ಸಿಂಧೋಗಿಯ ಶ್ರೀ ಮುಕ್ತಾನಂದ ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ಜುಲೈ 19 ರಂದು ಆಶ್ರಮದಲ್ಲಿ ನಡೆಸಿಕೊಟ್ಟ ಸತ್ಸಂಗದ ಪೂರ್ಣಪಾಠ ಇಲ್ಲಿದೆ.
“ಕಂಸನು ಶ್ರೀ ಕೃಷ್ಣನಿಂದ ತನ್ನ ಮರಣವೆಂದು ಅರಿತಿದ್ದನು. ಶ್ರೀಕೃಷ್ಣನು ಗೋಕುಲದಲ್ಲಿರುವ ಸಂಗತಿಯನ್ನು ನಾರದರು ತಿಳಿಸಿದರು. ಆಗ ಕಂಸನು ಶ್ರೀ ಕೃಷ್ಣ ಬಲರಾಮರನನ್ನು ಕೊಲ್ಲಲು ತನ್ನ ಆಸ್ಥಾನಕ್ಕೆ ಅವರನ್ನು ಕರೆತರಲು ಅಕ್ರೂರನಿಗೆ ಜವಾಬ್ದಾರಿ ವಹಿಸಿದನು. ಆಗ ಅಕ್ರೂರನು ‘ಮಹಾರಾಜ , ವಿಪತ್ತನ್ನು ಪರಿಹರಿಸಿಕೊಳ್ಳಬೇಕೆಂಬ ನಿನ್ನ ಆಲೋಚನೆ ಸಮೀಚೀನವಾಗಿದೆ. ಸಿದ್ದಿಸಲಿ- ಸಿದ್ದಿಸದಿರಲಿ, ಅಭಿನಿವೇಶನವಿಲ್ಲದೆ ಸಮಬುದ್ದಿಯಿಂದ ಆಚರಿಸಬೇಕು. ದೈವವೇ ಫಲವನ್ನು ಕೊಡತಕ್ಕುದು. ಮನುಷ್ಯನು ದೈವಹತವಾದ ದೊಡ್ಡದೊಡ್ಡ ಮನೋರಥಗಳನ್ನು ಸಂಕಲ್ಪಿಸಿಕೊಳ್ಳುತ್ತಾನೆ. ಆದ್ದರಿ0ದಲೇ ಹರ್ಷಶೋಕಗಳಿಗೆ ಒಳಗಾಗುತ್ತಾನೆ. ಆದರೂ ನಿನ್ನ ಆಜ್ಞೆಯನ್ನು ನಡೆಸುವೆನು” ಎಂದನು.
ಇಲ್ಲಿ ಅಕ್ರೂರನಿಗೆ ಕೃಷ್ಣನ ಮೇಲೆ ಭಕ್ತಿ ಈ ನೆಪದಿಂದಲಾದರೂ ಭಕ್ತಿಯಿಂದ ಕೃಷ್ಣನನ್ನು ಕಣ್ತುಂಬ ನೋಡುವ ಆಸೆ. ಕಂಸನ ವಿನಾಶ ಬುದ್ಧಿಗೆ ಕೇಡುಗಾಲ ಬಂದಿದೆ ಎಂಬುದನ್ನು ಮನದಲ್ಲಿ ನೆನೆಯುತ್ತ ನಡೆದನು. ವಿನಾಶಕಾಲೇ ವಿಪರೀತ ಬುದ್ದಿ ಎನ್ನುವಂತೆ ಅಕ್ರೂರನು ಕೃಷ್ಣ ಬಲರಾಮರನ್ನು ಕಂಸನ ಆಸ್ಥಾನಕ್ಕೆ ಕರೆ ತರುವಷ್ಟರಲ್ಲಿ ಅವರನ್ನು ಸಂಚಿನಿ0ದ ಕೊಲ್ಲುವ ದುರಾಲೋಚನೆಯನ್ನು ಕಂಸನು ಮಾಡತೊಡಗಿದನು.
