*ಕೃಷ್ಣಪ್ರಕಾಶ ಉಳಿತ್ತಾಯ
ಕನ್ನಡ ಕಾವ್ಯ ಪರಂಪರೆಯಲ್ಲಿ ಯಕ್ಷಗಾನದ ಸ್ಥಾನ ನಿಷ್ಕರ್ಶೆಯ ಕುರಿತಾಗಿ ಅಸಂಖ್ಯ ಪೂರಕ ದನಿಗಳು ಏಳುತ್ತಿವೆ. ಯಕ್ಷಗಾನ ಕಾವ್ಯಗಳನ್ನು ಕನ್ನಡ ಸಾಹಿತ್ಯಲೋಕ ಅದಕ್ಕೆ ಕೊಡಬೇಕಾದ ಸ್ಥಾನ ಕೊಡದೇ ಇರುವುದು; ಹೀಗಾಗಿ ಅದಕ್ಕಾಗಿ ಹೋರಾಟ ಹಕ್ಕೊತ್ತಾಯ ಇವೆಲ್ಲಾ ಆಗಾಗ್ಗೆ ಆಗುತ್ತಲೂ ಇವೆ. ಇನ್ನೊಂದೆಡೆಯಿಂದ ಯಕ್ಷಗಾನ ಸಾಹಿತ್ಯದ ಒಳಹೊಕ್ಕು ಅದರಲ್ಲಿರುವ ಸೌಂದರ್ಯಾಂಶವನ್ನು ಹೆಕ್ಕೆ ತೆಗೆದು ಓದುಗರಿಗೆ ಉಣಬಡಿಸುತ್ತಿರುವ ಅಸಾಮಾನ್ಯ ಯಕ್ಷ-ಸಾಹಿತಿಯವರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಈಚಿನ ಕೃತಿ ಯಕ್ಷಗಾನ ಸಾಹಿತ್ಯ ಪರಂಪರೆಗೆ ಪ್ರಾಯಶಃ ಮೊದಲನೆಯದೆಂದು ನನ್ನ ತಿಳಿವಳಿಕೆ.
ಒಟ್ಟು ಐವತ್ತು ಯಕ್ಷಗಾನ ಪ್ರಸಂಗಗಳ ಕವಿಗಳಾಗಿ, ಭಾಷೆ, ವ್ಯಾಕರಣ, ಛಂದಶ್ಶಾಸ್ತ್ರಗಳಲ್ಲಿ ವೈದುಷ್ಯವನ್ನು ಪಡೆದವರಿವರು. ಇವರು ಅಷ್ಟಾವಧಾನಿಯೂ ಹೌದು; ಮುಖ್ಯವಾಗಿ ಯಕ್ಷಗಾನಕ್ಕೆ ಸಂಬಧಿಸಿದಂತೆ ಮೊದಲ “ಯಕ್ಷಗಾನ ಅಷ್ಟಾವಧಾನಿ”. ಇವರು ಹನ್ನೆರಡು ಯಕ್ಷಗಾನ ಸಾಹಿತ್ಯ ವಿಷಯಕವಾದ ಕೃತಿಗಳ ಕರ್ತೃವೂ ಆಗಿದ್ದು ಯಕ್ಷಗಾನದ ಅತಿ ಪ್ರಮುಖ ವಿದ್ವಾಂಸರಾಗಿದ್ದಾರೆ. ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅವರು ರಚಿಸಿದ ಈ ಪುಸ್ತಕ ಹನ್ನೆರಡನೆಯದು. ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇವರು ಹೊರತಂದ ಹೊಸ ಹೊತ್ತಿಗೆ. ಇವರ ಇತರ ಯಕ್ಷಗಾನ ಸಾಹಿತ್ಯ ಪುಸ್ತಕಗಳು:
1. ಯಕ್ಷಗಾನ ಸಾಹಿತ್ಯ ಚರಿತ್ರೆ
2. ಕರ್ನಾಟಕ ಯಕ್ಷಗಾನ ಕವಿ ಚರಿತ್ರೆ
3. ಯಕ್ಷಗಾನ ಛಂದಸ್ಸು ಒಂದು ಅಧ್ಯಯನ
4. ಯಕ್ಷಗಾನ ಕವಿಕಾವ್ಯ ವಿಹಾರ
5. ಅಂಬುರುಹದಳ
6. ಪ್ರಸಂಗಾಭರಣ
7. ಯಕ್ಷಗಾನ ಛಂದೋಗತಿ
8. ಯಕ್ಷಗಾನ ಪ್ರಸಂಗಸಾಹಿತ್ಯ
9. ಯಕ್ಷಗಾನ ಸಂಗೀತ ಪದ್ಧತಿ
10. ಯಕ್ಷಗಾನ ಭೇಷಜಪ್ರಸಂಗ
11. ಯಕ್ಷರಸಬಾವಿ
ಇದಿಷ್ಟಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಸೇವೆ ಸಲ್ಲಿಸಿದ್ದಾರೆ ಉದಾಹರಣೆಗೆ: ವಡ್ಡಾರಾಧನೆ ಗ್ರಂಥವನ್ನು ತಿಳಿಗನ್ನಡದಲ್ಲಿ ಬರೆದಿದ್ದಾರೆ. ಕನಕ ಸಾಹಿತ್ಯದ ಬಗೆಗೂ ಸೇವೆ ಸಲ್ಲಿಸಿದ್ದಾರೆ. ಈಚೆಗೆ ನಾಗವರ್ಮನ ಛಂದೋಂಬುಧಿಯ ಕುರಿತಾಗಿಯೂ ಪುಸ್ತಕವನ್ನು ಹೊರತಂದಿದ್ದಾರೆ.
ಚಿತ್ರಕಾವ್ಯವೆಂದರೆ ಓದುಗನಲ್ಲಿ ಆಶ್ಚರ್ಯವನ್ನು ಉಂಟುಮಾಡುವಂತಹ ಕಾವ್ಯಕರ್ಮ. ಅಂದರೆ ಕಾವ್ಯರಚನೆಗಳಲ್ಲಿ “ಅಲಂಕಾರ ಪ್ರಧಾನವಾದ ಸೌಂದರ್ಯವೇ” ತುಂಬಿರುವಂಥ ಕಾವ್ಯಗಳನ್ನು ಚಿತ್ರಕಾವ್ಯ ಎಂದು ಕರೆಯಬಹುದು. ಇಲ್ಲಿ ಪ್ರೌಢವಾದ ಶಬ್ದಗಳ ಜಾಲವೇ ಇಲ್ಲಿರುತ್ತದೆ. ಉಪಮಾನೋಪಮೇಯ, ರೂಪಕ-ದೀಪಕಾದಿ ಅಲಂಕಾರಗಳು ಅರ್ಥಾಲಂಕಾರಗಳೆಂದಾದರೆ; ಪ್ರಾಸಾನುಪ್ರಾಸಾದಿಗಳ ಜತೆಗೆ ಬರುವ ಯಮಕ, ಶ್ಲೇಷ, ಪ್ರಹೇಳಿಕೆ (ಒಗಟು), ಗೂಢಚಿತ್ರ, ಗರ್ಭಕವಿತೆ ಇತ್ಯಾದಿಗಳನ್ನು ಚಿತ್ರಕಾವ್ಯವೆಂದೂ ಕರೆಯಬಹುದಲ್ಲದೆ ಇವು ಅಲಂಕಾರಶಾಸ್ತ್ರದಲ್ಲಿ ಶಬ್ದಾಲಂಕಾರವೆಂದೂ ಕರೆಯಲ್ಪಡುತ್ತದೆ. ಯಕ್ಷಗಾನದ ಪ್ರಸಂಗಗಳೊಳಗೆ ಹುದುಗಿರುವ ಚಿತ್ರಕಾವ್ಯಗಳ ಬಗೆಯನ್ನು ಬಗೆಬಗೆದು ಈ ಪುಸ್ತಕದಲ್ಲಿ ತೆಗೆದಿರಿಸಿದ್ದಾರೆ. ಹೀಗಾಗಿ ಪ್ರಸ್ತುತ ಪುಸ್ತಕ ಯಕ್ಷಗಾನ ಸಾಹಿತ್ಯಾಭ್ಯಾಸಿಗಳಿಗೆ ಅವಶ್ಯ ಆಲಂಬ. ಇದರೀಂದ ಯಕ್ಷಗಾನ ಕವಿಗಳಲ್ಲಿರುವ ವೈದುಷ್ಯದ ಪರಿಚಯವೂ ವಾಚಕರಿಗಾಗಬಹುದು. ಮಾರ್ಗಸಾಹಿತ್ಯದಲ್ಲಿರುವಂತೆಯೇ ಯಕ್ಷಗಾನ ಸಾಹಿತ್ಯದಲ್ಲೂ ಪ್ರೌಢವಾದ ಶಬ್ದಗಳಲ್ಲಿ ಕಸರತ್ತನ್ನು ಮಾಡಬಲ್ಲ ವ್ಯತ್ಪನ್ನ ಕವಿಗಳಿದ್ದರು (ಈಗಲೂ ಇದ್ದಾರೆ) ಎಂಬುದೂ ವಿವಕ್ಷೆಯಾಗಿದೆ.
ಪ್ರಸ್ತುತ ಪುಸ್ತಕದಲ್ಲಿ ಚಿತ್ರಕಾವ್ಯದ (ಶಬ್ದಾಲಂಕಾರಗಳ) ಬಗೆಗಳಾದ ಅನುಪ್ರಾಸ, ಯಮಕ, ವರ್ಣಚಿತ್ರ, ಶ್ಲೇಷಚಿತ್ರ, ಪ್ರಹೇಳಿಕೆ, ಗೂಢಚಿತ್ರ, ಪಾರಿಹಾರಿಕಿ, ಗರ್ಭಕವಿತೆ, ಉಭಯಸಮಾನಬಂಧ ಮತ್ತು ಬಂಧಚಿತ್ರ ಈ ರೀತಿಯಾಗಿ ವಿವರಿಸಿದ್ದಾರೆ. ಅವುಗಳಿಗೆ ಸಮುಚಿತ ಉದಾಹರಣೆಯನ್ನು ಬೇರೆಬೇರೆ ಯಕ್ಷಗಾನ ಪ್ರಸಂಗಗಳಿಂದ ಕೊಟ್ಟಿದ್ದಾರೆ. ಒಟ್ಟು ನೂರಹನ್ನೊಂದು ಪುಟಗಳ ಈ ಪುಸ್ತಕದ ಓದು ನಿಜಕ್ಕೂ ಚೇತೋಹಾರಿ. ಪ್ರಸಂಗ ರಚಿಸಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಅವಶ್ಯವಾದ ಸಾಮಾಗ್ರಿ ಇಲ್ಲಿವೆ. ಸಾಹಿತ್ಯಾಸಕ್ತಿಯಿಂದ ಓದಲೂ ಲಲಿತವಾಗಿ ಮನರಂಜಕವಾಗಿದೆ. ಯಕ್ಷಗಾನ ಕವಿಗಳ ವೈದುಷ್ಯಪೂರ್ಣ ಕವಿತಾಲೋಕವೇ ಇಲ್ಲಿ ಮೈದಳೆದಿದೆ.
ಯಕ್ಷಗಾನ ಸಾಹಿತ್ಯದಲ್ಲಿನ ಕಾವ್ಯಗುಣಗಳ ಕುರಿತಾಗಿ ವಿವೇಚಿಸುತ್ತಾ ಅವನ್ನು ಪ್ರಸಾರಮಾಡಿ ಯಕ್ಷಗಾನ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಿಗಬೇಕಾದ ಮನ್ನಣೆ ಸಿಗಲು ಪ್ರಯತ್ನಶೀಲರಾಗಿರುವ ಇವರ ಈ ಕಾರ್ಯ ದಿಟವಾಗಿ ಸ್ತುತ್ತ್ಯ. ಈ ಪುಸ್ತಕ ಕರ್ನಾಟಕ ಯಕ್ಷಗಾನ ಅಕಾಡಮಿಯವರ ಸಾರ್ಥಕ ಕೊಡುಗೆ. ಪುಸ್ತಕದ ಬೆಲೆ ಕೇವಲ ಎಪ್ಪತ್ತೈದು ರೂಪಾಯಿಗಳು.