*ಕೃಷ್ಣಪ್ರಕಾಶ್ ಉಳಿತ್ತಾಯ
ಪದ್ಮರಾಗಶಿಲಾದರ್ಶಪರಿಭಾವಿಕಪೋಲಭೂಃ| ನವವಿದ್ರುಮಬಿಂಬಶ್ರೀನ್ಯಕ್ಕಾರಿರದನಚ್ಛದಾ||
ಈ ಹಾಡಿನಲ್ಲಿ ತಾಯಿಯ ಇಪ್ಪತ್ತಮೂರು ಮತ್ತು ಇಪ್ಪತ್ತನಾಲ್ಕನೆಯ ನಾಮಗಳಿವೆ. ತಾಯಿಯ ಕೆನ್ನೆಯನ್ನು ಮೊದಲ ನಾಮದಲ್ಲಿ ವರ್ಣಿಸಲಾಗಿದೆ.
ಪದ್ಮರಾಗವೆಂಬ ನುಣುಪಾದ ಶಿಲೆಗಿಂತಲೂ ಉನ್ನತಮಟ್ಟದ ನುಣುಪನ್ನು ಹೊಂದಿದ ಕಪೋಲವನ್ನು ಹೊಂದಿರುವಾಕೆ ಲಲಿತೆ. ಪದ್ಮರಾಗಶಿಲೆಯ ಕನ್ನಡಿಯನ್ನೂ ಕೂಡ ಧಿಕ್ಕರಿಸುವಂತಹಾ ನುಣುಪನ್ನು ಪಡೆದ ಕೆನ್ನೆ ತಾಯಿಯದು ಎಂಬುದಾಗಿ ತಾಯಿಯನ್ನು ವರ್ಣಿಸಿದ್ದಾರೆ.
ಆಚಾರ್ಯ ಶಂಕರರು ತಮ್ಮ “ಸೌಂದರ್ಯ ಲಹರಿ” ಸ್ತೋತ್ರಮಾಲೆಯಲ್ಲಿ ಮಾಡಿದ ವರ್ಣನೆಯನ್ನು ನೋಡೋಣ. ಕವಿಯ ಕಲ್ಪನೆಗೆ ಎಲ್ಲೆಯೇ ಇಲ್ಲ. ಶಂಕರ ಭಗವತ್ಪಾದರ ಕಾರಯಿತ್ರೀ ಪ್ರತಿಭೆಗೆ ಇದು ನಿದರ್ಶನ. “ಸ್ಫುರದ್ಗಂಡಾಭೋಗಪ್ರತಿಫಲಿತತಾಟಂಕಯುಗಲಂ ಚತುಶ್ಚಕ್ರಂ ಮನ್ಯೇ ತವಮುಖಮಿದಂ ಮನ್ಮಥರಥಮ್| “ ಇದು “ಸೌಂದರ್ಯ ಲಹರಿ”ಯ ಐವತ್ತೊಂಬತ್ತನೆಯ ಪದ್ಯಾರ್ಧ.
ಇಲ್ಲಿ ಭಗವತಿಯ ಕಿವಿಯ ಓಲೆಗಳನ್ನು ಹೇಳುತ್ತಾ ಆಕೆಯ ಕೆನ್ನೆಗಳನ್ನು ವರ್ಣಿಸುತ್ತಾರೆ. ತಾಯಿಯ ಕೆನ್ನೆಗಳ ಮೇಲೆ ಪ್ರತಿಬಿಂಬಿಸುವ ಓಲೆಗಳುಳ್ಳ ಮುಖವನ್ನು ಮನ್ಮಥನ ರಥವೆಂದು ಆಚಾರ್ಯರು ಕಂಡಿದ್ದಾರೆ. ಇಲ್ಲಿಯ ಉತ್ಪ್ರೇಕ್ಷಾಲಂಕಾರ ಎಂದು ಕಂಡುಬಂದರೂ ತಾಯಿಗೆ ಅದು ಸಹಜಾಲಂಕಾರ-ಆಕೆಯ ಕೆನ್ನೆಯ ಮೇಲೆ ಪ್ರತಿಬಿಂಬಿತವಾಗುವ ಆಕೆಯ ಓಲೆ.