ಹುಟ್ಟಿದ ಮನುಷ್ಯ ಸಾಯಲೇಬೇಕು. ಸಾವು ಎಂಬುದನ್ನು ಮುಂಚಿತವಾಗಿ ಊಹಾತ್ಮಕವಾಗಿ ಬಯಸಬಾರದು. ಬಾರದು ಬಪ್ಪದು ಬಪ್ಪದು ತಪ್ಪದು ಎಂಬುದನ್ನು ಅರಿತು ಬದುಕಬೇಕು. ಈಗ ಕೊರೋನಾ ಸಂದರ್ಭದಲ್ಲಿ ಅನೇಕರು ಕೆಮ್ಮು, ನೆಗಡಿ, ಜ್ವರ ಬಂದರೆ ನಮಗೆ ಕೊರೋನಾ ಬಂದಿದೆ ಎಂದು ಭಯದಿಂದಲೇ ಹೃದಯಾಘಾತಕ್ಕೆ ಒಳಗಾಗುತ್ತಿರುವರು. ಅದಕ್ಕೆ ಚಿಕಿತ್ಸೆ ಇದೆ. ಆದರೆ ಬಹಳಷ್ಟು ಜನರು ಅದನ್ನು ಧೈರ್ಯದಿಂದ ಎದುರಿಸುವ ಪ್ರಯತ್ನ ಮಾಡದೇ ಸಾವನ್ನು ಹೊಂದುತ್ತಿರುವರು.
ಕೃಷ್ಣನಿಗೆ ಕಂಸನ ಕರೆ ಗೊತ್ತಿತ್ತು., ಅಕ್ರೂರನು ಭಕ್ತಿಯಿಂದ ಬರುವ ಬಗ್ಗೆಯೂ ತಿಳಿದಿದ್ದನು. ತನ್ನ ಸಾವಿಗೆ ಕಂಸ ಯೋಜಿಸಿದ ಯೋಜನೆಯನ್ನು ವಿಫಲಗೊಳಿಸುವ ತಂತ್ರವೂ ದೇವಪುರುಷನಾದ ಶ್ರೀ ಕೃಷ್ಣನಿಗೆ ಗೊತ್ತಿತ್ತು ಎಂದು ತಿಳಿಸಿದರು.
ಶಿಶುನಾಳ ಷರೀಫರ ಗುರುಭಕ್ತಿಯನ್ನು ಇದೇ ಸಂದರ್ಭದಲ್ಲಿ ಉದಾಹರಿಸುತ್ತ, ಷರೀಫರು ಶಿಶುನಾಳ ಗ್ರಾಮಕ್ಕೆ ಹೋದಾಗ ಆ ಗ್ರಾಮವನ್ನು ಸಮೀಪಿಸುತ್ತಲೇ ತಮ್ಮ ಕಾಲಲ್ಲಿ ಧರಿಸಿದ್ದ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಿನಲ್ಲಿ ಹೊರಟರಂತೆ ಆಗ ಅವರ ಜೊತೆಗಿದ್ದವರು ಕಾರಣ ಕೇಳಲು ಗುರುವಿನ ಸನ್ನಿಧಿಗೆ ಹೊರಟಿರುವೆ ಬರಿಗಾಲಲ್ಲಿ ನಡೆಯುವುದು ಕ್ಷೇಮ. ಚಪ್ಪಲಿಯನ್ನು ಯಾರಾದರೂ ಗರ್ಭಗುಡಿಯಲ್ಲಿ ಧರಿಸಿಕೊಂಡೆ ಹೋಗುವರೋ ಎಂದು ಮಾರ್ಮಿಕವಾಗಿ ನುಡಿದು ಜೊತೆಗಾರರಿಗೆ ಗುರುವಿನ ಸೇವೆ ಮಾಡುವವರು ಗುರುವಿನ ಹತ್ತಿರ ಹೋಗುವಾಗ, ಗುರು ಸನ್ನಿಧಿಯಲ್ಲಿ ಇರುವಾಗ ಭಕ್ತಿಪರವಶನಾಗಿದ್ದರೆ ಒಳ್ಳೆಯದು. ನಾವೂ ಕೂಡ ದೇವಸ್ಥಾನಗಳಿಗೆ ತೆರಳಿದಾಗ ಕಾಲಲ್ಲಿ ಧರಿಸಿದ ಚಪ್ಪಲಿಗಳನ್ನು ಒಂದೆಡೆ ಇಟ್ಟು ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತೇವೆ. ಹಾಗೆಯೇ ಇಂದಿಗೂ ಪಾದಯಾತ್ರೆಯ ಮೂಲಕ ಸಂಚರಿಸುವ ಅನೇಕರು ಕಾಲಲ್ಲಿ ಚಪ್ಪಲಿ ಧರಿಸದೇ ಬರಿಗಾಲಿನಲ್ಲಿ ನಡೆದುಕೊಂಡು ಹೋಗುವುದರ ಸಂಕೇತ ಭಕ್ತಿ ಎಂದು ತಿಳಿಸಿದರು.
ನಿರೂಪಣೆ: ವೈ.ಬಿ.ಕಡಕೋಳ ಸಂಪನ್ಮೂಲ ಶಿಕ್ಷಕರು ಮುನವಳ್ಳಿ