ಶ್ರೀ ಮಹಾಲಕ್ಷ್ಮೀಯ ಅನುಗ್ರಹಕ್ಕೆ ಪಾತ್ರರಾಗಲು ಶ್ರೀ ಸೂಕ್ತ ಪಾರಾಯಣ, ಆಚರಣೆಯಿಂದ ದೊರಕುವ ಫಲಗಳು

ಶ್ರೀ ಮಹಾಲಕ್ಷ್ಮಿಯು ಕ್ಷೀರ ಸಮುದ್ರದಲ್ಲಿ ಜನನವಾದಾಗ ಸಕಲ ದೇವತೆಗಳು ಶ್ರೀ ಮಹಾಲಕ್ಷ್ಮೀ ದೇವಿಯನ್ನು ಸ್ತೋತ್ರ ಮಾಡಿ, ಆಕೆಯ ಅನುಗ್ರಹ ದೇವಲೋಕಕ್ಕೆ ದೊರಕಿಸಿ ಕೊಟ್ಟಂತಹ ಶ್ರೀಸೂಕ್ತ ಪಾರಾಯಣದ ವಿಶೇಷತೆಗಳು ವೈಜ್ಞಾನಿಕ ಆಚರಣೆಯಿಂದ ದೊರಕುವ ಫಲಗಳು

ಶ್ರೀ ಮಹಾಲಕ್ಷ್ಮಿಯು ಕ್ಷೀರ ಸಮುದ್ರದಲ್ಲಿ ಜನನವಾದಾಗ ಸಕಲ ದೇವತೆಗಳು ಶ್ರೀ ಮಹಾಲಕ್ಷ್ಮಿ ದೇವಿಯನ್ನು ಸ್ತೋತ್ರ ಮಾಡಿ, ಆಕೆಯ ಅನುಗ್ರಹ ದೇವಲೋಕಕ್ಕೆ ದೊರಕಿಸಿ ಕೊಟ್ಟಂತಹ ಪರಮದಿವ್ಯ ಮಂಗಳಕರವಾದ ಸೂಕ್ತವೇ ಶ್ರೀಸೂಕ್ತ.

ಮಹಾಲಕ್ಷ್ಮೀ ದೇವಿಗೆ "ಶ್ರೀ" ಎಂಬ ನಾಮವು ಇರುವುದರಿಂದ ಇದಕ್ಕೆ "ಶ್ರೀ ಸೂಕ್ತ" ಎಂದು ಹೆಸರು.

ಈ ಸೂಕ್ತವನ್ನು ಪ್ರತಿದಿವಸ ಬೆಳಗ್ಗೆ ಮತ್ತು ಸಾಯಂಕಾಲ 05:30 ರಿಂದ 06:30 ಗಂಟೆಯೊಳಗೆ ಪಾರಾಯಣ, ಶ್ರೀ ಮಹಾಲಕ್ಷ್ಮೀ ದೇವಿಗೆ ಪೂಜೆ ಮಾಡಿ, ಸುಮಂಗಲಿಯರಿಗೆ ಅರಿಸಿನ, ಕುಂಕುಮ, ಹೂವು, ತಾಂಬೂಲ, ಕೋಸಂಬರಿ, ಪಾನಕ ಕೊಡುತ್ತಾ ಬಂದರೆ, ಆ ಮನೆಯಲ್ಲಿ ಯಥೇಚ್ಚವಾದ ಧನಕನಕ ವಸ್ತು ವಾಹನಗಳು ಅಭಿವೃದ್ಧಿಯಾಗಿ, ವಂಶದ ಏಳಿಗೆಯಾಗುತ್ತದೆ.

ಶ್ರೀ ಸೂಕ್ತ  ಪೂಜೆ ಮತ್ತು ಫಲಗಳು

1. ಶ್ರೀ ಮಹಾಲಕ್ಷ್ಮೀ ದೇವಿಯನ್ನು ಧಾನ್ಯದಲ್ಲಿಟ್ಟು ಶ್ರೀ ಸೂಕ್ತವನ್ನು ಹೇಳಿ ಧಾನ್ಯವನ್ನು ಪೂಜೆ ಮಾಡಿದರೆ, ಆ ಮನೆಯಲ್ಲಿ ಎಂದೆಂದಿಗೂ ಧಾನ್ಯಲಕ್ಷ್ಮಿಯ ಅಭಿವೃದ್ಧಿಯಾಗುತ್ತದೆ. ಧಾನ್ಯಪೂಜೆ ಮಾಡಿ, ಧಾನ್ಯದಲ್ಲಿ ಅಡುಗೆ  ಮಾಡಿ, ದೇವರಿಗೆ ನೈವೇದ್ಯ ಮಾಡಿ, ಹಸುವಿಗೆ, ಸುಮಂಗಲಿಯರಿಗೆ, ಬ್ರಾಹ್ಮಣರಿಗೆ ಕೊಟ್ಟು ಉಳಿದ ಪ್ರಸಾದ ಸ್ವೀಕರಿಸಬೇಕು.
ಈ ರೀತಿ ಮಾಡಿದರೆ ಮನೆಯಲ್ಲಿ ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ, ಧನ ದಾರಿದ್ಯ ಇರುವುದಿಲ್ಲ.

2. ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂರ್ವಕ್ಕೆ ಕೂಡಿಸಿ, ಪೂಜೆ ಮಾಡುವವರು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು "ಶ್ರೀ ಸೂಕ್ತ" ಪಾರಾಯಣ ಮಾಡಿದರೆ, ಇಷ್ಟಾರ್ಥ ಸಿದ್ಧಿಯಾಗಿ, ಆ ಮನೆಯು ಸಂಪೂರ್ಣ ಅಭಿವೃದ್ಧಿಯಾಗುತ್ತದೆ. ಮಕ್ಕಳಿಗೆ ಒಳ್ಳೆಯ ವಿದ್ಯೆ ಬುದ್ಧಿಯು ಬರುತ್ತದೆ.

3. ಶ್ರೀ ಮಹಾಲಕ್ಷ್ಮಿ ದೇವಿಯನ್ನು ಉತ್ತರಕ್ಕೆ ಕೂಡಿಸಿ ಪೂಜೆ ಮಾಡುವವರು ಪೂರ್ವಕ್ಕೆ ಮುಖ ಮಾಡಿ ಕುಳಿತು ಪೂಜಿಸಿದರೆ, ಆ ಮನೆಯಲ್ಲಿ ಎಲ್ಲರೂ ಅಭಿವೃದ್ಧಿಯಾಗುತ್ತಾರೆ. ದೈವಾನುಗ್ರಹವಾಗಿ, ಆ ಮನೆಯು ಲಕ್ಷ್ಮೀ ವಾಸಸ್ಥಾನವಾಗುತ್ತದೆ.

4. ಶ್ರೀ ಸೂಕ್ತ ಪಠಿಸಿ ಶ್ರೀ ಲಕ್ಷ್ಮೀನಾರಾಯಣರ ಪೂಜೆ ಮಾಡಿದರೆ, ಆ ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿ ಇರುತ್ತಾರೆ. ಮನಸ್ತಾಪ, ದುರಭಿಮಾನ‌ ಇತ್ಯಾದಿ ಸಮಸ್ಯೆಗಳು ದೂರವಾಗುತ್ತದೆ.

5. ಯಾರ ಮನೆಯಲ್ಲಿ ಶ್ರೀ ಸೂಕ್ತದಿಂದ ಸಾಲಿಗ್ರಾಮ ದೇವರಿಗೆ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಎಲ್ಲರಿಗೂ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ.

6. ಯಾರ ಮನೆಯಲ್ಲಿ ಪ್ರತಿದಿವಸ "ಶ್ರೀಸೂಕ್ತ" ಪಠಿಸಿ, ಮನೆಗೆ ಬರುವ ಹೆಂಗಸರಿಗೆ ಅರಿಸಿನ ಕುಂಕುಮ ಕೊಡುತ್ತಾರೋ ಆ ಮನೆಯಲ್ಲಿ ಎಂದೂ ದಾರಿದ್ರ್ಯ, ವೈಧವ್ಯ ಬರುವುದಿಲ್ಲ. ಸಮಸ್ತ ಸ್ತ್ರೀ ಶಾಪ ನಿವಾರಣೆಯಾಗುತ್ತದೆ.

7. ಯಾರು ಪ್ರತಿದಿವಸ "ಶ್ರೀ ಸೂಕ್ತ" ಪಾರಾಯಣ ಮಾಡಿ, ಹೆಣ್ಣು ಮಕ್ಕಳಿಗೆ ಸಿಹಿ ತಿಂಡಿ ಹಂಚುತ್ತಾರೆಯೋ, ಅವರ ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುತ್ತವೆ.

8. ಯಾರ ಮನೆಯಲ್ಲಿ "ಶ್ರೀ ಸೂಕ್ತ" ಹೇಳುತ್ತಾ ದೇವರ ವಿಗ್ರಹಗಳಿಗೆ ಅಥವಾ ಸಾಲಿಗ್ರಾಮ ದೇವರಿಗೆ ಗಂಧದಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಯಾವುದೇ ತರಹದ ರೋಗಭಾದೆ ಇರುವುದಿಲ್ಲ. ಸರ್ವ ರೋಗಗಳು ನಿವಾರಣೆಯಾಗಿ ಆರೋಗ್ಯವಂತರಾಗಿ ಬಾಳುತ್ತಾರೆ.

9. ಶ್ರೀ ಸೂಕ್ತ ಹೇಳುತ್ತಾ ದೇವರಿಗೆ ಅರಿಶಿನದ ನೀರಿನಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಮಂಗಳ ಕಾರ್ಯಗಳು ಅಡಚಣೆ ಇಲ್ಲದೇ ನಡೆಯುತ್ತವೆ.

10. ಯಾರ ಮನೆಯಲ್ಲಿ "ಶ್ರೀ ಸೂಕ್ತ" ಹೇಳಿ ಕುಂಕುಮದ ನೀರಿನಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿನ ಸಕಲ ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ. ಸಮಸ್ತ ಮಾಟ ಮಂತ್ರ ದೋಷಗಳು ನಿವಾರಣೆಯಾಗುತ್ತದೆ.

11. ಯಾರ ಮನೆಯಲ್ಲಿ "ಶ್ರೀ ಸೂಕ್ತ" ಹೇಳಿ ದೇವರಿಗೆ ಅಭಿಷೇಕ ಮಾಡುತ್ತಾರೋ, ಅವರಿಗೆ ಸಾಲದ ಬಾಧೆ ನಿವಾರಣೆಯಾಗುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ.

12. ಯಾರ ಮನೆಯಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವರಿಗೆ "ಶ್ರೀಸೂಕ್ತ" ಹೇಳುತ್ತಾ ಪನ್ನೀರಿನಲ್ಲಿ ಅಭಿಷೇಕ ಮಾಡಿದರೆ, ಆ ಮನೆಯಲ್ಲಿನ ಎಲ್ಲರೂ ಶ್ರೀಮಂತರಾಗುತ್ತಾರೆ.

13. "ಶ್ರೀ ಸೂಕ್ತ" ಪಾರಾಯಣ ಮಾಡಿ, ಶ್ರೀ ಮಹಾಲಕ್ಷ್ಮೀ ದೇವಿಗೆ ಕಮಲದ ಹೂವನ್ನು ಇಡುತ್ತಾ ಬಂದರೆ, ಅವರಿಗೆ ಧನ,ಕನಕ, ವಸ್ತು ವಾಹನ ಎಲ್ಲವೂ ಶೀಘ್ರವಾಗಿ ದೊರೆತು ಶ್ರೀಮಂತರಾಗುತ್ತಾರೆ.

14. "ಶ್ರೀ ಸೂಕ್ತ" ಹೇಳುತ್ತಾ ಮಹಾಲಕ್ಷ್ಮೀ ಗೆ ಬಿಲ್ವಪತ್ರೆ ಇಂದ ಪೂಜೆ ಮಾಡುತ್ತಾ ಬಂದರೆ, ನಿಮಗೆ ಬರಬೇಕಾದ ಹಣವು ಯಾವುದೇ ತೊಂದರೆ ಇಲ್ಲದೆ ಬೇಗ ಬರುತ್ತದೆ.

15. "ಶ್ರೀ ಸೂಕ್ತ" ಹೇಳಿ ಶ್ರೀಲಕ್ಷ್ಮೀನಾರಾಯಣರಿಗೆ ಕೆಂಡಸಂಪಿಗೆ ಹೂವಿನಿಂದ ಪೂಜೆ ಮಾಡಿದರೆ, ಸಮಸ್ತ ಸರ್ಪದೋಷಗಳು ನಿವಾರಣೆಯಾಗುತ್ತದೆ.
(ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ, ಹುಸ್ಕೂರು, ಎಲೆಕ್ಟಾçನಿಕ್ ಸಿಟಿ ಸಮೀಪ, ಬೆಂಗಳೂರು.)


Related Articles

ಪ್ರತಿಕ್ರಿಯೆ ನೀಡಿ

Latest Articles