ದಾಸವರೇಣ್ಯರ ಭಾವಬಿಂಬದಲ್ಲಿ ಗುರುಸಾರ್ವಭೌಮರು

*ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಸಂಸ್ಕೃತಿ ಚಿಂತಕರು

‘ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೇ ಮಂಚಾಲೆಯ ರಾಘಪ್ಪ’ ಎಂಬುದು ಜನ ಸಾಮಾನ್ಯರ ಜನಜನಿತ ಉಕ್ತಿ. ಭಗವಂತನ ಹಾಗೂ ಅವನ ಭಕ್ತರ ಅವತಾರಗಳು ಅಧರ್ಮದ ನಾಶಕ್ಕಾಗಿ ಧರ್ಮದ ರಕ್ಷಣೆಗಾಗಿ ಎನ್ನುವುದು ನಮಗೆ ಪುರಾಣ ಕಾಲದಿಂದಲೂ ತಿಳಿದು ಬಂದ ವಿಷಯವಾಗಿದೆ. ಅದರಲ್ಲೂ ಮಹಾ ಮಹಿಮರಾದ ಶ್ರೀ ರಾಘವೇಂದ್ರ ಸ್ವಾಮಿಗಳು ಭಗವಂತನ ಅಪ್ಪಟ ಭಕ್ತರಾಗಿ ತಾವು ಭಗವಂತನ ಸಾಕ್ಷಾತ್ಕರಿಸಿಕೊಳ್ಳುವುದರ ಜೊತೆಗೆ ತಮ್ಮ ಜೊತೆಗಿದ್ದವರನ್ನೂ ಸಹ ಆ ಭಕ್ತಿ ಮಾರ್ಗದಲ್ಲಿ ಪ್ರೇರೇಪಿಸಿ ಅವರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ತಾವಿರುವ ವಾತಾವರಣವನ್ನೇ ಆಧ್ಯಾತ್ಮಿಕಮಯವಾಗಿಸಲು ಅವರು ಸದಾಕಾಲ ಶ್ರಮಿಸುತ್ತಿದ್ದುದು ಅವರ ಜೀವನ ಚಾರಿತ್ರ್ಯದಿಂದ ನಾವು ತಿಳಿದುಕೊಳ್ಳಬಹುದಾಗಿದೆ.

ಆದುದರಿಂದಲೇ ಮಂತ್ರಾಲಯ ಕ್ಷೇತ್ರವಾಯಿತು, ತುಂಗಭದ್ರೆಯ ತೀರದ ಎಲ್ಲ ಹರಿದಾಸರಿಗೆ ಅದು ತವರೂರಾಯಿತು. ಅವರ ನಂತರ ಬಂದ0ತಹ ಎಲ್ಲ ಹರಿದಾಸರು ಅವರನ್ನು, ಅವರ ಮಹಿಮೆಗಳನ್ನು ಕೊಂಡಾಡಿದ್ದಾರಲ್ಲದೆ ಗುರುರಾಯರಲ್ಲಿ ತಮ್ಮ ದುಃಖ, ಕಷ್ಟಗಳನ್ನು ನಿವಾರಿಸುವಂತೆಯೂ ಭಿನ್ನವಿಸಿಕೊಂಡಿದ್ದಾರೆ. ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆಗಳನ್ನು ಅದೇ ಕಾಲಘಟ್ಟದಲ್ಲಿ ಪ್ರತ್ಯಕ್ಷವಾಗಿ ಕಂಡ0ತಹ ಹಾಗೂ ಸ್ವತಃ ಅನುಭವಿಸಿದ, ಅವರ ನಂತರದ ಅನೇಕರು ತಮ್ಮದೇ ಆದ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಸ್ವತಃ ಶ್ರೀ ರಾಘವೇಂದ್ರ ಸ್ವಾಮಿಗಳು ವೇಣುಗೋಪಾಲ ಅಂಕಿತ ನಾಮದಿಂದ ಸುಳಾದಿ, ಕೀರ್ತನೆಗಳನ್ನು ತಮ್ಮ ಗ್ರಂಥ ಭಂಡಾರದಲ್ಲಿ ನೀಡಿ, ತನ್ಮೂಲಕ ನಮ್ಮ ಕನ್ನಡ ನಾಡಿನ ಶ್ರೀಮಂತ ಸಾಹಿತ್ಯವಾದ ಹರಿದಾಸ ಸಾಹಿತ್ಯದ ಕಂಪನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಇನ್ನೂ ವಿಶೇಷವೇನೆಂದರೇ ರಾಯರೂ ‘ಇಂದು ಎನಗೆ ಗೋವಿಂದ’ ಎಂಬ ಬಹು ಪ್ರಸಿದ್ಧಿಯ ಕನ್ನಡದ ಕೃತಿಯನ್ನು ರಚನೆ ಮಾಡಿದಂತಹ ಸ್ವತಃ ಹರಿದಾಸರಲ್ಲವೇ. ಕರ್ನಾಟಕದ ದಾಸಸಾಹಿತ್ಯ ಪರಂಪರೆಯಲ್ಲಿ ಅನೇಕ ದಾಸರು ಮಂತ್ರಾಲಯ ಪ್ರಭುಗಳಾದ ರಾಘವೇಂದ್ರಸ್ವಾಮಿಗಳನ್ನು ತಮ್ಮ ಗೀತೆಗಳಲ್ಲಿ ಹಾಡಿದ್ದಾರೆ. ತಮ್ಮನ್ನೇ ಸಮರ್ಪಿಸಿಕೊಂಡಿದ್ದಾರೆ. ಅಂತಹ ದಾಸರ ಹಾಡುಗಳನ್ನು ಪೋಣಿಸಿ ಮಂತ್ರಾಲಯ ದರ್ಶನ ಮಾಡುವ ಸಣ್ಣ ಪ್ರಯತ್ನವಿದು.


ಶ್ರೀ ರಾಘವೇಂದ್ರ ತೀರ್ಥರಿಗೆ ದೊರೆತಿರುವ ಪ್ರಾಶಸ್ತ್ಯ ಅತಿಶಯವಾದುದು. ಅವರ ಬಗ್ಗೆ ವಿದಿತವಾಗುವ ಭಕ್ತಿ ಗೌರವಗಳು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾಗದೇ ಸಮಸ್ತ ಮಾನವ ಸಮುದಾಯಕ್ಕೆ ವ್ಯಾಪಿಸಿರುವ ಅಂಶ ಶ್ರೀ ರಾಘವೇಂದ್ರ ತೀರ್ಥರಿಗೆ ಗುರುಸಾರ್ವಭೌಮ ಎಂಬ ವಿಶೇಷಣಕ್ಕೆ ಒಪ್ಪುವಂತಿದೆ. ಇಂಥ ಮಹಾತ್ಮರು ತಾವು ಪೀಠಾರೋಹಣ ಮಾಡಿದ ಧಾರ್ಮಿಕ ಸಂಸ್ಥೆಗೆ ಅಪೂರ್ವ ಕೀರ್ತಿ ಪ್ರತಿಷ್ಠೆಗಳನ್ನು ಗಳಿಸಿಕೊಟ್ಟಿದ್ದಲ್ಲದೆ ಅವರ ತರುವಾಯ ಅದಕ್ಕೆ ‘ರಾಯರ ಮಠ’ವೆಂಬ ಹೆಸರೇ ಬಳಕೆಯಲ್ಲಿ ಬಂದುದು ಅವರ ಹಿರಿಮೆಯೇನೆಂಬುದನ್ನು ತನಗೆ ತಾನಾಗಿಯೇ ಸಮರ್ಥಿಸುತ್ತದೆ. ಆಗಿನ ಕಾಲದಲ್ಲಿ ಶ್ರೀಗಳವರು ಶ್ರೀಮದಾಚಾರ್ಯರ ತತ್ವವನ್ನು ಕುರಿತು ಉತ್ತಮೋತ್ತಮ ಗ್ರಂಥಗಳನ್ನು ರಚಿಸಿ ‘ಪರಿಮಳಾಚಾರ್ಯರು’ ಎಂಬ ಪ್ರಖ್ಯಾತಿಗೆ ಪಾತ್ರರಾದುದಲ್ಲದೆ, ಅವರು ಸಶರೀರರಾಗಿ ವೃಂದಾವನವನ್ನು ಪ್ರವೇಶಿಸಿದ ತರುವಾಯ ಅವರಿದ್ದ ಪವಿತ್ರ ಸ್ಥಳ ‘ಮಂತ್ರಾಲಯ’ವೆ0ಬ ಹೆಸರಿನಿಂದ ಎಲ್ಲಾ ಜನರಿಗೂ ತೀರ್ಥಕ್ಷೇತ್ರವಾಗಿ ಪರಿಣಮಿಸಿತು. ಇಂಥ ಮಹಿಮಾ ಪುರುಷರು ವ್ಯಾಸಕೂಟಕ್ಕೆ ಹೇಗೆ ಸ್ವತಃ ಸೇವೆ ಸಲ್ಲಿಸಿರುವರೋ ಹಾಗೆಯೇ ಕಾರಣಾಂತರದಿ0ದ ಸ್ಥಗಿತವಾಗಿದ್ದ ದಾಸ ಕೂಟಕ್ಕೆ ನೂತನ ಸ್ಫೂರ್ತಿದಾಯಕರಾದರು.

ಹರಿದಾಸ ಸಾಹಿತ್ಯ
ವಿಜಯನಗರದ ವೈಭವಕಾಲವೂ, ಹರಿದಾಸ ಸಾಹಿತ್ಯದ ಪರ್ವಕಾಲವೂ ಸರಿಸಮನಾಗಿಸಾಗಿ, ವಿಜಯನಗರದ ಪತನದಿಂದ ಈ ಪಂಥವು ಕೆಲ ಕಾಲ ಸ್ಥಗಿತವಾಯಿತು. ವಿಜಯನಗರದಲ್ಲಿ ನೆಲೆ ತಪ್ಪಿದ ಎಷ್ಟೋ ಆಸಕ್ತಿಕ ಮನೆತನಗಳು ತಂಜಾವೂರಿನ ನಾಯಕರ ಆಶ್ರಯವನ್ನು ಕೋರಿ ಅತ್ತ ತೆರಳಿದ ಸಂಗತಿ ಇತಿಹಾಸ ಪ್ರಸಿದ್ಧವಾದುದು. ಈ ದೆಸೆಯಿಂದಲೇ ಶ್ರೀ ರಾಘವೇಂದ್ರ ತೀರ್ಥರ ಪೂರ್ವಜರು ಕುಂಭಕೋಣದಲ್ಲಿ ನೆಲೆಸಬೇಕಾಯಿತು. ಅಲ್ಲಿ ನೆಲೆಸಿದ್ದ ಶ್ರೀ ಸುಧೀಂದ್ರ ತೀರ್ಥ ಯತಿವರ್ಯರ ಕೃಪಾ ವಿಶೇಷದಿಂದ ಅಸದೃಶ ಮೇಧಾವಿಗಳಾಗಿದ್ದ ವೆಂಕಟನಾಥರು ಶ್ರೀ ರಾಘವೇಂದ್ರ ತೀರ್ಥರೆ0ಬ ಅಭಿಧಾನದಿಂದ ಸನ್ಯಾಸಾಶ್ರಮವನ್ನು ಕೈಕೊಂಡು ಸಮಸ್ತ ಭರತಖಂಡದಲ್ಲಿ ಸಂಚರಿಸಿ, ತುಂಗಾಭದ್ರಾ ತೀರದಲ್ಲಿ ನೆಲೆಯೂರಿದರು, ಶ್ರೀಪ್ರಹ್ಲಾದರು ಅಲ್ಲಿ ಯಜ್ಞ ಮಾಡಿದರೆಂಬ ವಿಶ್ವಾಸದಿಂದ ಅದು ಅತ್ಯಂತ ಪವಿತ್ರ ಸ್ಥಾನವೆಂಬುದಾಗಿ ಯತಿಗಳಿಗೆ ತೋರಿಬಂದಿತು. ಶ್ರೀಗಳವರೇ ಹಿಂದೆ ಪ್ರಹ್ಲಾದ ಮತ್ತು ಶ್ರೀವ್ಯಾಸ ತೀರ್ಥರಾಗಿದ್ದರೆಂಬ ಪ್ರತೀತಿಯೂ ಇರುವುದರಿಂದ ಅವರು ಈ ಕ್ಷೇತ್ರವನ್ನು ಮನಸಾರೆ ಒಪ್ಪಿ ಅಲ್ಲಿದ್ದು ಶ್ರೀ ಮನ್ಮಧ್ವಾಚಾರ್ಯರ ತತ್ವವನ್ನು ಪ್ರತಿಪಾದಿಸಿರುವುದು ಅರ್ಥವತ್ತಾಗಿದೆ.
ಶ್ರೀಮದಾಚಾರ್ಯರ ತತ್ವ ಪ್ರತಿಪಾದನೆಯಲ್ಲಿ ಆಯಾ ಮಠಾಧಿಪತಿಗಳು ಹೇಗೆ ಪ್ರಮುಖ ಪಾತ್ರವನ್ನು ವಹಿಸಿದ್ದಾರೋ ಹಾಗೆಯೇ ಶ್ರೀಪಾದರಾಜರು, ಶ್ರೀವ್ಯಾಸರಾಯರು, ಶ್ರೀವಾದಿರಾಜರು ಮೊದಲಾದವರಿಂದ ಉತ್ತೇಜನ ಪಡೆದು ಸುವ್ಯವಸ್ಥಿತ ಸಂಘದ0ತೆ ತಮ್ಮ ಕೀರ್ತನ ಕೈಂಕರ್ಯವನ್ನು ನಿರ್ವಹಿಸಿದ ಶ್ರೀಪುರಂದರದಾಸರೇ ಮೊದಲಾದ ಹರಿದಾಸರೂ ಗಣನೀಯರಾಗಿದ್ದಾರೆ. ಶ್ರೀರಾಘವೇಂದ್ರತೀರ್ಥರು ಮೇಲ್ಕಂಡ ಮಠಾಧಿಪತಿಗಳಂತೆ ಹಲವಾರು ಕೀರ್ತನೆಗಳನ್ನೂ ರಚಿಸಿದರೆಂದು ಹೇಳಲು ಸಾಧ್ಯವಾಗದಿದ್ದರೂ ಈಗ ಪ್ರಚಲಿತವಾಗಿರುವ ‘ಇಂದು ಎನಗೆ ಗೋವಿಂದ ನಿನ್ನ ಪಾದರವಿಂದವ ತೋರೋ ಮುಕುಂದನೇ’– ಎಂಬ ಆತ್ಮನಿವೇದನಾತ್ಮಕವಾದ ಕೀರ್ತನೆಯನ್ನು ಹಾಡಿರಬಹುದೆಂದು ಭಾವಿಸಬಹುದು. ಶ್ರೀ ನರಹರಿತೀರ್ಥರ ಕೀರ್ತನೆಗಳು ಹೇಗೆ ಸ್ವಾನುಭವ ಸೀಮಿತವಾಗಿವೆಯೋ ಹಾಗೆಯೇ ಶ್ರೀಗುರುರಾಜರ ಕೃತಿಯೂ ಆತ್ಮಶೋಧನಾತ್ಮಕವಾದ ಏಕೈಕ ಕೃತಿಯೆಂದು ಹೇಳಲು ಅಡ್ಡಿಯಿಲ್ಲ.

ಶ್ರೀರಾಘವೇಂದ್ರ ಯತಿಗಳ ಪೂರ್ವಾಶ್ರಮದ ವಿಚಾರವನ್ನು ಅವಲೋಕಿಸಿದರೆ ಅವರ ಕೀರ್ತನೆಯಲ್ಲಿ ವಿದಿತವಾಗುವ ಹೃದಯದ ಹೊಯ್ದಾಟದ ರಹಸ್ಯವೇನೆಂಬುದನ್ನು ಸ್ವಲ್ಪ ಮಟ್ಟಿಗೆ ಊಹಿಸಿಕೊಳ್ಳಬಹುದು.
ಆದರೆ ಶ್ರೀ ರಾಘವೇಂದ್ರ ತೀರ್ಥರ ವೃಂದಾವನ ಸ್ಥಾಪನೆಯಿಂದ ಮಂಚಾಲೆಯೆ0ಬ ಗ್ರಾಮವು ಮಂತ್ರಾಲಯವೆ0ಬ ಹೆಸರಿನಿಂದ ಪವಿತ್ರ ತೀರ್ಥಕ್ಷೇತ್ರ ಪರಿವರ್ತನೆಯಾದ ಮೇಲೆ ಹರಿದಾಸ ಸಾಹಿತ್ಯದ ಪುನರುಜ್ಜೀವನವೂ ಮೊದಲಾಯಿತೆನ್ನಬಹುದು. ಹಿಂದೆ ಪುರಂದರದಾಸರು ಅಗ್ರಗಣ್ಯರೆನ್ನಿಸಿದರೆ ಈಗ ವಿಜಯದಾಸರು ಪ್ರಮುಖರಾದರು. ಪುರಂದರದಾಸರಿ0ದಲೇ ಸ್ವಪ್ನಾಂಕಿತರಾದ ವಿಜಯದಾಸರ ನೇತೃತ್ವದಲ್ಲಿ ಗೋಪಾಲದಾಸರು, ಜಗನ್ನಾಥದಾಸರು, ಮೋಹನದಾಸರೇ ಮೊದಲಾದವರು ಈ ಕೈಂಕರ್ಯವನ್ನು ಕೈಕೊಂಡು ಅತಿಶಯವಾದ ರೀತಿಯಲ್ಲಿ ಮುಂದುವರೆಸಿದರು. ಈ ಮಹತ್ಕಾರ್ಯಕ್ಕೆ ಮಂತ್ರಾಲಯವೇ ಸ್ಫೂರ್ತಿ ಕೇಂದ್ರವಾಯಿತೆ0ದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ಶ್ರೀಗಳ ತೇಜಸ್ಸಿನಿಂದ ಆ ಪವಿತ್ರಸ್ಥಳದ ಸುತ್ತಮುತ್ತಲೂ ಧರ್ಮಜಾಗೃತಿಯುಂಟಾಯಿತು.

ರಾಯರ ಅಮೂಲ್ಯ ಗ್ರಂಥಗಳಿ0ದ ಶ್ರೀಮದಾಚಾರ್ಯರ ತತ್ವಪ್ರಕಾಶವು ವಿರಾಜಿಸತೊಡಗಿದಂತೆಯೇ ಅವರ ಅಪಾರವಾದ ಮಹಿಮೆಗಳಿಂದ ಪಂಡಿತರು, ಪಾಮರು ಮತ್ತು ಅಪರೋಕ್ಷ ಜ್ಞಾನಿಗಳಾದ ಹರಿದಾಸರೂ ಮಂತ್ರಮುಗ್ಧರಾದರು. ಈ ಆಧ್ಯಾತ್ಮಿಕ ನೂತನೋತ್ಸಾಹದಿಂದ ಪ್ರೇರಿತರಾದ ಒಬ್ಬೊಬ್ಬ ಹರಿದಾಸರೂ ಶ್ರೀಗುರುರಾಜರನ್ನು ಮುಕ್ತಕಂಠದಿ0ದ ಕೊಂಡಾಡಿರುವುದಲ್ಲದೆ. ಕ್ಷೇತ್ರ ಮಹಾತ್ಮö್ಯ ಮತ್ತು ರಾಯರ ಆರಾಧನೆ ಮೊದಲಾದ ಹಲವಾರು ಸಂಗತಿಗಳನ್ನು ತಮ್ಮ ಕೀರ್ತನೆಗಳಲ್ಲಿ ಬಗೆ ಬಗೆಯಾಗಿ ವರ್ಣಿಸಿರುತ್ತಾರೆ. ಶ್ರೀರಾಯರ ಕಾಲಕ್ಕೆ ಸಮೀಪಸ್ಥರಾದ ವಿಜಯದಾಸರು, ಗೋಪಾಲದಾಸರು ಮತ್ತು ಜಗನ್ನಾಥದಾಸರು ಹೊಗಳಿರುವ ಕ್ರಮ ಒಂದು ರೀತಿಯಾದರೆ, ಹರಿದಾಸ ಪರಂಪರೆಯಲ್ಲಿ ಇತ್ತೀಚೆಗೆ ಬಂದ ಇತರ ಹರಿದಾಸರು ಈ ಪಾರಮಾರ್ಥಿಕ ವಿಚಾರವನ್ನು ಪರಿಭಾವಿಸಿರುವ ಮೇಲ್ಮೆ, ಕಾಲಮಾನಕ್ಕನುಗುಣವಾಗಿ ಅಧಿಕಾಧಿಕವಾಗಿ ಮಹಿಮಾ ಪೂರ್ಣವಾಗಿ ಮನವರಿಕೆಯಾಗುತ್ತದೆ. ಒಂದು ಮಾತಿನಲ್ಲಿ ಹೇಳಬಹುದಾದರೆ ಶ್ರೀರಾಘವೇಂದ್ರತೀರ್ಥರು ಸ್ವತಃ ಹರಿದಾಸ ಪಂಥಕ್ಕೆ ಸೇರಿದವರೆಂದು ಹೇಳಲು ಬಾರದಿದ್ದರೂ, ಅವರಿಂದ ಈಚೆಗೆ ಬಂದ ಪ್ರತಿಯೊಬ್ಬ ಹರಿದಾಸರೂ ಅವರ ಪ್ರಭಾವಕ್ಕೆ ಒಳಪಟ್ಟಿರುವುದರಿಂದ ಅವರನ್ನು ದಾಸಕೂಟದ ದ್ವಿತೀಯ ಘಟ್ಟದ ಪ್ರಮುಖವಾದ ಪ್ರೇರಕಶಕ್ತಿಯಾದರು.

“ ಭಜಮನ ತುಂಗಾತೀರವವಿರಾಜಮ್ ”
ಜಾತಿಮತ, ಪಂಥಪ0ಗಡ, ವರ್ಣಾಶ್ರಮ, ದೇಶಕಾಲ ಅವಸ್ಥಾಭೇದದ ವಿಶೇಷ ಜಂಜಾಟವಿಲ್ಲದೆ, ತಮ್ಮನ್ನು ನಂಬಿ ಬಂದ ಸಕಲ ಭಕ್ತರಿಗೂ, ಅವರವರ ಜೀವನ ಯೋಗ್ಯತೆ ಮತ್ತು ಭಾವನೆಯ ತರಗತಿಯಂತೆ, ಮನೋ$ಭೀಷ್ಟೆಗಳನ್ನು ಪೂರೈಸಿ ಪೊರೆಯುವ ಮಹಾಪ್ರಭುಗಳೆಂದರೆ, ನಮ್ಮ ಮಂತ್ರಾಲಯ ಮಹಾರಾಯರೊಬ್ಬರೆ !! ಕಳೆದ ಮುನ್ನೂರು ವರ್ಷಗಳ ಇತಿಹಾಸದಲ್ಲಿ, “ಇಂಥವರು ರಾಯರನ್ನು ನಂಬಿ ಕೆಟ್ಟರು” ಎಂಬ ಮಾತಿಗೆ ಆಸ್ಪದವೆ ಸಿಕ್ಕಿಲ್ಲ. ಅಂತೆಯೇ ಅಪರೋಕ್ಷ ಜ್ಞಾನಿಗಳಾದ ಅನೇಕ ಹರಿದಸರು “ನಂಬಿ ಕೆಟ್ಟವರಾರಿಲ್ಲ | ರಾಘವೇಂದ್ರರ | ನಂಬದೆ ಕೆಡಬೇಡಿರೋ ||” ಎಂಬುದಾಗಿ ತಮ್ಮ ಅನುಭವಸಿದ್ಧವಾದ ಅಮೋಘವಾಣಿಯಿಂದ ಡಂಗುರ ಸಾರಿದ್ದಾರೆ.
ಹರಿದಾಸರು ರಾಘವೇಂದ್ರ ಸ್ವಾಮಿಗಳನ್ನು ತಮ್ಮ ಇಷ್ಟದ ಗುರುವೆಂದು ತುಂಬಾ ಅಪ್ಯಾಯಮಾನವಾಗಿ ತಮ್ಮ ಕೀರ್ತನೆಗಳ ಮೂಲಕ ಅವರನ್ನು ಸ್ತೋತ್ರ ಮಾಡುತ್ತಾರೆ. ತನ್ಮೂಲಕ ರಾಘವೇಂದ್ರ ಸ್ವಾಮಿಗಳ ಬಗ್ಗೆ ತಮಗಿರುವ ಭಕ್ತಿ, ಪ್ರೀತಿ, ಗೌರವಗಳನ್ನು ವ್ಯಕ್ತಪಡಿಸುವುದರ ಜೊತೆಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯ ಹಲವಾರು ಮಹಿಮೆಗಳು ಘಟ್ಟಗಳು ಹಾಗೂ ಅವರು ಭಕ್ತಿ ಸಾಮ್ರಾಜ್ಯವನ್ನು ಕಟ್ಟಿದ ರೀತಿಯನ್ನು ತೋರಿಸುತ್ತಾರೆ. ಅವರ ಕೀರ್ತನೆಗಳು ಮುಂದಿನ ತಲೆಮಾರಿಗೆ ಇತಿಹಾಸವನ್ನು ತಿಳಿಸಿ ಹೇಳುವ ದಾಖಲೆಗಳಾಗುತ್ತವೆ. ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಕಣ್ಣೆದುರಿಗೆ ಕಾಣುವಂತೆ ಪರಿಣಾಮಕಾರಿಯಾಗಿ ತಿಳಿಸಿಕೊಡುತ್ತವೆ. ಅನೇಕ ಹರಿದಾಸರು ತಮ್ಮದೇ ರೀತಿಯಲ್ಲಿ ಪರಿಣಾಮಕಾರಿಯಾಗಿ ತಿಳಿಸಿಕೊಡುತ್ತವೆ. ಅನೇಕ ಹರಿದಾಸರು ತಮ್ಮದೇ ರೀತಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ವರ್ಣಿಸಿದ್ದಾರೆ.
ರಾಯರ ಪರಮಭಕ್ತರಾದ ಶ್ರೀಗುರು ಜಗನ್ನಾಥದಾಸರು ರಾಯರನ್ನು ಬೃಂದಾವನದಲ್ಲಿ ಕಂಡಾಗ ‘ವೃಂದಾವನದಲ್ಲಿ ನಿಂತ ಸುಯತಿವರನ್ಯಾರೆ’ ಎಂದು ಪ್ರಶ್ನಿಸಿಕೊಂಡು ‘ವಂದಿಪ ಜನರಿಗೆ ನಂತ ಕೊಡುವ ರಾಘವೇಂದ್ರ ಮುನಿವರ’ ಎಂದು ಸಂತಸ ಪಟ್ಟಿದ್ದಾರೆ. ಶ್ರೀಗುರುರಾಜರು ಹಚ್ಚಿಕೊಂಡ ನಾಮ ಮುದ್ರೆಗಳು ದಾಸರಿಗೆ ಸ್ಪಷ್ಟವಾಗಿ ಕಂಡಿವೆ. ಇಂತಹ ಅನುಭವ ಜನ್ಯಜ್ಞಾನ ಪಡೆದವರೇ ಧನ್ಯರು.
ಗುರುರಾಯ ನೀನೇ ಧಣೀ ಧಣೀ
‘ಹೃದಯ ಸದನದಲ್ಲಿ ಪದುಮನಾಭವ ಭಜಿಸಿ ಮುದ ಮನದಿಂದ ನಿತ್ಯ ಸದಾ ಮಲ ರೂಪತಾಳಿ’, ‘ಮುದ್ದು ಬೃಂದಾವನ ಮಧ್ಯದೊಳಗಿಂದ’ ಎದ್ದು ಬಂದ ಗುರುಗಳನ್ನು ಕಂಡಾಗ ಧಣೀ ಧಣೀ ಗುರುರಾಯ ನೀನೆ ಧಣೀ ಧಣೀ ಎಂದು ಹಾಡುತ್ತಾ ಕುಣಿದಾಡಿದ್ದಾರೆ.
ಕಲಿಯುಗದ ಕಾಮಧೇನು ಕಲ್ಪತರು ಎನಿಸಿಕೊಂಡ ಗುರು ಸಾರ್ವಭೌಮರನ್ನು ‘ನಂಬಿ ಕೆಟ್ಟವರಿಲ್ಲ ಗುರುಗಳ ಪಾದ ನಂಬದೇ ಕೆಡುವರುಂಟು’ ಎಂದು ಸಜ್ಜನರನ್ನು ಎಚ್ಚರಿಸಿದ್ದಾರೆ. ಇನ್ನೊಂದು ಕಡೆ ಗೋಪಾಲದಾಸರು ಮಂತ್ರಾಲಯದ ವೈಭವವನ್ನು ವರ್ಣಿಸುತ್ತಾ ‘ದಿನ ದಿನಕ್ಕೆ ಪೂಜೆಗಳಾಗುವವು, ಚಿನದಿನಕಿಲ್ಲಿ ನೂತನ ಉತ್ಸವಗಳು ಆಗುವವು, ಜನರ ಸಂದಣಿ, ವಿಪ್ರ ಭೋಜನ, ಸಪ್ತ ಶತ ವರುಷ ಪರ್ಯಂತ ದಿನಕರ ಶತ ತೇಜ ಜಗನ್ನಾಥ ತಾನಿಲ್ಲಿ ಅನುವಾಗಿ ನಿಂದು ಜನರ ಪಾಲಿಸುವುದಕ್ಕೆ ಅನುಮಾನ ಸಲ್ಲದು. ಮಂತ್ರಸಿದ್ಧಿಯ ಕ್ಷೇತ್ರವಿದು, ಮಂತ್ರ ಪ್ರತಿಪಾದ್ಯ ಗೋಪಾಲವಿಠಲನಿಂದ’ ಎಂದು ಗೋಪಾಲದಾಸರು ತುಂಬಾ ಅಭಿಮಾನದಿಂದ ಹೇಳಿದ್ದಾರೆ.


ಸಾಕ್ಷಾತ್ ದರ್ಶನ
ವಿಜಯದಾಸರು ಶ್ರೀ ರಾಘವೇಂದ್ರ ಸ್ವಾಮಿಗಳ ಸಾಕ್ಷಾತ್ ದರುಶನವನ್ನು ಪಡೆದವರು. ಇವರು ರಾಯರ ಬಗ್ಗೆ ಒಟ್ಟು ಆರು ಕೃತಿಗಳನ್ನು ರಚಿಸಿದ್ದಾರೆ. ಶ್ರೀ ವಿಜಯದಾಸರು ತಮ್ಮ ಒಂದು ಕೃತಿಯಲ್ಲಿ ‘ಮಂತ್ರಾಲಯ ನಿವಾಸ ಉತ್ತಮ ಹಂಸ… ಸಂತಾಪ ಪರಿಹರಿಸಿ ಕೊಡು ಎಮಗೆ ಲೇಸ’ ಎಂದು ಪ್ರಾರ್ಥಿಸಿದ್ದಾರೆ.


ಶ್ರೀವಿಜಯದಾಸರ ಕಾರ್ಯಕ್ಷೇತ್ರ ರಾಯಚೂರು ಹಾಗೂ ಸುತ್ತಮುತ್ತಲಿನ ಪ್ರಾಂತ. ಅದು ತುಂಗಭದ್ರಾ ತೀರದ ಮಂತ್ರಾಲಯದ ಹತ್ತಿರದಲ್ಲೇ ಇದ್ದುದು ಶ್ರೀ ರಾಘವೇಂದ್ರ ಸ್ವಾಮಿಗಳ ದಿವ್ಯಪ್ರಭಾವ ಶ್ರೀ ವಿಜಯದಾಸರು ಹಾಗೂ ಅವರ ಪ್ರವಾಹದಂತೆ ಹರಿದು ಬಂದ ಅವರ ಶಿಷ್ಯ ಪ್ರಶಿಷ್ಯ ಪರಂಪರೆಯ ಮೇಲೆ ಆಗಿರಲೇಬೇಕು.
ಭಕ್ತರ ಉದ್ಧಾರವೇ ಗುರಿ
ರಾಯರು ಯಾವ ಕಾರ್ಯವನ್ನು ಮಾಡಿದರೂ ಅದು ಭಕ್ತರ ಉದ್ಧಾರಕ್ಕಾಗಿಯೇ ಹೊರತು ಅದು ಕೇವಲ ಲೌಕಿಕ ಆಕರ್ಷಣೆಗೆ ಖಂಡಿತ ಅಲ್ಲ. ಸಂಕಷ್ಟದಲ್ಲಿರುವ ಯಾರೇ ಆಗಲಿ ತಮ್ಮ ತಪೋ ಶಕ್ತಿಯಿಂದ ಅವರನ್ನು ಪಾರುಮಾಡಿ ಅವರ ಮನಸ್ಸಿನಲ್ಲಿ ಹರಿ ಭಕ್ತಿಯನ್ನು ಬಿತ್ತುತ್ತಿದ್ದರು. ಶ್ರೀಹರಿಯ ಸಾಕ್ಷಾತ್ಕಾರಕ್ಕೆ ದಾರಿ ತೋರಿಸುತ್ತಿದ್ದರು. ಅದಕ್ಕೆಂದೇ ಏನೋ ‘ಇಂದಿರೇಶ’ ಅಂಕಿತರಾದ ಇಂದಿರೇಶ ದಾಸರೆಂದೇ ಹೆಸರಾದ ಶ್ರೀ ಪಾಂಡುರAಗೀ ಹುಚ್ಚಾಚಾರ್ಯರು ರಚಿಸಿರುವ ‘ರಾಘವೇಂದ್ರ ಗುಣ ಸಾಗರ ನೋಡೆನ್ನ… ಹರಿಯನು ತೋರಿನ್ನ… ಮಂತ್ರಾಲಯದೊಳು ಮಂದಿರ ಮಾಡುವಿರಿ.. ಮನೆ ಮನೆಯಲ್ಲಿರುವಿರಿ… ಸಂತತಿ ಸಂಪತ್ತುಗಳನು ನೀ ಕೊಡುವಿ… ಸಂತತ ರಕ್ಷಿಸುವಿ.. ತಂತ್ರ ದೀಪಿಕೆಯರೆಂಬ ಗ್ರಂಥದ ರಚಿಸಿರುವಿ.. ಸೂತ್ರಾರ್ಥಗಳರುಹಿ..’ಈ ಕೃತಿಯಲ್ಲಿ ಗಮನಿಸಬೇಕಾದುದು ಏನೆಂದರೆ ಸಾಮಾನ್ಯವಾಗಿ ನಾವು ನಮ್ಮ ಐಹಿಕ ಸುಖ ಸಮೃದ್ಧಿಗಳ ಬಯಕೆಯನ್ನು ರಾಯರಲ್ಲಿ ಭಿನ್ನವಿಸಿಕೊಳ್ಳುತ್ತೇವೆ ಆದರೆ ದಾಸರ ದೃಷ್ಟಿಕೋನದ ಭಾವನೆಯೇ ಬೇರೆ. ಗುರುಗಳೇ.. ನಿಮ್ಮನ್ನು ಭಜಿಸುವ ಭಕ್ತರ ಮನೆ ಮನೆಯಲ್ಲಿ ಇರುವ ನೀವು ಅವರು ಕೇಳುವ ಮೊದಲೇ ನೀವು ಅವರ ಇಷ್ಟ, ಕಾಮ್ಯಗಳನ್ನು ಈಡೇರಿಸುತ್ತೀರಿ ಹೀಗಾಗಿ ಅವುಗಳೆಲ್ಲಕ್ಕಿಂತ ಮಿಗಿಲಾದ ಅಭೀಷ್ಟೆಯೆಂದರೆ ಶ್ರೀಹರಿಯ ದರ್ಶನ! ಆ ಭಗವಂತನ ಸಾಕ್ಷಾತ್ಕಾರ! ಅದಕ್ಕೆ ಸರಿಯಾದ ದಾರಿ ತೋರಿಸುವ ಗುರುವರ್ಯರು ನೀವು. ಶ್ರೀಹರಿಯನ್ನು ಕಾಣುವ ಸರಿಯಾದ ದಾರಿ ಮಾರ್ಗವನ್ನು ತೋರಿಸಿ ಅನುಗ್ರಹಿಸಿ ಎಂದು ಕೇಳುವ ತವಕದಲ್ಲಿ ಕೃತಿಯ ಮೊದಲ ಸಾಲಿನಲ್ಲಿಯೇ ದಾಸರು ‘ಹರಿಯನು ತೋರಿನ್ನ’ ಎಂದು ಪ್ರಾರ್ಥಿಸಿದ್ದಾರೆ.
ತುಂಗಾ ತೀರದಿ ನಿಂತಿಹ
ಅಭಿನವ ಜನಾರ್ದನ ವಿಠಲದಾಸರು ತಮ್ಮ ಕಾಲುಗಳಿಗೆ ಶಕ್ತಿ ಇಲ್ಲದೇ ನಡೆಯಲೂ ಸಾಧ್ಯವಾಗದ ಪರಿಸ್ಥಿತಿ ಇದ್ದಾಗ ಹೇಗೋ ಏನೋ ಮಂತ್ರಾಲಯ ತಲುಪುತ್ತಾರೆ. ರಾಯರ ವೃಂದಾವನದ ಮುಂದೆ ನಿಂತು ‘ತುಂಗಾ ತೀರದಿ ನಿಂತಿಹ ಯತಿವರನ್ಯಾರೇ ಪೇಳಮ್ಮಯ್ಯಾ’ ಎಂದು ಹಾಡುತ್ತಾರೆ. ಕೂಡಲೇ ಅವರ ಕೈಕಾಲುಗಳಿಗೆ ಶಕ್ತಿ ಬಂದು ಅನೇಕ ಪುಣ್ಯಕ್ಷೇತ್ರಗಳನ್ನು ದರ್ಶನ ಮಾಡಿ ಬರುತ್ತಾರೆ.
ಈ ಹಾಡು ಕೇಳಿದಾಗ ಒಂದು ಅನುಭವವಾಗುತ್ತದೆ. ಏನೆಂದರೆ ಒಬ್ಬ ಅಣ್ಣ ತನ್ನ ತಂಗಿಗೆ ರಾಯರ ಬಗ್ಗೆ ವಿವರಿಸುತ್ತಾ ಇವರು ಯಾರು ಎಂದು ಪ್ರಶ್ನೆ ಕೇಳಿದಂತಿದೆ.. ಅಂತಹ ರಾಯರನ್ನು ಜಗನ್ನಾಥ ದಾಸರು ‘ಬಾರೋ ರಾಘವೇಂದ್ರ ಬಾರೋ’ ಎಂದು ಕರೆಯುತ್ತಾರೆ. ರಾಯರನ್ನು ಅವರ ಶ್ರೀಶ ವಿಠಲರು ‘ರಾಯ ಬಾರೋ ರಾಘವೇಂದ್ರ ಬಾರೋ’ ‘ಜೀಯಾ ನೀನಲ್ಲದೆ ಕಾಯ್ವವರಿನ್ನಾರುಂಟು’ ಎನ್ನುತ್ತಾರೆ. ರಾಯರು ಅಷ್ಟು ಸುಲಭದಲ್ಲಿ ಬರುವರೇನು ಅದಕ್ಕೆ ಕಮಲೇಶ ವಿಠಲರು ಅತ್ಯಂತ ದೀನತೆಯಿಂದ ಭಕ್ತಿಪೂರ್ವಕವಾಗಿ ‘ಕರೆದರೆ ಬರಬಾರದೆ’ ‘ವರಮಂತ್ರಾಲಯ ಪುರ ಮಂದಿರ ತವ ಚರಣ ಸೇವಕರು’ ಎಂದು ಕರೆಯುತ್ತಾರೆ.
ಮಂತ್ರಾಲಯಕ್ಕೆ ಬಂದೇವು
ರಾಯರು ಬಂದಿಲ್ಲ ನಾವೇ ರಾಯರಲ್ಲಿಗೆ ಹೋಗೋಣ ‘ತುಂಗಾ ನದಿ ತೀರದಿ ವಿರಾಜಿಪ ಯತಿಯ ನಾರೆ ನೋಡೋಣ ಬಾ’ ಎಂದು ಹಾಡಿದ ಅಭಿನವ ಜನಾರ್ದನ ವಿಠಲದಾಸರ ಹಾಡಿನೊಂದಿಗೆ ‘ಮಂತ್ರಾಲಯಕ್ಕೆ ಬಂದೇವು ಸುಂದರ ಪ್ರಕೃತಿಯ ಮಂಚಾಲಮ್ಮನ ಕ್ಷೇತ್ರದಲ್ಲಿ ವಿರಾಜಿಸಿರುವ ರಾಯರ ‘ಬೃಂದಾವನ ನೋಡಿರೋ ಗುರುಗಳ ಚಂದದಿ ದ್ವಾದಶ ಪುಂಡ್ರಾAಕಿತಗೊAಬ’ ಎಂಬ ವೆಂಕಟವಿಠಲರು ಹಾಡಿದ ಹಾಡಿನೊಂದಿಗೆ. ನೋಡಿದೆವು ರಾಯರನ್ನು ಕಣ್ತುಂಬಿ ‘ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ’ ಎಂದು ವಿಜಯದಾಸರ ಶಿಷ್ಯರಾದ ಮೋಹನ ದಾಸರ ಹಾಡಿನಂತೆ’ ನೋಡಿದರೆ ಸಾಕೆ ಶರಣಾಗೋಣ ರಾಯರ ಚರಣಾವಿಂದಗಳಲ್ಲಿ ‘ಶರಣ ಶ್ರೀ ಗುರು ರಾಘವೇಂದ್ರನೆ ಶರಣು ಯತಿಕುಲ ತಿಲಕಗೆ’ ಎಂದು ಗುರು ಜಗನ್ನಾಥದಾಸರು ಹಾಡಿದ್ದಾರೆ.


ಕಾಪಾಡು ತಂದೆ
ಭಗವಂತನಲ್ಲಿ ಅಥವಾ ಗುರುಗಳಲ್ಲಿ ಶರಣಾದ ಮೇಲೆ ಕೇಳೋದೇನು? ಕಾಪಾಡು ತಂದೆ ಎಂದು ತಾನೆ! ‘ಮಂತ್ರಾಲಯ ಮಂದಿರ ಮಾಂ ಪಾಹಿ’ ಎಂದು ಅಭಿನವ ಜನಾರ್ದನ ವಿಠಲದಾಸರ ಹಾಡಿನೊಂದಿಗೆ ಹಾಗೇ’ ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ ಘನ್ನ ಶ್ರೀ ಗುರು ರಾಘವೇಂದ್ರ ಸಂಪನ್ನ’ ಎಂದು ಹಾಡಿದ ವಿಠಲೇಶ ದಾಸರ ಹಾಡಿನಂತೆ ಎಂದೂ ಕೂಡಾ ಆಶನ, ವಸನಗಳಿಗೆ ಕೊರತೆ ಇಲ್ಲದಂತೆ ರಕ್ಷಿಸು ಎಂದು ಬೇಡೋಣ. ಮಂತ್ರಾಲಯಕ್ಕೆ ಬಂದಾಯ್ತು. ಬೃಂದಾವನ ನೋಡಿದ್ದಾಯ್ತು. ಸಮರ್ಪಿಸಿಕೊಂಡೆವು. ಬೇಡಿ ಆಯ್ತು, ಪ್ರಸಾದ ಸ್ವೀಕಾರ ಆಯ್ತು. ಸಂಜೆ ರಾಯರು ರಥೋತ್ಸವ ಬೇಕೆ? ಅದು ಅವರಿಗಾಗಿ ಅಲ್ಲಿ ನಮ್ಮಂತ ದೀನರಿಗೆ ರಕ್ಷಣೆಯ ಅಭಯ ಕೊಡುವ ಉದ್ದೇಶದಿಂದ ರಥವೇರುತ್ತಾರೆ. ಇದೀಗ ಹಾಡೋಣ. ಗೋಪಾಲದಾಸರ ಹಾಡು ‘ರಥವನೇರಿದ ರಾಘವೇಂದ್ರ’ ಹಾಗೂ ಭೂಪತಿ ವಿಠಲದಾಸರ ಹಾಡು ‘ರಥವನೇರಿದ ಚಂದ್ರ’ ಎನ್ನುವ ಹಾಡಿನಂತೆ.


ದುರಿತ ಕಳೆವ ರಾಘವೇಂದ್ರ
ಕರ್ನಾಟಕ ಹರಿದಾಸ ಸಾಹಿತ್ಯವನ್ನು ಪ್ರಧಾನವಾಗಿ ಮೂರು ವ್ಯಕ್ತಿಗಳು ಆವರಿಸಿಕೊಂಡಿದ್ದಾರೆ. ಪ್ರöಪ್ರಥಮವಾಗಿ ಭಗವಂತನಾದ ಶ್ರೀಹರಿ, ಎರಡನೆಯದಾಗಿ ಜೀವೋತ್ತಮರಾದ ಮುಖ್ಯ ಪ್ರಾಣದೇವರು, ಮೂರನೆಯ ಸ್ಥಾನವನ್ನು ಹರಿವಾಯುಗಳ ವಿಶೇಷ ಕೃಪೆಗೆ ಪಾತ್ರರಾದ ರಾಘವೇಂದ್ರ ಗುರುಸಾರ್ವಭೌಮರು. ಶತಮಾನದ ಕೊನೆಯ ದಾಸರೆನಿಸಿದ ಸುಂದರ ವಿಠಲದಾಸರವರೆಗೂ ಪ್ರತಿಯೊಬ್ಬರೂ ಗುರುರಾಜರಿಗೆ ಕೃತಿ ಪೂಜೆ ಮಾಡುವುದು ತಮ್ಮ ಭಾಗ್ಯ ಹಾಗೂ ಕರ್ತವ್ಯವೆಂದು ಭಾವಿಸಿರುವುದೇ ಇದಕ್ಕೆ ಕಾರಣ. ಈ ರೀತಿ ಗುರುರಾಜರನ್ನು ಕೊಂಡಾಡಿದ ಹರಿದಾಸರಲ್ಲಿ ಹೆಚ್ಚಿನ ಕೃತಿಗಳನ್ನು ರಚಿಸಿದವರೆಂದರೆ ಜಗನ್ನಾಥದಾಸರು.
ವೇದ ಶಾಸ್ತ್ರ ಪುರಾಣ ಕಥೆಗಳ
ನೋದಿ ಕೇಳ್ವವನಲ್ಲ ತತ್ವದ ಹಾಡಿ ತಿಳಿದವನಲ್ಲ ಬುಧಜನಸಂಗ ಮೊದಲಿಲ್ಲ |

ಎಂದು ಅವರು ಗುರುರಾಯರ ಬಗ್ಗೆ ಹೇಳಿದ್ದಾರೆ.

ಪ್ರತಿಯೊಬ್ಬ ಸಾಧಕನೂ ಅಂತಿಮವಾಗಿ ತನ್ನ ಬಿಂಬೋಪಾಸನವನ್ನೇ ಮಾಡಿ. ಬಿಂಬರೂಪ ಹರಿಯ ಅಪರೋಕ್ಷವನ್ನು ಹೊಂದಬೇಕು. ಪ್ರತಿ ಜೀವಿಗೂ ಸ್ವರೂಪೋದ್ಧಾರಕರಾದ ನಿಯತ ಗುರುಗಳೆಂಬುವವರು ಬೇರೆ ಇದ್ದೇ ಇರುತ್ತಾರೆ. ಅವರೇ ಜನ್ಮಜನ್ಮಗಳಲ್ಲೂ ಆ ಜೀವಿಗೆ ಗುರುಗಳೆನಿಸುತ್ತಾರೆ.
ಜಗನ್ನಾಥದಾಸರು ತಮ್ಮ ಹಿಂದಿನ ಜನ್ಮಗಳಲ್ಲಿ ಅಪ್ಪಣ್ಣಾಚಾರ್ಯರಾಗಿ, ಬೆನಕಪ್ಪನವರಾಗಿ ಮತ್ತು ಶ್ರೀ ವಿಠಲದಾಸರಾಗಿ ಅವತರಿಸಿದ್ದರೆಂದು ತಿಳಿದು ಬರುತ್ತದೆ. ಅಪ್ಪಣ್ಣಾಚಾರ್ಯರು ಗುರುರಾಜರ ಸಮಕಾಲೀನರಷ್ಟೇ ಅಲ್ಲ, ಅವರ ಅಚ್ಚುಮೆಚ್ಚಿನ ಶಿಷ್ಯರೂ ಆಗಿದ್ದರು. ಗುರುರಾಜರಿಗೆ ಇವರ ಮೇಲೆ ಅತಿ ಪ್ರೇಮ. ಇವರನ್ನು ಬಹಳ ಅಭಿಮಾನದಿಂದ ನೋಡುತ್ತಿದ್ದರು. ಅಂತೆಯೇ ತಮ್ಮ ಉಭಯವಂಶಾಬ್ಧಿ ಚಂದ್ರವiರಾದ ವಾದೀಂದ್ರತೀರ್ಥರು ರಚಿಸಿದ ಗುರುಗುಣಸ್ತವನ’ಕ್ಕಿಂತಲೂ ಇವರು ರಚಿಸಿದ ‘ಶ್ರೀ ಗುರುಸ್ತೋತ್ರ’ಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟಿದ್ದಾರೆ.


ಜಗನ್ನಾಥದಾಸರು ಗುರುರಾಜರ ಮೇಲೆ 60ಕ್ಕೂ ಹೆಚ್ಚಿನ ಪದ್ಯಗಳನ್ನು ರಚಿಸಿದ್ದಾರೆ. ಪ್ರತ್ಯೇಕವಾಗಿ ‘ಹಸ್ತೋದಕ ಸುಳಾದಿ’ ಯನ್ನು ಮಾಡಿದ್ದಾರೆ. ಇದಲ್ಲದೆ ಪ್ರಮೇಯಗಳ ಪುಂಜವಾದ ಪ್ರಹ್ಲಾದ ಚರಿತೆಯ ಕಥಾಂಶವನ್ನು ಒಳಗೊಂಡ ‘ಕೋಲ ಹಾಡ’ನ್ನು 103 ನುಡಿಗಳಲ್ಲಿ ರಚಿಸಿದ್ದಾರೆ. ಅವರು ಭಾಮಿನಿ ಷಟ್ಪದಿಯಲ್ಲಿ ಕನ್ನಡ ‘ರಾಘವೇಂದ್ರ ವಿಜಯ’ವನ್ನು ರಚಿಸಿದ್ದಾರೆ. ಹಾಗೆಯೇ ಗುರುರಾಜರು ಮಹಿಮಾ, ಕೀರ್ತಿ, ಅವರ ಅನನ್ಯಾದೃಶ ಶಕ್ತಿಯ ವರ್ಣನೆ, ಅವರಲ್ಲಿ ಶ್ರೀಶನ ಅನುಗ್ರಹ, ಮಾಡಬೇಕಾದ ಪ್ರಾರ್ಥನಾದಿಗಳ ವಿವರ ವರ್ಣನೆ-ಜೀವನ ವಿಶೇಷಗಳನ್ನು ತಿಳಿಸುವ ಭಾಗ ನಮಗೆ ಉಪಲಬ್ಧವಿಲ್ಲ ಇದು ಶ್ರೀಗುರುರಾಜಭಕ್ತರಿಗೆ ತುಂಬಲಾರದ ಹಾನಿಯಾಗಿದೆ.
ಭಾಗವತ ಪ್ರಹ್ಲಾದ ರಾಜರನ್ನು ಸೇರಿಸಿಕೊಂಡು ಹಿರಣ್ಯಕಶಿಪುವಿಗೆ 4 ಜನ ಗಂಡು ಮಕ್ಕಳೆಂದು ತಿಳಿಸಿದರೆ, ದಾಸಾರ್ಯರು ಪುರುಣಾಂತರದ ಆಧಾರದಿಂದ ಹಿರಣ್ಯಕಶಿಪುವಿಗೆ ಐದು ಜನ ಗಂಡು ಮಕ್ಕಳೆಂದು ತಿಳಿಸುತ್ತಾ ಅವರಲ್ಲಿ ಯರ‍್ಯಾರಲ್ಲಿ ಯಾವ ಯಾವ ರೂಪದಿಂದ ಪ್ರಾಣದೇವರ ಆವೇಶವಿದೆ ಎಂದು ಈ ಕೆಳದಿನಂತೆ ಸ್ಪಷ್ಟಪಡಿಸಿದ್ದಾರೆ.
ಪ್ರಾಣನಿಹ ಪ್ರಹ್ಲಾದನೊಳಗೆ
ಅಪಾನನಿಹ ಸಹ್ಲಾದನೊಳು ತಾ
ವ್ಯನನಿಹ ಕಹ್ಲಾದನೊಳುದಾನ ನಿಂತಿಹನೂ
ದಾನವಾಗ್ರಣಿಹ್ಲಾದನೊಳು
ಸಮಾನ ತಾನನುಹ್ಲಾದನೊಳಗೇ
ಶ್ರೀನಿವಾಸ ಪ್ರಾಣ ಭಜಿಸುವ ಪಂಚರೂಪದಲಿ
ಶ್ರೀ ಗುರುರಾಜರ ಮಹಿಮಾರೂಪ ದಯಾದಾಕ್ಷಿಣ್ಯಾದಿ ಗುಣಗಳನ್ನು ವರ್ಣಿಸಲು ಹೊರಟ ಜಗನ್ನಾಥದಾಸರು,
ಏನು ಚೋದ್ಯವೋ ಕಲಿಯ ಯುಗದಲಿ
ಏನು ಈತನ ಪುಣ್ಯ ಬಲವೋ
ಏನು ಈತನ ವಶದಿ ಶ್ರೀಹರಿ ತಾನೆ ನಿಂತಹನೋ
ಏನು ಕರುಣಾನಿಧಿಯೋ ಈತನು
ಏನು ಭಕುರಿಗಭಯದಾಯಕ
ಏನು ಈತನ ಮಹಿಮೆ ಲೋಕಕಗಮ್ಯವೆನಿಸಿಹದೋ
ಎಂದು ಗುರುರಾಜರ ಮಹಿಮಾತಿಶಯ ಗುಣಗಳನ್ನು ಕಂಡು ಆಶ್ಚರ್ಯದಿಂದ ಹೇಳಿದ್ದಾರೆ.
(ವಿವಿಧ ಮೂಲಗಳಿಂದ)

Related Articles

2 COMMENTS

  1. ರಾಯರ ಪುಣ್ಯ ಆರಾಧನೆಯ ಸಂಧರ್ಭದಲ್ಲಿ , ಲೇಖಕರು ಹಲವಾರು ಮೂಲಗಳಿಂದ ಆಯ್ದ ಸಾಹಿತ್ಯ ಮಣಿರತ್ನಗಳನ್ನು ಅವರ ಸಾಹಿತ್ಯ ಲೇಪನದಿದ ಪೋಣಿಸಿದ ಭಕ್ತಿ ದಾರದಿಂದ ಭಕ್ತರೆಲ್ಲರ ಪರವಾಗಿ ಅರ್ಪಿಸಿದ ಮಾಲೆ ಇದು !
    ರಾಯರ ಕೃಪಾ ಕಟಾಕ್ಷ ಸದಾ ಅವರನ್ನು ಪೋಷಿಸಲಿ !
    ಓಂ ಶ್ರೀ ರಾಘವೇಂದ್ರಾಯ ನಮಃ !🙏🙏🙏

ಪ್ರತಿಕ್ರಿಯೆ ನೀಡಿ

Latest Articles