ಲಲಿತಾ ಸಹಸ್ರದ “ಪದ್ಮರಾಗಶಿಲಾದರ್ಶಪರಿಭಾವಿಕಪೋಲಭೂಃ” ಎಂಬ ನಾಮವೇ ಆಚಾರ್ಯ ಶಂಕರರಿಗೆ ಸ್ಪೂರ್ಥಿಯಾಗಿತ್ತೋ ಅಥವಾ ಇಂತಹಾ ರೀತಿಯ ಮಾತು ಋಗ್ವೇದದ ಖಿಲ ಭಾಗದದ ಶ್ರೀ ಸೂಕ್ತ ಬರುತ್ತದಲ್ಲಾ ಅದೇ ಸ್ಫೂರ್ಥಿಯಾಗಿರಲೂ ಬಹುದೆಂಬ ಚಿಂತನೆಗೆ ಎಡೆ ಇದೆ.
ಶ್ರೀ ಸೂಕ್ತದ ನಾಲ್ಕನೆಯ ಮಂತ್ರ ಗಮನಿಸೋಣ- “ ಕಾಂಸ್ಯಸ್ಮಿತಾಂ ಹಿರಣ್ಯಪ್ರಾಕಾರಮಾರ್ದಾಂ ಜ್ವಲಂತೀಂ ತೃಪ್ತಾಂ ತರ್ಪಯಂತೀಮ್|” ಇಲ್ಲಿನ “ಕಾಂಸ್ಯಸ್ಮಿಯಾಂ” ಎನ್ನುವುದು ಕಾಶ್ಮೀರದಲ್ಲಿ ದೊರಕಿದ ಪ್ರಾಚೀನ ಪಾಠ ಎನ್ನುವುದು ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರ ಮತ.
“ಕಾಂಸೋಸ್ಮಿತಾಂ” ಎನ್ನುವುದು ಪ್ರಚಲಿತ ಪಾಠ. “ಕಾಂಸ್ಯಸ್ಮಿತಾಂ” ಕಂಚುಗನ್ನಡಿಯಂತೆ ಬೆಳ್ ನಗೆಯ ಕಾಂತಿಯನ್ನು ಸೂಸುವವಳು ಎಂಬಂತೆ ಲಕ್ಷ್ಮಿಯನ್ನು ಕಂಡಿದ್ದಾರೆ. ಮತ್ತಿನ ಹೆಸರು-“ನವವಿದ್ರುಮಬಿಂಬಶ್ರೀನ್ಯಕ್ಕಾರಿರದನಚ್ಛದಾ” ತಾಯಿಯ ತುಟಿಗಳು ಹೊಸದಾದ ಹವಳ ಮತ್ತು ಪಕ್ವ ಬಿಂಬ ಫಲ(ತೊಂಡೆಯ ಹಣ್ಣು)ಗಳಂತೆ ರಾರಾಜಿಸುತ್ತದೆ ಎನ್ನುತಾರೆ. ಇಂತಹಾ ತಾಯಿಯ ಮಂಗಲ ಕಪೋಲಗಳೂ ಸೌಭಾಗ್ಯದಾಯಕ ತುಟಿಗಳೂ ನಮ್ಮ ಮತಿಗೆ ಮಂಗಲವನ್ನೀಯಲಿ.
(ಕೃಷ್ಣಪ್ರಕಾಶ್ ಉಳಿತ್ತಾಯ ಅವರು ಬರಹಗಾರರು, ಮದ್ದಳೆಗಾರರು, ಕರ್ನಾಟಕ ಬ್ಯಾಂಕ್ ಉದ್ಯೋಗಿ ಮಂಗಳೂರು.)