ಕಲಿಯುಗದ ಕಲ್ಪತರು ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ. ಈ ಹಿನ್ನೆಲೆಯಲ್ಲಿ ಶ್ರೀರಾಯರ ಕುರಿತ ಬರಹ.
*ಗುರುರಾಜ್ ಪಂಘ್ರಿ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ |ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ಕಲಿಯುಗದ ಕಲ್ಪವೃಕ್ಷ ಕಾಮಧೇನು ಪರಮ ಕರುಣಾಸಾಗರರಾದ ಶ್ರೀರಾಘವೇಂದ್ರ ತೀರ್ಥರ ನಾಮ ಸ್ಮರಣೆಯೇ ಪರಮ ಮಂಗಳಕರ ಶ್ರೀಮನ್ಮಂತ್ರಾಲಯ ಕ್ಷೇತ್ರದ ತುಂಗಾತೀರ ನರಹರಿ ರಾಮಕೃಷ್ಣ ವೇದವ್ಯಾಸ ವಿಶೇಷ ಸನ್ನಿಧಾನ, ಅಲವಬೋಧರ ಸಕಲ ದೇವತೆಗಳ, ರಾಯರ ಪೂರ್ವಿಕ ಗುರುಗಳ ಸನ್ನಿಧಾನವೇ ತುಂಬಿ ಇರುವ ಪರಮ ಸುಂದರ ಮಂಗಳಕರ ಪಾವನ ವೃಂದಾವನದಲ್ಲಿ ವಿರಾಜಮಾನರಾಗಿರುವ ಶ್ರೀಗುರುರಾಯರು ರಾಯರು ರಾಘಪ್ಪನೆಂದೇ ವಿಶ್ವವಿಖ್ಯಾತಿಯ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರು. ಮೂಲರೂಪ ಶಂಕುಕರ್ಣ ಆಗಿದ್ದು ಕೃತಯುಗದಲ್ಲಿ ಶ್ರೀ ನರಸಿಂಹದೇವರ ಪರಮ ಕರುಣಾಪಾತ್ರ ಪ್ರಹ್ಲಾದರಾಜರು ನಂತರ ದ್ವಾಪರಯುಗದಲ್ಲಿ ಶ್ರೀ ಕೃಷ್ಣ ಶ್ರೀ ಭೀಮಸೇನದೇವರು ಕೃಪಾಪಾತ್ರ ಬಾಹ್ಲೀಕರಾಜರು ಕಲಿಯುಗದಲ್ಲಿ ಶ್ರೀವ್ಯಾಸರಾಜ ಗುರುಸಾರ್ವಭೌಮರು ನಂತರದ ಅವತಾರವೇ ಶ್ರೀರಾಘವೇಂದ್ರ ಸ್ವಾಮಿಗಳು. ಸ್ವಾಮಿಗಳ ಬಾಲ್ಯ ಶ್ರೀ ಗುರುಸಾರ್ವಭೌಮರು ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. (ವೆಂಕಣ್ಣಭಟ್ಟ, ವೆಂಕಟಾಚಾರ್ಯ ಎಂದೂ ಕರೆಯುವರು) ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟ. ತಾಯಿಯ ಹೆಸರು ಗೋಪಿಕಾಂಬ. ತಿಮ್ಮಣ್ಣ ಭಟ್ಟರ ತಾತನ ಹೆಸರು ಕೃಷ್ಣ ಭಟ್ಟ. ಕೃಷ್ಣ ಭಟ್ಟರು ವೀಣೆಯಲ್ಲಿ ಪಂಡಿತರು. ವಿಜಯನಗರದ ರಾಜನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿದ ಗುರುಗಳು. ತಿಮ್ಮಣ್ಣ ಭಟ್ಟರಿಗೆ ವೆಂಕಟನಾಥನನ್ನು ಬಿಟ್ಟು ಇನ್ನೂ ಇಬ್ಬರು ಮಕ್ಕಳು. ಗುರುರಾಜ ಮತ್ತು ವೆಂಕಟಾಂಬ ಅವರ ಹೆಸರು. ವೆಂಕಟನಾಥನು ಈಗಿನ ತಮಿಳುನಾಡುವಿನ ಭುವನಗಿರಿ ಎಂಬಲ್ಲಿ ಜನಿಸಿದನು. ವೆಂಕಟನಾಥನು ಬಾಲ್ಯದಲ್ಲಿಯೇ ತುಂಬಾ ಬುದ್ಧಿವಂತ ಬಾಲಕನಾಗಿದ್ದನು. ಇವರ ತಂದೆ ಚಿಕ್ಕ ವಯಸ್ಸಿನಲ್ಲೆ ವಿಧಿವಶರಾಗಿದ್ದರಿಂದ ಸಂಸಾರದ ಜವಾಬ್ದಾರಿ ಎಲ್ಲ ಅಣ್ಣ ಗುರುರಾಜನ ಮೇಲೆ ಇತ್ತು. ಇವರ ಪ್ರಾರಂಭಿಕ ವಿದ್ಯಾಭ್ಯಾಸ ಇವರ ಸೋದರಮಾವನಾದ ಮಧುರೈನ ಲಕ್ಷ್ಮಿ ನರಸಿಂಹಾಚಾರ್ಯರಲ್ಲಿ ಆಯಿತು. ಮಧುರೈನಿಂದ ಹಿಂತಿರುಗಿದ ಮೇಲೆ ಇವರ ವಿವಾಹವು ಸರಸ್ವತಿ ಎಂಬ ಕನ್ಯೆಯೊಡನೆ ಆಯಿತು. ವಿವಾಹಾನಂತರ ಇವರು ಕುಂಭಕೋಣಕ್ಕೆ ಬಂದು ಶ್ರೀ ಸುಧೀಂದ್ರ ತೀರ್ಥರಲ್ಲಿ ದ್ವೈತ ವೇದಾಂತ ವ್ಯಾಸಂಗ ಮಾಡತೊಡಗಿದರು. ಅಲ್ಲಿಯೇ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು. ಯಾರಿಂದಲೂ ಫಲಾಪೇಕ್ಷೆ ಇಲ್ಲದೇ ಎಲ್ಲರಿಗೂ ವಿದ್ಯಾದಾನ ಮಾಡುತ್ತಿದ್ದರು.ಅವರ ಆರ್ಥಿಕ ಸ್ಥಿತಿ ಆಗ ಚೆನ್ನಾಗಿರಲಿಲ್ಲ. ಎಷ್ಟೋ ಸಲ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಬೇಕಾದ ಪರಿಸ್ಥಿತಿಯಲ್ಲಿಯೂ ಸಹ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ ಹಾಗೂ ದೇವರ ನಾಮಸ್ಮರಣೆ ಬಿಡಲಿಲ್ಲ. ಒಮ್ಮೆ ವೆಂಕಟನಾಥರಿಗೆ ಪತ್ನಿ ಮತ್ತು ಮಗನ ಸಮೇತ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವಿತ್ತು. ಆದರೆ ಆಹ್ವಾನವಿತ್ತವರು ಇವರಿಗೆ ಸರಿಯಾದ ಗೌರವ ನೀಡದೆ ಗಂಧ ಅರಿಯುವ ಕೆಲಸ ನೀಡಿದರು. ವೆಂಕಟನಾಥರು ಆದರೂ ಬೇಸರಿಸದೆ ಕೊಟ್ಟ ಗಂಧದ ಕೊರಡನ್ನು ಪದ್ಧತಿಯ ಪ್ರಕಾರ ಅಗ್ನಿ ಸೂಕ್ತ ಪಠಿಸುತ್ತ ತೇಯ್ದರು. ತೇಯ್ದ ಗಂಧವನ್ನು ಲೇಪಿಸಿಗೊಂಡ ವಿಪ್ರರಿಗೆ ವಿಪರೀತ ಉರಿ ಶುರುವಾಯಿತು. ಹೀಗಾಗಲು ಕಾರಣ ಹುಡುಕಿ ಹೊರಟ ಮುಖ್ಯಸ್ಥರು ವೆಂಕಟನಾಥನನ್ನು ಕಾರಣ ಕೇಳಿದರು. ವೆಂಕಟನಾಥರು ಅಗ್ನಿ ಸೂಕ್ತ ಉಚ್ಛರಿಸುತ್ತ ಗಂಧ ತೇಯ್ದಿರುವದಾಗಿ ಹೇಳಿ, ಅದರಿಂದಲೇ ಹೀಗಾಗಿರಬಹುದೆಂದು ಊಹಿಸಿದರು. ಮತ್ತು ವರುಣ ಮಂತ್ರವನ್ನು ಪಠಿಸಿದಾಗ ಸರ್ವರ ಉರಿಯು ಶಮನವಾಯಿತು. ಇದು ವೆಂಕಟನಾಥರ ಮಂತ್ರಸಿದ್ಧಿ ತೋರಿಸುವಂತಹುದು. ವೆಂಕಟನಾಥ ಶ್ರೀ ರಾಘವೇಂದ್ರ ಸ್ವಾಮಿಗಳಾದದ್ದು ಶ್ರೀ ಸುಧೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ದೇವರೇ ಬಂದು ವೆಂಕಟನಾಥನನ್ನು ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥನಿಗೆ ತಿಳಿಸಿದಾಗ, ವೆಂಕಟನಾಥನು, ಪತ್ನಿ ಮತ್ತು ಮಗನನ್ನು ನೆನಸಿ ನಕಾರತ್ಮಕ ಉತ್ತರ ಕೊಟ್ಟರು. ಅದರೆ ಮನೆಯಲ್ಲಿ, ಸಾಕ್ಷಾತ್ ವಾಗ್ದೇವಿಯೇ ಸ್ವಪ್ನದಲ್ಲಿ ಕಂಡು ಸನ್ಯಾಸಾಶ್ರಮ ಸ್ವೀಕರಿಸಲು ಆಜ್ಞಾ ಇತ್ತಾಗ ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥಾಚಾರ್ಯರು ಫಾಲ್ಗುಣ ಶುದ್ಧ ಬಿದಿಗೆ ಯಂದು ತಂಜಾವೂರಿನಲ್ಲಿ ತನ್ನ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸನ್ಯಾಸಾಶ್ರಮ ವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳೆಂದು ನಾಮಾಂಕಿತರಾದರು. ಸನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಯು ಭಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀ ರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದಳು. ತಮ್ಮ ಪೂರ್ವಾಶ್ರಮದ ಪತ್ನಿಯನ್ನು ಈ ಅವತಾರದಲ್ಲಿ ನೋಡಿ ತೀರ್ಥವನ್ನು ಆಕೆಯ ಮೇಲೆ ಸಂಪ್ರೋಕ್ಷಿಸಿ ಆಕೆಗೆ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು. ಶ್ರೀ ರಾಯರ ಪವಾಡಗಳು ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು. ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೆ ವಿದ್ದ್ಯಾರ್ಥಿಯು ಮಹಾ ಪ್ರಸಾದ ವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು. ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು. ಕಿರೀಟಗಿರಿಯಲ್ಲಿ ಸಂಚಾರತ್ವೇನ ಬಂದಾಗ ಸೀಕರಣೆಯಲ್ಲಿ ಬಿದ್ದು ಮೃತನಾದ ಬಾಲಕನ ಅಪಮೃತ್ಯುವನ್ನು ಶ್ರೀರಾಮಚಂದ್ರ ದೇವರ ಅನುಗ್ರಹದಿಂದ ಪರಿಹರಿಸಿದರು. ಅಗಮ್ಯ ಮಹಿಮರಾದ ಶ್ರೀರಾಘವೇಂದ್ರ ತೀರ್ಥರ ಮಹಿಮೆಗಳು ಅನಂತಾನಂತ. ಇಷ್ಟೇ ಅಂತ ಹೇಳಲಾಗದು. ಅವರ ಅಂತರ್ಗತ ಶ್ರೀಹನುಮ ಭೀಮ ಮಧ್ವಾತ್ಮಕ ಮುಖ್ಯ ಪ್ರಾಣ ಅಂತರ್ಗತ ಶ್ರೀ ರಾಮಚಂದ್ರ ದೇವರ ಶ್ರೀ ವೇಣುಗೋಪಾಲ ನ ಅನುಗ್ರಹ. ತಾನು ಮಾಡಿ ಇವರಿಗೆ ಕೀರ್ತಿಯ ತರುವ. ಇವರ ಕೃತಿಗಳು ಕೆಳಕಂಡಂತಿವೆ : *ಶ್ರುತಿ ಪ್ರಸ್ಥಾನ* 1)ಋಗ್ವೇದವಿವೃತಿಃ 2)ಯಜುರ್ವೇದವಿವೃತಿಃ 3) ಸಾಮವೇದವಿವೃತಿಃ 4) ಮಂತ್ರಾರ್ಥಮಂಜರೀ 5) ಪುರುಷಸೂಕ್ತಮಂತ್ರಾರ್ಥಃ 6) ಶ್ರೀಸೂಕ್ತಮಂತ್ರಾರ್ಥಃ 7) ಮನ್ಯುಸೂಕ್ತಮಂತ್ರಾರ್ಥಃ 8)ಅಂಭೃಣೀಸೂಕ್ತಮಂತ್ರಾರ್ಥಃ * 9) ಬಳಿತ್ಥಾಸೂಕ್ತಮಂತ್ರಾರ್ಥಃ 10) ಹಿರಣ್ಯಗರ್ಭಸೂಕ್ತ ವ್ಯಾಖ್ಯಾನಮ್ *ಉಪನಿಷತ್ ಪ್ರಸ್ಥಾನ* 11) ಈಶಾವಾಸ್ಯೋಪನಿಷತ್ ಖಂಡಾರ್ಥಃ 12) ತಲವಕಾರೋಪನಿಷತ್ ಖಂಡಾರ್ಥಃ 13) ಕಾಠಕೋಪನಿಷತ್ ಖಂಡಾರ್ಥಃ 14) ಷಟ್ಪ್ರಶ್ನೋಪನಿಷತ್ ಖಂಡಾರ್ಥಃ 15) ತೈತ್ತಿರಿಯೋಪನಿಷತ್ ಖಂಡಾರ್ಥಃ 16) ಆಥರ್ವಣೋಪನಿಷತ್ ಖಂಡಾರ್ಥಃ 17) ಮಾಂಡೋಕ್ಯೋಪನಿಷತ್ ಖಂಡಾರ್ಥಃ 18) ಶ್ರೀಮನ್ಮಹೈತರೇಯೋಪನಿಷನ್ಮಂತ್ರಾರ್ಥಃ 19) ಛಾಂದೋಗ್ಯೋಪನಿಷತ್ ಖಂಡಾರ್ಥಃ 20) ಬೃಹದಾರಣ್ಯಕೋಪನಿಷತ್ ಖಂಡಾರ್ಥಃ *ಸೂತ್ರಪ್ರಸ್ಥಾನ* 21. ಶ್ರೀಮನ್ನ್ಯಾಯಸುಧಾಪರಿಮಳಃ ಇದು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಅನುವ್ಯಾಖ್ಯಾನ ಗ್ರಂಥಕ್ಕೆ ಶ್ರೀಜಯತೀರ್ಥರ ಶ್ರೀಮನ್ನ್ಯಾಯ ಸುಧಾ ಗ್ರಂಥಕ್ಕೆ ರಚಿಸಿದ ವ್ಯಾಖ್ಯಾನ. ಈ ಗ್ರಂಥದ ವಿಶಿಷ್ಟತೆಯಿಂದಲೇ ಪರಿಮಳಾಚಾರ್ಯರು ಅಂತ ಪ್ರಸಿದ್ಧರು. 22) ಅಣುಭಾಷ್ಯ ವಾಖ್ಯಾ ತತ್ವಮಂಜರೀ 23) ತತ್ತ್ವಪ್ರಕಾಶಿಕಾ ಭಾವದೀಪಃ 24) ತಾತ್ಪರ್ಯಚಂದ್ರಿಕಾಪ್ರಕಾಶಃ 25) ತಂತ್ರದೀಪಿಕಾ 26) ನ್ಯಾಯಮುಕ್ತಾವಳಿಃ *ಮೀಮಾಂಸಾಶಾಸ್ತ್ರ ಗ್ರಂಥ* ೨೭. ಭಾಟ್ಟಸಂಗ್ರಹಃ *ಪುರಾಣಪ್ರಸ್ಥಾನ* ೨೮. ಶ್ರೀಕೃಷ್ಣಚಾರಿತ್ರ್ಯ ಮಂಜರೀ *ಗೀತಾ ಪ್ರಸ್ಥಾನ* ೨೯) ಶ್ರೀಮದ್ಭಗವದ್ಗೀತಾಭಾಷ್ಯ ಪ್ರಮೇಯದೀಪಿಕಾ ಭಾವದೀಪಃ ೩೦) ಗೀತಾತಾತ್ಪರ್ಯನ್ಯಾಯದೀಪಿಕಾ ಭಾವದೀಪಃ ೩೧. ಗೀತಾರ್ಥಸಂಗ್ರಹಃ (ಗೀತಾವಿವೃತಿಃ) ಪ್ರಕರಣ ಗ್ರಂಥಗಳು ೩೨. ಮಾಯಾವಾದ ಖಂಡನ ಟೀಕಾಟಿಪ್ಪಣೀ * ೩೩. ಮಿಥ್ಯಾತ್ವಾನುಮಾನ ಖಂಡನ ಟೀಕಾಟಿಪ್ಪಣೀ * ೩೪. ಉಪಾಖಂಡನ ಟೀಕಾ ಟಿಪ್ಪಣೀ * ೩೫. ಶ್ರೀವಿಷ್ಣುತತ್ತ್ವವಿನಿರ್ಣಯ ಟೀಕಾ ಭಾವದೀಪಃ ೩೬. ತತ್ವೋದ್ಯೋತ ಟೀಕಾಟಿಪ್ಪಣೀ * ೩೭. ತತ್ತ್ವಸಂಖ್ಯಾನಂ ಟೀಕಾ ಭಾವದೀಪಃ * ೩೮. ತತ್ತ್ವವಿವೇಕ ಟೀಕಾ ಭಾವದೀಪಃ ೩೯. ಕಥಾಲಕ್ಷಣ ಟೀಕಾ ಭಾವದೀಪಃ ೪೦. ಕರ್ಮನಿರ್ಣಯ ಟೀಕಾ ಭಾವದೀಪಃ ೪೧. ಪ್ರಮಾಣಲಕ್ಷಣ ಟೀಕಾ ಭಾವದೀಪಃ *ಇತರ ಗ್ರಂಥಗಳ ಟಿಪ್ಪಣಿಗಳು* ೪೨. ಪ್ರಮಾಣ ಪದ್ಧತಿ ಟಿಪ್ಪಣಿ ಭಾವದೀಪಃ ೪೩. ತರ್ಕತಾಂಡವ ಟೀಕಾ ನ್ಯಾಯದೀಪಃ ೪೪. ವಾದಾವಳೀ ಟಿಪ್ಪಣೀ ೪೫. ಪ್ರಮೇಯ ಸಂಗ್ರಹಃ *ಇತಿಹಾಸ ಪ್ರಸ್ಥಾನ* ೪೬. ಶ್ರೀರಾಮಚಾರಿತ್ರ್ಯ ಮಂಜರೀ ೪೭. ಶ್ರೀಮನ್ಮಹಾಭಾರತತಾತ್ಪರ್ಯ ನಿರ್ಣಯ ಭಾವಸಂಗ್ರಹಃ ೪೮. ಪ್ರಮೇಯನವಮಾಲಿಕೆಯ ಗೂಢಭಾವಪ್ರಕಾಶಿಕಾ (ಅಣುಮಧ್ವವಿಜಯಃ) ಸದಾಚಾರ ಪ್ರಸ್ಥಾನ ೪೯. ಪ್ರಾತಃ ಸಂಕಲ್ಪಗದ್ಯಮ್ ೫೦. ಸರ್ವಸಮರ್ಪಣಗದ್ಯಮ್ ೫೧. ಭಗವದ್ಧ್ಯಾನಮ್ ೫೨. ತಿಥಿನಿರ್ಣಯಃ ೫೩. ತಂತ್ರಸಾರ ಮಂತ್ರೋದ್ಧಾರಃ ಸ್ತೋತ್ರ ಪ್ರಸ್ಥಾನ ೫೪. ರಾಜಗೋಪಾಲಸ್ತುತಿಃ ೫೫. ನದೀತಾರತಮ್ಯ ಸ್ತೋತ್ರಮ್ ೫೬. ದಶಾವತಾರಸ್ತುತಿಃ ಸುಳಾದಿ ಮತ್ತು ಗೀತೆಗಳು ೫೭. ಇಂದು ಎನಗೆ ಗೋವಿಂದ ೫೮. ಮರುತ ನಿನ್ನಯ ಮಹಿಮೆ - ಸುಳಾದಿ ರಾಘವೇಂದ್ರತೀರ್ಥರ ಈ ಮೂರು ಅವತಾರಗಳ ಹಿರಿಮೆಯನ್ನು ಹರಿದಾಸರು ಮನಸಾರ ಹಾಡಿ ಹೊಗಳಿದ್ದಾರೆ ವಿಜಯದಾಸರು ತಮ್ಮ ಒಂದು ಕೃತಿಯಲ್ಲಿ; "ನಮೋ ನಮೋ ಯತಿರಾಜ ಮಮತೆ ರಚಿತ ಅನುಪಮ ಚರಿತ ಚಾರುಹಾಸನೆನಿಪ ನಿನ್ನ | ಹೆಮ್ಮೆಯಿಂದಲಿಪ್ಪ ಪರಬೊಮ್ಮ ವಿಜಯವಿಠಲನಾ ತುಮದೊಳರ್ಚಿಪ ಜ್ಞಾನೋತ್ತಮ ತುಂಗಭದ್ರವಾಸ. ಎಂದು ಹೇಳಿದರೆ, ಗೋಪಾಲದಾಸರು : "ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿರಾಘವೇಂದ್ರ ಪತಿತರನುದ ರಿಪ ಪಾವನಕಾರಿಯೆ ಕೈಮುಗಿವೆನು ದೊರೆಯೆ ಕ್ಷಿತಿಯೊಳು ಗೋಪಾಲವಿಠಲನ ನೆನೆಯುತ ವರ ಮಂತ್ರಾಲಯದೊಳು ಶುಭವೀಯುತ" ಎಂದು ಹಾಡಿದ್ದಾರೆ. ಗುರುಜಗನ್ನಾಥದಾಸರು ಸಹ; "ನೋಡಿದೆ ಗುರುರಾಯರನ್ನು ಈ ರೂಢಿಯೊಳಗೆ ಮೆರೆವೋ ಸಾರ್ವಭೌಮನ್ನ ದಿನನಾಥ ದೀಪ್ತಿ ಭಾಸಕನ ಭವ ನನಧಿ ಸಂತರಣ ಸುಪೋತ ಕೋಪಮನ ಮುನಿಜನ ಕುಲದಿ ಶೋಭಿರನ ಸ್ವೀಯ ಜನರ ಪಾಲಕ ಮಹರಾಯನೆನಿಪನ" ಎಂದು ವರ್ಣಿಸಿ ಗುರುರಾಯರ ಅವತಾರಗಳ ಜೀವನದ ನಿಜತತ್ತ್ವನ್ನು ತಿಳಿಯ ಹೇಳಿರುವರು. ಇಂತು ಹರಿದಾಸರು ಚಿತ್ರಿಸಿದಂತೆ ಎಲ್ಲ ಅವತಾರಗಳಲ್ಲೂ ಜ್ಞಾನ-ಭಕ್ತಿ-ವೈರಾಗ್ಯ ಭಾಗ್ಯಶಾಲಿಗಳಾದ ಗುರುಸಾರ್ವಭೌಮರು ತಮ್ಮನ್ನೇ ನಂಬಿ ಆರಾಧಿಸುವ ಜನರಿಗೆ ಪರತತ್ತ್ವದ ಗುರಿಯನ್ನೇ ತೋರಿಕೊಡುವರು ರಸಿಕನು ರಾಗವನ್ನೂ ರಾಜನು ಕ್ಷಾತ್ರವನ್ನೂ, ಸನ್ಯಾಸಿಯು ವೈರಾಗ್ಯವನ್ನು ಬೋಧಿಸುವರು; ಇದು ಲೋಕ ಸಹಜ ಜಗನ್ನಾಥದಾಸಾರ್ಯರು :- "ಕರುಣೆಗಳೊಳಗೆಣೆಗಾಣಿನೋ ನಿನಗೆ ಸದ್ಗುರುವರ ರಾಘವೇಂದ್ರ ರಾಘವೇಂದ್ರ ಗುರು ನೀ ಗತಿ ಎಂದನು- ರಾಗದಿ ಭಜಿಸುತಿಪ್ಪ ಭಾಗವತರ ದುರತೌಘಗಳಳಿಸಿ ಚನ್ನಾಗಿ ಸಂತೈಸುವಿ ನೀ ಸನ್ಮಾನಿ" ಎಂದು ಹೇಳಿ ಮೇಲ್ಕಂಡ ವಿಷಯವನ್ನೇ ಸ್ಪಷ್ಟ ಪಡಿಸಿರುವರು. ಗುರುರಾಜರು ತಮ್ಮನ್ನಾಶ್ರಯಿಸಿದ ವ್ಯಕ್ತಿಯ ಸಕಲ ದುಃಖಗಳನ್ನು ಪರಿಹರಿಸಿ ಅವನಿಗೆ ಇಹಸುಖವನ್ನು ಕರುಣಿಸುವರು ಆದರೆ ಗುರುರಾಜರು ಕರುಣಿಸಿದ ಇಹದ ಸುಖ ಸಂಸಾರ ಬಂಧಕವಾಗದೆ ತಾರಕವಾಗುವುದು, ಭಗವತ್ಪ್ರಾಪ್ತಿಗೆ ಕೈದೀವಟಿಗೆಯಾಗುವುದು 'ಭಾಗವತರ ದುರಿತೌಘಗಳಳಿಸಿ' ಎಂಬ ದಾಸರ ವಚನ ಬಹ್ವರ್ಥಗರ್ಭಿತವಾದುದು. ಭಾಗವತರಿಗೆ ಸಾಂಸಾರಿಕ ದುಃಖಗಳು ದುರಿತಗಳೆನಿಸಲಾರವು ಬಾಗವಂತನಿಂದ ದೂರವಿರುವುದೇ ಅವರಿಗೆ ನಿಜವಾದ ದುರಿತ. ದಾಸರ ಈ ವಾಣಿಗೆ ಪ್ರೇರಕವಾದದ್ದು "ಅಪರೋಕ್ಷೀಕೃತ- ಶ್ರೀಶಃ ಸಮುಪೇಕ್ಷಿತ ಭಾವಜಃ ಅಪೇಕ್ಷಿತ ಪ್ರದಾತಾನ್ಯೋ ರಾಘವೇಂದ್ರಾನ್ನವಿದ್ಯತೇ" ಎಂಬ ಅಪ್ಪಣ್ಣಾಚಾರ್ಯರ ವಚನ. ಇಷ್ಟಾರ್ಥವನ್ನು ಪೂರೈಸುವಲ್ಲಿ ಗುರುರಾಜರು ಸಮರ್ಥರು ಆದರೆ ಗುರುರಾಜರು ಎಂಥಾ ಇಷ್ಟಾರ್ಥಗಳನ್ನು ಕೊಡುತ್ತಾರೆ ಎನ್ನುವುದನ್ನು ತಿಳಿಸುವುದಕ್ಕಾಗಿಯೇ ಅಪ್ಪಣ್ಣಾಚಾರ್ಯರು "ಅಪರೋಕ್ಷೀಕೃತಶ್ರೀಶಃ ಸಮುಪೇಕ್ಷಿತಭಾವಜಃ" ಎಂದು ಹೇಳಿ ಗುರುರಾಜರ ಸ್ವರೂಪದ ಪರಿಚಯವನ್ನು ತಿಳಿಸಿ ಕೊಟ್ಟಿದ್ದಾರೆ ರತ್ನಗಳನ್ನು ಮಾರುವ ಅಂಗಡಿಯಲ್ಲಿ ಅಜಿವಾನವನ್ನು ಬೇಡಿದರೆ ದೊರೆಯಲಾರದು ಗುರುರಾಜರ ನಿಜವಾದ ಸಂಪತ್ತು ಭಗವಂತನ ಹಾಗೂ ಜ್ಞಾನ, ಭಕ್ತಿ, ವೈರಾಗ್ಯಗಳು ಈ ಭಾಗವತ ಸಂಪತ್ತನ್ನು ಅಪೇಕ್ಷಿಸಿ ಬಂದ ಜನರಿಗೆ ಅದನ್ನು ಕರುಣಿಸಿಕೊಡುವ ಕರುಣಾಳುಗಳು ಗುರುಸಾರ್ವಭೌಮರು, ಈ ವಿಷಯವನ್ನೇ ಗುರುಶ್ರೀಶವಿಠಲರು ತಮ್ಮ ಒಂದು ಕೃತಿಯಲ್ಲಿ ಸ್ಪಷ್ಟಪಡಿಸಿರುವರು ನಿಷ್ಠೆ ಇಂದನುಸರಿಸೆ ಕಷ್ಟಗಳು ದೂರ ಮನೋ ಭಿಷ್ಟೆಗಳ ಪೂರೈಪರೋ ಅಷ್ಟ ಸೌಭಾಗ್ಯವನು ಕೊಟ್ಟು ಸುಜನರಿಗೆ ಶ್ರೀ ವಿಷ್ಣು ದಾಸ್ಯವ ತೋರ್ಪರೋ.... ಇಂಥಾ ಗುರುಸಾರ್ವಭೌಮರಲ್ಲಿ ಎಲ್ಲ ಹರಿದಾಸರು - "ಸಂಸಾರ ಸಾಗರದಿಂದ ಉದ್ದರಿಸಿ, ಪಾರಮಾರ್ಥಿಕದತ್ತ ಎನ್ನ ಮನ ಸಾಗಿಸು" ಎಂದೇ ಪ್ರಾರ್ಥಿಸಿರುವರು ರಾಘವೇಂದ್ರ ಸ್ತೋತ್ರ ಕರ್ತೃಗಳಾದ ಅಪ್ಪಣ್ಣಾಚಾರ್ಯರು ಗುರುರಾಜರನ್ನು ಪ್ರಾರ್ಥಿಸುತ್ತಾ "ರಾಘವೇಂದ್ರಾ! ಭಯಂಕರವಾದ ಸಂಸಾರಸಾಗರದಿಂದ ನನ್ನನ್ನು ಉದ್ದರಿಸು ಎಂದು ಪ್ರಾರ್ಥಿಸಿರುವರು. ಗುರುಜಗನ್ನಾಥದಾಸರು ಸಹ ತಮ್ಮ ಒಂದು ಕೃತಿಯಲ್ಲಿ :- "ಭಾವದ್ರವ್ಯಕ್ರಯಾದ್ವೈತ ಇದರನು ಭಾವವ ತಿಳಿಯದೆ ನಿರುತ ಸೇವಿಪ ಸಂತತ ಈ ವಿಧ ನರರನು ದೇವರೆಂದನುದಿನ ಭಾವಿಸಿದೆನು ನಾ ರಾಘವೇಂದ್ರಗುರುರಾಯ ನೀ ವೇಗದಿ ಪಿಡಿಯೆನ್ನ ಕೈಯ್ಯಾ ಆಗಮ ಸಂಚಿತ ಭೋಗಗಳುಳ್ಳ ಭವ ಸಾಗರದೊಳು ಬಿದ್ದ ಬ್ಯಾಗನೆ ನೀ ಬಂದು" ಎಂದು ಗುರುರಾಜರನ್ನು ಪ್ರಾರ್ಥಿಸಿರುವರು ಇದೇ ದಾಸರೇ ಮತ್ತೊಂದೆಡೆ "ಎಷ್ಟುವೇಳಲೆನ್ನ ಕಷ್ಟರಾಶಿಗಳನ್ನು ಸುಟ್ಟುಬಿಡೋ ಸರ್ವೋತ್ಕೃಷ್ಟ ಮಹಿಮ ಗುರು" ಎಂದು ಹೇಳಿ ತಮ್ಮ ಕಷ್ಟ ಪರಂಪರೆಗಳನ್ನು ಸುಟ್ಟುಬಿಡುವಂತೆ ಪ್ರಾರ್ಥಿಸಿರುವರು. ಇಂತು ಎಲ್ಲ ಹರಿದಾಸರು ರಾಘವೇಂದ್ರ ಗುರು ಸಾರ್ವಭೌಮರನ್ನು ಜ್ಞಾನ-ಭಕ್ತಿ-ವೈರಾಗ್ಯ ಮೂರ್ತೀಭವಿಸಿದ ಹರಿಭಕ್ತಾಗ್ರಣಿಗಳನ್ನಾಗಿಯೂ, ಸುಜೀವಿಗಳನ್ನು ಸಂಸಾರ ಬಂಧನದಿಂದ ಉದ್ಧರಿಸಲು ಬದ್ದಕಂಕಣರಾದವರನ್ನಾಗಿಯೂ ಕಂಡು, ಅವರಲ್ಲಿ ಭಗವದ್ಬಕ್ತಿ, ವಿಷಯ ವಿರಕ್ತಿಯನ್ನೇ ಬೇಡಿರುವರು. *ಪ್ರಮಾಣಗಳು* ಶ್ರೀ ನೃಸಿಂಹ ಪುರಾಣ.... ಶಂಖುಕರ್ಣಾಖ್ಯ ದೇವಸ್ತು ಬ್ರಹ್ಮ ಶಾಪಾಶ್ಚ ಭೋತಲೇ । ಪ್ರಹ್ಲಾದ ಇತಿ ವಿಖ್ಯಾತೋ ಭೂಭಾರ ಕ್ಷಪಣೇ ರತಃ ।। ಸ ಏವ ರಾಘವೇಂದ್ರಾಖ್ಯ ಯತಿ ರೂಪೇಣ ಸರ್ವದಾ । ಕಲೌಯುಗೇ ರಾಮಸೇವಾಂ ಕುರ್ವನ್ ಮಂತ್ರಾಲಯೇ ಭವೇತ್ ।। ಪ್ರಹ್ಲಾದೋ ಜನ್ಮ ವೈಷ್ಣವಃ ।। ಶ್ರೀ ಬ್ರಹ್ಮಾಂಡಪುರಾಣದಲ್ಲಿ... ಪ್ರಹ್ಲಾದೋಪಿ ಮಹಾಭಾಗಃ ಕರ್ಮದೇವ ಸಮಃ ಸ್ಮೃತಃ । ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।। " ಶ್ರೀಮದ್ಭಾಗವತ ಮಹಾ ಪುರಾಣ " ವಾಸುದೇವೇ ಭಗವತಿ ಯಸ್ಯ ನೈಸರ್ಗಿಕೀರತಿಃ । ಬ್ರಹ್ಮಣ್ಯಃ ಶೀಲ ಸಂಪನ್ನಃ ಸತ್ಯಸಂಧೋ ಜಿತೇಂದ್ರಿಯಃ । ಪ್ರಶಾಂತಕಾಮೋ ರಹಿತಾಸುರೋಸುರಃ ।। ಮಹದರ್ಭಕಃ ಮಹದುಪಾಸಕಃ ನಿರ್ವೈರಾಯ ಪ್ರಿಯ ಸುಹೃತ್ತಮಃ । " ಶ್ರೀ ಗರುಡಪುರಾಣದ ಬ್ರಹ್ಮಕಾಂಡ " ದಲ್ಲಿ..... ಮಾನಸ್ತಂಭ ವಿವರ್ಜಿತಃ ಯಥಾ ಭಗವತೀಶ್ವರೇ ।। ಪ್ರಕೃಷ್ಟಾಹ್ಲಾದ ಯುಕ್ತತ್ವಾತ್ ನಾರದಸ್ಯೋಪದೇಶತಃ । ಅತಃ ಪ್ರಹ್ಲಾದ ನಾಮಾಸೌ ಪೃಥುವ್ಯಾಂ ಖಗಸತ್ತಮಃ ।। *ಸೂತ್ರ ಭಾಷ್ಯ* ದೇವಾಃ ಶಾಪ ಬಲದೇವ ಪ್ರಹ್ಲಾದಾದಿತ್ವಮಾಗತಾಃ । ದೇವಾಃ ಶಾಪಾಭಿಭೂತತ್ವಾತ್ ಪ್ರಹ್ಲಾದಾದ್ಯ ಬಭೂವಿರೇ ।। " ಯಜುರ್ವೇದ ಬ್ರಾಹ್ಮಣ ೫ನೇ ಖಂಡ " ಪ್ರಹ್ಲಾದೋ ವೈ ಕಯಾಧವಃ ವಿರೋಚನಂ ಸ್ವಪುತ್ರಂ ಅಪನ್ಯಧತ್ತ ।। *ಶ್ರೀ ಸ್ಕಂದ ಪುರಾಣ " ದಲ್ಲಿ* ಋತೇತು ತಾತ್ವಿರ್ಕಾ ದೇವನ್ನಾರದಾದೀನಥೈವ ಚ । ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।। ಶ್ರೀ ಪ್ರಹ್ಲಾದರಾಜರಿಗೆ ಜಗನ್ನಾಥನಾದ ಶ್ರೀ ನೃಸಿಂಹನ ಪರಮಾದ್ಭುತ ವಚನ " ಶ್ರೀ ಮದ್ಭಾಗವತ ಮಹಾ ಪುರಾಣದಲ್ಲಿ.... ವತ್ಸ! ಯದ್ಯದಭೀಷ್ಟಂತೇ ತತ್ತದಸ್ತು ಸುಖೀಭವ । ಭವಂತಿ ಪುರುಷಾ ಲೋಕೇ ಮದ್ಭಾಕ್ತಾಸ್ತ್ವಾಮನುವ್ರತಾಃ । ತ್ವಂ ಚ ಮಾಂ ಚ ಸ್ಮರೇಕಾಲೇ ಕರ್ಮಬಂಧಾತ್ಪ್ರಮುಚ್ಯತೇ ।। " ಶ್ರೀ ಪ್ರಹ್ಲಾದರೇ ಬಾಹ್ಲೀಕರಾಜರು " .... ಶ್ರೀಮದಾಚಾರ್ಯರು - [ ಮ ಭಾ ತಾ ನಿ - ೧೧ - ೮ ] ಬಾಹ್ಲೀಕೋರಾಜ ಸತ್ತಮಃ ಹಿರಣ್ಯಕಶಿಪೋ ಪುತ್ರಃ । ಪ್ರಹ್ಲಾದಃ ಭಗವತ್ಪ್ರಿಯಃ ವಾಯೂನಾ ಚ ಸಮಾವಿಷ್ಟಃ ।। " ಶ್ರೀ ಪ್ರಹ್ಲಾದರೇ ಶ್ರೀ ವ್ಯಾಸರಾಜರು "..... ಶ್ರೀಪುರಂದರದಾಸರು.... ಶೇಷಾವೇಶ ಪ್ರಹ್ಲಾದನವತಾರ ವೆನಿಸಿದೆ । ವ್ಯಾಸರಾಯನೆಂಬೋ ಪೆಸರು ನಿನಗಂದಂತೆ । ದೇಶಾಧಿಪಗೆ ಬಂದ ಕುಹೂ ಯೋಗವನು ನೂಕಿ । ನೀ ಸಿಂಹಾಸನವೇರಿ ಮೆರೆದೆ ಜಗವರಿಯೇ । ವ್ಯಾಸಾಬ್ಧಿಯನು ಬಿಗಿಸಿ ಕಾಶಿ ದೇಶದೊಳೆಲ್ಲ । ಭಾಸುರ ಕೀರ್ತಿಯನು ಪಡೆದೆ ನೀ ಗುರುರಾಯ । ವಾಸುದೇವ ಪುರಂದರ ವಿಠ್ಠಲನ್ನ ದಾಸರೊಳು । ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ।। ಶ್ರೀ ಕನಕದಾಸರು.... ವ್ಯಾಸರಾಯರಿಗೆ ಮೂರು ಜನ್ಮ । ( ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜರು ), ದಾಸರಿಗೆ ಎರಡು ಜನ್ಮ । ( ಮಹಾಭಾರತದಲ್ಲಿನ ಶ್ರೀ ವಿದುರ ಮತ್ತು ಶ್ರೀ ಕನಕದಾಸರು ), ಶ್ರೀ ವ್ಯಾಸರಾಯರೇ ರಾಘವೇಂದ್ರರಾಯರು ( ಶ್ರೀ ವ್ಯಾಸರಾಜರ ಮುಂದಿನ ಅವತಾರವೇ ಶ್ರೀರಾಯರು ), ರಾಮಚಂದ್ರನ ಆಶ್ರಿತ ಜನ ಕೋಟಿಯೊಳಗೆ । ಉತ್ಕ್ರುಷ್ಠರಾದವರು । ನಾರದರ ಅಂಶವೇ ಪುರಂದರ ದಾಸರು । ತಮ್ಮ ಕೂಸಾದ ಭೃಗು ಮುನಿಯಲ್ಲಿ । ತಾವು ಒಂದು ಅಂಶದಿ ನಿಂದು ವಿಜಯದಾಸರೆಂದು ಪೆಸರು ಪಡೆವ । ನಾ ಯಮನು ಮುಂದೆ ಮಾಂಡವ್ಯ ಶಾಪದಿಂದ ಎರಡು ಜನ್ಮ ಶೂದ್ರ ಯೋನಿಯಲ್ಲಿ ಪೊಕ್ಕೆನಲು । ಒಂದು ಜನುಮ ವಿದುರನಾಗಿ ಕುರುಬ ಕುಲದಲ್ಲೀಗ ಪುಟ್ಟಿದೆ । ಎನಗೆ ಈ ಜನ್ಮದಲ್ಲಿ ಮುಕುತಿ ಎಂತೆಂಬೆ । ವರದಪ್ಪನೇ ಸೋಮ । ಗುರುರಾಯ ದಿನಕರನು । ಅಭಿನವ ಬೃಹಸ್ಪತಿ । ಮಧ್ವಪತಿ ಭೃಗು ಅಂಶದಿ ಮೆರೆವ । ಮಹಾ ಮಹಿಮೆ ಪೊಗಳುವೆನು । ಭಾಗವತರೊಳು ಯೋಗೀಂದ್ರ ಕೃಷ್ಣನ್ನ । ಬಾಗಿ ನಮಿಸುವ ದಾಸ ಜನರ ಪೋಷಕ ಕಾಗಿನೆಲೆಯಾದಿ ಕೇಶವರಾಯ । ದಾಸೋತ್ತಮರ ಗುಣವನ್ನು ಕನಕದಾಸ ಪೇಳಿದನು ।। ಶ್ರೀ ವಿಜಯೀ೦ದ್ರತೀರ್ಥರು ಶ್ರೀ ವ್ಯಾಸರಾಜ ಸ್ತೋತ್ರದಲ್ಲಿ.... ಪ್ರಹ್ಲಾದಸ್ಯಾವತಾರೋ ಸಾವೀಂದ್ರಸ್ಯಾನುಪ್ರವೇಶನಾತ್ । ತೇನೆ ಸತ್ಸೇವಿನಾಂ ನೃಣಾಂ ಸರ್ವಮೇತದ್ಭವೇ ಧ್ರುವಮ್ ।। ಶ್ರೀ ವಿಜಯರಾಯರು.... ವೃಕೋದರನಿಂದ ನೊಂದು ದೇಹವನು ಬಿಡುವಾಗ । ಬಾ । ಹ್ಲೀಕ ರಾಯನಾಗಿ ಹುಟ್ಟಿದ್ದ ಪ್ರಹ್ಲಾದ । ತಾ । ನುಕುತಿಯಲಿ ಪೊಗಳಿ ವರವ ಬೇಡಿದನು ವೈದಿಕ ಮಾರ್ಗವನೇ ಪಿಡಿದು ।। ಉಕಿತಿಯನು ಸಾಧಿಸುತ ಕಲಿಯೊಳಗೆ ನಿಮ್ಮ । ಪೂ । ಜಕನಾಗಿ ಬಾಳುವೆನು ಎಂದು ತಲೆವಾಗಿದನು । ಭಕುತಿಗೆ ಮೆಚ್ಚಿ ಕೈಸಲೆ ಎಂದ ಮಾತಿಂದು ಪ್ರಕಟವಾಯಿತು ಧರೆಯೊಳು ।। " ಶ್ರೀ ಪ್ರಹ್ಲಾದರೇ ಶ್ರೀ ರಾಘವೇಂದ್ರತೀರ್ಥರು " " ಶ್ರೀ ವಿಜಯರಾಯರು " ಆ ಶಂಖುಕರ್ಣನೇ ಶೇಷಾವೇಷದಲ್ಲಿ । ಈಶನ ಸ್ತಂಭದಿ ತೋರಿಸಿದಾತನು । ತಾ ಸುಮ್ಮನದಿ ನಾರಸಿಂಹನ ಪೂಜೆಗೆ । ತಾಸು ಬಿಡದೇ ಅರ್ಚಿಸಿದಾತನು । ಈ ಸುಮಹಿಮಗೆ ವ್ಯಾಸ ನಾಮಕರಣವು । ಆಸುಮನೋಯತಿ ಆಶೀರ್ವಾದವು ಮಾಡೆ । ತಾ ಸುಮ್ಮನಿರದಲೆ ಕೃಷ್ಣನ್ನ ಸ್ಮರಿಸುತ್ತ । ಈ ಶಿಶು ಬೆಲೆಯೇ ರಾಘವೇಂದ್ರ ನಾಮದಿ ।ಶ್ರೀಶ ವಿಜಯ ವಿಠ್ಠಲನ ಒಲಿಮೆಯಿಂದಲಿ ।। ಶ್ರೀ ಗೋಪಾಲದಾಸರು... ಶೇಷಾಂಶ ಪ್ರಹ್ಲಾದ ವ್ಯಾಸ ಮುನಿಯೇ ರಾಘವೇಂದ್ರ । ಈ ಸುಬಗೆ ಪುಣ್ಯ ಇವರಿಗೆ ಕೇಶವನೆ ತಾ ಮಾಡಿಸಿ ।। ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ । ಯತಿ ರಾಘವೇಂದ್ರ ।। ಶ್ರೀ ಪ್ರಾಣೇಶದಾಸರು... ರಾಯರ ನೋಡಿರಿ ಗುರು ರಾಯರ ಪಾಡಿರೈ । ಸಿರಿ ಪ್ರಹ್ಲಾದ ವರ ಬಾಹ್ಲೀಕ ಗುರು ವ್ಯಾಸ ರಾಘವೇಂದ್ರ ।। ಶ್ರೀ ಶ್ರೀಕರವಿಠಲರು... ಸಹ್ಲಾದಣ್ಣನಣ್ಣ ಬಾರೋ । ಪ್ರಹ್ಲಾದರಾಜಾ । ಬಾಹ್ಲೀಕ ವ್ಯಾಸನಾಗಿ ಉಹ್ಲಾಸದಿಂದ ಬಾರೋ ।। ರಾಜ ಬಾರೋ ಗುರುರಾಜ ಬಾರೋ । ರಾಜಾಧಿರಾಜ ಗುರುರಾಜ ಬಾರೋ ।। " ಶ್ರೀ ವಾಯುದೇವರ ನಿತ್ಯಾವೇಶಯುಕ್ತರು ಶ್ರೀ ರಾಘವೇಂದ್ರತೀರ್ಥರು " " ಬ್ರಹ್ಮಕಾಂಡ " " ವಾಯೂನಾ ಚ ಸಮಾವಿಷ್ಟಂ ಹರೇಃ ಪಾದಾಬ್ಜ ಸಂಶಯಂ । ಶ್ರೀಮದಾಚಾರ್ಯರು.... ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ । ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।। ಕೃಷ್ಣಗ್ರಹಗ್ರಹೀತಾತ್ಮ....... ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।। ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ । ಎಂದರೆ..... ವಾಯೂನಾಚ ನಿತ್ಯ ಸಮಾವಿಷ್ಟತ್ವಾತ್ ಪ್ರಹ್ಲಾದೋ ನಿತ್ಯ ಭಕ್ತಿಮಾನ್ । ರಾಯರೇ ಗತಿಯು ನಮಗೆ । ವಾಯುಸುಮತೋದ್ಧಾರ - ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।। ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ । ಯುಕುತಮಾಗಿಹ ಚೂತ ಸುಕುಜ ಗತಿಯೋ । ಮುಕುತಿಗೆ ಸುಜ್ಞಾನ ಭಕುತಿ ವಿರುಕುತಿ ಗತಿಯು । ಅಕಳಂಕ ಶ್ರೀಮಂತ - ಮಂದಿರದಿ ನೆಲಸಿಪ್ಪ ।। ಚರಣ ।। ಋಷಿಗಳಿಗೆ ಪ್ರಣವವೇ ಗತಿ ಝಷಗಳಿಗೆ ಜಲವೇ ಗತಿ । ಸಸಿಗಳಭಿವೃದ್ಧಿಗೆ ಶಶಿಯೇ ಗತಿಯು । ಶಿಶುಗಳಿಗೆ ಜಲವೆ ಗತಿ ಪಶುಗಳಿಗೆ ತೃಣವೆ ಗತಿ । ಈಸು ಮಹಿಮೆಲಿ ಮೆರೆವ ಮಿಸುನಿ ಶಯ್ಯಜರಾದ ।। ಚರಣ ।। ಕಾಮಿನೀ ಮಣಿಯರಿಗೆ ಕೈಪಿಡಿದ ಕಾಂತ ಗತಿ । ಭೂಮಿ ವಿಬುಧರಿಗೆ ಮಧ್ವ ಶಾಸ್ತ್ರ ಗತಿಯೋ । ತಾಮರಸ ಸಖ ಸುತನ ಭಯ ಪೋಪುವುದಕೆ । ಶ್ರೀ । ಶ್ಯಾಮಸುಂದರ ವಿಠ್ಠಲ ಸ್ವಾಮಿ ನಾಮವೇ ಗತಿಯೋ ।। ಚರಣ ।। ಶ್ರೀ ರಾಯರನ್ನು ಯಾರು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಪೂಜಿಸುತ್ತಾರೋ, ಭಜಿಸುತ್ತಾರೋ, ಶ್ರೀ ರಾಯರೇ ಗತಿಯೆಂದು ಸರ್ವ ಕಾಲಗಳಲ್ಲಿಯೂ ಸೇವಿಸುತ್ತಾರೋ ಅವರಿಗೆ ಶ್ರೀ ಯಮಧರ್ಮರಾಜರ ಭಯವು ಅಂದರೆ " ನರಕ " ದ ಭಯ ಇಲ್ಲ ಎನ್ನುವುದನ್ನು ಶ್ರೀ ಶ್ಯಾಮಸುಂದರದಾಸರು ಶ್ರೀ ರಾಘವೇಂದ್ರ ಗುರುರಾಯರ ಅದ್ಭುತ ಮಹಿಮೆಯನ್ನು ಅತಿ ಮನೋಜ್ಞವಾಗಿ ಸರಳ ಸುಂದರವಾಗಿ ತಿಳಿಸಿದ್ದಾರೆ. ಶ್ರೀರಾಯರು ವೃಂದಾವನ ಪ್ರವೇಶ ಮಾಡಿದ ಮೇಲೆ ವಿಷಯ ತಿಳಿದ ಶ್ರೀ ಅಪ್ಪಣ್ಣಾರ್ಯರು ತುಂಬಿ ಹರಿಯುತ್ತಿದ್ದ ತುಂಗೆ ದಾಟುತ್ತಾ ಶ್ರೀ ಪೂರ್ಣಬೋಧ ಗುರು ತೀರ್ಥ ಪಯೋಬ್ಧಿಪಾರಾ ಎಂದು ಪ್ರಾರಂಭವಾಗುವ ಶ್ರೇಷ್ಠ ಗುರು ಸ್ತೋತ್ರ ಹೇಳುತ್ತ ವೃಂದಾವನ ಹತ್ತಿರ ಬಂದಾಗ ವಿಭೂತಿರತುಲಾ ಎಂಬಲ್ಲಿ ನಿಲ್ಲಿಸಿ ವಿಯೋಗ ಸಹಿಸದೆ ಮಾತು ಹೊರಡದಾದಾಗ ಪರಮ ಕರುಣಾಸಾಗರರಾದ ಶ್ರೀರಾಘವೇಂದ್ರ ತೀರ್ಥರ ವೃಂದಾವನದಿಂದ ಸಾಕ್ಷಿ ಹಯಾಸ್ಯೋತ್ರಹಿ ಎಂಬ ವಾಣಿ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ಹಯಗ್ರೀವ ದೇವರು ವರವಿತ್ತಾಗ ಸ್ತೋತ್ರ ಸಿದ್ಧಿಪ್ರದವೆಂದು ಪ್ರಸಿದ್ಧಿ ಪಡೆಯಿತು. ಈ ಗುರುಸ್ತೋತ್ರದ ಸಾರಾಂಶ ಎಂದು ಹೇಳಲಾಗುವ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಎಂಬ ಸ್ತೋತ್ರ ರಚಿಸಿ ಅರ್ಪಿಸುತ್ತಾರೆ. ಅನೇಕಾನೇಕ ಮಹಿಮೆಗಳು ತೋರಿಸಿ ತೋರಿಸುತ್ತಿದ್ದಾರೆ. ತುಂಗಾತೀರ ಮಂಚಾಲೆಗ್ರಾಮವನ್ನು ದಿವಾನ್ ವೆಂಕಣ್ಣನ ಕಡೆಯಿಂದ ರಾಯರ ಮಹಿಮೆ ತಿಳಿದು ಪರೀಕ್ಷಿಸಿ ಶರಣಾಗತನಾದ ಅರಸನಿಂದ ಪಡೆದು ಸಶರೀರರಾಗಿ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ಭವ್ಯ ದಿವ್ಯ ವೃಂದಾವನ ಪ್ರವೇಶಮಾಡಿ ವಿರಾಜಮಾನರಾಗಿದ್ದು ಭಕುತರಿಗೆಲ್ಲ ಕಾಮಧೇನು ಕಲ್ಪವೃಕ್ಷರಾಗಿ ಕರೆದಲ್ಲಿಗೆ ಓಡಿ ಬರುವ ಪರಮ ಕರುಣಾಸಾಗರರು ಶ್ರೀ ರಾಯರು. ಈ ಪುಟ್ಟ ಎರಡಕ್ಷರಗಳ ಲೇಖನ ಸೇವೆಗೆ ಶ್ರೀ ರಾಘವೇಂದ್ರ ತೀರ್ಥ ಗುರ್ವಂತರ್ಗತ ಶ್ರೀ ಜಯತೀರ್ಥ ಗುರ್ವಂತರ್ಗತ ಶ್ರೀ ಹನುಮ ಭೀಮ ಮಧ್ವಾತ್ಮಕ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ರಾಮಚಂದ್ರ ದೇವರ ಶ್ರೀ ಲಕ್ಷ್ಮೀ ನರಸಿಂಹ ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತ