* ಕೃಷ್ಣಪ್ರಕಾಶ ಉಳಿತ್ತಾಯ
ಹತ್ತನೆಯ ಹಾಡಿನಲ್ಲಿಎರಡು ಹೆಸರುಗಳು. ಶುದ್ಧವಿದ್ಯಾಂಕುರಾಕಾರದ್ವಿಜಪಂಕ್ತಿದ್ವಯೋಜ್ಜ್ವಲಾ| ಕರ್ಪೂರವೀಟಿಕಾಮೋದಸಮಾಕರ್ಷದ್ದಿಗಂತರಾ||
ತಾಯಿಯ ನಾಮದ ಶಬ್ದಗುಣದಲ್ಲಿಯೇ ಉಜ್ವಲತೆಯಿದೆ.” ಶುದ್ಧವಿದ್ಯಾಂಕುರಾಕಾರದ್ವಿಜಪಂಕ್ತಿದ್ವಯೋಜ್ಜ್ವಲಾ” ಓಜೋಗುಣ ಸಮಾವಿಷ್ಟವಾಗಿರುವ ಹೆಸರಿದು.
“ಗಾಢಬಂಧತ್ವಮೋಜಃ” ಎಂಬ ಅಲಂಕಾರಿಕನಾದ ವಾಮನನ ಮಾತನ್ನು ಇಲ್ಲಿ ಸ್ಮರಿಸಬಹುದು. ಈ ಹೆಸರಿನಲ್ಲಿರುವ ಗಾಢವಾದ ಬಂಧಗಳು ಈ ಗುಣವನ್ನು ಕೊಟ್ಟಿದೆ. ಇನ್ನು ಅರ್ಥದ ಕಡೆಗೆ ಹೊರಳೋಣ.
ಶುದ್ಧವಿದ್ಯೆಯೇ ಮೊಳಕೆ (ಅಂಕುರ)ಯೊಡೆದು ತಾಯಿಯ ದಂತಪಂಕ್ತಿಗಳಾಗಿ ಶೋಭಿಸುತ್ತಾ ಇದೆ. ಇದು ಉಜ್ವಲ ಕಾಂತಿಯಿಂದ ಬೆಳಗುತ್ತಿದೆ ಎಂಬ ಅರ್ಥಸಂಜ್ಞೆ ಇದೆ. ತಾಯಿಯ ಮಂತ್ರ ಸಮುಚ್ಛಯಗಳಿಗೆ ವಿದ್ಯೆ ಎನ್ನುತ್ತಾರೆ. ಹದಿನಾರು ಬೀಜಾಕ್ಷರಗಳು ಶೋಡಷೀ ಮಂತ್ರದಲ್ಲಿ ಇದೆ. ಇದೇ ವಿದ್ಯೆ-ಶುದ್ಧವಿದ್ಯೆ. ಇದುವೇ ಎರಡು ಕವಲಾಗಿ ತಾಯಿಯ ಮೂವತ್ತೆರಡು ದಂತಪಂಕ್ತಿಗಳಾಗಿವೆ ಎಂದೂ ಊಹಿಸಬಹುದು. ತಾಯಿಯ ನಗುಮುಖದ ಕರುಣಾದೃಷ್ಟಿಪೂರಿತವದನ ಭಕ್ತನ ಮೇಲೆ ಹರಿದಾಗ ಕಾಣುವ ದಂತಪಂಕ್ತಿಯ ಸೊಬಗು ಆಗಷ್ಟೇ ಮೊಳಕೆಯೊಡೆದ ವಿದ್ಯೆಯೆಂಬ ಹೂವಿನಂತೆಯೇ ಭಾಸವಾಗುತ್ತದೆ.
“ದ್ವಿಜ ಪಂಕ್ತಿ” ಎಂಬ ಮಾತೂ ಇಲ್ಲಿದೆ. ದ್ವಿಜ ಅಂದರೆ ಎರಡನೆಯ ಸಲ ಹುಟ್ಟಿದವನು ಎಂಬ ಅರ್ಥ. ಎರಡೆರಡು ಸಲ ಹುಟ್ಟಿದವುಗಳ ಪಂಕ್ತಿ ಎಂಬ ಅರ್ಥಸಂಜ್ಞೆಗೂ ಅವಕಾಶವಿದೆ. ಅಂದರೆ “ದಂತ” ಎರಡು ಸಲ ಹುಟ್ಟುವವು. ಇವು ಶುದ್ಧವಿದ್ಯೆ ಹುಟ್ಟುವ ತಾವು(ಸ್ಥಳ) ಎಂಬಂತೆಯೂ ಸೂಚಿಸುತ್ತದೆ ಈ ಹೆಸರು.
ಮಂತ್ರೋಚ್ಛಾರಕ್ಕೆ ನಾಲಗೆಗೆ ಬೇಕಾದ ಆಧಾರ ಕೊಡುವುದು ದಂತ ಪಂಕ್ತಿಗಳೆಂಬುವು ಸರ್ವವಿದಿತ. ಬೀಜರೂಪದಲ್ಲಿರುವ ಶುದ್ಧವಿದ್ಯೆಯು ಪರಾ, ಪಶ್ಯಂತೀ ಮತ್ತು ವೈಖರಿ(ಮಾತು) ರೂಪದಿಂದ ಮಾತಿನ ಮೂಲಕ ಹೊರಬರಲು ಕಾರಣ ದಂತ ಪಂಕ್ತಿಗಳು. ಹಾಗಾಗಿ ದೇವಿಯ ಈ ರೂಪದ ಸ್ಮರಣೆಯಿಂದ ಋಷಿಗೆ “ಶುದ್ಧವಿದ್ಯೆಯ” ನೆನಪಾಯಿತು ಎಂಬ ಊಹೆಯನ್ನು ಮಾಡಬಹುದು.
ಇಂತಹಾ ನೋಟವನ್ನು ನೆನೆದ ನಮಗೆ ತಾಯಿಯ ಶುದ್ಧವಿದ್ಯಾ ಸ್ವರೂಪದ ಅನವರತ ಚಿಂತನೆಯ ಸೌಭಾಗ್ಯ ದೊರಕಲಿ. “ಕರ್ಪೂರವೀಟಿಕಾಮೋದಸಮಾರ್ಷದ್ದಿಗಂತರಾ” ತಾಯಿಯ ಬಾಯಿಯೊಳಗಿದ್ದ ತಾಂಬೂಲವು ಸುತ್ತಲೂ ಪರಿಮಳಬೀರಿ ದಿಗ್ ದಿಗಂತವನ್ನೇ ವ್ಯಾಪಿಸಿ ಆಕರ್ಷಿಸಿದೆ.
ಶುದ್ಧವಿದ್ಯೆಯ ರೀತಿಯೇ ಇದು. ಶುದ್ಧವಿದ್ಯೆಯಿಂದ ಆಕರ್ಷಿತರಾಗದವರು ಯಾರಿದ್ದಾರೆ? ತಾಯಿಯ ಮುಖಾರವಿಂದದಲಲ್ಲಿರುವ ಕರ್ಪೂರದಿಂದ ಕೂಡಿರುವ ತಾಂಬೂಲದ ಪರಿಮಳವನ್ನು ಶುದ್ಧವಿದ್ಯೆಗೂ; ಈ ಪರಿಮಳವೇ ಇಡೀ ವಿಶ್ವವನ್ನೇ ಲಾಲಿಸಿ ಪಾಲಿಸಿ ಆಡಿಸುತ್ತಾ ಇದೆ ಎಂಬ ಧ್ವನಿಯನ್ನು ಈ ನಾಮ ಕೊಡುತ್ತದೆ. ಆಚಾರ್ಯ ಶಂಕರರು “ಸೌಂದರ್ಯ ಲಹರಿ”ಯಲ್ಲಿ ತಾಯಿಯ ತಾಂಬೂಲವನ್ನು ವರ್ಣಿಸುವ ಬಗೆ ಹೀಗೆ:
ರಣೇ ಜಿತ್ವಾ ದೈತ್ಯಾನಪಹೃತಶಿರಸ್ತ್ರೈಃ ಕವಚಿಭಿ-ರ್ನಿವೃತ್ತೈಶ್ಚಂಡಾಂಶತ್ರಿಪುರಹರನಿರ್ಮಾಲ್ಯವಿಮುಖೈಃ| ವಿಶಾಖೇಂದ್ರೋಪೇಂದ್ರೈಃ ಶಶಿವಿಶದಕರ್ಪೂರಶಕಲಾ ವಿಲೀಯಂತೇ ಮಾತಸ್ತವ ವದನತಾಂಬೂಲಕಬಲಾಃ|| ದೇವತೆಗಳು ತಾಯಿಯ ಬಾಯಲ್ಲಿದ್ದ ಚಂದ್ರನಂತೆ ಬಿಳುಪಾದ ಕರ್ಪೂರದ ಚೂರುಗಳಿಂದ ಕೂಡಿದ ತಾಂಬೂಲದ ಕಣಿಕೆಗಳನ್ನು ಸೇವಿಸುತ್ತಾರೆ ಎಂಬ ಅರ್ಥದಿಂದ ತಾಯಿಯ ತಾಂಬೂಲವನ್ನು ವರ್ಣಿಸುತ್ತಾರೆ. ಅಂದರೆ ದೇವಿಯ ತಾಂಬೂಲವನ್ನು ದೇವಿ ತಿಂದುಳಿದ ನೈರ್ಮಾಲ್ಯವೆಂಬ ಭಾವದಿಂದ ಸ್ವೀಕರಿಸುತ್ತಾರೆ ಎಂಬುದು ದೃಷ್ಟಿ.
ವರಕವಿ ಬೇಂದ್ರೆಯವರು “ಮಾತುಗಳ ಮಾತೆ ನೀನು” ಎಂದು ತಾಯಿಯನ್ನು ಕರೆದಿದ್ದಾರೆ. ಮೇಲೆ ಹೇಳಿದ “ಶುದ್ಧವಿದ್ಯಾಂಕುರಾಕಾರದ್ವಿಜಪಂಕ್ತಿದ್ವಯೋಜ್ಜ್ವಲಾ” ಎಂಬ ಅರ್ಥಜಿಜ್ಞಾಸೆಗೂ “ಮಾತುಗಳ ಮಾತೆ ನೀನು” ಎಂಬಲ್ಲಿರುವ ಧ್ವನಿಗೂ ಸಾಮ್ಯತೆ ಇದೆ. ಆದುದರಿಂದಲೇ ಬೇಂದ್ರೆಯವರು ಮತ್ತಿನ ಸಾಲಿನಲ್ಲಿ” ಮಾತಿನಲಿ ಹೂತು ಬರಬಾರದೇನು?” ಎಂದು ತಾಯಿಯನ್ನು ಪ್ರಶ್ನಿಸುತ್ತಾರೆ.
ಶುದ್ಧವಿದ್ಯೆಗೆ ಕಾರಣ ದೇವಿಯ ಅನುದಿನದ ಚಿಂತನೆ. ಆದುದರಿಂದಲೇ ಮಾತುಗಳ ಮಾತೆ ನೀನು ಮತ್ತು ನಮ್ಮ ಮಾತಲ್ಲಿ ನೀನು ಹೂತು ಬಾ ಎಂದು ಪ್ರಾರ್ಥನೆ. ನಮ್ಮ ಮಾತಿಗೆ ನೀನು ಆಶೀರ್ವದಿಸು. ನಮ್ಮ ಮಾತು ಸತ್ಕಾವ್ಯವಾಗಲಿ ಎಂಬುದೂ ಪ್ರಾರ್ಥನೆ. ಮಾತುಗಳ ಮಾತೆ ನೀನು ಮಾತಿನಲಿ ಹೂತು ಬರಬಾರದೇನು? (ದ.ರಾಬೇಂದ್ರೆಯವರ “ಶ್ರೀಮಾತೆಗೆ” ಎಂಬ ಕವನದ ಸೊಲ್ಲು)
(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಮದ್ದಳೆಕಾರರು. ಮಂಗಳೂರು)