ಶ್ರೀ ಜಗನ್ನಾಥದಾಸರ ಮಹಿಮೆ ಅಪಾರ

* ಪ್ರಿಯಾ ಪ್ರಾಣೇಶ ಹರಿದಾಸ , ಆದರ್ಶ ನಗರ, ವಿಜಯಪುರ
ಹರಿದಾಸರ ಬೀಡಾದ ರಾಯಚೂರ ಜಿಲ್ಲೆಯ ಬ್ಯಾಗವಟಿಯ ಶಾನಭೋಗರಾಗಿದ್ದ ನರಸಿಂಹ ಆಚಾರ್ಯ ಮತ್ತು ಲಕ್ಷ್ಮಮ್ಮ ದಂಪತಿಗಳು ವಾಸವಾಗಿದ್ದರು. ಆಗಿನ ಮುಸಲ್ಮಾನರ ಆಡಳಿತದಲ್ಲಿ ಶಾನಭೋಗತನ ನಡೆಸುವುದು ಕಷ್ಟಕರ ಕೆಲಸವಾಗಿತ್ತು. ನೂರೆಂಟು ತಾಪತ್ರಯ ತೊಂದರೆ ಕಾಲವದು. ಇವರ ಮೃದು ಸ್ವಭಾವದ ಮತ್ತು ಧರ್ಮಿಷ್ಠರಿದ್ದ  ಕಾರಣ ಶಾನಭೋಗತನದಲ್ಲಿ ಜನರ ಮೋಸತನಕ್ಕೆ ಒಳಗಾದರು. ಕಂದಾಯ ಕಟ್ಟಿ ಮನೆಮಠ ಆಸ್ತಿಗಳನ್ನು ಕಳೆದುಕೊಂಡರು. ಹೀಗಾಗಿ ನರಸಿಂಹ ಆಚಾರ್ಯರರು ಶಾನಭೋಗತನ ತ್ಯಜಿಸಿ, ಅದವಾನಿಯ ಪಂಗನಾಮ ತಿಮ್ಮಣ್ಣದಾಸರ ಹತ್ತಿರ ಆಶ್ರಯಕ್ಕೆ ಬಂದರು.

ತಿಮ್ಮಣ್ಣದಾಸರು ಅದವಾನಿಯ ನವಾಬ ಬಸಾಲತ್ ಜಂಗನ ಹತ್ತಿರ ಮುಖ್ಯಮಂತ್ರಿ ಗಳಾಗಿದ್ದರು. ಇವರು ಕರ್ತವ್ಯದಲ್ಲಿದ್ದರು ವಿಜಯದಾಸರ ಶಿಷ್ಯರಾಗಿ "ವೇಣುಗೋಪಾಲ" ಅಂಕಿತ ದಿಂದ ಪಡೆದು ಕೀರ್ತನೆಗಳನ್ನು ರಚಿಸುತ್ತಿದ್ದರು.
ತಿಮ್ಮಣ್ಣದಾಸರಲ್ಲಿ  ನರಸಿಂಹ ಆಚಾರ್ಯರರು ಆಶ್ರಯ ಬಯಸಿ ಬಂದಿದ್ದರು. ತಿಮ್ಮಣ್ಣದಾಸರು ಇವರನ್ನು ನೋಡಿ ಎಲ್ಲ ಸಂಗತಿಗಳನ್ನು ವಿಚಾರಿಸಿ , ನರಸಿಂಹ ಆಚಾರ್ಯರರೇ ನಿಮಗೆ ಲೌಕಿಕ ವೃತ್ತಿ ಒಗ್ಗದು , ನೀವು ಧರ್ಮಿಷ್ಠರು , ನೀವು ಬಯಸುವುದಾದರೇ  ನಿಮಗೆ ಮಂತ್ರೋಪದೇಶದ ಮೂಲಕ ಅಂಕಿತ ನೀಡುವೆ ;...ನೀವು ಹರಿದಾಸರಾಗಿ ಎಂದರು. ಕೂಡಲೇ ಅವರು ಸಂತೋಷದಿಂದ ಒಪ್ಪಿದರು.
ತಿಮ್ಮಣ್ಣ ದಾಸರು; ನರಸಿಂಹ ಆಚಾರ್ಯರರಿಗೆ "ನರಸಿಂಹವಿಠಲ್" ಎಂಬ ಅಂಕಿತ ಕೊಟ್ಟು "ನರಸಿಂಹದಾಸ" ರನ್ನಾಗಿ ಮಾಡಿದರು. ಅವರ ಉಪಜೀವನಕ್ಕೆ ಮಾನವಿಯಲ್ಲಿ ಕೇಲವು ಎಕರೆ ಭೂಮಿಯನ್ನು ಮತ್ತು ವಾಸಿಸಲು  ಮನೆ ಕೊಟ್ಟು ಅಲ್ಲಿಯೇ ವಾಸಿಸಲು ಹೇಳಿದರು.ಮುಂದೆ ಕಾಲಕ್ರಮೇಣ ಜೀವನ ಸಂತುಷ್ಟದಾಯಕವಾಯಿತು.
 ಇವರಿಗೆ" ಶ್ರೀನಿವಾಸ" ನೆಂಬ ಪುತ್ರ ಸಂತಾನವಾಯಿತು. ಈ "ಶ್ರೀನಿವಾಸ" ನೇ  ನಂತರದಲ್ಲಿ ಜಗನ್ನಾಥದಾಸರು ಎಂದು‌ ಪ್ರಖ್ಯಾತಿ ಹೊಂದಿದವರು.

ಜಗನ್ನಾಥ ದಾಸರು; ದಾಸ ಚತುಷ್ಠಯರಲ್ಲಿ ಒಬ್ಬರಾಗಿ , ವೇದ ಉಪನಿಷತ್ತ‌  ಪುರಾಣಗಳ ಸಾರ ಸಂಗ್ರಹದ ಅತ್ಯಮೂಲ್ಯವಾದ ಶ್ರೇಷ್ಠ ಗ್ರಂಥವಾದ  "ಹರಿಕಥಾಮೃತಸಾರ" ರಚಿಸಿದ  ಮಹನೀಯರು.  

ಜಗನ್ನಾಥದಾಸರ ಜೀವನ ವೃತ್ತಾಂತ:

ಶಾನಭೋಗರಾಗಿದ್ದ ನರಸಿಂಹ ಆಚಾರ್ಯ ಮತ್ತು ಲಕ್ಷ್ಮಮ್ಮ ಎಂಬ ದಂಪತಿಗಳಲ್ಲಿ ಶಾಲಿವಾಹನಶಕೆ 1649 ಕೀಲಕ ಸಂವತ್ಸರದ  ಶ್ರಾವಣ ಶುದ್ಧ ಬಿದಿಗೆಯಯಂದು ಪುತ್ರ ಸಂತಾನ ಹುಟ್ಟಿತ್ತು. ತಿರುಪತಿ ಶ್ರೀನಿವಾಸನ ಸೇವಾಫಲದಿಂದ ಹುಟ್ಟಿದ್ದ ಕಾರಣ ಮಗುವಿಗೆ "ಶ್ರೀನಿವಾಸ" ಎಂದು ಹೆಸರು ಇಟ್ಟರು.

 ಶ್ರೀನಿವಾಸನು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ವಿದ್ವತ್  ಹೊಂದಿದ್ದರು. ಆಗಿನ ಕಾಲದ ಶ್ರೀ ರಾಘವೇಂದ್ರ ಮಠದ ಸ್ವಾಮಿಗಳಾಗಿದ್ದ  ಶ್ರೀ ವರದೇಂದ್ರತೀರ್ಥ ಶ್ರೀಪಾದಂಗಳವರು ಶ್ರೀನಿವಾಸ ಜ್ಞಾನವನ್ನು ಕಂಡು ಮಂತ್ರಾಲಯಕ್ಕೆ ಕರೆಯಿಸಿಕೊಂಡು ಸಕಲ ಶಾಸ್ತ್ರಗಳನ್ನು ಅಧ್ಯಯನ ಮಾಡಿಸಿದರು.
ಇದರ ಜೊತೆ ಕವಿತ್ವವು ಒಲಿಯಿತು.
ಇವರ ಶಾಸ್ತ್ರ ಪಾಂಡಿತ್ಯಗಳ ಸಿದ್ಧಿ ಎಲ್ಲಕಡೆ ಹಬ್ಬಿ ಪ್ರಸಿದ್ಧಿ ಹೊಂದಿದರು. ಮುಂದೆ ಚಿಕ್ಕಬಳ್ಳಾಪುರದ ವೆಂಕಟಕೃಷ್ಣಾಚಾರ್ಯರ ಪುತ್ರಿ ತಾಮರಸಮ್ಮಳೊಂದಿಗೆ ವಿವಾಹ ನೇರೆವೆರಿತು. ಮುಂದೆ ವೈಭೋಗ ಜೀವನ ಇವರದಾಯಿತು. ಇವರಲ್ಲಿ ಪಾಂಡಿತ್ಯದ ಮದ, ಶ್ರೀಮಂತಿಕೆ ಭೋಗ ಎರಡು ಮನೆ ಮಾಡಿದವು.

ಆಗಿನ ಕಾಲದ ಅಪರೋಕ್ಷ ಜ್ಞಾನಿಗಳಾದ ವಿಜಯದಾಸರಾದಿ ಎಲ್ಲ ಹರಿದಾಸರುಗಳ‌ ಮತ್ತು ಜ್ಞಾನಿಗಳನ್ನು ಮತ್ತು ಅವರ ಪಾಂಡಿತ್ಯವನ್ನು ಹಿಯಾಳಿಸಿ ನಿಂದಿಸಲು ಪ್ರಾರಂಭಿಸಿದರು. ಕನ್ನಡದಲ್ಲಿ ಕೀರ್ತನೆಗಳನ್ನು ಹಾಡುವ ಹರಿದಾಸರನ್ನು ಕೀಳಾಗಿ ಕಾಣುತ್ತಿದ್ದರು.

ಹೀಗೆ ಒಂದು ದಿನ ಅಪರೋಕ್ಷ ಜ್ಞಾನಿಗಳಾದ ವಿಜಯದಾಸರು ಮಾನವಿಗೆ ಬಂದರು. ಇವರು ನಿತ್ಯ ತಂಬೂರಿ ಮೀಟುತ್ತಾ; ದೇವರ ನಾಮಗಳನ್ನು ಹಾಡುತ್ತಾ ಊರ ಪ್ರದಕ್ಷಿಣೆ ಹಾಕಿ ,ಅಲ್ಲಿಯೇ ಭಿಕ್ಷೆ ಸ್ವೀಕರಿಸಿ , ಮಧ್ಯಾಹ್ನನಕ್ಕೆ ಪ್ರಸಾದಕ್ಕೆ ಬರಬೇಕೆಂದು ಹೇಳಿ ಬರುತ್ತಿದ್ದರು. ತಾವಿದ್ದಲ್ಲಿ‌ ಬಂದು ಅಡುಗೆ ಮಾಡಿ ದೇವರ ನೈವೇದ್ಯ ಮಾಡಿ ಭಕ್ತವೃಂದ ಮತ್ತು ಶಿಷ್ಯರ ಜೊತೆ ಪ್ರಸಾದ ಸ್ವಿಕರಿಸುತ್ತಿದ್ದರು. ಸಂಜೆ ಭಜನೆ ಕೀರ್ತನೆ ಹಾಡಿ ಮಂಗಳಾರತಿ‌ ಮಾಡಿ ಅಂದಿನ ಸರ್ವಕರ್ಮ‌ ಸಮರ್ಪಿಸುತ್ತಿದ್ದರು.

ವಿಜಯದಾಸರು ಶ್ರೀನಿವಾಸ ಆಚಾರ್ಯರನ್ನು‌ ಮಧ್ಯಾಹ್ನದ‌ ಪ್ರಸಾದ ಮತ್ತು ಆತಿಥ್ಯ ಸ್ವೀಕರಿಸಲು
ಆಮಂತ್ರಣ ನೀಡಿದರು. ಮನಸ್ಸಿನಲ್ಲಿ ಅವರ ಕಡೆ ಅಸಡ್ಡೆ ಭಾವ ಇದ್ದಿದ್ದರೂ ಒಪ್ಪಿಗೆ ಕೊಟ್ಟರು.
ಮುಂದೆ ಊಟದ‌ ಸಮಯದಲ್ಲಿ ಶ್ರೀನಿವಾಸ ಆಚಾರ್ಯರರು ಬರದದ್ದು ನೊಡಿ, ಶಿಷ್ಯನನ್ನು ಕರೆತರಲು ಕಳುಹಿಸಿದರು. ಆಗ ಆ ಶಿಷ್ಯನ ಮುಂದೆ ಪರಾನ್ನ ಬಿಟ್ಟಿರುವೆ, ವೇಳೆ ಮೀರಿ ಊಟ ಮಾಡಿದರೆ ನನಗೆ ಉದರ ಶೂಲೆ ಬರುತ್ತದೆ, ಹೀಗಾಗಿ ನಾನು‌ ಊಟ ಮಾಡಿರುವೆ...; ನಿಮ್ಮ ಗುರುಗಳಲ್ಲಿ ಹೇಳು, ಎಂದು ಹೇಳಿ ಕಳುಹಿಸಿದರು.
ಶಿಷ್ಯ ಬಂದು ವಿಜಯದಾಸರ‌ ಮುಂದೆ ಶ್ರೀನಿವಾಸ ಆಚಾರ್ಯರು ಹೇಳಿದ ಹಾಗೇ ವಿಷಯ ಮುಟ್ಟಿಸಿದ.
ಇದನ್ನು ಕೇಳಿದ ವಿಜಯದಾಸರು ಹರಿಚಿತ್ತ ಎಂದು ಸುಮ್ಮನಾದರು.

ಇತ್ತಕಡೆ ಸ್ವಲ್ಪ ವೇಳೆ ಕಳೆದ ನಂತರ ಶ್ರೀನಿವಾಸ ಆಚಾರ್ಯರಿಗೆ ನಿಜವಾಗಿ ಹೊಟ್ಟೆಶೂಲೆ ಬಂದಿತು. ಎಲ್ಲ ಕಡೆ ತೋರಿಸಿದರು, ವೈದ್ಯರು ಕೈಬಿಟ್ಟರು.
ಕಡೆಗೆ ಭಕ್ತರ ಕರುಣಿಯಾದ ಗುರು ರಾಘವೇಂದ್ರ ಸ್ವಾಮಿಗಳಲ್ಲಿ ಒಂದು ವಾರದವರೆಗೆ ಸೇವೆ‌ಮಾಡಿದರು. ಆಗ ರಾಯರು ಸ್ವಪ್ನದಲ್ಲಿ ದರ್ಶನ ಕೊಟ್ಟು, ನೀನು ವಿದ್ಯದ ಮದದಿಂದ ವಿಜಯದಾಸರಾದಿಗಳನ್ನು ನಿಂದಿಸಿ, ಅವರ‌ ಆಮಂತ್ರಿಸಿದ ತೀರ್ಥಪ್ರಸಾದಕ್ಕೆ ನೀನು ಹೋಗದೆ ಉದರ ಶೂಲೆಯನೆಪ ಹೇಳಿ ಗುರು ದ್ರೋಹ‌ ಮಾಡಿರುವೆ. ಅದರ ಫಲವಾಗಿ ಈ ಉದರ ಶೂಲೆ ಬಂದಿದೆ. ನೀನು ವಿಜಯದಾಸರಲ್ಲಿ ಕ್ಷಮಾಪಣೆ ಕೇಳು ಎಂದು ಹೇಳಿದರು.
ಥಟ್ಟನೆ! ಎಚ್ಚರಗೊಂಡ ಶ್ರೀನಿವಾಸ ಆಚಾರ್ಯರು ಮಂತ್ರಾಲಯದಿಂದ ನೇರವಾಗಿ ವಿಜಯದಾಸರಲ್ಲಿ ಬಂದು ನಡೆದು ಗುರುಗಳ ಸ್ವಪ್ನಾದೇಶವನ್ನು ಹೇಳಿ, ಕ್ಷಮಾಪಣೆ ಕೇಳಿದರು. ನನ್ನನ್ನು ಉದ್ಧರಿಸಿ ಎಂದು ಬೇಡಿಕೊಂಡರು.

ಆಗ ವಿಜಯದಾಸರು ನನ್ನ ಶಿಷ್ಯರಾದ ಗೋಪಾಲದಾಸರಲ್ಲಿ ಹೋಗು, ಅಲ್ಲಿಯೇ ಅವರು ನಿನ್ನ ಸ್ವರೂಪೋದ್ಧಾರ ಮಾಡುವರೆಂದು ಹೇಳಿದರು. ಮುಂದೆ ಶ್ರೀ ಗೋಪಾಲ ದಾಸರಲ್ಲಿ ಹೋದರು ಅವರು  ನಿತ್ಯದಲ್ಲಿ ದೇವರ ತೀರ್ಥ ನೈವೇದ್ಯ ಕೊಡುತ್ತ ಅದರ ಜೊತೆ ಧನ್ವಂತರಿಯನ್ನು ಧ್ಯಾನಿಸಿ , ಒಂದು ಬಕ್ಕರಿಯನ್ನು ಕೊಡುತ್ತ ಬಂದರು.ಕೆಲವು ದಿನಗಳಲ್ಲಿಯೇ ಉದರ ಶೂಲೆ ಕಡಿಮೆಯಾಗಿ ಉತ್ಸಾಹ ಬಂದಿತು. 

ಗೋಪಾಲದಾಸರು ಪ್ರತಿ ವರ್ಷ ಬ್ರಹ್ಮೋತ್ಸವಕ್ಕೆ, ಅನೇಕ ಭಕ್ತ ಶಿಷ್ಯವೃಂದದ ಜೊತೆ ತಿರುಪತಿಗೆ ಹೋಗುತ್ತಿದ್ದರು. ಈ ಸಲ ಶ್ರೀನಿವಾಸ ಆಚಾರ್ಯರರು ಇವರ ಜೊತೆ ನಡೆದರು. ತಿರುಪತಿ ತಲುಪಿ ಶ್ರೀನಿವಾಸನ ದರ್ಶನ‌ಪಡೆದು, ಶ್ರೀವಾಸ ಆಚಾರ್ಯರು ಆಯಾಸದ ಬಳಲಿಕೆಯಿಂದ ಬಿಡಾರದಲ್ಲಿ ವಿಶ್ರಾಂತಿಗೆ ತಂಗಿದರು. ಸ್ವಲ್ಪ ವೇಳೆಯಲ್ಲಿ ಇವರ‌ ಪ್ರಾಣಪಕ್ಷಿ ಹಾರಿ ಹೋಗಿತ್ತು. ಜನರಲ್ಲಿ ಗೊತ್ತಾಗಿ ಬಿಡಾರದ ಸುತ್ತ ಜನ ಸಮೂಹ ಸೇರ ತೊಡಗಿತು. ಶ್ರೀನಿವಾಸಚಾರ್ಯರರ ಮರಣದ ಸುದ್ದಿ ಎಲ್ಲಕಡೆ  ಹಬ್ಬಿತು. ಇತ್ತಕಡೆ ಗೋಪಾಲದಾಸರು ಬ್ರಹ್ಮೋತ್ಸವದಲ್ಲಿ ಭಜನೆ‌ ಮಾಡುತ್ತಿರುವಾಗ ಸುದ್ದಿ ತಿಳಿಯಿತು. ಕೂಡಲೇ ಬಿಡಾರಕ್ಕೆ ಬಂದರು.

ಎಲ್ಲವನ್ನು ನೊಡಿ, ಕಣ್ಮುಚ್ಚಿ ತಮ್ಮ ಗುರುಗಳಾದ ವಿಜಯದಾಸರನ್ನು ಧ್ಯಾನಿಸಲು, ಅವರಿಗೆ ಸೂಕ್ಷಶರೀರದಿಂದ  ಕಾಣಿಸಿ  40 ವರ್ಷ ಆಯುಷ್ಯ ದಾನ ಮಾಡಲು ಹೇಳಿ ಅದೃಶ್ಯರಾದರು.

ಗುರುಗಳ ಆಜ್ಞೆಯಂತೆ ಧನ್ವಂತರಿ ರೂಪಿ ಶ್ರೀನಿವಾಸನನ್ನು ಪ್ರಾರ್ಥಿಸಿ , ಶಾಲಿವಾಹನ ಶಕೆ 1691 ,ವಿರೋಧಿ ಸಂವತ್ಸರದ ಭಾದ್ರಪದ ಶುದ್ಧ ನವಿಮಿಯಂದು ತಮ್ಮ ಆಯುಷ್ಯವನ್ನು ದಾನ ಮಾಡಿದರು.

ಶ್ರೀನಿವಾಸ ಆಚಾರ್ಯರರು ನಿದ್ರೆಯಿಂದ ಎದ್ದವರಂತೆ ಎದ್ದರು. ಇದೆಲ್ಲವನ್ನು‌ ಕಂಡ ಸುತ್ತಲಿನ ಜನ ಹರ್ಷೋದ್ಗಾರ‌ ಮುಗಿಲು ಮುಟ್ಟಿತು. ಆಗ ಶ್ರೀನಿವಾಸ ಆಚಾರ್ಯರಿಗೆ ಎಲ್ಲ ವಿಷಯ ತಿಳಿದು
ಗೋಪಾಲದಾಸರಿಗೆ ಕೈ ಮುಗಿದರು. ಸ್ವಲ್ಪ ಸಮಯದ ನಂತರ ಮತ್ತೇ ಶ್ರೀನಿವಾಸ ಆಚಾರ್ಯರಿಗೆ ದೇಹದಲ್ಲಿ ನಿಸ್ತೇಜ ಆಯಿತು. ಇದನ್ನು ಕಂಡು ಗೋಪಾಲದಾಸರು ಶ್ರೀನಿವಾಸನ ಪ್ರಸಾದ ತರಲು ದೇವಾಲಯದ ಹತ್ತಿರ ಹೋದರು . ಅಲ್ಲಿ ಬಹಳ ಗದ್ದಲ ಇದಿದ್ದರಿಂದ ಬೇಗ ಬರಲು ಆಗಲಿಲ್ಲ.
ಅಷ್ಟರಲ್ಲಿಯೇ ಶ್ರೀನಿವಾಸನು ಗೋಪಾಲದಾಸರ ರೂಪದಿಂದ ಶ್ರೀನಿವಾಸ ಆಚಾರ್ಯರ ಹತ್ತಿರ ಬಂದು ಪ್ರಸಾದವನ್ನು ಸ್ವೀಕರಿಸಲು ಕೊಟ್ಟು ಹೊರ ಹೋದರು. ಕೆಲವೇ ಕ್ಷಣಗಳಲ್ಲಿ ಗೋಪಾಲ ದಾಸರು‌ ಪ್ರಸಾದವನ್ನು ತಂದು ಶ್ರೀನಿವಾಸ ಆಚಾರ್ಯರಿಗೆ ಕೊಡಲು, ಈಗಾಗಲೇ ನೀವು ಪ್ರಸಾದ ತಂದು ಕೊಟ್ಟರಲ್ಲ , ನಾನು! ಸ್ವೀಕರಿಸಿದೆ ಎಂದು  ಹೇಳಿದರು. ಗೋಪಾಲ ದಾಸರು ಧ್ಯಾನದಿಂದ ಶ್ರೀನಿವಾಸನನ್ನು ಪ್ರಾರ್ಥಿಸಿದರು. ನಡೆದ ವೃತ್ತಾಂತ ತಿಳಿಯಿತು. ಶ್ರೀನಿವಾಸ ಆಚಾರ್ಯರರಿಗೆ ಭಗವಂತನೆ ಬಂದು ಪ್ರಸಾದ ಕೊಟ್ಟು ಅನುಗ್ರಹ ಮಾಡಿದರೆಂದು ಹೇಳಿದರು. ಶ್ರೀನಿವಾಸ ಆಚಾರ್ಯರರಿಗೆ ಪರಮಾಶ್ಚರ್ಯವಾಗಿ ಆನಂದಭರಿತರಾದರು.

ಮುಂದೆ ತಿರುಪತಿಯಿಂದ ಉತ್ತನೂರಿಗೆ ಬಂದು  ಹರಿದಾಸನಾಗಬೇಕೆಂಬ ಆಶಯ ವ್ಯಕ್ತ ಪಡಿಸಿ, ಅಕಿಂತ ನೀಡಬೇಕೆಂದು ಗೋಪಾಲದಾಸರಲ್ಲಿ ವಿನಂತಿಸಿದರು.ಆಗ ಗೋಪಾಲದಾಸರು ಶ್ರೀನಿವಾಸ ಆಚಾರ್ಯರರಿಗೆ ನೀವು ಪಂಡರಪುರಕ್ಕೆ ಹೋಗಿ ಚಂದ್ರಭಾಗ ನದಿಯಲ್ಲಿ ಸ್ನಾನಕ್ಕೆ ಮುಳಗಿದಾಗ ನಿಮ್ಮ ಬಲಭಾಗಕ್ಕೆ ನಿಮಗೆ ದೊರೆಯುವ ಅಂಕಿತದ  ಶಿಲೆಯೊಂದು ಸಿಗುತ್ತದೆ. ಅದರಲ್ಲಿ ನಿಮ್ಮ ಅಂಕಿತದ ಹೆಸರು ಇರುತ್ತದೆ' ಎಂದು ಕಳುಹಿಸಿದರು. 

ಗೋಪಾಲದಾಸರು ಹೇಳಿದಂತೆ ಪಂಡರಪುರದ ಶ್ರೀ ವಿಠ್ಠಲನ ದರ್ಶನ ಪಡೆದು, ಚಂದ್ರಭಾಗನದಿಯಲ್ಲಿ  ಸ್ನಾನ ಮಾಡಲು ಮುಳುಗಿದಾಗ ಬಲಕ್ಕೆ ಒಂದು ಶಿಲೆ ಸಿಕ್ಕಿತು, ಅದರಲ್ಲಿ "ಜಗನ್ನಾಥ ವಿಠಲ್" ಎಂಬ ಅಂಕಿತವಿತ್ತು. ಅಪರೋಕ್ಷ ಜ್ಞಾನವಾಯಿತು. ಶಿಲೆಯನ್ನು ತಲೆಯ ಮೇಲೆ ಇಟ್ಟುಕೊಂಡು "ಎಂದು ಕಾಂಬೆನೊ ಪಾಂಡುರಂಗ ಮೂರುತಿಯ/ಇಂದುಭಾಗ ನಿವಾಸ ನರನ ಸಾರಥಿಯ / ಎಂಬ " ಜಗನ್ನಾಥವಿಠಲ್" ಅಂಕಿತದಿಂದ ಕೀರ್ತನೆಯನ್ನು ರಚಿಸಿದರು. "ಜಗನ್ನಾಥ ದಾಸರು" ಎಂದು ಪ್ರಖ್ಯಾತಿ ಹೊಂದಿದರು.

ನಂತರ ಇವರು  ಸತ್ಯಭೋಧರ ಆಜ್ಞೆಯಂತೆ  ಸವಣೂರಿನಲ್ಲಿಯೇ‌ ಇದ್ದು "ಹರಿಕಥಾಮೃತಸಾರ" ವೆಂಬ ದಿವ್ಯ ಗ್ರಂಥ ಬರೆದರು‌. ರಚನೆ ಮುಗಿಸಿ ಹೋರಡುವಾಗ ಸತ್ಯಭೋಧರ ದಿವ್ಯ ಸ್ತೋತ್ರ ರಚಿಸಿ, ಅವರಿಂದ ಅವರ ಪಾದುಕೆ ಪಡೆದು ತಮ್ಮ ಗೋಪಾಲ ಬುಟ್ಟಿಯನ್ನು ಸಮರ್ಪಿಸಿದರು.

ಹೀಗೆ ಮುಂದೆ ಇವರ ಶಿಷ್ಯ ಸಂತತಿ ಬೆಳೆಯಿತು.ಲಿಂಗಸೂರಿನ ಯೋಗೀಂದ್ರರಾಯರನ್ನು ಕರುಣಿಸಿ ಪ್ರಾಣೇಶ ದಾಸರನ್ನಾಗಿ ಮಾಡಿದರು.
ಕರ್ಜಗಿ ದಾಸಪ್ಪನಿಗೆ"ಶ್ರೀದ ವಿಠಲ್" ಎಂಬ ಅಂಕಿತ ನೀಡಿದರು.ಇವರೇ ಮುಂದೆ " ಹರಿಕಥಾಮೃತಸಾರಕ್ಕೆ"
24 ನುಡಿಗಳ ಫಲಶ್ರುತಿ ಬರೆದರು. ಜಗನ್ನಾಥದಾಸರಿಂದ ಅಂಕಿತ‌ ಪಡೆದು ಶಿಷ್ಯತ್ವ ಹೊಂದಿದವರು 21 ಕ್ಕಿಂತ ಹೆಚ್ಚು ಜನರು ಇದ್ದಾರೆ.

ಅನೇಕ ಧೀರ್ಘಕೃತಿಗಳು, ಹರಿಕಥಾಮೃತಸಾರ ಸಂಗ್ರಹವಿರುವ "ಫಲವಿದು ಬಾಳ್ದುದಕೆ " ತತ್ವಸುವ್ವಾಲಿ, ಕೀರ್ತನೆಗಳನ್ನು ರಚಿಸಿದ್ದಾರೆ. ಕೊನೆಗೆ 81 ವಯಸ್ಸಿನಲ್ಲಿ ಭಾದ್ರಪದ ಶುದ್ಧ ನವಮಿ ಭಾನುವಾರ ತಮ್ಮ ಕಾರ್ಯಕ್ಷೇತ್ರವಾದ ಮಾನವಿಯಲ್ಲಿ ದೇಹ ತ್ಯಾಗ ಮಾಡಿದರು. ಆದರೆ ಅವರು ರಚಿಸಿರುವ ಕೃತಿಯ ರೂಪದಲ್ಲಿ‌ ನಮ್ಮೊಡನೆ ಶಾಶ್ವತವಾಗಿ ಇದ್ದು‌ ಉದ್ಧರಿಸುತ್ತಿದ್ದಾರೆ.



Related Articles

ಪ್ರತಿಕ್ರಿಯೆ ನೀಡಿ

Latest Articles