯ್ಯಾಗ ನಡುಕ//
ಮಂದೀಯ ಬಾಯಾಗ ರಾಯಣ್ಣ ಅಂದರ
ಎ0ಟೆದೆಯ ಬಂಟ ಶೂರಾದಿ ಶೂರ
ದರ‍್ಯಾಗ ಬರುವಾಗ ವಾರಿಗಿ ಗೆಳೆಯರು
ನೆದರ ಬಿಟ್ಟಾರೊ ರಾಯಣ್ಣಗ//
ತಾಯಂದಿರೆಲ್ಲ ಎಂತ ಮಗನವ್ವ
ಹೆತ್ತವಳು ತನ್ನಗಿರಲೆವ್ವ ಎಂದಾರು
ನಮಗೊಬ್ಬ ಮಗ ಹಿಂಗಿರಲವ್ವ
ಊರಿಗೆ ಮಾದರಿ ಆಗಿರಲವ್ವ ಎಂದು ಬೆಡ್ಯಾರು//
ರಾಯಣ್ಣ ನೆಂದರ ಎಲ್ಲರಿಗೂ ಪ್ರೀತಿ
ರಾಯಣಿಗೆ ಇಲ್ಲ ಯಾರದು ಭೀತಿ
ಚೆನ್ನಮ್ಮ ತಾಯಿಯ ಪ್ರೀತಿಯ ಪುತ್ರ
ಕೆಂಚವ್ವ ತಾಯಿಯು ಹಡೆದ ರತ್ನ//
ಊರು ಕೇರಿ ಕಾಡು ಮೇಡು
ಅಲೆದಾಡಿ ಮಾಡ್ಯಾನು ಯುದ್ದಕ್ಕೆ ತಯಾರಿ
ಆಂಗ್ಲರ ಜೊತೆಗೂಡಿ ನಮ್ಮವರೇ ಮಾಡ್ಯಾರು ಪಿತೂರಿ
ಮೋಸಕ್ಕೆ ಬಲಿಯಾತು ಸಂಗೊಳ್ಳಿ ಮರಿ//
ಸಂಗೊಳ್ಳಿ ಹುಲಿ ಸತ್ತಿತೆಂದರು
ಚೆನ್ನಮ್ಮನ ಮುಂದ ಪಿರಂಗ್ಯಾರು
ಹುಸಿ ಮಾತ ನಂಬಿದಳು ತಾಯಿ
ವಜ್ರದುಂಗುರವ ನುಂಗಿದಳು ದೇವಿ//
ಪಿರಂಗ್ಯಾರ ಆಟಕ ಹಲ್ಲ ಮಸಿದಾನು
ತನ್ನವರ ಮೋಸಕ ಕುಸಿದು ಬಿದ್ದಾನು
ಚೆನ್ನಮ್ಮ ತಾಯಿಯ ನೆನೆದು ಅತ್ತಾನ
ತಾಯ್ನೆಲವ ಉಳಿಸಾಕ ಫಣತೊಟ್ಟ ನಿಂತಾನ//
ಗೆಳತಾನ ಹೇಳಿ ಹೇಡಿಗಳು ಬಂದಾರು
ಮಸಲತ್ತ ನಡೆಸಿ ಒಳಸಂಚು ನಡಿಸ್ಯಾರು
ಜಳಕ ಮಾಡುವಾಗ ಕತ್ತಿ ಕೇಳ್ಯಾರು
ಕೈಯ್ಯಾಗ ಬಂದಮ್ಯಾಲ ಬಲಿ ಹಾಕ್ಯಾರು//
ಆಂಗ್ಲರ ವಿರುದ್ದ ಹೋರಾಟ ಮಾಡ್ಯಾನೋ
ತಾಯ್ನಾಡಿಗಾಗಿ ಜೀವಾ ಕೊಟ್ಟಾನೋ
ಮರ ಮರನೇ ಮರಗಿದರೋ ಮಂದಿ
ಹಿಡಿಸಲಿಲ್ಲವೋ ಸಂದಿ ಗೊಂದಿ//
ಮಸಲತ್ತಿನ ಸಂಚ ನೆನದ
ಸ್ವಾಮ್ಯಾರು ಮರಗಿದರೋ ಬಿದ್ದ
ಕೊಟ್ಟಾನೋ ಶಾಪ ಗುರು ಸಿದ್ದ
ಹುಳ ಬೀಳಲಿ ತಿನ್ನುವ ಅನ್ನದಾಗ//
ಪರಂಗ್ಯಾರ ಸೊಂಟ ಮುರಿತಾರು
ದೇಶ ಬಿಟ್ಟ ಓಡಿಸತಾರು ನಮ್ಮವರು
ಮನಿಗೊಬ್ಬ ರಾಯಣ್ಣ ಹುಟ್ಟಿ ಬರತಾನು
ಎಂದು ಹರಿಸ್ಯಾರು ನಮ್ಮ ಗುರುಸಿದ್ದರು//
ಶ್ರೀಮತಿ
ಸ.ಮಾ.ಪ್ರ ಶಾಲೆ ತಲ್ಲೂರ
ಬೆಳಗಾವಿ. ೯೯೮೦೮೦೧೯೯೩