ಆಷಾಢ ಸಂಭ್ರಮದಲ್ಲಿ ಮೈಸೂರಿನ ಚಾಮುಂಡೇಶ್ವರಿದೇವಿ

*ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನಲ್ಲಿ ಹಲವು ದೇವಾಲಯಗಳು ಶಿಲಾ ಮೆರಗಿನಿಂದ ಕೂಡಿದ್ದರೆ ಕೆಲವು ದೇವಾಲಯಗಳು ಸ್ಥಳೀಯ ನಂಬಿಕೆಗೆ ಪ್ರಸಿದ್ದಿ ಪಡೆದಿವೆ.  ಎರಡನ್ನು ಹೊಂದಿರುವ ಕೆಲವು ದೇವಾಲಯಗಳು ನಮ್ಮಲ್ಲಿವೆ.  ಅಂತಹ ದೇವಾಲಯಗಳಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯವೂ ಒಂದು.

ಮೈಸೂರು ಅರಸರ ನಾಡ ದೇವತೆಯಾಗಿದ್ದು ಚಾಮುಂಡೇಶ್ವರಿದೇವಿ ಈಗಲೂ ಕರ್ನಾಟಕದ ಪ್ರಮುಖ ಶಕ್ತಿ ಪೀಠದಲ್ಲಿ ಒಂದು.  ಆಷಾಢಮಾಸದ ಶುಕ್ರವಾರದಂದು ವಿಶೇಷ ಪೂಜೆ ಇಲ್ಲಿ ನಡೆಯಲ್ಲಿದ್ದು, ಆಷಾಢ ಮಾಸದ ಹಿನ್ನೆಲೆಯಲ್ಲಿ ಈ ದೇಗುಲದ ಬಗ್ಗೆ ಕಿರು ಪರಿಚಯ.

ನಾಡ ದೇವತೆ ಎಂದು ಪ್ರಸಿದ್ದಿ ಪಡೆದ ಶ್ರೀ ಚಾಮುಂಡೇಶ್ವರಿಯ ದೇವಾಲಯ ನಾಡಿನ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದು. ಸುಮಾರು 10 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯಕ್ಕೆ ಹೊಯ್ಸಳ ದೊರೆ ವಿಷ್ಣುವರ್ಧನ 1128 ರಲ್ಲಿ ದತ್ತಿ ನೀಡಿದ ಉಲ್ಲೇಖವಿದೆ.  ಆದರೆ ಈ ದೇವಾಲಯ  ಪ್ರವರ್ಧಮಾನಕ್ಕೆ ಬಂದಿದ್ದು ಮೈಸೂರು ಅರಸರ ಕಾಲದಲ್ಲಿ. ಚಿಕ್ಕದಾಗಿದ್ದ ದೇವಾಸ್ಥಾನಕ್ಕೆ 1799 ರಲ್ಲಿ ಮೈಸೂರು ಅರಸರು ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ.

ದೇಗುಲದಲ್ಲಿ….

ಮೂಲತಹ ಡ್ರಾವಿಡ ಶೈಲಿಯಲ್ಲಿನ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಸುಖನಾಸಿ ಹಾಗು ನವರಂಗ, ಪ್ರಾಕಾರ ಹಾಗು ರಾಜ ಗೋಪುರವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಸುಂದರವಾದ ಚಾಮುಂಡೇಶ್ವರಿಯ ಮೂರ್ತಿ ಇದೆ. ದೇವಾಲಯದ ರಾಜಗೋಪರವನ್ನು 19 ನೇ ಶತಮಾನದಲ್ಲಿ  ಮೈಸೂರು ಅರಸರು ನಿರ್ಮಿಸಿದ್ದು ಅವರು ಆ ಸಮಯದಲ್ಲಿ ನೀಡಿದ ಸಿಂಹವಾಹನದಲ್ಲಿ ಈಗಲೂ ದೇವಿಯ ರಥೋತ್ಸವ ನಡೆಯುತ್ತದೆ.  ಅಂತರಾಳದಲ್ಲಿ ಗಣಪತಿ ಹಾಗು ಭೈರವನ ವಿಗ್ರಹವಿದೆ. ದೇವಾಲಯದ ಆವರಣದಲ್ಲಿ  ಮುಮ್ಮಡಿ ಕೃಷ್ಣರಾಜ ಒಡೆಯರ ಪ್ರತಿಮೆ ಇದೆ. ಇಲ್ಲಿನ ಪ್ರವೇಶ ದ್ವಾರದಲ್ಲಿ ನಂದಿನಿ ಮತ್ತು ಕಮಲಿನಿ ಎಂಬ ದ್ವಾರಪಾಲಿಕೆಯರ ವಿಗ್ರಹಗಳು ದ್ವಾರದ ಎಡ ಮತ್ತು ಬಲ ಭಾಗದಲ್ಲಿವೆ.

ಇನ್ನು ಇಲ್ಲಿನ ಸ್ಥಳ ಪುರಾಣದಂತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ಶ್ರೀ ಚಾಮುಂಡೇಶ್ವರಿ ದೇವಿ ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟ ವೆಂಬ ಹೆಸರು ಬಂದಿದೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಇಲ್ಲಿ ದಸರೆಯ ಹಬ್ಬ ವೈಭವದಿಂದ ನಡೆಯುಲ್ಲಿದ್ದು ಇಲ್ಲಿನ ಮಹಿಷಾಸುರನ ಹಾಗು ನಂದಿಯ ಪ್ರತಿಮೆ ಗಮನ ಸೆಳೆಯುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles