ಪವಾಡಪುರುಷ ಶ್ರೀ ನಿತ್ಯಾನಂದ ಅವಧೂತರು

*ವೈ.ಬಿ.ಕಡಕೋಳ

ಪ್ರತಿ ವರ್ಷ ಆಷಾಢಮಾಸ ಕೃಷ್ಣ ಪಕ್ಷ ದ್ವಾದಶಿಯಂದು ಪರಮ ಪೂಜ್ಯ ನಿತ್ಯಾನಂದ ಸ್ವಾಮಿಯವರ ಪುಣ್ಯಾರಾಧನೆ. ಈ ನಿಮಿತ್ತ ನಿತ್ಯಾನಂದರ ಸ್ಮರಣೋತ್ಸವ ಕಾರ್ಯಕ್ರಮಗಳು ಅವರ ಆರಾಧನೆಯ ಸತ್ಸಂಗ ಆಶ್ರಮಗಳಲ್ಲಿ ನಾಡಿನೆಲ್ಲೆಡೆ ಜರುಗುತ್ತವೆ. ಈ ಸಂದರ್ಭ ಪರಮಪೂಜ್ಯರ ಸ್ಮರಣೆಯಲ್ಲಿ ಅವರ ಬದುಕಿನ ಹಿನ್ನೋಟದ ಕುರಿತು ಬರಹ.

ಕೇರಳದಲ್ಲಿ ಜನಿಸಿ ಕರ್ನಾಟಕದಲ್ಲಿ ಸಂಚರಿಸಿ ಮಹಾರಾಷ್ಟçದ ಗಣೇಶಪುರಿಯಲ್ಲಿ ಮಹಾ ಸಮಾಧಿಯಾದ ಶ್ರೀ ಗುರುದೇವ ನಿತ್ಯಾನಂದರು ಸಿದ್ದಯೋಗಿಗಳು. ಸಿದ್ದಯೋಗವನ್ನು ಪ್ರಚುರಪಡಿಸಿದವರು. ಅವರ ಆಶ್ರಮ ಗಣೇಶಪುರಿಯಲ್ಲಿದೆ ಆಶ್ರಮವಿದೆ. ಇಂದಿಗೂ ಅಲ್ಲಿ ಗುರು ಪೂರ್ಣಿಮೆಯನ್ನು ವೈಶಿಷ್ಟö್ಯಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ ಕರ್ನಾಟಕದಲ್ಲಿಯೂ ಕೂಡ ಮಂಗಳೂರು ಮೈಸೂರು ಬೆಳಗಾವಿ ಜಿಲ್ಲೆಯ ಸಿಂದೋಗಿಯಲ್ಲಿ ಗುರುದೇವ ನಿತ್ಯಾನಂದರ ಸತ್ಸಂಗ ಆಶ್ರಮಗಳಿವೆ. ಅಲ್ಲಿಯೂ ಕೂಡ ಗುರು ಪೂರ್ಣಿಮೆಯನ್ನು ವೈಶಿಷ್ಟö್ಯ ಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಬಾಲ್ಯದ ಬದುಕು

ಶ್ರೀ ಗುರುದೇವರು ಸತ್ಯಸ್ವರೂಪರು, ಪೂರ್ಣರೂ ಸಾದಾ ಮತ್ತು ಸರಳ ಆಗಿದ್ದರು. ಗುರುದೇವ ನಿತ್ಯಾನಂದರು ಕೊಚ್ಚಿನ್ (ಕೊಯ್ಲಾö್ಯಂಡಿ) ಸಮೀಪ ಇರುವ ನಡುಕುಂಡಾಡ ಎಂಬ ಗ್ರಾಮದಲ್ಲಿ 1897ರ ನವೆಂಬರ್ 30 ರಂದು ಜನಿಸಿದರು. ಇವರ ಜನ್ಮನಾಮ ರಾಮನ್ ಕುಟ್ಟಿ. ಕಟ್ಟಾಚೇರಿ ಎಂಬುದು ಇವರ ಮನೆತನದ ಹೆಸರು. ತಾಯಿ ಉಮ್ಮಮ್ಮ. ಮೂರನೆಯ ವಯಸ್ಸಿನಲ್ಲಿರುವಾಗ ತಂದೆಯನ್ನು ಕಳೆದುಕೊಂಡರು. ಇವರ ತಾಯಿ ಇವರನ್ನು ಕೊಯ್ಲಾö್ಯಡಿನ ಪ್ರಸಿದ್ದ ವಕೀಲರಾದ ಈಶ್ವರ್ ಅಯ್ಯರ ಅವರ ಮನೆಗೆ ಕರೆದುಕೊಂಡು ಬಂದರು. ಇವರು ಆರು ವರ್ಷದವರಿದ್ದಾಗ ಇವರ ತಾಯಿಯೂ ಸ್ವರ್ಗಸ್ಥರಾದರು. ಈಶ್ವರ್ ಅಯ್ಯರ ಇವರ ಪೋಷಕರಾಗಿ ಜೋಪಾನಗೈದರು. ಬಾಲ್ಯದಲ್ಲಿ ಇವರು ಶಾಲೆಗೆಂದು ಕಳಿಸಿದರೆ ಕೆರೆಯಲ್ಲಿ ಸ್ನಾನಮಾಡಿ ವಿಭೂತಿಯನ್ನು ಹಣೆ ಮೈಗೆ ಹಚ್ಚಿಕೊಂಡು ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರಂತೆ. ಇವರಲ್ಲಿನ ದೈವಭಕ್ತಿ ಕಂಡ ಈಶ್ವರ್ ಅಯ್ಯರವರು ತಾವು ತೀರ್ಥಯಾತ್ರೆಗೆ ಹೊರಟಾಗ ಇವರನ್ನು ಜೊತೆಗೆ ಕರೆದುಕೊಂಡು ಹೋದರು.

ಆತ್ಮತತ್ವದ ಹುಡುಕಾಟ
ಕಾಶಿ, ಹೃಷಿಕೇಶ, ಹರಿದ್ವಾರಗಳಿಗೆ ಹೋದಾಗ ಅಲ್ಲಿ ಒಂದೆರಡು ದಿನಗಳಿದ್ದು ಹೊರಡುವ ವೇಳೆಗೆ ರಾಮನ್ ಕುಟ್ಟಿ ತಾನು ಇಲ್ಲಿಯೇ ಇದ್ದು ಧ್ಯಾನ ಮಾಡುತ್ತೇನೆಂದು ಹಠ ಹಿಡಿದುಬಿಟ್ಟನಂತೆ. ಆಗ ನಿರ್ವಾಹವಿಲ್ಲದೇ ಈಶ್ವರ್ ಅಯ್ಯರ್ ಅವರನ್ನು ಅಲ್ಲಿಯೇ ಬಿಟ್ಟು ಬಂದರ0ತೆ. ಆಗವರಿಗೆ ಹನ್ನೆರಡು ವರ್ಷ. ಅಲ್ಲಿಂದ ಬುದ್ದಗಯಾಕ್ಕೆ ಹೋಗಿ ತಪಸ್ಸು ಮಾಡಿದ ನಂತರ ಹಿಮಾಲಯಕ್ಕೂ ಹೋಗಿ ಆತ್ಮತತ್ವದ ಸಾಧನೆ ಮಾಡಿಕೊಂಡರು.
ಹಿಮಾಲಯದ ತಪ್ಪಲಿನಲ್ಲಿ “ಸಿದ್ದಯೋಗೀಶ್ವರ ಸಾರ್ವಭೌಮ ಆಶ್ರಮದ ಶ್ರೀ ಭಗವಾನ್ ತಪೋವನ ಮಹಾರಾಜರು ಇವರನ್ನು ಕಂಡು ಆಲಂಗಿಸಿ “ಅಗೋಚರ ಮಹಿಮೆಯ ಅವಧೂತನಾಗು” ಎಂದು ತಮ್ಮ ತಪೋಬಲವನ್ನಿತ್ತು ಅನುಗ್ರಹಿಸಿದರಂತೆ. ಅಲ್ಲಿಂದ ಬರ್ಮಾ ದೇಶಕ್ಕೆ ಬಂದು ಸ್ಟೀಮರ್ ಮೂಲಕ ಸಿಲೋನಿಗೆ ಹೋಗಿ ಅಲ್ಲಿಂದ ಕೊಚ್ಚಿನ್ ಗೆ ಮರಳಿದರು.ಈಶ್ವರ್ ಅಯ್ಯರ್ ಇವರನ್ನು ಕಂಡು ಬೆರಗಾಗಿ ಬಿಟ್ಟರು. ಆಗವರಿಗೆ ಹದಿನೇಳು ವರ್ಷ. ಅವರನ್ನು ಕಂಡು ವಿಸ್ಮಿತರಾಗಿ ಅವರ ಮುಖದಲ್ಲಿನ ತೇಜಸ್ಸು ವಾಕ್ ಶಕ್ತಿಗಳನ್ನು ಕಂಡು “ನಿತ್ಯಾನಂದ” ಎಂದು ಕರೆಯತೊಡಗಿದರು. ಇದೇ ಹೆಸರು ಮುಂದೆ ಪ್ರಸಿದ್ದಿಗೆ ಬಂದಿತು.

ಕೇರಳದ ವಿವಿಧೆಡೆಯಲ್ಲಿ ತಮ್ಮ ಅಧ್ಯಾತ್ಮದ ಲೀಲೆಗಳನ್ನು ಹರಡುತ್ತ ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದರು. ಇವರು ನಿತ್ಯ ಒಂದೇ ಸ್ಥಳದಲ್ಲಿ ಇರುತ್ತಿರಲಿಲ್ಲ. ಹೀಗೆಯೇ ಕೇರಳದಿಂದ ಕರ್ನಾಟಕದತ್ತ ಬಂದರು. ಇಲ್ಲಿಗೆ ಬರುವ ಮೊದಲು ಕೇರಳದ ಕಣ್ನೂರು ಜಿಲ್ಲೆಯ ಕಾಞಂಗಾಡು ರೈಲು ನಿಲ್ದಾಣದಿಂದ ಎರಡು ಕಿ.ಮೀ ದೂರದ ಮೂಡು ಪಾರ್ಶ್ವದಲ್ಲಿ ನಿತ್ಯಾನಂದರ ಆಶ್ರಮ ಸ್ಥಾಪನೆಗೊಂಡಿತು. “ಕಾಂಇನ” ಎಂಬ ಅರಸ ಕಟ್ಟಿದ ಕೋಟೆಯೊಳಗೆ ನಿತ್ಯಾನಂದರು ನಲವತ್ತಮೂರು ಗುಹೆಗಳನ್ನು ನಿರ್ಮಿಸಿದರು. ಇವು ಶ್ರೀ ಚಕ್ರದ ಆಧಾರದ ಮೇಲೆ ನೆಲೆನಿಂತಿವೆ. ಅಲ್ಲಿಂದ 5 ಕಿ.ಮೀ ಅಂತರದಲ್ಲಿ ಗುಹೆಯೊಂದರಲ್ಲಿ ನಿತ್ಯಾನಂದರು ಇರುತ್ತಿದ್ದರು. ಇದು ಮುಂದೆ ಗುರುವನವಾಗಿ ಬೆಳೆಯಿತು.
ಹೀಗೆ ಕರ್ನಾಟಕದ ಮಂಗಳೂರು, ಮಂಜೇಶ್ವರ, ಗೋಕರ್ಣ, ಉಡುಪಿ, ಸಿರ್ಸಿ… ಮುಂತಾದ ಕಡೆಗಳಲ್ಲಿ ಪರಿವ್ರಾಜಕರಾಗಿ ಸುತ್ತಿದರು.

ಮುಕ್ತಾನಂದರ ಭೇಟಿ
ಒಂದು ದಿನ ಕದ್ರಿಯಲ್ಲಿರುವ ಪಾಂಡವರ ಗುಹೆಯಿಂದ ಶ್ರೀ ಸ್ವಾಮಿಯವರು ಹೊರಗೆ ಬರುತ್ತಿರುವುದನ್ನು ಹಲವಾರು ಭಕ್ತರು ಕಂಡರು. ಅವರು ಅಲ್ಲಿಯ ಜೋಗಿ ಮಠದೊಳಗೆ ಪ್ರವೇಶಿಸಿ ಅಲ್ಲಿರುವ ಯೋಗಿಶ್ವರನನ್ನು ಅನುಗ್ರಹಿಸಿದರು. ಅನಂತರ ಶ್ರೀ ಪರಶುರಾಮ ದೇವರ ಅಗ್ನಿಕುಂಡವನ್ನು ನಿರೀಕ್ಷಿಸಿ ಹೊರಬಂದರು. ಕದ್ರಿ ಕೆರೆಯಲ್ಲಿ ಸ್ನಾನ ವಂದನಾದಿಗಳನ್ನು ತೀರಿಸಿ ಹೊರಮುಖ ಮಂಟಪದಿ0ದ ಬರುತ್ತಿದ್ದಂತೆ 15 ವರ್ಷ ಪ್ರಾಯದ ಬಾಲಕ ಮುಕ್ತಾನಂದರು ಅಲ್ಲಿದ್ದರು. ಅವರನ್ನು ಕಂಡ ಗುರುದೇವರು ತಲೆಯ ಮೇಲೆ ಕೈಯಿಟ್ಟು ಸಾಧಿಸು ಎಂದು ಹರಸಿದರು. ಮುಂದೆ ಮುಕ್ತಾನಂದರು ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮಿಗಳಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದರು. ನಂತರ ಅವರು ಕೂಡ ದೇಶ ವಿದೇಶಗಳಲ್ಲಿ ಜ್ಞಾನ, ಭಕ್ತಿ, ಯೋಗ ಇವುಗಳಲ್ಲಿ ಯಾವ ಮಾರ್ಗದಿಂದ ಹೋದರೂ ಗುರಿಯು ಒಂದೇ ಎಂಬುದನ್ನು ಬೋಧಿಸುತ್ತ “ಚಿತ್ ಶಕ್ತಿ ವಿಲಾಸ”ಎಂಬ ಗ್ರಂಥದ ಮೂಲಕ ಅದರ ವಿವರಣೆಯನ್ನು ಅವರು ಬರೆದರು.

ಸಿದ್ದಾರೂಢರ ಘಟನೆ
ಶಕುಂತಲಾಬಾಯಿಯೆ0ಬ ಮಹಿಳೆ ಹುಬ್ಬಳ್ಳಿಯ ಸಿದ್ದಾರೂಢರ ಭಕ್ತೆ. ಇವಳ ತಂಗಿ ಸೀತಾಬಾಯಿ. ಸೀತಾಬಾಯಿ ಉಡುಪಿಯಲ್ಲಿ ನಿತ್ಯಾನಂದರ ಅನುಗ್ರಹಕ್ಕೆ ಪಾತ್ರಳಾಗಿದ್ದಳು. ಉಡುಪಿಗೆ ಒಂದು ಸಲ ಬಂದ ಶಕುಂತಲಾಬಾಯಿ ತನ್ನ ತಂಗಿಯನ್ನು ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ಕರೆದುಕೊಂಡು ಬಂದು ಅವಳಿಗೆ ದೀಕ್ಷೆ ನೀಡುವಂತೆ ಕೋರಿದಳು. ಆಗ ಸಿದ್ದಾರೂಢರು, ನೋಡವ್ವ ತಂಗಿ, ನಿನ್ನ ತಂಗಿಗೆ ಈಗಾಗಲೇ ಒಬ್ಬ ಮಹಾತ್ಮರ ಆಶೀರ್ವಾದ ಆಗಿದೆ. ಅವಳ ಹಿಂದೆ ಒಂದು ರಹಸ್ಯವಾದ ಶಕ್ತಿ ಅವಳ ರಕ್ಷಣೆಗಾಗಿ ಸದಾ ತಿರುಗುತ್ತಿದೆ. ಒಬ್ಬ ಮಹಾತ್ಮರು ಅವಳಿಗೆ ಶಕ್ತಿಯುತ ದೀಕ್ಷೆ ಕೊಟ್ಟಿದ್ದಾರೆ. ಆದುದರಿಂದ ನಾವು ಅವಳಿಗೆ ಇನ್ನೊಮ್ಮೆ ದೀಕ್ಷೆ ಕೊಡಲು ಬರುವುದಿಲ್ಲ”ಎಂದು ನುಡಿದಾಗ ನಿತ್ಯಾನಂದರ ಮಹಿಮೆ ಶಕುಂತಲಾಬಾಯಿಗೆ ಅರಿವಿಗೆ ಬಂದಿತು. ಸಿದ್ದಾರೂಢರು “ನಿತ್ಯಾನಂದರು ಬೇರೆ ಅಲ್ಲ ನಾನು ಬೇರೆ ಅಲ್ಲ ನಾವಿಬ್ಬರೂ ಶರೀರದಿಂದ ಬೇರೆ ಬೇರೆಯಾಗಿ ಕಂಡರೂ ನಮ್ಮಿಬ್ಬರ ಕಾರ್ಯ ಒಂದೇ” ಎಂದು ನುಡಿದರು.

ಗುರುದೇವ ವಿಜಯಾನಂದರ ಮೇಲೆ ನಿತ್ಯಾನಂದರ ಗುರುದೃಷ್ಟಿ
ಉಡುಪಿ ಜಿಲ್ಲೆಯ ಸಮೀಪದ ಒಂದು ಹಳ್ಳಿಯಲ್ಲಿ ಜನಿಸಿ, ತನ್ನ ತಾಯಿಯ ಗರ್ಭಾವಸ್ಥೆಯಲ್ಲಿದ್ದಾಗಲೇ ಆ ಮಹಾತಾಯಿ ತನ್ನ ಮಕ್ಕಳೊಂದಿಗೆ ಗುರುದೇವರ ಬಗ್ಗೆ ತಿಳಿದು ಅವರಿರುವ ಸ್ಥಳಕ್ಕೆ ಬಂದು ಗುರುದೇವ ನಿತ್ಯಾನಂದರ ದರ್ಶನ ಪಡೆದಾಗ “ಅಮ್ಮಾ ನಿನ್ನ ಗರ್ಭದಲ್ಲಿರುವ ಮಗು ನನಗೆ ಬೇಕು, ನೀಡಬಲ್ಲೆಯಾ?” ಎಂದು ಕೇಳಿದರು. ಆಗ ಅವಳು ತನ್ನ ಇನ್ನುಳಿದ ಮಕ್ಕಳನ್ನು ತೋರಿಸುತ್ತ ಇವೂ ನಿಮ್ಮ ಮಕ್ಕಳೇ ಎಂದಾಗ ನಿತ್ಯಾನಂದರು “ ಅಲ್ಲಮ್ಮಾ ಅವು ನಿನ್ನ ಪ್ರೀತಿಯ ಮಕ್ಕಳು, ಗರ್ಭದಲ್ಲಿರುವುದು ನನ್ನ ಪ್ರೀತಿಯ ಮಗು” ಎಂದು ಹೇಳಿದಾಗ ಆ ತಾಯಿ ತಲೆ ಆಡಿಸುತ್ತ “ಮಹಾತ್ಮರೇ ಈ ಸೃಷ್ಟಿಯ ಎಲ್ಲ ಸ್ಥಾವರ ಜಂಗಮ ವಸ್ತುಗಳು ತಮ್ಮವೇ ಆಗಿರುವಾಗ ನಾನು ಕೊಡುವುದೇನಿದೆ?” ಎಂದಾಗ, ಭಗವಾನರು “ನಿನ್ನ ಗರ್ಭದಲ್ಲಿರುವ ಆ ಶಿಶುವಿನ ಹಾಗೂ ನಮ್ಮ ಸಂಬ0ಧ ಅನೇಕ ಜನ್ಮಗಳದ್ದು. ಆತನಿಂದ ನಿಮ್ಮ ವಂಶದ ಹಿರಿಯರ ಮುಂದಿನ ಪೀಳಿಗೆಯ ಉದ್ಧಾರ ಆಗಬೇಕಾಗಿದೆ. ಅಲ್ಲದೇ ಅಧ್ಯಾತ್ಮ ಪಥವನ್ನು ಮುನ್ನಡೆಸಿಕೊಂಡು ಹೋಗುವ ಗುರುತರ ಕೆಲಸ ಆತನಿಂದ ಆಗಬೇಕಾಗಿದೆ. ಅಂತಹ ಯೋಗಿಯು ಹುಟ್ಟಿ ಬರಲು ತಮ್ಮಂತಹ ತಾಯಂದಿರ ಪುಣ್ಯಗರ್ಭ ಕಾರಣವಾಗಿದೆ ನೀನು ಕೃತಾರ್ಥಳು” ಎಂದು ಹರಸಿದರು.

ಆ ಪ್ರಕಾರ ಜನಿಸಿದ “ವಿಜಯಾನಂದರ”ನ್ನು ಆ ತಾಯಿ ಬಾಲ್ಯದಲ್ಲಿಯೇ ಆತನ ಒಡನಾಟದಲ್ಲಿ ದೇವರ ಕುರಿತು ಅವರು ಕೇಳುತ್ತಿದ್ದ ಪ್ರಶ್ನೆಗಳನ್ನು ಕಂಡು ಗುರುದೇವರ ಭೇಟಿ ಇವನಿಗೆ ಆದರೆ ತನ್ನ ಮಗ ಸನ್ಯಾಸಿಯಾಗಬಹುದೆಂದು ಗುರುದೇವರ ಪರಿಚಯ ಮಾಡಿಸಲಿಲ್ಲ.
ವಿಜಯಾನಂದರು ತಮ್ಮ ಹತ್ತನೆಯ ತರಗತಿ ಮುಗಿಸಿ ರಜೆಯ ಸಮಯ ಮುಂಬಯಿಯಲ್ಲಿದ್ದ ತನ್ನ ಅಕ್ಕನ ಮನೆಗೆ ಹೋದರು. ಅಲ್ಲಿ ಅವರಿಗೆ ಲಂಗೋಟಿ ಧರಿಸಿದ್ದ ವ್ಯಕ್ತಿಯೊಬ್ಬರು ಕನಸಿನಲ್ಲಿ ಬಂದು “ನನ್ನಲ್ಲಿ ಯಾವಾಗ ಬರುವಿಯೋ” ಎಂದು ಕೇಳಿದಂತಾಗುತ್ತಿತ್ತು. ಇದು ನಿರಂತರ ಸಾಗಿದಾಗ ತಮ್ಮ ಅಕ್ಕನನ್ನು ಒಂದು ದಿನ ಕೇಳಿಯೇ ಬಿಟ್ಟರು. ಅವಳಿಗೆ ಬಾಲ್ಯದಲ್ಲಿ ಅವರ ಬದುಕಿನ ಘಟನೆ ತಾಯಿಯಿಂದ ತಿಳಿದಿತ್ತು. ಹೀಗಾಗಿ ಅವಳು ಕ್ಷಣಕಾಲ ಸುಮ್ಮನಿದ್ದಳು. ಅವರು ಆ ಮನೆಯ ದೇವರ ಮನೆಗೆ ಹೋದಾಗ ಜಗುಲಿಯ ಕಟ್ಟೆಯಲ್ಲಿ ನಿತ್ಯಾನಂದರ ಪೋಟೋ ನೋಡಿದರು.
ಅವರು ಕನಸಿನಲ್ಲಿ ಕಂಡವರು ಅವರೇ ಆಗಿದ್ದರು. ಆಗ ತನ್ನ ಅಕ್ಕನಿಗೆ ದುಂಬಾಲು ಬಿದ್ದು ಅವರ ಭೇಟಿಗೆ ಹೋದರು. ಅಲ್ಲಿ ನಡೆದದ್ದೇ ಒಂದು ಪವಾಡ. ಗುರುದೇವರ ಆಶ್ರಮದಲ್ಲಿಯೇ ಅವರು ಉಳಿದ, ಅಲ್ಲಿಂದ ಗುರುವಿನ ಅಧ್ಯಾತ್ಮ ಮಾರ್ಗದರ್ಶನ ಪಡೆದು ಹಿಮಾಲಯದವರೆಗೂ ಸಂಚರಿಸಿ ಹುಬ್ಬಳ್ಳಿಯ ಸಿದ್ದಾರೂಢರ ಮಠ, ದೇವರ ಹುಬ್ಬಳ್ಳಿಯ ಸಿದ್ದಾಶ್ರಮದ ಒಡನಾಟದಿಂದ ಸವದತ್ತಿ ತಾಲೂಕಿನ ಸೊಗಲ ಕ್ಷೇತ್ರದ ಹತ್ತಿರದ ಮಲ್ಲೂರಿನಲ್ಲಿ ಆಶ್ರಮ ಕಟ್ಟಿ ಅಲ್ಲಿಯ ಭಕ್ತರಿಗೆ ಮಾರ್ಗದರ್ಶನ ಮಾಡುತ್ತ. ನಂತರ ಸಿಂದೋಗಿಯ ಹತ್ತಿರದಲ್ಲಿ ನಿತ್ಯಾನಂದ ಸತ್ಸಂಗ ಆಶ್ರಮ ನಿರ್ಮಿಸಿ, ಇಲ್ಲಿಯೇ ಶರೀರ ತ್ಯಾಗ ಮಾಡಿದರು.
ಅವರ ಗದ್ದುಗೆ ಮಲ್ಲೂರಿನಲ್ಲಿದ್ದು ಅವರ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ಮುಕ್ತಾನಂದ ಸ್ವಾಮಿಗಳ ಮಾರ್ಗದರ್ಶನದಲ್ಲಿ ಆಶ್ರಮದ ಕಾರ್ಯ ನಡೆದಿದೆ. ಮುಕ್ತಾನಂದರೂ ಕೂಡ ಮುನವಳ್ಳಿ ಸಿಂದೋಗಿ ಹನಸಿ ಮಲ್ಲೂರ ಬಡ್ಲಿ ಬೆಂಗಳೂರು, ಅರಸಿಕರೆ, ಮುಂತಾದ ಸ್ಥಳಗಳಲ್ಲದೇ ನಾಡಿನ ಉದ್ದಗಲಕ್ಕೂ ಸಮಯಾನುಸಾರ ಸಂಚರಿಸುತ್ತ ಸತ್ಸಂಗದ ಪ್ರಭಾವವನ್ನು ನೀಡುತ್ತಿರುವರು. ಪ್ರತಿವರ್ಷ ಗುರುಪೂರ್ಣಿಮೆಯಂದು ಸಿಂದೋಗಿಯ ಸತ್ಸಂಗ ಆಶ್ರಮದಲ್ಲಿ ವಿಶೇಷ ಸತ್ಸಂಗ ಗುರುದೇವ ನಿತ್ಯಾನಂದರ ಸ್ಮರಣೆಯಲ್ಲಿ ಜರುಗುತ್ತದೆ.

ಮಾಸ್ತಿಕಟ್ಟೆಯಲ್ಲಿ ಗುರುದೇವರು
ಮಹಾಸತಿ ಕಟ್ಟೆಯು ಯಲ್ಲಾಪುರ ಮತ್ತು ಅಂಕೋಲ ಇವುಗಳ ಮಧ್ಯದಲ್ಲಿ ಬರುತ್ತದೆ. ಒಮ್ಮೆ ಹುಬ್ಬಳ್ಳಿಯತ್ತ ಸಂಚರಿಸುತ್ತ ಗುರುದೇವರು ಮಹಾಸತಿ ಕಟ್ಟೆಯಲ್ಲಿ ಕುಳಿತರು. ಆಗ ಬ್ರಿಟಿಷ್ ಅಧಿಕಾರಿಯ ವಾಹನವೊಂದು ಅಲ್ಲಿ ಬಂದಿತು. ಗುರುದೇವರು ಆ ವಾಹನಕ್ಕೆ ಕೈ ಮಾಡಿದರು. ಗುರುದೇವರನ್ನು ಲೆಕ್ಕಿಸದೇ ಆ ಅಧಿಕಾರಿ ವಾಹನ ಮುಂದೆ ಹೊರಟು ಹೋದ. ಒಂದು ಪರ್ಲಾಂಗು ದೂರ ಹೋಗಿರಬಹುದು ವಾಹನ ಒಮ್ಮಿಂದೊಮ್ಮಲೇ ನಿಂತು ಬಿಟ್ಟಿತು. ಎಷ್ಟು ಪ್ರಯತ್ನ ಪಟ್ಟರೂ ವಾಹನ ಚಲಿಸಲೇ ಇಲ್ಲ.
ಆಗ ಆ ಅಧಿಕಾರಿಗೆ ಗುರುದೇವರು ಕೈ ಮಾಡಿದ್ದು ನೆನಪಾಯಿತು. ಅವರಲ್ಲಿಗೆ ಬಂದು ತಮಗೆ ಎಲ್ಲಿಗೆ ಹೋಗಬೇಕು ಹೇಳಿರಿ ನನ್ನ ವಾಹನದಲ್ಲಿ ಕರೆದೊಯ್ಯುವೆ. ಈಗ ನನ್ನ ವಾಹನ ಚಲಿಸುತ್ತಿಲ್ಲ. ತಾವು ಬನ್ನಿ”ಎಂದಾಗ ನಾನು ಎಲ್ಲಿಯೂ ಹೋಗಬೇಕಿಲ್ಲ. ಇದು ಮಹಾಸತಿದೇವಿಯ ಕಟ್ಟೆ. ಇಲ್ಲಿ ಸಂಚರಿಸುವವರು. ಇಲ್ಲಿ ನಿಂತು ದೇವಿಗೆ ಕೈ ಮುಗಿದು ಮುಂದೆ ಸಾಗಬೇಕು ಎಂದು ಹೇಳಿದಾಗ ಆ ಅಧಿಕಾರಿ ದೇವಿಗೆ ಕೈ ಮುಗಿದು ಪೂಜ್ಯರ ಆಶೀರ್ವಾದ ಪಡೆದು ಇನ್ನು ಮುಂದೆ ಇಲ್ಲಿ ಸಂಚರಿಸುವ ವಾಹನಗಳು ಇಲ್ಲಿ ನಿಲ್ಲಿಸಲು ಆಜ್ಞೆ ಮಾಡುತ್ತೇನೆ” ಎಂದು ಹೇಳಿ ನಮಸ್ಕರಿಸಿ ತಮ್ಮ ವಾಹನದ ಬಳಿ ಬರಲು ವಾಹನ ಮತ್ತೆ ಚಲಿಸಿತು. ಇಂದಿಗೂ ಈ ಮಾರ್ಗದ ಮೂಲಕ ಸಂಚರಿಸುವ ವಾಹನಗಳು ಮಾಸ್ತಿಕಟ್ಟೆಯಲ್ಲಿ ನಿಂತು ದೇವಿಗೆ ನಮಿಸಿ ಹೋಗುತ್ತಾರೆ. ಇಲ್ಲಿ ದೇವಿಯ ಒಂದು ಮಂದಿರ ಮತ್ತೊಂದು ನಿತ್ಯಾನಂದರ ಮಂದಿರವಿದೆ.


ಸಿದ್ದಾರೂಢರ ಭೇಟಿ
ಮಾಸ್ತಿಕಟ್ಟೆಯಿಂದ ಗುರುದೇವರು ಹುಬ್ಬಳ್ಳಿಯ ಕಡೆಗೆ ಹೊರಟರು. ಸಿದ್ದಾರೂಢರು ಈ ಮಾರ್ಗವಾಗಿ ಹೊರಟಿದ್ದಾರೆ ಎಂದು ಅರಿತ ಸಿದ್ದಾರೂಢರು ತಮ್ಮ ಜ್ಞಾನದೃಷ್ಟಿಯಿಂದ ತಿಳಿದವರಾಗಿ ಶ್ರೀ ನಿತ್ಯಾನಂದರನ್ನು ಎದುರಗೊಂಡು ತಮ್ಮ ಮಠಕ್ಕೆ ಕರೆದುಕೊಂಡು ಹೋದರು. ಮಠದ ಒಂದು ಕೋಣೆಯೊಳಗೆ ಇಬ್ಬರೂ ಎಂಟು ತಾಸುಗಳ ಕಾಲ ಕುಳಿತರು.ನಂತರ ಸಿದ್ದಾರೂಢರ ಭಕ್ತರನ್ನು ಕುರಿತು ಗುರುದೇವರು” ನಿಮ್ಮ ಗುರುಗಳು ಅಸಾಮಾನ್ಯ ಯೋಗಿಗಳು, ಜ್ಞಾನದ ಸಾಕಾರ ಮೂರ್ತಿಗಳು,º ಹುಬ್ಬಳ್ಳಿಯ ಜನರು ಮಹಾ ಪುಣ್ಯವಂತರು” ಎಂದು ಉದ್ಗಾರ ತಗೆದರು.

ಮುಂಬಯಿಯತ್ತ ಪಯಣ
ಹುಬ್ಬಳ್ಳಿಯಿಂದ ಹೊರಟ ಗುರುದೇವರು ನೇರವಾಗಿ ಮುಂಬಯಿಯ ಕಡೆ ಪ್ರಯಾಣ ಬೆಳೆಸಿದರು. ಅಲ್ಲಿ ತಮ್ಮ ಭಕ್ತೆ ಮುಕ್ತಾಬಾಯಿ,ಶಂಕರರಾಯರು, ಮಜಗಾಂವ ಸುಬ್ಬಯ್ಯಶೆಟ್ಟಿ ಮುಂತಾದವರಿಗೆ ದರ್ಶನ ಕೊಟ್ಟು ಮುಂಬಯಿಯ ಉಪನಗರವಾದ ಬೋರಿವಲಿಗೆ ಹೋಗಿ ಅಲ್ಲಿಯ ಕನೇರಿ ಗುಹೆಯಲ್ಲಿ ಆರು ತಿಂಗಳು ಏಕಾಂತವಾಸ ಮಾಡಿದರು. ಅಲ್ಲಿಂದ ಗಣೆಶಪುರಿಗೆ ಮೂರು ಮೈಲು ದೂರವಿರುವ ಅಕ್ರೋಳಿ ಎಂಬಲ್ಲಿಗೆ ಬಂದು ಕೆಲವು ಸಮಯ ತಂಗಿದರು. ಅಲ್ಲಿ ಒಂದು ಧರ್ಮಶಾಲೆ ಮತ್ತು ಬಾವಿಯನ್ನು ತೋಡಿಸಿದರು. ಅಲ್ಲಿಂದ ಒಂದು ಮೈಲು ದೂರದಲ್ಲಿ ವಜ್ರೇಶ್ವರಿ ದೇವಾಲಯವಿದೆ. ಗುರುದೇವರು ಆ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಅಲ್ಲಿ ಒಂದು ಧರ್ಮಸಾಲೆ ಒಂದು ಹೆರಿಗೆ ಆಸ್ಪತ್ರೆ ಕಟ್ಟಿಸಿದರು. ಹೀಗೆ ಬಹುವಿಧ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತ ಆಕ್ರೋಳಿಯಲ್ಲಿ ಉಳಿದರು.
ಗಣೇಶಪುರಿಯತ್ತ ಗುರುದೇವರು
ಆಕ್ರೋಳಿಯಲ್ಲಿ ಕೆಲವು ತಿಂಗಳು ತಂಗಿದ ಬಳಿಕ ಗುರುದೇವರು ಆ ಸ್ಥಳವನ್ನು ತ್ಯಾಗ ಮಾಡಲು ನಿರ್ಧರಿಸಿದರು. ಆಗ ಅವರು ಆಯ್ದುಕೊಂಡ ಸ್ಥಳವೇ ಗಣೇಶಪುರಿ. ೧೯೩೭ರಲ್ಲಿ ಗಣೇಶಪುರಿಗೆ ಬಂದು ವಾಸ ಮಾಡಿದರು. ಆಗ ಅದೊಂದು ದಟ್ಟವಾದ ಅರಣ್ಯವಾಗಿತ್ತು. ಯಾವ ಮನುಷ್ಯರೂ ಅಲ್ಲಿ ವಾಸ ಮಾಡುತ್ತಿರಲಿಲ್ಲ. ಅಲ್ಲಿ ಶಿಥಿಲವಾದ ಒಂದು ಹಳೆಯ ಈಶ್ವರ ದೇವಾಲಯವಿತ್ತು. ಅದನ್ನು ಭೀಮೇಶ್ವರ ದೇವಾಲಯವೆಂದು ಗುರುದೇವರು ಹೆಸರಿಟ್ಟರು. ಆ ದೇವಾಲಯದಲ್ಲಿ ಪೂಜ್ಯರು ವಾಸ ಮಾಡುತ್ತಿದ್ದರು. ನಂತರದ ಹಲವು ವರ್ಷಗಳಲ್ಲಿ ಗಣೇಶಪುರಿಯಿಂದ ಎರಡು ಮೈಲುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಯಿತು.ಆಗ ಗಣೇಶಪುರಿಗೂ ರಸ್ತೆ ಒದಗಿತು. ಪೂಜ್ಯರನ್ನು ನೋಡಲು ಬರುವ ಭಕ್ತರ ಸಂಖ್ಯೆ ದಿನದಿನಕ್ಕೆ ಹೆಚ್ಚಾಗತೊಡಗಿತು. ಗಣೇಶಪುರಿಗೆ ಬಂದ ಭಕ್ತರ ಅನುಕೂಲಕ್ಕಾಗಿ ಅಲ್ಲಿ ಧರ್ಮಶಾಲೆ ಕುಡಿಯುವ ನೀರಿನ ವ್ಯವಸ್ಥೆ. ಊಟ ವಸತಿಗಳಿಗಾಗಿ ಹೊಟೇಲುಗಳು ನಿರ್ಮಾಣಗೊಂಡವು.

ಮುಂಬಯಿಯ ಶ್ರೀಮಂತ ಭಕ್ತರು ಗಣೇಶಪುರಿಯಲ್ಲಿ ತಮ್ಮ ಸ್ವಂತ ಬಂಗಲೆಗಳನ್ನು ಕಟ್ಟಿಸಿ ಬಿಡುವಿನ ದಿನಗಳಲ್ಲಿ ಅಲ್ಲಿ ಬಂದು ಉಳಿದು ಗುರುದೇವರ ಸೇವೆ ಮಾಡತೊಡಗಿದರು. ಹೀಗಾಗಿ ಗಣೇಶಪುರಿಯು ಒಂದು ಆಧ್ಯಾತ್ಮಿಕ ಕೇಂದ್ರವಾಗಿ ಪರಿಣಮಿಸಿತು. ಗುರುದೇವರ ಅನುಮತಿ ಪಡೆದು ಒಂದು ಸಮೀತಿ ಕೂಡ ರಚನೆಗೊಂಡಿತು. ಆಗ ಒಂದು ವಿದ್ಯುತ್ ಕೇಂದ್ರ ಅಲ್ಲಿ ಸ್ಥಾಪನೆಗೊಂಡಿತು.

ಅಮೇರಿಕದ ಪ್ರಜೆ ‘ರೂಢಿ’ ಸ್ವಾಮಿ ರುದ್ರಾನಂದರಾದದ್ದು
ಗಣೇಶಪುರಿಯಲ್ಲಿ “ಗುರುಪೂರ್ಣಿಮೆ” ಉತ್ಸವ ಪ್ರಾರಂಭವಾದ ಬಳಿಕ ಈ ಉತ್ಸವಕ್ಕೆ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಸೇರುತ್ತಿದ್ದರು. 1955 ನೇ ಇಸ್ವಿ ಗುರು ಪೂರ್ಣಿಮಾ ಉತ್ಸವಕ್ಕೆ ಅಮೆರಿಕಾ ನಿವಾಸಿಯಾದ “ರೂಢಿ” ಎಂಬುವರು ಬಂದಿದ್ದರು. ಅವರು ಬಹಳ ನಾಸ್ತಿಕರಾಗಿದ್ದರು.ಭಾರತದ ಸನ್ಯಾಸಿಗಳಾದ ಸ್ವಾಮಿ ನಿರ್ಮಲಾನಂದರು ಸ್ವಾಮಿ ಪ್ರಣವಾನಂದರು ಅವರನ್ನು ಭಾರತಕ್ಕೆ ಕರೆದುಕೊಂಡು ಬಂದು ಇಲ್ಲಿನ ಅನೇಕ ಮಹಾತ್ಮರ ಭೇಟಿ ಮಾಡಿಸುತ್ತ ಕೊನೆಗೆ ಗಣೇಶಪುರಿಗೆ ಬಂದಿದ್ದರು.
ಗುರು ಪೂರ್ಣಿಮೆ ಮುಗಿದ ಮೂರನೆಯ ದಿನದಂದು “ರೂಢಿ”ಗೆ ಗುರುದೇವರ ದರ್ಶನವಾಯಿತು.ಒಂದು ಕೋಣೆಯೊಳಗೆ ತುಂಡು ಲಂಗೋಟಿಯನ್ನು ಧರಿಸಿದ್ದ ಅಲ್ಲಿ ಮೌನವಾಗಿ ಯಾವುದೋ ಒಂದು ಕಡೆ ನೋಡುತ್ತ ಕುಳಿತಿದ್ದನ್ನು ಅವರು ಕಂಡರು.ಅವರೇ ನಿತ್ಯಾನಂದರು. ತಮಗರಿವಿಲ್ಲದ0ತೆಯೇ ಯಾರಿಗೂ ಶಿರಭಾಗಿ ನಮಿಸದ “ರೂಢಿ” ಆ ತೇಜಸ್ಸನ್ನು ಕಂಡು ನಮಿಸಿ ಕುಳಿತುಕೊಂಡರು.ಅನೇಕ ನಿಮಿಷಗಳು ಕಳೆದವು.ಅವರು ತದೇಕ ದೃಷ್ಟಿಯಿಂದ ಒಂದೆಡೆ ನೋಡುತ್ತ ಕುಳಿತುಬಿಟ್ಟಿದ್ದರು.ಅವರನ್ನು ನೋಡುತ್ತಿದ್ದ ರೂಢಿಯವರಲ್ಲಿ ಹಲವು ನಿಮಿಷಗಳಲ್ಲಿ ಯಾವುದೋ ಒಂದು ವಿಸ್ಮಯವಾದ ಲೋಕ ತಮ್ಮನ್ನು ವಿಸ್ಮಯ ಮಾಡುತ್ತಿರುವಂತೆ ಭಾಸವಾಗತೊಡಗಿತು.ಸ್ವಲ್ಪ ಸಮಯದ ನಂತರ ನಿತ್ಯಾನಂದರ ಚಲನವಲನ ಪ್ರಾರಂಭವಾದ0ತೆ ಕಾಣಿಸಿತು.
ಅವರು ನೇರವಾಗಿ ರೂಢಿಯವರನ್ನೇ ನೋಡಿದರು.ಆಗ ನಾಸ್ತಿಕರಾಗಿದ್ದ ರೂಢಿ ಅವರ ಮೊದಲಿನ ನಾಸ್ತಿಕತೆಯಿಂದ ಹೊರಬಂದ ಹೊಸ ಮನುಷ್ಯನಾಗಿದ್ದರು.ನಂತರ ಹಲವು ದಿನ ಅಲ್ಲಿಯೇ ಇದ್ದು ಮತ್ತೊಂದು ಸಲ ನಿತ್ಯಾನಂದರನ್ನು ಕಂಡು ತಮ್ಮ ಮನದಲ್ಲಿನ ದೇವರು ಅಧ್ಯಾತ್ಮದ ಸಂದೇಹಗಳನ್ನು ಪ್ರಶ್ನಿಸುವುದರ ಮೂಲಕ ತಾವೂ ಕೂಡ ಸನ್ಯಾಸವನ್ನು ಸ್ವೀಕರಿಸಿದ್ದರು.ಅಲ್ಲಿಂದ ಅಮೇರಿಕಕ್ಕೆ ಹೋಗಿ ಅಲ್ಲಿ ನಿತ್ಯಾನಂದ ಆಶ್ರಮವನ್ನು ಸ್ಥಾಪಿಸಿ ಪುನಃ ಭಾರತಕ್ಕೆ ಬಂದು “ಸ್ವಾಮಿ ರುದ್ರಾನಂದ”ನೆ0ದು ನಾಮಕರಣ ಹೊಂದಿ ಮತ್ತೆ ಅಮೇರಿಕಕ್ಕೆ ತೆರಳಿದರು.ನಂತರ ತಾವು ಬರೆದ “ಭಾರತದ ಸನ್ಯಾಸಿಗಳು”ಎಂಗ ಗ್ರಂಥದಲ್ಲಿ ತಾವು ಸನ್ಯಾಸಿಯಾಗುವ ಮುನ್ನ ಇದ್ದ ಸ್ಥಿತಿಯಿಂದ ಭಾರತಕ್ಕೆ ಬಂದು ಇಲ್ಲಿನ ವೇದ ಉಪನಿಷತ್.ಯೋಗ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸುತ್ತ ಗುರುದೇವ ನಿತ್ಯಾನಂದರ ಪ್ರಭಾವದಿಂದ ತಮ್ಮ ಸನ್ಯಾಸತ್ವದ ಕುರಿತು ಎಲ್ಲ ವಿವರಗಳನ್ನು ಅದರಲ್ಲಿ ಬರೆದಿರುವರು.


ಲಕ್ಷ್ಮಣ ಸಾ ಖೋಡೆಯವರ ಭಕ್ತಿ
ಬೆಂಗಳೂರಿನ ಲಕ್ಷ್ಮಣ ಸಾ ಖೋಡೆಯವರು ದೊಡ್ಡ ಉದ್ದಿಮೆದಾರರು ಮತ್ತು ಮಹಾದಾನಿಗಳಾಗಿದ್ದರು.ಅವರಿಗೆ ಒಮ್ಮೆ ತಮ್ಮ ವ್ಯವಹಾರದಲ್ಲಿ ನಷ್ಟ ಸಂಭವಿಸಿ ಬಹಳ ಕಷ್ಟಕ್ಕೊಳಗಾದರು.ಸರಕಾರಕ್ಕೆ ಲಕ್ಷಾಂತರ ರೂಪಾಯಿ ಹಣ ತುಂಬಬೇಕಾಗಿ ಬಂದಿತು. ಖೋಡೆಯವರ ಸ್ನೇಹಿತರಾದ ರಾಮಕೃಷ್ಣ ಶಾಸ್ತಿçÃಯವರು ಗುರುಗಳ ಭಕ್ತರಾಗಿದ್ದರು. ಅವರು ಖೋಡೆಯವರಿಗೆ ನೀವು ಗಣೇಶಪುರಿಗೆ ಹೋಗಿ ಶ್ರೀ ನಿತ್ಯಾನಂದರ ದರ್ಶನ ಪಡೆದು ಅವರಿಗೆ ತಮ್ಮ ಕಷ್ಟವನ್ನು ಹೇಳಿರಿ ಎಂದು ಸಲಹೆ ನೀಡಿದರು.ಅದರಂತೆ ಅವರು ಗಣೇಶಪುರಿಗೆ ಬಂದು ಗುರುದೇವರ ದರ್ಶನ ಪಡೆದು ತಮ್ಮ ಕಷ್ಟ ಹೇಳಿಕೊಂಡರು. ಆಗ ಗುರುದೇವರು ಏನೂ ಭಯಪಡುವ ಕಾರಣವಿಲ್ಲ. ಎಲ್ಲವೂ ಸರಿಯಾಗುತ್ತದೆ ಎಂಬ ಅಭಯ ನೀಡಿದರು. ನಂತರ ಕೆಲವೇ ದಿನಗಳಲ್ಲಿ ಸರಕಾರಕ್ಕೆ ತುಂಬಬೇಕಾದ ಹಣದಲ್ಲಿ ರಿಯಾಯತಿ ದೊರೆಯಿತು. ಅವರ ಉದ್ಯಮವು ಮೊದಲಿಗಿಂತಲೂ ಹೆಚ್ಚಿನ ಲಾಭದಲ್ಲಿ ಬರಲಾರಂಭಿಸಿತು.
ಗುರುದೇವ ಕೃಪೆ ಇದಕ್ಕೆ ಕಾರಣ ಎಂದು ಅರಿತ ಅವರು ಬೆಂಗಳೂರಿನಿ0ದ ಮುಂಬಯಿಗೆ ವಿಮಾನದ ಮೂಲಕ ಪ್ರತಿ ಗುರುವಾರ ಬರಲಾರಂಭಿಸಿದರು. ಗಣೇಶಪುರಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಒಂದು ಭವ್ಯವಾದ ಕಟ್ಟಡ ನಿರ್ಮಿಸಿ ಗುರುದೇವರಿಂದಲೇ ಅದನ್ನು ಉದ್ಘಾಟನೆ ಮಾಡಿಸಿದರು. ಅಲ್ಲದೇ ಬೆಂಗಳೂರಿನ ಸಮೀಪದಲ್ಲಿ ಗುರುದೇವರ ಹೆಸರಿನಲ್ಲಿ ಒಂದು ಆಶ್ರಮವನ್ನು ಕಟ್ಟಿಸಿದರು. ಅವರ ನಿಧನದ ನಂತರ ಅವರ ಸಹೋದರ ಮತ್ತು ಮಗ ಇಂದಿಗೂ ನಿಷ್ಠೆಯಿಂದ ಗಣೇಶಪುರಿಗೆ ಬಂದು ಗುರುದೇವರ ಗದ್ದುಗೆಗೆ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಮೈಸೂರಿನಲ್ಲಿಯೂ ಕೂಡ ನಿತ್ಯಾನಂದ ಸತ್ಸಂಗ ಆಶ್ರಮ ಸ್ಥಾಪಿಸಿದ್ದು ಅಲ್ಲಿಯೂ ಸತ್ಸಂಗ ಚಟುವಟಿಕೆಗಳು ಜರುಗುತ್ತಲಿವೆ.

ಅನುಗ್ರಹ ಸಮಾಧಿ
ಗಣೇಶಪುರಿ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತ ಹೋದಂತೆ ಗುರುದೇವರಿಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತಿರಲಿಲ್ಲ. ದೇಶ ವಿದೇಶಗಳಿಂದ ಬರುವ ಭಕ್ತರನ್ನು ನಿರಾಶೆಗೊಳಿಸಿ ತಾವು ವಿಶ್ರಾಂತಿ ಪಡೆಯುವುದು ಅವರಿಗೆ ಸರಿ ಕಾಣಲಿಲ್ಲ. ಹೀಗಾಗಿ ಅವರ ಶರೀರದಲ್ಲಿ ವಯಸ್ಸಿಗೆ ತಕ್ಕಂತೆ ಆಯಾಸವಾಗಲು ಪ್ರಾರಂಭವಾಯಿತು. ಆಗ ಭಕ್ತಾದಿಗಳೆಲ್ಲ ಸೇರಿ ಗುರುದೇವರು ವಾಸಿಸುತ್ತಿದ್ದ ಕೈಲಾಸ ನಿವಾಸದಿಂದ ಬೆಂಗಳೂರಿನ ಖೋಡೆ ಬಂಧುಗಳು ಗಣೇಶಪುರಿಯಲ್ಲಿ ಕಟ್ಟಿಸಿದ್ದ ಬೆಂಗಳೂರ ನಿವಾಸಕ್ಕೆ ಕರೆದುಕೊಂಡು ಹೋದರು.

ಗಣೇಶಪುರಿಗೆ ವರ್ಷವಿಡೀ ಯಾವುದೇ ಮಾಸ/ದಿನಗಳಲ್ಲಿ ಬರಬಹುದು. ಕರ್ನಾಟಕದಲ್ಲಿಯೂ ಅನೇಕ ಕಡೆಗಳಲ್ಲಿ ಗುರುದೇವರ ಸ್ಮರಣೆಯಲ್ಲಿ ಸತ್ಸಂಗ ಆಶ್ರಮಗಳಿದ್ದು ಇಂದಿಗೂ ಅಲ್ಲಿ ಅವರ ಸ್ಮರಣೆ ನಡೆಯುತ್ತಿದೆ. ಗುರುದೇವರ ಕುರಿತು ಅನೇಕ ಗ್ರಂಥಗಳು ಲಭ್ಯವಿವೆ. ಬೆಳಗಾವಿ ಸವದತ್ತಿ ತಾಲೂಕಿನ ಸಿಂದೋಗಿಯ ನಿತ್ಯಾನಂದ ಸತ್ಸಂಗ ಆಶ್ರಮದ ಸ್ವಾಮಿ ವಿಜಯಾನಂದರು ಕನ್ನಡದಲ್ಲಿ ಬರೆದ ಗಣೇಶಪುರಿಯ ಸಿದ್ದಯೋಗಿ ಶ್ರೀ ಗುರುದೇವ ನಿತ್ಯಾನಂದ ಹಾಗೂ ಗೋಪಾಲಕೃಷ್ಣ ಹೊಸದುರ್ಗ (ಕಾಞಂಗಾಡ್) ರು ಬರೆದ ಭಗವಾನ್ ಶ್ರೀ ನಿತ್ಯಾನಂದ ಲೀಲಾಮೃತ ಕನ್ನಡದಲ್ಲಿ ಲಭ್ಯವಿರುವ ಕೃತಿಗಳು. ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಹಲವಾರು ಗ್ರಂಥಗಳು ಪೂಜ್ಯರ ಬಗ್ಗೆ ಬಂದಿವೆ.

ಹೋಗುವುದು ಹೀಗೆ….
ಗಣೇಶಪುರಿಗೆ ಮುಂಬಯಿ ಮೂಲಕ ಠಾಣೆಗೆ ಬಂದರೆ ಸಾಕಷ್ಟು ಬಸ್ ಸೌಕರ್ಯವಿದೆ. ಹತ್ತಿರದ ವಿಮಾನ ನಿಲ್ದಾಣ ಮುಂಬಯಿ. ರೈಲು ನಿಲ್ದಾಣ ಠಾಣೆ. ನೇರವಾಗಿ ಕೂಡ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹೋಗುವ ಗಣೇಶಪುರಿ ಕ್ರಾಸ್‌ನಲ್ಲಿ ನಿಲುಗಡೆ ಹೊಂದಿದ ವಾಹನಗಳಲ್ಲಿ ಕೂಡ ಬರಬಹುದಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles