ಕನ್ನಡ ಸಾಹಿತ್ಯ- ಸಂಸ್ಕೃತಿ- ಪತ್ರಿಕಾ ಕ್ಷೇತ್ರದಲ್ಲಿ ಮೊದಲ ಸಾಲಿನ ಮಹನೀಯರಲ್ಲಿ ಒಬ್ಬರು, ಸುಬೋಧ ರಾಮರಾಯರು. ‘ಸುಬೋಧ’ ಪತ್ರಿಕೆ, ‘ಸುಬೋಧ ಕುಸುಮಾಂಜಲಿ’ ಸರಣಿಯಲ್ಲಿ ನೂರನಲವತ್ತು ಮಹನೀಯರ ಜೀವನಚರಿತ್ರೆ, ‘ಸುಬೋಧ ಮುದ್ರಣ ಮತ್ತು ಪ್ರಕಟನಾಲಯ’, ‘ಹರಿದಾಸ ಕೀರ್ತನ ತರಂಗಿಣಿ’, ‘ಶ್ರೀ ರಾಮಾಯಣ ಕಥಾಸಾರ’, ‘ಶ್ರೀ ಮಹಾಭಾರತ ಕಥಾಸಾರ’, ‘ಶ್ರೀ ಭಾಗವತ ಕಥಾಸಾರ’, ‘ಮೈಸೂರಿನ ರಾಜ್ಯಲಕ್ಷ್ಮಿಯರು’ ಸೇರಿದಂತೆ ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪೂರ್ವವಾದದ್ದು.
ಶಾಲಾ ಅಧ್ಯಾಪಕರಾಗಿದ್ದು, ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿ, ಸಾಹಿತ್ಯ ಮತ್ತು ಪತ್ರಿಕಾಕ್ಷೇತ್ರಕ್ಕೆ ಧುಮುಕಿದ ರಾಮರಾಯರು ತಾವೇ ಪ್ರಾರಂಭಿಸಿದ ‘ಸುಬೋಧ’ ಮಾಸಪತ್ರಿಕೆಯನ್ನು ನಿರಂತರ ನಡೆಸುತ್ತಲೇ ರಚಿಸಿದ ಕೃತಿಗಳು ನೂರ ಅರವತ್ತಕ್ಕೂ ಹೆಚ್ಚು ಎಂಬುದನ್ನು ನೋಡುವಾಗ, ಅವರ ಸಾಮರ್ಥ್ಯ ಮತ್ತು ಅಗಾಧ ಪ್ರತಿಭೆಯನ್ನು ಕುರಿತು ಬೆರಗಾಗುತ್ತದೆ.
ಇದೀಗ, ಸುಬೋಧ ರಾಮರಾಯರ ‘ಶ್ರೀರಾಮಾಯಣ ಕಥಾಸಾರ’ ಮರುಮುದ್ರಣಗೊಂಡಿದೆ. ರಾಮರಾಯರ ಕುಟುಂಬದವರ ಶ್ರದ್ಧೆಯೇ ಈ ಕಾರ್ಯವನ್ನು ಮಾಡಿಸಿದೆಯೆಂದರೆ ತಪ್ಪಾಗಲಿಕ್ಕಿಲ್ಲ. 950ಕ್ಕೂ ಹೆಚ್ಚು ಪುಟಗಳ, ರಟ್ಟಿನ ಬೈಂಡಿಂಗ್ ಇರುವ ಈ ಬೃಹದ್ಗ್ರಂಥ ನೋಡುವುದಕ್ಕಷ್ಟೇ ಅಲ್ಲ, ಓದುವುದಕ್ಕೂ ಹಿತವಾಗಿದೆ.
ಅಕ್ಷರಗಳ ಗಾತ್ರವೂ ದೊಡ್ಡದಿದೆ. ಹೀಗಿದ್ದೂ ಇದರ ಬೆಲೆ ರೂ.450 ಮಾತ್ರ! (ಅಂಚೆ ವೆಚ್ಚ ಪ್ರತ್ಯೇಕ) ಗಮನಿಸಬೇಕಾದ ಸಂಗತಿಯೆಂದರೆ, ‘ಶ್ರೀ ರಾಮಾಯಣ ಕಥಾಸಾರ’ ಪುಸ್ತಕದ ಜೊತೆಗೆ, ಸುಬೋಧ ರಾಮರಾಯರೇ ಸಂಪಾದಿಸಿ ಪ್ರಕಟಿಸಿದ್ದ, ನೂರಕ್ಕೂ ಹೆಚ್ಚು ಪುಟಗಳ, ‘ಶ್ರೀಹನುಮದ್ವಿಲಾಸ‘ ಕೃತಿ ಉಚಿತವಾಗಿ ದೊರೆಯಲಿದೆ! ಆಸಕ್ತರು, ಈ ಪುಸ್ತಕಗಳನ್ನು ಖರೀದಿಸಲು
WhatsApp ಮಾಡಿ: 7483681708