ಹಲ್ಲಿ ಮೈಮೇಲೆ ಬಿದ್ದರೆ ಅಪಶಕುನ ಎಂಬ ಮಾತಿದೆ. ಆದರೆ ಇದಕ್ಕೆ ಅಪವಾದವೆಂಬ0ತೆ ತಮಿಳುನಾಡಿನ ಕಾಂಚೀಪುರ0ನಲ್ಲಿರುವ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿರುವ ಚಿನ್ನ ಹಾಗೂ ಬೆಳ್ಳಿಯ ಹಲ್ಲಿಗಳನ್ನು ಮುಟ್ಟಿದರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.
ಹಲ್ಲಿಗಳೆರಡು ವರದರಾಜ ಪೆರುಮಾಳ್ ದೇವರ ಪಕ್ಕದಲ್ಲಿಯೇ ಇದ್ದು ಅದನ್ನು ಮುಟ್ಟಿ ಪ್ರಾರ್ಥಿಸಿದರೆ ದೋಷದಿಂದ ಮುಕ್ತರಾಗುತ್ತಾರೆ, ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಬಹಳ ಕಾಲದಿಂದ ಬೆಳೆದು ಬಂದಿದೆ. ಎರಡು ಹಲ್ಲಿಗಳ ಪಕ್ಕದಲ್ಲಿಯೇ ಸೂರ್ಯ ಮತ್ತು ಚಂದ್ರರನ್ನು ಇಡಲಾಗಿದೆ.
ಗೌತಮ ಮುನಿಗಳ ಇಬ್ಬರು ಶಿಷ್ಯರು ಪ್ರತಿದಿನ ಗುರು ಗೌತಮ ಮುನಿಗೆ ಎರಡು ಕೊಡ ನೀರು ತಂದುಕೊಡುತ್ತಿದ್ದರು. ಒಂದು ದಿನ ಇಬ್ಬರು ಶಿಷ್ಯರು ಗುರುಗಳ ಮುಂದೆ ನೀರು ತಂದು ಕೆಳಗೆ ಇಡುವಾಗ ಕೊಡದಲ್ಲಿದ್ದ ನೀರಿನಿಂದ ಹಲ್ಲಿಗಳು ಹೊರಕ್ಕೆ ಹಾರುತ್ತದೆ. ಇದನ್ನು ಕಂಡ ಗುರುಗಳು ಕೆಂಡಾಮ0ಡಲರಾಗುತ್ತಾರೆ. ಅವರಿಬ್ಬರಿಗೂ ಹಲ್ಲಿಯಾಗುವಂತೆ ಶಾಪ ನೀಡುತ್ತಾರೆ. ಇಬ್ಬರೂ ಮರುಕ್ಷಣವೇ ಹಲ್ಲಿಯ ರೂಪವನ್ನು ತಾಳುತ್ತಾರೆ. ಇಂದ್ರ ಬರುವವರೆಗೆ ಇಬ್ಬರೂ ಹಲ್ಲಿಗಳ ರೂಪದಲ್ಲಿ ಅಲ್ಲಿ ನೆಲೆಸುತ್ತಾರೆ. ಇಂದ್ರ, ಸೂರ್ಯ-ಚಂದ್ರನನ್ನು ಪೂಜಿಸಿದರಿಂದ ಗೌತಮ ಮುನಿಯ ಶಾಪದಿಂದ ಮುಕ್ತರಾಗುತ್ತಾರೆ. ಈ ನೆನಪಿಗಾಗಿ ವರದರಾಜ ಸನ್ನಿಯಲ್ಲಿ ಸುವರ್ಣ ಹಾಗೂ ಬೆಳ್ಳಿಯ ಹಲ್ಲಿಗಳನ್ನು ಸ್ಥಾಪಿಸಲಾಗಿದೆಯಂತೆ. ಇಲ್ಲಿ ವರದರಾಜನನ್ನು ಪ್ರಾರ್ಥಿಸಿ ಹಲ್ಲಿಗಳನ್ನು ಸ್ಪರ್ಶಿಸಿದರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಈಗಲೂ ಇದೆ.
ಮನೆಯಲ್ಲಿ ಪೂಜಾ ಕೊಠಡಿಗೆ ಹಲ್ಲಿ ಬಂದು ಅಲ್ಲಿಯೇ ನೆಲೆಸಿದರೆ ಶ್ರೇಯಸ್ಕರ ಎಂದು ನಂಬಲಾಗಿದೆ. ಹಲ್ಲಿಗಳನ್ನು ಸಾಯಿಸಬಾರದು, ಅದರಿಂದ ದೋಷವುಂಟಾಗುತ್ತದೆ ಎಂಬ ನಂಬಿಕೆಯೂ ಇದೆ.
ಪರಿಹಾರಕ್ಕೊಂದು ದೇಗುಲ
ವರದರಾಜ ಪೆರುಮಾಳ್ ದೇವಸ್ಥಾನ ವಿಷ್ಣುಕಾಂಚಿಲ್ಲಿದ್ದು ಭಗವಾನ್ ವಿಷ್ಣುವನ್ನು ಇಲ್ಲಿ ಪೂಜಿಸಲಾಗುತ್ತದೆ. 25 ಎಕರೆ ಜಾಗದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಚೋಳ ರಾಜರ ಕಾಲದಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿದೆ. ರಾಜ ಕುಲತ್ತುಂಗನ ಕಾಲದಲ್ಲಿ ಈ ದೇವಸ್ಥಾನ ವಿಸ್ತಾರಗೊಂಡಿದ್ದು, 12ನೇ ಶತಮಾನದಲ್ಲಿ ವಿಜಯನಗರದ ಅರಸರ ಕಾಲದಲ್ಲಿ ಮತ್ತೆ ಪುನನಿರ್ಮಾಣಗೊಂಡಿದೆ. ಈ ದೇವಸ್ಥಾನ ಎರಡು ದೊಡ್ಡ ಗೋಪುರಗಳನ್ನು ಒಳಗೊಂಡಿದೆ. ಸರಾಜಗೋಪುರವು 96 ಅಡಿ ಎತ್ತರವಿದೆ. ವರದರಾಜ ದೇವರು ನಿಂತ ಭಂಗಿಯಲ್ಲಿ, ಪೂರ್ವಕ್ಕೆ ಮುಖ ಮಾಡಿದ್ದಾನೆ. ನಾಲ್ಕು ಕೈಗಳಿದ್ದು ಶಂಖ, ಚಕ್ರ, ಗದಾ, ಪದ್ಮವನ್ನು ಕೈಯಲ್ಲಿ ಹಿಡಿದಿದ್ದಾನೆ. 40 ವರ್ಷಗಳಿಗೊಮ್ಮೆ ವರದರಾಜ ದೇವರ ಮೂರ್ತಿಯನ್ನು ಹೊರಗೆ ತಂದು ಮೆರವಣಿಗೆ ಮಾಡಲಾಗುತ್ತದೆ. ರಾಜಗೋಪುರದ ನಂತರ 100 ಕಂಬಗಳಿರುವ ಮಂಟಪ ಇದ್ದು, ಸುಂದರ ವಾಸ್ತುಶಿಲ್ಪಗಳಿಂದ ಕಣ್ಸೆಳೆಯುತ್ತದೆ.