ಬೆಂಗಳೂರು: ಗಿರಿನಗರದ ಭಾಗವತ ಆಶ್ರಮದಲ್ಲಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿಯವರು ಗುರುವಾರ 42ನೇ ಚಾತುರ್ಮಾಸ್ಯ ವ್ರತ ಸ್ವೀಕರಿಸಿದರು.
ಸಂಸ್ಥಾನ ಪ್ರತಿಮಾ ಶ್ರೀ ರಾಮದೇವರ ಪೂಜೆ ನೆರವೇರಿಸಿದ ನಂತರ ಶ್ರೀ ವೇದವ್ಯಾಸರಿಗೆ ಪೂಜೆ ಸಲ್ಲಿಸಿ ಸ್ವಾಮೀಜಿ ಚಾತುರ್ಮಾಸದ ದೀಕ್ಷೆ ಸ್ವೀಕಾರ ಮಾಡಿದರು.
ನಂತರ ಭಕ್ತರಿಗೆ ಸಂದೇಶ ನೀಡಿದ ಅವರು, ಚಾತುರ್ಮಾಸ ವ್ರತ ಕೇವಲ ಧಾರ್ಮಿಕ ಸಂಪ್ರದಾಯ ವಲ್ಲ. ಈ ವ್ರತ ಕೇವಲ ಯತಿಗಳಿಗೆ ಮಾತ್ರವಲ್ಲದೇ ಎಲ್ಲ ವರ್ಣದವರಿಗೂ ಅನ್ವಯವಾಗುವಂಥದ್ದು. ಪ್ರತಿಯೊಬ್ಬರೂ ವ್ರತ ಆಚರಿಸಿ ಉತ್ತಮ ಆರೋಗ್ಯದೊಂದಿಗೆ ಪುಣ್ಯ ಸಂಪಾದನೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಚಾತುರ್ಮಾಸ ನಿಮಿತ್ತ ಭಾಗವತ ಆಶ್ರಮದಲ್ಲಿ ನಿತ್ಯ ಸಂಜೆ ವಿದ್ವಾಂಸರಿಂದ ಪ್ರವಚನ, ಜ್ಞಾನ ಸತ್ರ, ಸಂಗೀತ ಕಛೇರಿ ಆಯೋಜಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಚಾತುರ್ಮಾಸದ ಮಾಹಿತಿಗೆ 9945525399/ 8095493958ಸಂಪರ್ಕಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ವಿಕಾಸ ಸವಾಯಿ ವ್ರತ ಸಂಕಲ್ಪದ ಮಂತ್ರ ಪಠಿಸಿದರು. ವೇದಗರ್ಭ ಶೇಷಗಿರಿ ಆಚಾರ್, ಕೇಶವ ದಾಸರು, ನಾಗೇಂದ್ರ ಆಚಾರ್ಯ, ಗೋಪಾಲಕೃಷ್ಣ, ವಿದುಷಿ ಶುಭಾ ಸಂತೋಷ್, ಸುಭದ್ರಾ ವೆಂಕಟೇಶ ಇತರರು ಹಾಜರಿದ್ದರು.