*ಶ್ರೀನಿವಾಸ ಮೂರ್ತಿ ಎನ್ ಎಸ್
ನಾಡಿನ ದೇವಾಲಯಗಳಲ್ಲಿ ಲಕ್ಷ್ಮೀಯ ಶಿಲ್ಪಗಳು ಹಲವೆಡೆ ಕಂಡು ಬಂದರೂ ಪ್ರತ್ಯೇಕ ದೇವಾಲಯಗಳು ನಮ್ಮಲ್ಲಿ ಕಾಣಿಸುವುದು ಕಡಿಮೆ. ಹೊಸ ನಿರ್ಮಾಣದ ದೇವಾಲಯಗಳಲ್ಲಿ ಹಲವು ದೇವಾಲಯ ಕಂಡು ಬಂದರೂ ಇತಿಹಾಸ ಪುಟ ಹೊಕ್ಕರೆ ಅಪರೂಪ. ದೊಡ್ಡಗದ್ದವಳ್ಳಿಯಲ್ಲಿ ಹೊಯ್ಸಳರ ದೇವಾಲಯ ಕಾಣಸಿಗುತ್ತದೆ. ಹಾಗೆಯೇ ಎರಡನೆಯ ಕೊಲ್ಲಾಪುರ ಎಂದೇ ಪ್ರಸಿದ್ದಿ ಪಡೆದ ರಾಯಚೂರ ಮಾನ್ವಿ ತಾಲ್ಲೂಕಿನ ಕಲ್ಲೂರಿನಲ್ಲಿದೆ.
ಇತಿಹಾಸ ಪುಟದಲ್ಲಿ ಕಲ್ಲೂರು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಮುಖ ಪಟ್ಟಣವಾಗಿತ್ತು. ಇಲ್ಲಿನ 1080ರ ಚಾಲುಕ್ಯ ವಿಕ್ರಮನ ಶಾಸನದಲ್ಲಿ ಮಾರಟೇಶ್ವರ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. 1096ರ ಶಾಸನದಲ್ಲೂ ಇದೇ ದೇವಾಲಯಕ್ಕೆ ದತ್ತಿ ಉಲ್ಲೇಖವಿದೆ. 1142, 1151 ರ ಕಾಲದ ಚಾಲುಕ್ಯರ ಶಾಸನಗಳು ಇಲ್ಲಿ ದೊರೆತಿವೆ. ಇಲ್ಲಿನ ಮಹಾಲಕ್ಷ್ಮೀ ದೇವಾಲಯ ಎರಡನೆಯ ಕೊಲ್ಲಾಪುರ ಎಂದೇ ಪ್ರಸಿದ್ದಿ ಪಡೆದಿದೆ.
ಈ ದೇವಾಲಯದ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ ಇಲ್ಲಿನ ಅದಿಲ್ ಷಾ ರ ಕಾಲದಲ್ಲಿ ಕಲ್ಲೂರಿನಲ್ಲಿ ನೆಲಸಿದ್ದ ಶ್ರೀ ಲಕ್ಶ್ಮೀಕಾಂತ ಅಚಾರ್ಯ ಅವರು ಕೊಲ್ಲಾಪುರದ ಮಹಾಲಕ್ಶ್ಮೀಯ ಪರಮ ಭಕ್ತರಾಗಿದ್ದರು. ಆದರೆ ಕಾಲ ಕಳೆದಂತೆ ವಯೋಸಹಜ ಕಾರಣದಿಂದ ಅವರಿಗೆ ಅಲ್ಲಿಗೆ ಹೋಗಲು ಕಷ್ಟವಾಗುತ್ತಿತ್ತು. ಒಮ್ಮೆ ಅವರಿಗೆ ಕೊಲ್ಲಾಪುರಕ್ಕೆ ಹೋಗಲು ಆಗಲಿಲ್ಲ. ಆಗ ಅವರ ಕನಸಿನಲ್ಲಿ ಬಂದ ಮಹಾಲಕ್ಶ್ಮೀ ಇಲ್ಲಿಯೇ ನಾನು ಕಾಣಿಸಿಕೊಳ್ಳುತ್ತೇನೆ ನನ್ನನ್ನು ಸ್ಥಾಪಿಸಿ ಎಂಬ ಅಶರೀರವಾಣಿಯಂತೆ ಇಲ್ಲಿ ಕಲ್ಲೂರಿನಲ್ಲಿ ಮಹಾಲಕ್ಶ್ಮೀಯ ಶಿಲ್ಪವನ್ನು ಸ್ಥಾಪಿಸಿದರು ಎಂಬ ಪ್ರತೀತಿ ಇದೆ.
ಅವರ ಭಕ್ತಿಗೆ ಮೆಚ್ಚಿ ಸ್ವತಹ ಮಹಾಲಕ್ಶ್ಮೀಯೇ ಇಲ್ಲಿ ತನ್ನ ಸ್ವರೂಪವನ್ನ ಪ್ರಕಟಪಡಿಸಿದಳು ಎಂಬ ನಂಬಿಕೆ ಜನರಲ್ಲಿ ಇದೆ. ಇನ್ನು ಸ್ಥಳೀಯ ಪವಾಡದ ಕಥೆಗಳು ಏನೇ ಇದ್ದರು ತನ್ನದೇ ಆದ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ಜೊತೆಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಶಿಲ್ಪವೂ ಇರುವುದು ವಿಶೇಷ.
ತಾವು ವಾಸ ಮಾಡುತ್ತಿದ್ದ ಮನೆಯನ್ನೇ ದೇವಾಲಯವಾಗಿ ಪರಿವರ್ತಿಸಿದ ಅಚಾರ್ಯರ ಕುಟಂಬದವರೇ ಈಗಲೂ ಪೂಜೆ ಮಾಡುತ್ತಿದ್ದಾರೆ. ಕೊಲ್ಲಾಪುರಕ್ಕೆ ಹೋಗಲಾಗದವರು ಇಲ್ಲಿನ ಲಕ್ಷ್ಮೀಯನ್ನೇ ಪೂಜೆ ಮಾಡುತ್ತಾರೆ. ಹಲವು ದೇವಾಲಗಳಿಗೆ ಹೋಲಿಸಿದರೆ ವಿಭಿನ್ನವಾಗಿರು ವ ಈ ದೇವಾಲಯಕ್ಕೆ ಈಗ ನಿತ್ಯ ಪೂಜೆ ಸಲ್ಲುತ್ತಿದ್ದು ನೋಡಬಹುದಾದ ಸ್ಥಳ.
ಇಲ್ಲಿನ ಕಲ್ಯಾಣ ಚಾಲುಕ್ಯರ ಕಾಲದ ಮಾರಟೇಶ್ವರ ದೇವಾಲಯವಿದ್ದು ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಗರ್ಭಗುಡಿಯ ಬಾಗಿಲುವಾಡ ಸುಂದರವಾಗಿ ಆಲಂಕರಣಗೊಂಡಿದ್ದು ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತನೆ ಇದ್ದು ತೋರಣದಲ್ಲಿ ಸರಸ್ವತಿ, ಲಕ್ಷ್ಮೀ ಹಾಗು ಗಣಪತಿಯ ಕೆತ್ತನೆ ಇದೆ.
ಹೋಗುವುದು ಹೀಗೆ: ಕಲ್ಲೂರು ಮಾನವಿಯಿಂದ ಸುಮಾರು 27 ಕಿಮೀ ದೂರದಲ್ಲಿದೆ. ಹಾಗು ರಾಯಚೂರಿನಿಂದ ಸುಮಾರು 22 ಕಿಮೀ ದೂರದಲ್ಲಿದೆ.