ನವರಾತ್ರಿ ಹಬ್ಬ ದೇಶದ ಪ್ರಮುಖ ಹಬ್ಬಗಳಲ್ಲಿ ಒಂದು. ಒಂಬತ್ತು ದಿನವೂ ಪೂಜಿಸಲ್ಪಡುವ ದುರ್ಗಾದೇವಿಗೆ ದಿನದಿನವೂ ಸಿಹಿ ನೈವೇದ್ಯ. ದುರ್ಗಾದೇವಿಯನ್ನು ಕುಂಕುಮ, ಬಳೆ, ಹೂಗಳು ಹಾಗೂ ವಿಶೇಷ ಸಿಹಿಖಾದ್ಯಗಳಿಂದ ಪೂಜಿಸಲಾಗುತ್ತದೆ. ಶುದ್ಧ ತುಪ್ಪ ಹಾಗೂ ಬೆಣ್ಣೆಯಿಂದ ತಯಾರಿಸಿದ ಸಿಹಿ ಖಾದ್ಯಗಳನ್ನು ತಯಾರಿಸಿ, ಬಂಧು ಬಳಗದವರೊಂದಿಗೆ ಹಂಚಿಕೊ0ಡು ಸವಿದು ಸಂಭ್ರಮಿಸುತ್ತಾರೆ. ಉತ್ತರ ಭಾರತ ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ದೇವಿ ದೇಗುಲಗಳಲ್ಲಿ ಒಂಬತ್ತು ದಿನವೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ದೇವಿಗೆ ನೈವೇದ್ಯವಾಗಿ ಸಿಹಿ ತಿನಿಸುಗಳನ್ನೇ ಹೆಚ್ಚಾಗಿ ತಯಾರಿಸಲಾಗುತ್ತದೆ.
ಕೇಸರಿ ಬಾದಾಮಿ ಬರ್ಫಿ
ಬಾದಾಮಿ ಬೀಜ 150 ಗ್ರಾಂ, ಸಕ್ಕರೆ 200 ಗ್ರಾಂ ಹಾಗೂ ನಾಲ್ಕು ಚಮಚ ತುಪ್ಪ ಬಳಸಿಕೊಂಡು ಸಿಹಿಯಾದ ಕೇಸರಿ ಬಾದಾಮಿ ಬರ್ಫಿ ತಯಾರಿಸಬಹುದು. ಒಂದು ಚಮಚ ಹಾಲಿನಲ್ಲಿ ಕೇಸರಿ ನೆನೆ ಹಾಕಿಟ್ಟುಕೊಳ್ಳಿ. ಬಾದಾಮಿ ಬೀಜ, ಗೋಡಂಬಿ 2ಗಂಟೆ ಕಾಲ ನೆನೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಸಕ್ಕರೆ ಸೇರಿಸಿ ಸಣ್ಣ ಶಾಖದಲ್ಲಿ ಕಲಕುತ್ತಾ ಬಿಸಿ ಮಾಡಿ. ಗಟ್ಟಿಯಾಗುವ ಮೊದಲೇ ಸ್ವಲ್ಪ ತುಪ್ಪ ಸೇರಿಸಿ. ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಬೆರಳಿನಲ್ಲಿ ಉಜ್ಜಿ ಸೇರಿಸಿ ಏಲಕ್ಕಿ ಪುಡಿ ಹಾಕಿ. ಪಾತ್ರೆಗೆ ಅಂಟದ ಹದವಾದಾಗ ಜಿಡ್ಡು ಬಳಿದ ತಟ್ಟೆಗೆ ಹಾಕಿ ಸಮ ಮಾಡಿ ಬೆಚ್ಚಗಿರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ ತಣ್ಣಗಾಗಲು ಬಿಡಿ.
ಕೋಕೊ ಬರ್ಫಿ
ಖೋವಾ 100 ಗ್ರಾಂ, ಕೋಕೋ ಪುಡಿ ಒಂದು ಚಮಚ, ಸಕ್ಕರೆ 2 ಚಮಚ. ಸಣ್ಣ ಉರಿಯಲ್ಲಿ ಖೋವಾ ಸಕ್ಕರೆ ಸೇರಿಸಿ ಕದಡುತ್ತಿರಬೇಕು. ತೆಳು ಕಂದು ಬಣ್ಣಕ್ಕೆ ಬಂದು ಗಟ್ಟಿಯಾಗತೊಡಗಿದಾಗ ಇಳಿಸಿ. ಮೂರನೇ ಒಂದು ಭಾಗ ತೆಗೆದಿಡಿ. ಉಳಿದ ಮೂರನೇ 2 ಭಾಗಕ್ಕೆ ಕೋಕೋ ಪುಡಿ ಸೇರಿಸಿ ಕಲಕಿರಿ. ಇದನ್ನು ಎರಡು ಭಾಗ ಮಾಡಿ ನಾಜೂಕಾಗಿ ಲಟ್ಟಿಸಿ. ಎರಡು ಚಪಾತಿ ಆಕಾರ ಮಾಡಿ ಇದು 1/4 ರಿಂದ 1/2 ಅಂಗುಲ ದಪ್ಪವಿರಲಿ. ತೆಗೆದಿಟ್ಟ 1/3 ಭಾಗ ಖೋವಾ ಸಕ್ಕರೆ ಮಿಶ್ರಣ ಈ ಎರಡು ಚಪಾತಿಗಳ ನಡುವೆ ಇಟ್ಟು ಹರಡಿ. 1/2 ಗಂಟೆ ಫ್ರಿಡ್ಜ್ನಲ್ಲಿಡಿ. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.
ಕೊಬ್ಬರಿ ಮಿಠಾಯಿ
ಗಟ್ಟಿ ಹಾಲು ಒಂದು ಕಪ್, ಕೊಬ್ಬರಿ ತುರಿ ಎರಡು ಕಪ್, 4 ಚಮಚ ಕೋಕೋ ಪುಡಿ, ಒಂದು ಚಮಚ ಬೆಣ್ಣ, ಐದು ಹನಿ ರೋಸ್ ಎಸೆನ್ಸ್. ಕಾಯಿ ತುರಿ, ಹಾಲು, ಬೆಣ್ಣೆ ಸೇರಿಸಿ ಕಲಸಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಅದರಲ್ಲಿ ಅರ್ಧ ಭಾಗ ತೆಗೆದಿಡಿ. ಉಳಿದ ಅರ್ಧ ಭಾಗಕ್ಕೆ 2 ಹನಿ ರೋಸ್ ಎಸೆನ್ಸ್ ಸೇರಿಸಿ ಬಿಸಿ ಮಾಡಿ. ಪಾತ್ರೆಗೆ ಅಂಟದ ಹದ ಬಂದಾಗ ಜಿಡ್ಡು ಹಚ್ಚಿದ ತಟ್ಟೆಗೆ ಸುರಿದು ಅರ್ಧ ಇಂಚು ದಪ್ಪಕ್ಕೆ ತಟ್ಟಿ. ತೆಗೆದಿಟ್ಟ ಅರ್ಧಭಾಗ ಮಿಶ್ರಣಕ್ಕೆ ಕೋಕೋ ಪುಡಿ ಸೇರಿಸಿ ಬಿಸಿ ಮಾಡಿ. ಮೂರು ಹನಿ ರೋಸ್ ಎಸೆನ್ಸ್ ಹಾಕಿ ಸಣ್ಣ ಉರಿಯಲ್ಲೇ ಕಲಕುತ್ತಿರಿ. ಪಾತ್ರೆಗೆ ಅಂಟದ ಹದ ಬಂದಾಗ ಮೊದಲು ಮಾಡಿಟ್ಟ ಭಾಗದ ಮೇಲೆ ಸುರಿದು ಸಮ ಮಾಡಿ. ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ.
ಕ್ಯಾರೆಟ್ ಬರ್ಫಿ
ಕ್ಯಾರೆಟ್, ಗೋಡಂಬಿ ಪುಡಿ, ತೆಂಗಿನ ತುರಿ ಬಳಸಿ ತಯಾರಿಸಬಹುದಾದ ಸಿಹಿ. ಪೌಷ್ಠಿಕಾಂಶಗಳಿAದ ಕೂಡಿದ್ದು ಸವಿಯಲು ರುಚಿಯಾಗಿರುತ್ತದೆ.
ತುರಿದ ಕ್ಯಾರೆಟ್ 2ಕಪ್, ಸಕ್ಕರೆ ಒಂದು ಕಪ್, ತುಪ್ಪ 2ಚಮಚ, ಗೋಡಂಬಿ ಪುಡಿ ಅರ್ಧ ಕಪ್, ತೆಂಗಿನ ತುರಿ ಅರ್ಧ ಕಪ್, ಏಲಕ್ಕಿ ಪುಡಿ, ವೆನಿಲ್ಲಾ ಎಸೆನ್ಸ್. ಕ್ಯಾರೆಟ್, ತೆಂಗಿನ ತುರಿ, ಗೋಡಂಬಿ ಪುಡಿ, ಹಾಲು ಸೇರಿಸಿ ಮಿಕ್ಸಿಯಲ್ಲಿ ಸ್ವಲ್ಪ ಒರಟು ಒರಟಾಗಿ ರುಬ್ಬಿಕೊಳ್ಳಿ. ಸಣ್ಣ ಉರಿಯಲ್ಲಿಟ್ಟು ಸಕ್ಕರೆ, ತುಪ್ಪ ಸೇರಿಸಿ ಕಲಕುತ್ತಿರಿ. ತಳ ಸೀಯದಂತೆ ನೋಡಿಕೊಳ್ಳಿ. ಪಾತ್ರೆಗೆ ಅಂಟದ ಹದ ಬಂದಾಗ ಏಲಕ್ಕಿ ಪುಡಿ, ವೆನಿಲ್ಲಾ ಎಸೆನ್ಸ್ ಸೇರಿಸಿ. ಜಿಡ್ಡು ಬಳಿದ ತಟ್ಟೆಗೆ ಹಾಕಿ ಸಮ ಮಾಡಿ. ಒಂದು ಇಂಚು ದಪ್ಪಗೆ ತಟ್ಟಿ ಬೆಚ್ಚಗಿರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ. ತಣ್ಣಗಾದಾಗ ಸವಿಯಿರಿ.