ರಂಭಾಪುರಿ ಪೀಠ (ಬಾಳೆಹೊನ್ನೂರು): ಚಿಂತೆಗಳ ಕತ್ತಲಲ್ಲಿ ಚಿಂತನೆ ದೀವಿಗೆ. ಚಿಂತೆ ಮುಳ್ಳಿನಂತೆ ಚುಚ್ಚುತ್ತಿದ್ದರೆ ಚಿಂತನೆ ಜ್ಞಾನವನ್ನು ಹೂವಿನಂತೆ ಅರಳಿಸುತ್ತದೆ. ಸತ್ಯ ಸನ್ಮಾರ್ಗದ ಕಡೆಗೆ ಕರೆದೊಯ್ಯುವುದೇ ಧರ್ಮದ ಗುರಿಯಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರಾವಣ ಮಾಸದ ಇಷ್ಟಲಿಂಗ ತಪೋನುಷ್ಠಾನ ಹಾಗೂ ಪೌರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿವೇಕ ಧೈರ್ಯ ಮತ್ತು ಸ್ನೇಹ ಮಾನುಷ ವ್ಯಾಧಿಗಳಿಗೆ ದಿವ್ಯೌಷಧ. ಕಷ್ಟಗಳನ್ನು ಎದುರಿಸಲು ಧೈರ್ಯ ಮತ್ತು ಸಹನೆಯ ಗುಣಗಳು ಅವಶ್ಯ. ಹಣ ಬೆಟ್ಟದಷ್ಟಿದ್ದರೂ ಹಸಿವೆ ನೀಗಿಸಲು ಸಾಧ್ಯವಾಗದು. ಅಪಾರ ಬೆಲೆ ಬಾಳುವ ಮುತ್ತು ರತ್ನಗಳು ಹಿಡಿ ಅನ್ನಕ್ಕೂ ಸಮನಾಗಲು ಸಾಧ್ಯವಾಗದು. ಗುರುವಿನ ಕರುಣೆಗಾಗಿ ಶಿಷ್ಯ ಹಂಬಲಿಸಬೇಕು. ಗುರು ಪರಮಾತ್ಮನ ಸಾಕಾರ ರೂಪ. ಭಕ್ತನ ಅಂತರಂಗ ಅರಳಿಸುವ ಚಿತ್ಸೂರ್ಯ. ಅರಿವು ಆಚಾರಗಳನ್ನು ಅರುಹುವಾತನೇ ನಿಜವಾದ ಗುರು. ಆಧ್ಯಾತ್ಮ ಲೋಕದ ಕೀರ್ತಿ ಕಲಶ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತದ ಮಹಾಮೇರು ಪರ್ವತ ಎಂದರು.
ತಡವಲಗಾ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಬಬಲಾದ ಹಿರೇಮಠದ ದಾನಯ್ಯ ದೇವರು ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣವನ್ನು ದೃಷ್ಟಾಂತಗಳ ಮೂಲಕ ತಿಳಿಯಪಡಿಸಿದರು. ಉಟಗಿ ಹಿರೇಮಠದ ಶಿವಪ್ರಸಾದ ದೇವರು, ಬೀದರ ಘನಲಿಂಗ ದೇವರು, ರೇವತಗಾಂವ ವಿಶ್ವನಾಥ ದೇವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಅವರಿಂದ ಭಕ್ತಿಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಶ್ರಾವಣ ಪೌರ್ಣಿಮೆ ಸುಸಂದರ್ಭದಲ್ಲಿ ಬಾಳೆಹೊನ್ನೂರಿನ ಪ್ರಜಾಪಿತ ಬ್ರಹ್ಮ ಕುಮಾರಿ ಸಹೋದರಿಯರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ರಕ್ಷಾ ಬಂಧನ ಕಟ್ಟಿ ಆಶೀರ್ವಾದ ಪಡೆದರು.
ಲೋಕ ಕಲ್ಯಾಣಾರ್ಥ ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಬಂದ ಭಕ್ತರಿಗೆ ಶುಭ ಹಾರೈಸಿದರು. ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಬಾಳ್ಳುಪೇಟೆ ಜಗನ್ನಾಥ, ರಾಣೆಬೆನ್ನೂರಿನ ಬಸವರಾಜ ಪಟ್ಟಣಶೆಟ್ಟಿ, ವರ್ತೇಶ ಹುಗಡಿ, ಪ್ರಶಾಂತ ರಿಪ್ಪನ್‍ಪೇಟೆ ಇನ್ನೂ ಮೊದಲಾದ ಗಣ್ಯರು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು